ADVERTISEMENT

ಸುಭಾಷ್‌ ಪಾಳೇಕರ್‌ ಕೃಷಿ ಪಾಠ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಸುಭಾಷ್‌ ಪಾಳೇಕರ್‌
ಸುಭಾಷ್‌ ಪಾಳೇಕರ್‌   

ನಗರ ಜೀವನದಲ್ಲಿ ದಕ್ಕಿದಂತೆ, ಸಿಕ್ಕಿದಂತೆ ನಮ್ಮನೀರು, ಆಹಾರ ಮತ್ತು ಗಾಳಿ ಸೇವಿಸಬೇಕಾದ, ಜೀವನಶೈಲಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯ. ಹೂವಿಗೂ, ಹಣ್ಣಿಗೂ, ನೀರಿಗೂ, ಆಹಾರಕ್ಕೂ ರಾಸಾಯನಿಕ ಬೆರಕೆಯಾಗಿರುತ್ತದೆ ಎಂದು ದೂರುವಂತಿಲ್ಲ. ರಾಜಿಯಾಗಲೇಬೇಕು. ಸೇವಿಸುವ ಆಹಾರವನ್ನಾದರೂ ರಾಸಾಯನಿಕ, ಮಾಲಿನ್ಯಗಳಿಂದ ಮುಕ್ತವಾಗಿಸಿಕೊಳ್ಳಲು ಇಲ್ಲಿ ಸಾಧ್ಯವಿಲ್ಲವೇ?

ಇದೆ ಎಂದು ಸಾಧಿಸಿ ತೋರಿಸಿದ್ದಾರೆ ಕೆಲವು ಛಲಗಾರರು. ತಾರಸಿ ಮೇಲೆ, ಕಿಟಕಿ/ಬಾಲ್ಕನಿಗಳಲ್ಲಿ ಕುಂಡ ಗಳಲ್ಲೇ ಹೂವು, ಸೊಪ್ಪು, ತರಕಾರಿ ಬೆಳೆದರು.ಅದಕ್ಕೆ ಅವರು ಕಂಡುಕೊಂಡಿರುವ ಮಾರ್ಗ ಶೂನ್ಯ ಬಂಡವಾಳ ಸಹಜ ಕೃಷಿಯ ‘ಪಾಳೇಕರ್‌ ತತ್ವ’ಗಳನ್ನು. ಮನೆಯ ತ್ಯಾಜ್ಯಗಳನ್ನೇ ರಸಯುಕ್ತ ಗೊಬ್ಬರವನ್ನಾಗಿಸಿ ಬಳಸಿದರು. ನಗರ ಕೃಷಿಯ ಪರಿಕಲ್ಪನೆಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಜನಸಾಮಾನ್ಯರು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರೂಹೀಗೆ ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳುವ ಉಮೇದು ತೋರುತ್ತಿದ್ದಾರೆ. ಈ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ‘ಮರಳಿ ಮಣ್ಣಿಗೆ’ (ಬ್ಯಾಕ್‌ ಟು ನೇಚರ್) ಎಂಬ ಕಾರ್ಯಾಗಾರವೊಂದು ನಗರದಲ್ಲಿ ನಡೆಯಲಿದೆ.

ADVERTISEMENT

‘ಮರಳಿ ಮಣ್ಣಿಗೆ’

