ADVERTISEMENT

ಕಲೆಯ ಪ್ರತಿಬಿಂಬ ಬಿಂಬ...

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST
ಕಲೆಯ ಪ್ರತಿಬಿಂಬ ಬಿಂಬ...
ಕಲೆಯ ಪ್ರತಿಬಿಂಬ ಬಿಂಬ...   

ಶತಮಾನ ಕಂಡಿರುವ ಮನೆ. ಅದರ ಮುಂಭಾಗದಲ್ಲಿ ಸಣ್ಣ ಕೈತೋಟ. ಹಸಿರಿನ ಹಿನ್ನೆಲೆಯಲ್ಲಿ ಹಳೆಯ ಕಟ್ಟಡಕ್ಕೂ ಸಾಂಪ್ರದಾಯಿಕತೆಯ ಹೊಳಹು. ಪ್ರವೇಶದ್ವಾರದ ಮುಂದೆ ತೆಂಗಿನ ಮರದ ಕಂಬಗಳ ಮೇಲೆ ನಿಲ್ಲಿಸಿದ ಹೆಂಚಿನ ಛಾವಣಿ. ಹೊಸ್ತಿಲಲ್ಲಿ ರಂಗವಲ್ಲಿಯ ಚಿತ್ತಾರ. ಸೂರಿಗೆ ನೇತು ಹಾಕಿರುವ ಲಾಟೀನು. ಬಾಗಿಲ ಇಕ್ಕೆಲಗಳ ಗೋಡೆ ಮೇಲೆ ಶ್ವೇತವರ್ಣದ ರೇಖೆಗಳು. ಒಟ್ಟಿನಲ್ಲಿ ಕಲಾಪ್ರೇಮಿಗಳನ್ನು ಥಟ್ಟನೆ ಹಿಡಿದು ನಿಲ್ಲಿಸುವ ವಾತಾವರಣ.

ಈ ಕಲಾವೈಭವ ನೋಡಲು ಬಸವನಗುಡಿಯ `ಬಿಂಬ ಆರ್ಟ್ ಆಶ್ರಮ~ಕ್ಕೆ ಭೇಟಿ ನೀಡಬೇಕು. ಕೇವಲ ಐದು ವರ್ಷದ ಅವಧಿಯಲ್ಲಿ ರೂಪುಗೊಂಡಿರುವ ಕಲಾವೈಭವವಿದು. ಇದನ್ನು ಸಾಕಾರಗೊಳಿಸಿದ್ದು ದೀಪಕ್ ಹಾಗೂ ದೀಪಿಕಾ ದೊರೈ ದಂಪತಿ.

ನೂರು ವರ್ಷದಷ್ಟು ಹಳೆಯ ಕಟ್ಟಡವನ್ನು ಆಧುನಿಕ ರೀತಿಗೆ ತಕ್ಕಂತೆ ಪರಿವರ್ತಿಸದೆ ಹಾಗೆಯೇ ಉಳಿಸಿಕೊಂಡಿರುವುದರಲ್ಲಿ ಈ ಕಲಾವೈಭವದ ಸೊಗಸಿದೆ. ಸಮಕಾಲೀನ ಕಲೆಯ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಲಾಕಾರನ ಮನಸ್ಸಿನ ತುಡಿತಕ್ಕೆ ಇಲ್ಲಿ ಬಣ್ಣಗಳ ರೂಪ.

ಈ ಮನೆಯ ಮೂಲೆ ಮೂಲೆಯಲ್ಲೂ ಕಲೆಯ ಹೊದಿಕೆ ಇದೆ. ಗೋಡೆ ಸಂದು, ಕನ್ನಡಿ, ಕಿಟಕಿ ಬಾಗಿಲಿನ ತುಂಬ ಹೊಸತನದ ಬಿಂಬ. ಅಷ್ಟು ಹಳೆಯ ಕಟ್ಟಡಕ್ಕೆ ಕಲೆಯ ಸ್ಪರ್ಶದಿಂದ ಮೆರುಗು ತಂದಿರುವ ರೀತಿ ಬೆರಗು ಹುಟ್ಟಿಸುವಂಥದ್ದು.

