ADVERTISEMENT

ಕಲೆಗೆ ಭಾವನೆಯ ಸ್ಪರ್ಶ

ಡಿ.ಎಂ.ಕುರ್ಕೆ ಪ್ರಶಾಂತ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಹಂಪಿಯ ವಾಸ್ತುಶಿಲ್ಪದ ಕಲಾ ವೈಭವ ಇಲ್ಲಿ ವರ್ಣತೆಯ ವೈಭವ ಪಡೆದಿದೆ. ವಾಸ್ತು ಶಿಲ್ಪ ಸೌಂದರ್ಯದ ಮೆರುಗು ಕುಂಚದಲ್ಲಿ ಕೊಂಚವೂ ಲೋಪ ಬರದಂತೆ ಮೈದಳೆದಿದೆ. ದಾಳಿ, ದಬ್ಬಾಳಿಕೆಗಳಿಗೆ ಮೂಕ ಸಾಕ್ಷಿ ನಾನು ಎಂಬಂತೆ ಚಿತ್ರಿತವಾಗಿವೆ ಕಲಾವಿದ ಸತ್ಯ ಶಿವಕುಮಾರ್ ಅವರ ಹಂಪಿ ಸೀರಿಸ್ ಅಡಿಯಲ್ಲಿ ಅರಳಿರುವ  ಚಿತ್ತಾರಗಳು.

ಮಿಕ್ಸ್ ಮೀಡಿಯ ಮಾಧ್ಯಮದಲ್ಲಿ ಸತ್ಯ ಶಿವಕುಮಾರ್ ಹಂಪಿಯ ಶಿಲ್ಪಕಲೆ ಸೊಬಗು ಮತ್ತು ಪರಕೀಯ ದೊರೆಗಳ ಕಾಲದಲ್ಲಿ ಅದಕ್ಕೆ ಆದ ಹಾನಿಯನ್ನು ದೃಶ್ಯ ಮಾಧ್ಯಮಕ್ಕೆ ಇಳಿಸಿದ್ದಾರೆ. ಮಹಾನವಮಿ ದಿಬ್ಬ, ಕಮಲ ಮಹಲ್, ಕೈ ತುಂಡಾದ ಉಗ್ರ ನರಸಿಂಹ, ಮಹಲುಗಳು, ಬುರುಜುಗಳು, ಕಲ್ಲು, ಕಲ್ಲುಗಳಲ್ಲೂ ಅರಳಿರುವ ಶಿಲ್ಪಸಿರಿ ಹೀಗೆ ಹಂಪಿಯನ್ನು ಕಲೆಯ ಮೂಲಕ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಒಂದೇ ಚಿತ್ರದಲ್ಲಿ ಬಹು ಆಕೃತಿಗಳ ವಿನ್ಯಾಸ ಅರಳಿದೆ. ಜೊತೆಗೆ ಅಭಿಮನ್ಯು ಸೀರಿಸ್, ಸ್ನೇಕ್ ಮತ್ತು ಲಾಡರ್ ಸೀರಿಸ್‌ನಲ್ಲಿ ಬದುಕಿನ ವಿವಿಧ ಮಜಲುಗಳನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲದೇ ಕಮ್ಮಾರ, ಕುಂಬಾರ, ಬಡಗಿಗಳ ಜೀವನವನ್ನು ಪೆನ್ಸಿಲ್ ಕಲೆಯಲ್ಲಿ ಹಿಡಿದಿಟ್ಟಿದ್ದಾರೆ. ಇಲ್ಲಿನ ಕಲೆಗಳಿಗೆ ಅಲೌಕಿಕ ಸ್ಪರ್ಶವೂ ಇದೆ. ಜೀವನವನ್ನು ಹಾವು, ಏಣಿ ಆಟದಲ್ಲಿ ಚಿತ್ರಿಸಿ, ಆಸೆಯ ಬಿನ್ನು ಬಿದ್ದವರ ದುರ್ಗತಿಯನ್ನು ಬಹುಮುಖ ವಿನ್ಯಾಸಗಳಲ್ಲಿ ವ್ಯಕ್ತಪಡಿಸಲಾಗಿದೆ. 

ನಿತ್ಯ ಜೀವನದ ಘಟನಾವಳಿಗಳ, ಪ್ರಸ್ತುತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರ್ಣ ವೈವಿಧ್ಯಗಳು ಅರಳಿವೆ. ಕಲೆಗಳಿಗೆ ಭಾವನೆಗಳ ಸ್ಪರ್ಶವಾಗಿದೆ.ಬಣ್ಣಗಳ ಹದವಾದ ಮಿಶ್ರಣದಿಂದ ಚಿತ್ತಾರಗಳು ಮೂಡಿದ್ದು, ಮೂರ್ತ, ಅಮೂರ್ತಗಳ ಕಲ್ಪನೆ ವೈವಿಧ್ಯವಾಗಿವೆ. ಗಣೇಶ ಸೀರಿಸ್, ಬೇಲೂರು ಹಳೇಬೀಡು ಸೀರಿಸ್ ಹೀಗೆ ಶ್ರೇಣಿಗಳಲ್ಲಿ ಶಿವಕುಮಾರ್ ಕೈಯಾಡಿಸಿದ್ದಾರೆ.

ಭಾವನೆಗಳ ಅಭಿವ್ಯಕ್ತಿಗೆ ಕಲಾ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎನ್ನುತ್ತಾರೆ ಸತ್ಯ ಶಿವಕುಮಾರ್. 1997ರಿಂದಲೂ ಚಿತ್ರ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದ್ದು, ಕುಂಚ ನೈಪುಣ್ಯಕ್ಕೆ 2010ರಲ್ಲಿ ಬಿ.ಆರ್. ಜೈನ್ ಫೌಂಡೇಶನ್‌ನ ರಾಷ್ಟ್ರೀಯ ಪುರಸ್ಕಾರ ಒಲಿದಿದೆ.
ಇವರ ಶಿಲ್ಪಲೋಕದ ಬಾಗಿಲು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಇದೇ 23ರವರೆಗೂ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.