ಬೆಳಗಾವಿ: ಇಲ್ಲಿನ ಮಾರುಕಟ್ಟೆ ಹಾಗೂ ನಗರದ ವಿವಿಧೆಡೆ ರಸ್ತೆಬದಿಯಲ್ಲಿ ಸೀತಾಫಲ ಹಣ್ಣುಗಳ ಘಮಲು.
ತಾಲ್ಲೂಕಿನ ಕಂಗ್ರಾಳಿ, ಕಾಕತಿ, ವಂಟಮೂರಿ, ಸಂಕೇಶ್ವರದ ಸುತ್ತಮುತ್ತ ಹಾಗೂ ಹುಕ್ಕೇರಿ ತಾಲ್ಲೂಕಿನ ಗೆಜಪತಿ, ಗುಟಗುದ್ದಿ, ಶಹಾಬಂದರ, ಚಿಕ್ಕಲದಿನ್ನಿ ಮತ್ತಿತರ ಗ್ರಾಮಗಳ ಬೆಳೆಗಾರರನ್ನು ಸೀತಾಫಲ ಈ ಬಾರಿಯೂ ಕೈಹಿಡಿದಿದೆ.
ನಿತ್ಯವೂ ತಾಜಾ ಹಣ್ಣುಗಳನ್ನು ತರುವ ರೈತರು, ಮಹಿಳೆಯರು, ಯುವಕರು ತಾವೇ ಮಾರುವ ಮೂಲಕ ಮಧ್ಯವರ್ತಿಗಳ ಅವಲಂಬನೆ ಅಗತ್ಯವಿಲ್ಲ ಎನ್ನುವುದನ್ನು ಸಾರುತ್ತಿದ್ದಾರೆ. ಪರಿಣಾಮ, ಹಣ್ಣುಗಳು ಹೊಲದಿಂದ ನೇರವಾಗಿ ಗ್ರಾಹಕರ ಕೈಗೆ ದೊರೆಯುತ್ತಿವೆ. ರೈತರು ಉತ್ತಮ ವರಮಾನವನ್ನೂ ಕಾಣುತ್ತಿದ್ದಾರೆ.
ಹಂಗಾಮು ಆರಂಭ
ಬಹುತೇಕ ಕೃಷಿಕರು, ಉತ್ಪನ್ನಗಳ ಮಾರಾಟಕ್ಕೆ ಮಧ್ಯವರ್ತಿಗಳ ಮೊರೆ ಹೋಗುವುದು ಕಂಡುಬರುತ್ತದೆ. ಇದರಿಂದ, ಅವರಿಗೆ ಕೆಲವೊಮ್ಮೆ ಲಾಭ ಆಗಬಹುದು; ಹೆಚ್ಚಿನ ಸಂದರ್ಭಗಳಲ್ಲಿ ನಷ್ಟವೇ ಆಗುತ್ತದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಅಭಿಪ್ರಾಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಸೀತಾಫಲ ಬೆಳೆಗಾರರು ‘ಫಲ’ ಏನಾದರಾಗಲಿ ಎಂದು ತಾವಾಗಿಯೇ ಮಾರಾಟಕ್ಕೆ ಇಳಿಯುತ್ತಿದ್ದಾರೆ. ಈ ಪ್ರಯೋಗದಲ್ಲಿ ಯಶಸ್ವಿಯೂ ಆಗಿದ್ದಾರೆ.
ಮಾರುಕಟ್ಟೆ, ನೆಹರೂ ನಗರ ರಸ್ತೆ, ಎಪಿಎಂಸಿ ರಸ್ತೆ ಬದಿ, ರಾಮದೇವ ಹೋಟೆಲ್ ಸಮೀಪದಲ್ಲಿ ಸೀತಾಫಲ ಮಾರುಕಟ್ಟೆ ತಲೆ ಎತ್ತಿದೆ. ರೈತರು ಸೀತಾಫಲ ಹಣ್ಣುಗಳನ್ನು ಬುಟ್ಟಿ ಅಥವಾ ಚೀಲದಲ್ಲಿ ಬಂದು ಮಾರುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ದಾರಿಹೋಕರ ಗಮನಸೆಳೆಯುತ್ತಿವೆ. ಮೂರು ತಿಂಗಳಷ್ಟೇ ಮಾರುಕಟ್ಟೆಯಲ್ಲಿ ರಾರಾಜಿಸುವ ಇದರ ಹಂಗಾಮು ಈಚೆಗಷ್ಟೇ ಆರಂಭವಾಗಿದೆ.
ಹೇಗಿದೆ ಬೆಲೆ?
ಡಜನ್ ಲೆಕ್ಕದಲ್ಲಿ ಹಣ್ಣುಗಳನ್ನು ಮಾರಲಾಗುತ್ತಿದೆ. ಗಾತ್ರ ಆಧರಿಸಿ ಬೆಲೆ ನಿಗದಿಪಡಿಸುತ್ತಾರೆ. ₹ 100, ₹ 120, ₹ 130, ₹ 140, ₹ 150, ₹ 160ರವರೆಗೂ ಬೆಲೆ ಇದೆ. ಸಣ್ಣ ಗಾತ್ರದ ಹಣ್ಣು ತಲಾ ₹ 10ಕ್ಕೆ ಸಿಗುತ್ತದೆ. ದಪ್ಪ ಕಾಯಿ, ಹಣ್ಣುಗಳಿಗೆ ಡಜನ್‌ಗೆ ₹ 150ರಿಂದ ₹160 ಇದೆ.
