ADVERTISEMENT

ಕರಿ ಇಶಾಡಿಗೆ ‘ಜಿಐ’ ಕೋಡು

ಸಂಧ್ಯಾ ಹೆಗಡೆ
Published 6 ಮೇ 2023, 20:50 IST
Last Updated 6 ಮೇ 2023, 20:50 IST
ಅಂಕೋಲೆಯ ಕರಿ ಇಶಾಡು
ಅಂಕೋಲೆಯ ಕರಿ ಇಶಾಡು   
ಸಾರಾಂಶ

ಅಂಕೋಲಾ ಕರಿ ಇಶಾಡು ಸಿಹಿಯನ್ನೇ ಇಡಿಯಾಗಿಸಿಕೊಂಡ ಮಾವಿನ ತಳಿ. ಬಿದಿರು ಬುಟ್ಟಿಯಲ್ಲಿಟ್ಟು ಸ್ಥಳೀಯವಾಗಿ ಮಾರಾಟಗೊಳ್ಳುವ ಈ ಹಣ್ಣು ವಿದೇಶಗಳನ್ನೆಲ್ಲ ಸುತ್ತಿ ಬಂದು, ಇದೀಗ ಭೌಗೋಳಿಕ ಚಿಹ್ನೆಯ ಮಾನ್ಯತೆಯನ್ನೂ ಪಡೆದುಕೊಂಡಿದೆ. ಈ ಹಣ್ಣಿನಂತೆ ಇದರ ಕಥನವೂ ರಸಭರಿತ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಂದಾಕ್ಷಣ ತಟ್ಟನೆ ನೆನಪಾಗುವುದು ಒಂದು ‘ಉಪ್ಪಿನ ಸತ್ಯಾಗ್ರಹ’, ಇನ್ನೊಂದು ‘ಕರಿ ಇಶಾಡು’.

ಹುಳಿಯನ್ನು ತಿರಸ್ಕರಿಸಿ ಸಿಹಿಯ ತಿರುಳನ್ನಷ್ಟೇ ಕವಚದೊಳಗೆ ತುಂಬಿಕೊಂಡಿರುವ ಅಂಕೋಲಾ ಕರಿ ಇಶಾಡು ಹಣ್ಣಿನ ಸವಿಯನ್ನು ತಿಂದೇ ಅನುಭವಿಸಬೇಕು. ಹಸಿರು–ಹಳದಿ ಮಿಶ್ರಿತ ಬಣ್ಣ ಹೊದ್ದುಕೊಂಡ ಈ ಹಣ್ಣುಗಳನ್ನು ಹಾಲಕ್ಕಿ ಮಹಿಳೆಯರು ಬಿದಿರು ಬುಟ್ಟಿಯಲ್ಲಿಟ್ಟು ಮಾರುತ್ತಾರೆ. ಐಷಾರಾಮಿ ಕಾರುಗಳಲ್ಲಿ ಹೆದ್ದಾರಿಯಲ್ಲಿ ಹೋಗುವವರೂ ಕರಿ ಇಶಾಡಿನ ಸುವಾಸನೆಗೆ ಮಾರುಹೋಗಿ, ಬ್ರೇಕ್ ಹಾಕಿ, ಇಡೀ ಬುಟ್ಟಿಯ ಹಣ್ಣನ್ನು ಖರೀದಿಸಿ ಕಾರಿನಲ್ಲಿ ತುಂಬಿಕೊಂಡು ಹೋಗುವುದೂ ಉಂಟು.

