ADVERTISEMENT

ತರಕಾರಿ ಕೃಷಿಯಲ್ಲಿ ಗೆಲುವಿನ ದಾರಿ

ಶೈಲಜಾ ಬೆಳ್ಳಂಕಿಮಠ
Published 24 ಡಿಸೆಂಬರ್ 2018, 19:30 IST
Last Updated 24 ಡಿಸೆಂಬರ್ 2018, 19:30 IST
ಆ
   

ಮೊಬೈಲ್ ಫೋನ್ ಅನೇಕರಿಗೆ ಜೀವನದ ಅವಿಭಾಜ್ಯ ಅಂಗದಂತಾಗಿದೆ. ಅದನ್ನು ಯಾವ್ಯಾವುದೋ ‘ಕಾರ್ಯ’ಗಳಿಗೆ ಬಳಸುತ್ತಿದ್ದಾರೆ. ಕೆಲವು ಕಡೆ ಸಮಯ ವ್ಯಯದ ಸಾಧನದಂತೆ ಕಾಣಿಸುವ ಈ ಮೊಬೈಲ್‌ನ್ನು ಯುವ ಕೃಷಿಕ ಅಜ್ಜಪ್ಪ ಹುನುಮಂತಪ್ಪ ಕುಲಗೋಡ ತಾನು ಬೆಳೆದ ತರಕಾರಿಯನ್ನು ಮಾರ್ಕೆಟ್ ಮಾಡಲು ಬಳಸುತ್ತಿದ್ದಾರೆ...!

ಬೆಳಗಾವಿ ಜಿಲ್ಲೆಯ ರಾಮದುರ್ಗದ ಸುನ್ನಾಳದ ಈ ಯುವಕ, ಸಂತೆಯ ಹಿಂದಿನ ದಿನ ಗ್ರಾಹಕ ಕುಟುಂಬಗಳಿಗೆ ಮೊಬೈಲ್‌ನಿಂದ ವಾಟ್ಸ್‌‌ಆ್ಯಪ್ ಸಂದೇಶ ರವಾನಿಸುತ್ತಾರೆ. ಅದರಲ್ಲಿ ನಾಳೆ ಸಂತೆಗೆ ಯಾವ್ಯಾವ ತರಕಾರಿ ಬರುತ್ತದೆ ಎಂದು ಪಟ್ಟಿ ನೀಡುತ್ತಾರೆ. ಗ್ರಾಹಕರು ಸಂತೆಗೆ ಬಂದು ತಮಗೆ ಬೇಕಾದ ತರಕಾರಿಯನ್ನು ಇವರಿಂದ ಖರೀದಿಸುತ್ತಾರೆ. ಇವರ ಸಾವಯವ ತರಕಾರಿ ರುಚಿ ಹಲವು ಕುಟುಂಬಗಳಿಗೆ ಹಬ್ಬಿದೆ. ಹೀಗಾಗಿ, ಹಬ್ಬ, ವಿಶೇಷ ಕಾರ್ಯಕ್ರಮಗಳಿದ್ದಾಗ, ಗ್ರಾಹಕರು ಮೊಬೈಲ್ ಮೂಲಕವೇ ಹೆಚ್ಚು ಬೇಡಿಕೆ ಸಲ್ಲಿಸುತ್ತಾರೆ.

ಎಂಟು ವರ್ಷಗಳಿಂದ ಈ ವಿಧಾನದಲ್ಲಿ ಅಜ್ಜಪ್ಪ ತರಕಾರಿ ಮಾರಾಟ ಮಾಡುತ್ತಿದ್ದಾರೆ. ‘ವ್ಯಾಪಾರ ಎಂಬುದು ನಂಬಿಕೆಯ ಪ್ರಶ್ನೆ, ವಿಶ್ವಾಸದ ವಿಚಾರ. ಇದನ್ನು ಬಲಪಡಿಸಿದರೆ ಕೃಷಿ ಅಭಿವೃದ್ಧಿ ಸಾಧ್ಯ’ ಎಂಬ ಹೊಳವು ಅಜ್ಜಪ್ಪರಿಗೆ ಅರ್ಥವಾಗಿದೆ. ಹಾಗಾಗಿ, ತರಕಾರಿಯ ಬೆಲೆ ಏರಲಿ, ಇಳಿಯಲಿ ಅಜ್ಜಪ್ಪ ಮಾತ್ರ ತನ್ನ ಕಾಯಂ ಗ್ರಾಹಕರಿಗೆ ಕೆ.ಜಿಗೆ ₹ 40 ತರಕಾರಿ ನೀಡುತ್ತಿದ್ದಾರೆ. ಸುಮಾರು 15-20 ಕುಟುಂಬಗಳು ಪ್ರತಿವಾರ ಇವರ ತರಕಾರಿಯ ಗ್ರಾಹಕರಾಗಿದ್ದಾರೆ.