ಇದೇ ತಿಂಗಳ 8 ಮತ್ತು 9ರಂದು ನಡೆಯುವ ಈ ಕಾರ್ಯಾಗಾರದ ಹೆಸರು ‘ಮರಳಿ ಮಣ್ಣಿಗೆ’ (ಬ್ಯಾಕ್‌ ಟು ನೇಚರ್‌).‘ಶೂನ್ಯ ಬಂಡವಾಳ ಸಹಜ ಕೃಷಿಯ ಪಿತಾಮಹ’ ಸುಭಾಷ್‌ ಪಾಳೇಕರ್‌ ಅವರೇ ಎರಡೂ ದಿನಗಳ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ, ಮರಣಿ ಮಣ್ಣಿಗೆ ಆಂದೋಲನ, ಗೋಕುಲ ವಿದ್ಯಾ ಪ್ರತಿಷ್ಠಾನ ಮತ್ತು ಲ್ಯೂಮಿನೆಸೆನ್ಸ್‌ ಸೊಸೈಟಿ ಆಫ್‌ ಇಂಡಿಯಾದ ಕರ್ನಾಟಕ ವಿಭಾಗ ಸಂಯುಕ್ತವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿವೆ.

‘ಉದ್ಯೋಗಸ್ಥರು ವಾರಾಂತ್ಯದ ಕೃಷಿ ಪದ್ಧತಿಯನ್ನು ಮನೆ ಹಾಗೂ ನಗರದಂಚಿನ ಹಳ್ಳಿಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ತೋರಿಸಿಕೊಡಲಿದ್ದಾರೆ. ತಾರಸಿ ತೋಟ, ಕೈತೋಟ ಮತ್ತು ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿ, ಹಸಿ ಕಸದಿಂದ ಗೊಬ್ಬರ ತಯಾರಿ ಮುಂತಾದ ವಿಷಯಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಪ್ರಾತ್ಯಕ್ಷಿಕೆಗಳೂ ಇರುತ್ತವೆ’ ಎಂದು ತಿಳಿಸಿದ್ದಾರೆ, ಕಾರ್ಯಾಗಾರದ ಸ್ವಯಂಸೇವಕ ಸುಬ್ರಮಣಿ ರೆಡ್ಡಿ.

‘ಕಳೆದ ವರ್ಷ ಆಯೋಜಿಸಿದ್ದ ಕಾರ್ಯಾ ಗಾರದಲ್ಲಿ 800 ಮಂದಿ ಪಾಲ್ಗೊಂಡಿದ್ದರು. ಈ ಬಾರಿಯ ಕಾರ್ಯಾಗಾರಕ್ಕೆ ಆನ್‌ಲೈನ್‌ನಲ್ಲಿ ನೋಂದಣಿ ಆರಂಭವಾಗಿದ್ದು, 1500ಕ್ಕೂ ಅಧಿಕ ಪ್ರತಿನಿಧಿಗಳು ಈ ಬಾರಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು ಮತ್ತು ಗೃಹಿಣಿಯರೂ ಈ ಬಾರಿ ನೋಂದಣಿ ಮಾಡಿಕೊಳ್ಳುತ್ತಿರುವುದು ಗಮನಾರ್ಹ. ಕೃಷಿ ಇಲಾಖೆಯು ತನ್ನ 300 ಮಂದಿ ನೌಕರರು ಮತ್ತು ಅಧಿಕಾರಿಗಳನ್ನು ಕಳುಹಿಸಿಕೊಡಲಿದೆ. ಪ್ರತಿನಿಧಿ ಶುಲ್ಕ ₹ 500. ಕಾರ್ಯಾಗಾರದ ದಿನವೂ ನೋಂದಣಿ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

ಆಸಕ್ತರು 080 33508383 ಕ್ಕೆ ಮಿಸ್‌ ಕಾಲ್‌ ನೀಡಿದರೆ ಆಯೋಜಕರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಆನ್‌ಲೈನ್‌ ಲಿಂಕ್‌ http://zbnfkarnataka.org/farmer/welcome/event_referral_register/1/10.

ಕಾರ್ಯಾಗಾರದ ಸ್ಥಳ: ದ್ವಾರಕ ಸಭಾಂಗಣ, ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ ಆವರಣ, ನ್ಯೂ ಬಿ.ಇ.ಎಲ್. ರಸ್ತೆ, ಎಂ.ಎಸ್. ರಾಮಯ್ಯ ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.