ADVERTISEMENT

ಇದು ಅಂತಿಂತಹ ಮಾವು ಅಲ್ಲ, ಶತಮಾನದ ಹಿಂದೆ ವಿಶ್ವ ಪರ್ಯಟನೆ ಮಾಡಿದ ಹಿರಿಮೆ ಈ ಹಣ್ಣಿಗಿದೆ. 1908ನೇ ಇಸವಿಯಲ್ಲಿ ಅಂಕೋಲಾ ಕರಿ ಇಶಾಡು ಮೌಲ್ಯವರ್ಧನೆಗಾಗಿ ಆರಂಭವಾದ ಓರಿಯಂಟಲ್ ಕೆನರಾ ಇಂಡಸ್ಟ್ರಿ ಮೂಲಕ ಇದು ಅಮೆರಿಕ, ಯುರೋಪ್ ದೇಶಗಳ ಮಾವು ಪ್ರಿಯರ ರುಚಿ ಗ್ರಂಥಿಯನ್ನು ಉದ್ದೀಪಿಸಿತ್ತು. ಮೌಲ್ಯವರ್ಧನೆಯ ಪರಿಕಲ್ಪನೆ ಪ್ರಚಲಿತಕ್ಕೆ ಬರುವ ಮುನ್ನವೇ ಪಲ್ಪ್‌ ಆಗಿ ರೂಪಾಂತರಗೊಂಡು ವಿದೇಶಿ ಮೆನ್ಯುಗಳ ಪಟ್ಟಿಯಲ್ಲಿದ್ದ ಕರಿ ಇಶಾಡು, ಕಾಲಚಕ್ರದ ಓಟದಲ್ಲಿ ಕರಾವಳಿಯಲ್ಲಿ ರಸ್ತೆಯ ಬದಿಯ ಮಾರಾಟದ ಮಾವಿಗೆ ಸೀಮಿತವಾಯಿತು. 

ಆದರೆ, ಈಗ ಮತ್ತೆ ಕರಿ ಇಶಾಡಿಗೆ ಗಜಕೇಸರಿ ಯೋಗ ಬಂದೊದಗಿದೆ. ಅಂಕೋಲೆಯ ಹಿತ್ತಲ ಹಣ್ಣಿಗೀಗ ಭೌಗೋಳಿಕ ಚಿಹ್ನೆಯ (geographical indication) ಮಾನ್ಯತೆ.

ಕರಿ ಇಶಾಡಿನ ಯಶೋಗಾಥೆ: ಓರಿಯಂಟಲ್ ಕೆನರೀಸ್ ಇಂಡಸ್ಟ್ರಿಯ ಮಾವಿನ ಉತ್ಪನ್ನಗಳ ಮಾರಾಟದ ಹೊಣೆ ವಹಿಸಿಕೊಂಡಿದ್ದ ಮುಂಬೈನ ವೀರಚಂದ್ ಪನಚಂದ್ ಕಂಪನಿ ಪ್ರಕಟಿಸಿದ ಕರಪತ್ರದಲ್ಲಿ ಜ್ಯೂಸ್, ಸಿರಪ್, ಐಸ್‌ಕ್ರೀಂ ಸೇರಿದಂತೆ 48 ಅಮೆರಿಕನ್ ಪಾಕ ವೈವಿಧ್ಯಗಳನ್ನು ಉಲ್ಲೇಖಿಸಿತ್ತು. ಆಗ ಮುಂಬೈ ಸರ್ಕಾರವಿದ್ದ ಕಾಲ, ಓರಿಯಂಟಲ್ ಇಂಡಸ್ಟ್ರಿಗೆ ಸರ್ಕಾರದ ಪ್ರೋತ್ಸಾಹ ದೊರೆತು, ಲಂಡನ್, ಚೀನಾ ಮೊದಲಾದ ದೇಶಗಳಿಗೆ ಮಾವಿನ ಉತ್ಪನ್ನಗಳು ರಫ್ತಾದವು. ಅಂಕೋಲೆಯ ಹಿರಿಯ ವಾಮನ ಪೈ ಅವರ ಬಳಿ ಇದ್ದ ದಾಖಲೆಗಳಲ್ಲಿ ಇಂತಹ ಅನೇಕ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಪರಿಸರ ಕಾರ್ಯಕರ್ತ ಶಿವಾನಂದ ಕಳವೆ.