ADVERTISEMENT

ಅಜ್ಜಪ್ಪ ಓದಿದ್ದು ಐಟಿಐ, ಆದರೆ ಉದ್ಯೋಗ ಹುಡುಕಿ ನಗರಕ್ಕೆ ಹೋಗಲಿಲ್ಲ. ಹುಟ್ಟೂರು ಸುನ್ನಾಳದಲ್ಲೇ ಜೈ ಹನುಮಾನ್ ಎಲೆಕ್ಟ್ರಿಕಲ್ಸ್ ಅಂಗಡಿ ಪ್ರಾರಂಭಿಸಿದರು. ಟಿವಿ, ರೇಡಿಯೊ, ಮೋಟಾರ್ ರಿವೈಂಡಿಂಗ್ ವೃತ್ತಿ ಕೈಗೊಂಡವರು. 2005ರ ಬಳಿಕ ಯಾಕೋ ಮನಸ್ಸು ಬದಲಾಗಿ ಮಣ್ಣಿನ ಒಲವು ಬೆಳೆಯಿತು. ಸಾವಯವ ಬೇಸಾಯದ ಅಧ್ಯಯನ ಮಾಡುತ್ತ ಬೆಂಡೆ, ಸೌತೆ, ಮೂಲಂಗಿ, ಮೆಂತ್ಯ, ಸಬ್ಬಸಿಗೆ, ಕೊತಂಬರಿ, ಪುಂಡಿ, ಹರಿವೆ, ಪಾಲಕ್, ಅರಿಸಿನ, ಬಾಳೆ ಬೆಳೆಯುತ್ತ ಸಂತೆಗೆ ಹೊರಟರು.

ತಾಯಿ ಪಾರ್ವತವ್ವರಿಗೆ ತರಕಾರಿ ಬೆಳೆದು ಮಾರುವ ತಂತ್ರ ತಿಳಿದಿತ್ತು. ಮನೆ ಮನೆಗೆ ತಿರುಗಿ ರಾಜಾಪುರಿ ಬಾಳೆಹಣ್ಣು, ತರಕಾರಿ ಮಾರಾಟದ ಅಭ್ಯಾಸವಿತ್ತು. ಕೃಷಿ ನಡೆಸಲು ಸಹೋದರ ಭೀಮಪ್ಪನ ಬಲವೂ ಸೇರಿತು. ಜನರೊಂದಿಗೆ ಮಾತುಕತೆ, ಕೃಷಿ ತಜ್ಞರ ಒಡನಾಟ, ಓದು, ಪ್ರವಾಸದಿಂದ ಹೊಸ ಪರಿವರ್ತನೆಗೆ ಪ್ರಯತ್ನಿಸಿದರು.

ಈಗ ಈ ಕಾಲಕ್ಕೆ ತಕ್ಕಂತೆ ಸುಮಾರು 30-35 ಬಗೆಯ ಸೊಪ್ಪು, ತರಕಾರಿ ಬೆಳೆದು ಮಾರುತ್ತಿದ್ದಾರೆ. ‘ಕೃಷಿಕರಿಗೆ ಸ್ವಂತ ಗೌರವ ಬೇಕು. ಪ್ರತಿ ರೈತ ಕನಿಷ್ಠ 10 ಬಗೆಯ ಬೆಳೆಯನ್ನಾದರೂ ಬೆಳೆಯಬೇಕು, ಆಗ ಮಾರುಕಟ್ಟೆಗೆ ಹೋಗಲು ಅನುಕೂಲವಾಗುತ್ತದೆ’ ಎಂದು ಅಜ್ಜಪ್ಪ ಹೇಳುತ್ತಾರೆ.

ಇವರ ಹೊಲದಲ್ಲಿ ಬಾಳೆ, ಕಬ್ಬು, ಚೆಂಡುಹೂವು, ಅರಿಸಿನ ಹಾಗೂ ಕಾಯಿಪಲ್ಯೆ ಮುಖ್ಯ ಬೆಳೆಗಳು. ಒಂದು ಎಕರೆ ಅರಿಸಿನದಲ್ಲಿ (ನಾಲ್ಕು ಅಡಿ ಸಾಲು)ಉಳ್ಳಾಗಡ್ಡೆ, ಹಸಿಮೆಣಸು, ಹಾಗಲ, ಪಡುವಲ, ಹೀರೆ, ಸಬ್ಬಸಿಗೆ, ಮೆಂತ್ಯ, ಹರವಿ, ತಿರಕಸಾಲಿ, ಕೊತ್ತಂಬರಿ, ಪಾಲಕ್, ಟೊಮೆಟೊ, ಹುಳಿಚಿಕ್ಕು ಹೀಗೆ ವೈವಿಧ್ಯಮಯ ಸೊಪ್ಪು ತರಕಾರಿ ಪ್ರಪಂಚವಿದೆ.