‘ಹೊಲಗಳ ದಂಡೆಯಲ್ಲಿ ಸೀತಾಫಲ ಗಿಡಗಳನ್ನು ಹಚ್ಚಿದ್ದೇವೆ. ಗಡಿ ಹಾಕಿದ 3 ವರ್ಷದ ನಂತರ ಫಸಲು ಬರುತ್ತದೆ. ವರ್ಷದಲ್ಲಿ 3 ತಿಂಗಳು ಮಾತ್ರ ಹಂಗಾಮು ಇರುತ್ತದೆ. ಈ ಬಾರಿ ಒಳ್ಳೆಯ ಮಳೆಯಾದ್ದರಿಂದ ಒಳ್ಳೆಯ ಇಳುವರಿ ಬಂದಿದೆ. ಕಡಿಮೆ ನೀರು ಬಯಸುವ ಸೀತಾಫಲವೊಂದೇ ನಮ್ಮ ಪ್ರಮುಖ ಆದಾಯದ ಮೂಲ. ಈ ಗಿಡಗಳು ಇರುವುದರಿಂದ ಹೊಲದಲ್ಲಿ ಬೇರೆ ಬೆಳೆಗಳು ಕೈಗೆ ಬರುವುದಿಲ್ಲ’ ಎಂದು ಗೆಜಪತಿ ಗ್ರಾಮದ ರೈತ ಬಸಪ್ಪ ಹಮಾಣಿ ತಿಳಿಸಿದರು.
‘ಮಧ್ಯವರ್ತಿಗಳಿಗೆ ಕೊಟ್ಟು ನಷ್ಟ ಮಾಡಿಕೊಳ್ಳುವ ಬದಲಿಗೆ, ನಾವೇ ಮಾರಲೆಂದು ಬರುತ್ತೇವೆ. ರಸ್ತೆಬದಿಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಇರುತ್ತೇವೆ. ಕೆಲವರು ಕುಟುಂಬ ಸಮೇತ ಬರುತ್ತಾರೆ. ನಾವು ಸಹೋದರರೆಲ್ಲ ಸೇರಿ ಕೃಷಿ ಮಾಡುತ್ತಿದ್ದೇವೆ. ನಮ್ಮ ಹಳ್ಳಿಯ ಸುತ್ತಮುತ್ತ ಐದಾರು ಸಾವಿರ ಗಿಡಗಳಿವೆ. ಕಾಯಿಗಳು ಹಣ್ಣಾಗುವ ಹಂತ ತಲುಪುತ್ತಿದ್ದಂತೆಯೇ ಕಿತ್ತು ತಂದು ಮಾರುತ್ತೇವೆ’ ಎಂದು ಮಾಹಿತಿ ನೀಡಿದರು.
ತರಕಾರಿ ಬೆಲೆ ಕೊಂಚ ಇಳಿಕೆ
ಗಣೇಶ ಚತುರ್ಥಿ ನಂತರ ತರಕಾರಿ, ಹಣ್ಣುಗಳ ಬೆಲೆ ಕೊಂಚ ಇಳಿಕೆಯಾಗಿದೆ. ಕೆ.ಜಿ. ಟೊಮೆಟೊ ₹12ರಿಂದ ₹ 10, ಬೀನ್ಸ್ ₹ 15ರಿಂದ ₹ 12, ಕ್ಯಾರೆಟ್ ₹ 40ರಿಂದ ₹ 30, ದಪ್ಪ ಮೆಣಸಿನಕಾಯಿ ₹ 18ರಿಂದ ₹ 15, ಈರುಳ್ಳಿ ₹ 12ರಿಂದ ₹ 10ಕ್ಕೆ ಇಳಿಕೆಯಾಗಿದೆ. ಹಸಿರು ಮೆಣಸಿನಕಾಯಿ ₹ 20ರಿಂದ 25ಕ್ಕೆ ಏರಿಕೆಯಾಗಿದೆ.
ಕೋಳಿಮೊಟ್ಟೆ ದರ ಯಥಾಸ್ಥಿತಿಯಲ್ಲಿದೆ. ಚಿಲ್ಲರೆ ಮಾರುಟ್ಟೆಯಲ್ಲಿ ಒಂದಕ್ಕೆ ₹ 5 ಇದೆ. ಸಗಟು ಮಾರುಕಟ್ಟೆಯಲ್ಲಿ ₹ 4ರಿಂದ ₹ 4.50ಗೆ ಮಾರಾಟವಾಗುತ್ತಿದೆ. ಶ್ರಾವಣ ಮಾಸ ಮುಗಿದ ನಂತರ ಕೋಳಿಮಾಂಸ ಕೆ.ಜಿ.ಗೆ ₹ 135ರಿಂದ ₹ 150, ಮಟನ್ ₹ 450ರಿಂದ ₹ 460ಕ್ಕೆ ಏರಿದೆ.
ಹಣ್ಣಿನ ಬೆಲೆಯೂ ತುಸು ಕಡಿಮೆಯಾಗಿದೆ. ಮೋಸಂಬಿ ₹ 80ರಿಂದ ₹ 60, ದಾಳಿಂಬೆ ₹ 100ರಿಂದ ₹ 80 ಹಾಗೂ ಸೇಬು ₹ 120ರಿಂದ ಸರಾಸರಿ ₹100ಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.