ಸಿಂಗಪುರದ ದಿ ಸ್ಟೇಟ್ಸ್ ಟೈಮ್ಸ್, ಟೈಮ್ಸ್‌ ಆಫ್ ಇಂಡಿಯಾ ಬಾಂಬೆ, ಟೈಮ್ಸ್ ಆಫ್ ಸಿಲೋನ್, ದಿ ನಾರ್ಥ್ ಚೈನಾ ಡೈಲಿ ನ್ಯೂಸ್‌ಗಳು ಅಂಕೋಲಾ ಮಾವನ್ನು ಮೆಚ್ಚಿ 100 ವರ್ಷಗಳ ಹಿಂದೆಯೇ ಲೇಖನ ಪ್ರಕಟಿಸಿದ್ದವು. ನ್ಯೂಯಾರ್ಕ್ ಫಿಸಿಕಲ್ ಕಲ್ಚರ್ ಮ್ಯಾಗಝೀನ್, ಕರಿ ಇಶಾಡಿನಲ್ಲಿರುವ ಪೌಷ್ಟಿಕಾಂಶದ ಬಗ್ಗೆ 1931ರ ಜೂನ್ 10ರಂದು ಅರ್ಹತಾ ಪತ್ರ ನೀಡಿ ಅಲ್ಲಿನ ಗ್ರಾಹಕರು ಇದನ್ನು ಬಳಸಬಹುದೆಂದು ಶಿಫಾರಸು ಮಾಡಿತ್ತು. ಅಂಕೋಲಾ ಕರಿ ಇಶಾಡು ವಿದೇಶದ ಐದು ಬಂಗಾರದ ಪದಕಗಳನ್ನು ಪಡೆದಿತ್ತು ಎಂಬುದನ್ನು ತಮ್ಮ ಸಂಗ್ರಹದಲ್ಲಿರುವ ದಾಖಲೆಯೊಂದಿಗೆ ವಿವರಿಸಿದರು ಕಳವೆ.

ಜಿಐ ಮಾನ್ಯತೆಯೊಂದಿಗೆ ಮತ್ತೊಮ್ಮೆ ಪ್ರಾದೇಶಿಕ ವಿಶೇಷತೆಯನ್ನು ಜಗತ್ತಿಗೆ ತೆರೆದುಕೊಳ್ಳುವ ಅವಕಾಶ ವಿಸ್ತರಿಸಿದೆ. ಮರವೊಂದಕ್ಕೆ ಮಾನ್ಯತೆ ದೊರೆತಿದ್ದರಿಂದ ಮರಗಳನ್ನು ನೋಡುವ ರೀತಿ ಬದಲಾಗಲಿದೆ. ನಿರ್ಮಾಣದ ನೆಪದಲ್ಲಿ ಬರಿದಾಗುತ್ತಿರುವ ಕರಾವಳಿಯನ್ನು ಪರಿಸರಸ್ನೇಹಿಯಾಗಿ ಕಾಣಲು ಇದೊಂದು ಒಳ್ಳೆಯ ಅಸ್ತ್ರ ಆಗಬೇಕಿದೆ.