ಸೊಪ್ಪುಗಳು ಇಪ್ಪತ್ತೈದರಿಂದ ನಲವತ್ತು ದಿನಗಳಲ್ಲಿ ಕಟಾವಿಗೆ ಬರುತ್ತವೆ. ನಂತರ ಹೀರೆ, ಹಾಗಲ, ಚವಳಿ, ಸೋರೆ, ಪಡುವಲ ಕಾಯಿಗಳ ಸರದಿ. ಇವುಗಳ ನಡುವೆ ತಲೆ ಎತ್ತಿರುವ ದೇಸಿ ಗೋವಿನಜೋಳ 70 ದಿನಗಳಲ್ಲಿ ಕೊಯ್ಲು ಶುರು. ತರಕಾರಿಗಳ ತ್ಯಾಜ್ಯ, ಇನ್ನಿತರ ಸಾವಯವ ರಸಾವರಿ ಸವಿಯುತ್ತ ಪೂರ್ಣ ಕ್ಷೇತ್ರ ಆವರಿಸಿ ಬೆಳೆಯುವ ಸರದಿಯಲ್ಲಿ ಅರಿಸಿನದ ಸಿಂಹಪಾಲು. ಒಂದೆಡೆ ಬೆಳೆ ತೆಗೆದ ಬಳಿಕ ಮತ್ತೆ ಭೂಮಿ ಹದಗೊಳಿಸಿ ತರಕಾರಿ ಬೆಳೆಯಲು ಸಜ್ಜು.

ತೋಟದ ಸುತ್ತಲೂ ಎಳ್ಳು, ಗುರೆಳ್ಳು. ಬದುವಿಗೆ ಹಾಕಿದ ದಟ್ಟನಾದ ಪುಂಡಿಸೊಪ್ಪಿನ ಸಾಲು ಹೊರಗಿನಿಂದ ಬೆಳೆಗೆ ರಕ್ಷಣೆ ಒದಗಿಸುತ್ತದೆ. ಜತೆಗೆ, ಪುಂಡಿಸೊಪ್ಪಿನ ನಾರು ಹಗ್ಗ ತಯಾರಿಕೆಗೆ ಬಳಕೆಯಾಗುತ್ತದೆ. ಹೀರೆ, ಹಾಗಲ (ನುಣುಪು, ಏಣಿ, ಗುಂಡು ಹಾಗೂ ಮಿಂಚು ಹಾಗಲ), ಚವಳಿ, ಬದನೆಗಳಿವೆ. ಬದನೆಯಲ್ಲಿ ಉಲ್ಲಾಳ ಹಸಿರು, ಗುಂಡನೆಯ ಹಸಿರು, ಕುಂಬಳ ಬದನೆ, ಕೆಂಪು ಬದನೆ, ಹೊಳೆಗಾಯಿ ಬದನೆ, ಕರಿ ಹಾಗೂ ಬಿಳಿ ಬದನೆ ತಳಿಗಳಿವೆ.

ಪಡುವಲ, ಸೋರೆ, ಟೊಮೆಟೊ ಎಲ್ಲ ಜವಾರಿ ಬೀಜಗಳಿಂದಲೇ ಬೆಳೆದದ್ದು. ಮುಂಗಾರಿನಲ್ಲಿ ಕೊಯ್ಲಿಗೆ ಬರುವ ಮೊದಲ ಫಸಲಿನಲ್ಲಿ ಆರೋಗ್ಯಯುತ ದಪ್ಪ ಕಾಯಿ ಬೀಜವಾಗಲು ಸಜ್ಜಾಗುತ್ತವೆ. ಕಾಯಿ ಸಹಿತ ಬೀಜ ಸಂಗ್ರಹಿಸಿ ಮುಂದಿನ ಹಂಗಾಮಿಗೆ ಬಿತ್ತಲು ತೆಗೆದಿಡುವ ಜಾಣ್ಮೆ. ಇಡೀ ಕುಟುಂಬ ಕೃಷಿ ಕಾರ್ಯಗಳಿಗೆ ಜೊತೆಯಾಗಿದೆ. ಕೃಷಿಯ ಲಾಭದ ಬಗ್ಗೆ ನಾವು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತೇವೆ. ಲಾಭದ ಜೊತೆ ನೆಮ್ಮದಿಯ ಸೂಚ್ಯಂಕ ವಿವರಿಸುವ ತಾಕತ್ತು ರಾಮದುರ್ಗದ ಮಣ್ಣಿನ ಜವಾರಿ ಹುಡುಗ ಅಜ್ಜಪ್ಪರಿಗಿದೆ. ಅಜ್ಜಪ್ಪ ಅವರ ಸಂಪರ್ಕ ಸಂಖ್ಯೆ; 90089 77319

ಚಿತ್ರಗಳು: ಲೇಖಕಿಯರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.