ವಾಸ್ತವದಲ್ಲಿ ಏನು?: ಕರಿ ಇಶಾಡು ಅಂಕೋಲಿಗರ ಹಿತ್ತಲ ಹಣ್ಣು. 300 ವರ್ಷ ಆಯುಸ್ಸಿನ ಮರಗಳೂ ಇಲ್ಲಿವೆ. ವಾಣಿಜ್ಯಿಕವಾಗಿ ರೂಪುಗೊಂಡ ಪ್ಲಾಂಟೇಷನ್‌ಗಳು ವಿರಳ. ಮೊದಲೆಲ್ಲ ಕೆಲವು ವ್ಯಾಪಾರಸ್ಥರು ಮರಗಳನ್ನು ಗುತ್ತಿಗೆ ಪಡೆದು, ತಾವೇ ಕೊಯ್ಲು ಮಾಡಿ ಹಣ್ಣನ್ನು ಹುಬ್ಬಳ್ಳಿ ಮಾರುಕಟ್ಟೆಗೆ ಒಯ್ಯುತ್ತಿದ್ದರು. ಅಂಕೋಲಾ ಕರಿ ಇಶಾಡು ಅಂಕೋಲೆಗಿಂತ ಹುಬ್ಬಳ್ಳಿಯಲ್ಲೇ ಹೆಚ್ಚು ಪ್ರಸಿದ್ಧವಾಗಿತ್ತು. ಈಚಿನ ವರ್ಷಗಳಲ್ಲಿ ಹೆದ್ದಾರಿ ಬದಿಯಲ್ಲಿ ಕುಳಿತು ವ್ಯಾಪಾರಸ್ಥರೇ ನೇರವಾಗಿ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಹಿತ್ತಲಿನಲ್ಲಿರುವ ನಾಲ್ಕಾರು ಮರಗಳೂ ಕುಟುಂಬದ ತುತ್ತಿನ ಚೀಲ ತುಂಬಿಸುತ್ತಿವೆ. ಈ ಹಣ್ಣಿನ ಸೀಸನ್‌ ಹೆಚ್ಚೆಂದರೆ ಎರಡು ತಿಂಗಳು. ಇಷ್ಟೇ ಅವಧಿ ಕೆಲವರಿಗೆ ವಾರ್ಷಿಕ ದುಡಿಮೆಯ ಫಲ ಕೊಡುತ್ತಿವೆ ಎಂಬುದು ಸ್ಥಳೀಯರ ಅಂಬೋಣ.

‘ಮಣ್ಣಿನ ಗುಣದಲ್ಲಿ ಬೆಳೆಯುವ ಸಿರಿ ಇದು. ಅಂಕೋಲಾದಲ್ಲೂ ವಂದಿಗೆ, ಬೆಳಂಬಾರ, ಶೆಟಗೇರಿ, ಬೆಳಸೆ, ಹೊನ್ನೆಬೈಲು ಹೀಗೆ ನಾಲ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುವ ಹಣ್ಣು ಬಲು ಸಿಹಿ. ಒಣ ಮಣ್ಣು ಸಿಹಿ ಹೆಚ್ಚಿಸುತ್ತದೆ. ಇದೇ ಕರಿ ಇಶಾಡು ಗಿಡವನ್ನು ಇನ್ನೆಲ್ಲೋ ನಾಟಿ ಮಾಡಿದರೆ ಈ ರುಚಿ ಸಿಗಲಾರದು. ಕಾಯಿ ವಿಪರೀತ ಹುಳಿ, ಬಲಿತ ಹಣ್ಣು ಅಷ್ಟೇ ಸಿಹಿ. ಕಾಯಿಯನ್ನು ಸ್ಲೈಸ್ ಮಾಡಿ ಒಣಗಿಸಿ ಅಡುಗೆಗೆ ಹುಳಿಯಾಗಿ ಬಳಸಬಹುದು. ಇದು ನಮ್ಮೂರ ಹಣ್ಣಿನ ವಿಶೇಷತೆ’ ಎನ್ನುತ್ತಾರೆ ಬೆಳೆಗಾರ ಹಾಗೂ ಮಾತಾ ತೋಟಗಾರ್ಸ್‌ ಫಾರ್ಮ್ ಪ್ರೊಡ್ಯೂಸರ್ ಕಂಪನಿಯ (ಎಫ್‌ಪಿಒ) ನಿರ್ದೇಶಕ ಮಹಾದೇವ ಗೌಡ.

‘ನಮ್ಮ ಎಫ್‌ಪಿಒದಲ್ಲಿ 350ರಷ್ಟು ಬೆಳೆಗಾರ ಸದಸ್ಯರು ಇದ್ದಾರೆ. ಜಿಐ ಮಾನ್ಯತೆ ಸಿಕ್ಕ ಮೇಲೆ ಹೊಸ ಉತ್ಪನ್ನ ತಯಾರಿಸುವ ಹುಮ್ಮಸ್ಸು ದೊರೆತಿದೆ. ಈಗಾಗಲೇ ಪಲ್ಪ್ ಮಾಡಿ ಯಶಸ್ಸು ಕಂಡಿದ್ದೇವೆ. ಕರಿ ಇಶಾಡು ಕ್ಯಾಂಡಿ, ಹಣ್ಣಿನ ಬಾರ್ ಮೂಲಕ ಆಧುನಿಕ ಮಾರುಕಟ್ಟೆ ಪ್ರವೇಶಿಸುವ ಗುರಿ ನಮ್ಮದು’ ಎನ್ನುವಾಗ ಅವರಲ್ಲಿ ಆತ್ಮವಿಶ್ವಾಸವನ್ನು ಕಂಡೆ.  ಈ ಮಾವು ಹಣ್ಣಾದ ದಿನ ಬಳಸಿದರೆ ಉತ್ತಮ, ಮರುದಿನಕ್ಕೆ ಹಣ್ಣು ಹಳಸುತ್ತದೆ. ಉಳಿದ ಮಾವಿನ ತಳಿಗಳಿಗೆ ಹೋಲಿಸಿದರೆ ಇದರ ತಾಳಿಕೆ ಅವಧಿ ತುಸು ಕಡಿಮೆ. ಹೀಗಾಗಿ ಶೀತಲೀಕರಣ ಘಟಕ, ಸಂಸ್ಕರಣ ಘಟಕವೊಂದು ಬೇಕೇ ಬೇಕು ಎಂಬುದು ಅವರ ಬೇಡಿಕೆ.

ಜಿಐ ಬಂದಿದ್ದು ಹೇಗೆ?: ಕರಿ ಇಶಾಡಿಗೆ ಜಿಐ ಕೊಡಿಸಬೇಕೆನ್ನುವ ತೋಟಗಾರಿಕೆ ಇಲಾಖೆಯ ಪ್ರಸ್ತಾವಕ್ಕೆ ನೀರೆರೆದಿದ್ದು ನಬಾರ್ಡ್‌. ನಬಾರ್ಡ್ ಡಿಡಿಎಂ ರೇಜಿಸ್ ಇಮ್ಯಾನುಯೆಲ್ ಅವರ ವಿಶೇಷ ಮುತುವರ್ಜಿ, ಜಿಐ ಕನ್ಸಲ್ಟಂಟ್ ನಂದಿನಿ ದೋಲೆಪಟ್ ಅವರ ಶ್ರಮ, ಅಂಕೋಲಾದಲ್ಲಿ ವಕೀಲ ನಾಗರಾಜ ನಾಯ್ಕ ನೇತೃತ್ವದಲ್ಲಿ ನಡೆದ ಕರಿ ಇಶಾಡು ಮೇಳ, ಎಫ್‌ಪಿಒ ಕಾರ್ಯಚಟುವಟಿಕೆ ಈ ಎಲ್ಲವೂ ಭೌಗೋಳಿಕ ಚಿಹ್ನೆ ಪಡೆಯಲು ಸಹಕಾರಿಯಾಯಿತು.

ಹೆಸರಿನ ಕೌತುಕ
ಜಿಐ ನೋಂದಣಿಗೆ ಚಾರಿತ್ರಿಕ ದಾಖಲೆ ಮುಖ್ಯ. ಹೀಗೆ ದಾಖಲೆಗಾಗಿ ಗ್ರಂಥಾಲಯದಲ್ಲಿ ತಡಕಾಡಿದಾಗ 1920ರಲ್ಲಿ ಕೃಷಿ ಇಲಾಖೆ ಹೊರತಂದ ಬುಲೆಟಿನ್‌ನಲ್ಲಿ ಕರಿ ಇಶಾಡಿನ ಉಲ್ಲೇಖವಿತ್ತು. ಈ ಮಾವಿನ ನಾಮಕರಣ ಹೇಗೆ ಎಂಬುದೇ ಕೌತುಕ. ‘ಇಶಾಡು’ ಇದು ಹಳೆ ಟರ್ಕಿಷ್ ಪದ. ಟರ್ಕಿ ಭಾಷೆಯಲ್ಲಿ ಉನ್ನತ ಸ್ಥಾನಕ್ಕೆ ‘ಇಶಾಡು’ ಎನ್ನುವ ಕ್ರಮವಿತ್ತು. 14ನೇ ಶತಮಾನದ ಸಂದರ್ಭದಲ್ಲಿ ಸೇನೆಯಲ್ಲಿ ಉನ್ನತ ಸ್ಥಾನಕ್ಕೆ ಪದವನ್ನು ಬಳಸುತ್ತಿದ್ದರು. ಹಣ್ಣಿನಲ್ಲೇ ಉತ್ಕೃಷ್ಟವಾಗಿರುವ ಈ ಹಣ್ಣಿಗೆ ‘ಇಶಾಡು’ ಎಂದು ಕರೆದಿರಬಹುದು. ಆಗ ಮುಂಬೈ ಪ್ರೆಸಿಡೆನ್ಸಿಯ ಕಾಲ. ಬಹಮನಿ ಸಾಮ್ರಾಜ್ಯದಲ್ಲಿ ಆದಿಲ್ ಶಾಹಿ ಮನೆತನದ ಯುಸೂಫ್ ಆದಿಲ್ ಶಾ ಟರ್ಕಿಯವನಾಗಿದ್ದ ಎನ್ನುತ್ತಾರೆ ಸಂಶೋಧಕಿ ನಂದಿನಿ ದೋಲೆಪಟ್.

ಆಗಬೇಕಾಗಿದ್ದು ಏನು?

ಜಿಐ ಎನ್ನುವುದು ರೈತರಿಗೆ ರಕ್ಷಾ ಕವಚ, ಇದು ಸಮುದಾಯದ ಹಕ್ಕು. ಪ್ರಾದೇಶಿಕ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆಯ ರಹದಾರಿ ತೆರೆದಂತೆ. ಚಾಕೊಲೇಟ್, ಟೆಟ್ರಾ ಪ್ಯಾಕ್, ಬಾರ್, ಕ್ಯಾನ್‌ ಮೊದಲಾದ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡಬಹುದು. ಸಮುದಾಯದ ಆರ್ಥಿಕ ಮಟ್ಟ ಮೇಲೆತ್ತಲು ಇದು ಏಣಿಯಿದ್ದಂತೆ. ರಾಷ್ಟ್ರ ಮಟ್ಟದ ಮೇಳಗಳಲ್ಲಿ ಭಾಗವಹಿಸಲು ಜಿಐ ವೇದಿಕೆ ಒದಗಿಸಿದೆ. ರೈತರೇ ತಮ್ಮ ಉತ್ಪನ್ನಗಳಿಗೆ ದರ ನಿಗದಿಪಡಿಸಲು ದೊರೆತಿರುವ ಸುವರ್ಣಾವಕಾಶ. ಬೆಳೆಗಾರರು ಇವನ್ನೆಲ್ಲ ಸದುಪಯೋಗಪಡಿಸಿಕೊಂಡರಷ್ಟೇ ‘ಜಿಐ’ ಕಿರೀಟಕ್ಕೆ ವಜ್ರ ಪೋಣಿಸಿದಂತಾಗುತ್ತದೆ.

ಅಂಕೋಲೆಯ ಕರಿ ಇಶಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.