`ಕಲೆ ಎಂದರೆ ಕೇವಲ ನೃತ್ಯ, ಹಾಡುಗಾರಿಕೆ, ಪೇಂಟಿಂಗ್ ಮಾತ್ರವಲ್ಲ. ಇದು ಮನಸ್ಸಿನ ಜತೆಗೆ ನಿರಂತರವಾಗಿ ಸಾಗಬಹುದಾದ, ಸಾಗಲೇಬೇಕಾದ ಆಲೋಚನೆ. ಅದು ತಟಸ್ಥವಲ್ಲ, ಚಲನಶೀಲತೆಯಿಂದ ಸದಾ ಹರಿಯುತ್ತಿರುವುದು. ಈಗೀಗ ಎಲ್ಲ ಪ್ರಯೋಗಗಳನ್ನು ಇಕೋ ಫ್ರೆಂಡ್ಲಿ ಎಂದು ಕರೆಯುತ್ತಲೇ ಯಂತ್ರ ಬಳಸಿ ನಿಸರ್ಗವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿದ್ದಾರೆ. ಆದರೆ ನಾವಿಲ್ಲಿ ಯಂತ್ರದ ಬಳಕೆ ಮಾಡಿಲ್ಲ. ಇಲ್ಲಿ ಎಲ್ಲವೂ ಕೈಯಿಂದ ತಯಾರಿಸಿದ ಉತ್ಪನ್ನಗಳೇ~ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಿರ್ದೇಶಕಿ ದೀಪಿಕಾ ದೊರೈ.

ಈ ಕಲಾ ದೇಗುಲದಲ್ಲಿ ಸಣ್ಣ ಕಣಕಣದಲ್ಲೂ ಕಲೆ. ತೆಂಗಿನ ಗೊರಟೆಯ ಸಣ್ಣ ಭಾಗ ಕುರ್ತಾಕ್ಕೆ ಗುಂಡಿಯಾಗಿ (ಬಟನ್) ಬಳಕೆಯಾಗುತ್ತದೆ. `ರೋಲಿಂಗ್ ಷಟರ್~ನ ಪ್ರತಿ ತುಂಡೂ ಮರದ ಹಲಗೆಗೆ ಪರ್ಯಾಯವಾಗಿ ಛಾವಣಿ ಅಲಂಕರಿಸಿವೆ. ವ್ಯರ್ಥ ಎಂದು ಎಸೆದ ತೆಂಗಿನ ಮರದ ಬುಡವನ್ನೇ ಕಂಬವಾಗಿ ಮಾಡಲಾಗಿದೆ. ಹೊಲಿಗೆ ಮಾಡಿ ಉಳಿದ ಬಟ್ಟೆ ಕುಷನ್‌ಗೋ, ಹೊಸ ವಿನ್ಯಾಸದ ನೆಕ್ಲೆಸ್‌ಗೋ ಬಳಕೆಯಾದರೆ ಹಳೆಯ ಲೈನೊಟೈಪ್‌ನ ಪ್ರಿಂಟಿಂಗ್ ಬ್ಲಾಕ್ ಕುರ್ಚಿ, ಕಬೋರ್ಡ್‌ಗಳ ತಯಾರಿಕೆಗೂ ಬಳಕೆಯಾಗಿದೆ.

ಇದು ಕಸದಿಂದ ರಸ ಖಂಡಿತಾ ಅಲ್ಲ, ನಮ್ಮಲ್ಲಿ ಕಸ ಎಂಬುದೇ ಇಲ್ಲ ಎಂದು ಹೆಮ್ಮೆಯಿಂದ ಹೇಳುವ ದೀಪಕ್ ತಮ್ಮ ಪತ್ನಿಯ ಎಲ್ಲಾ ಪ್ರಯೋಗಗಳಿಗೆ ಬೆಂಗಾವಲಾದವರು.

ಒಂದು ಸಾವಿರ ಚದರ ಅಡಿ ವಿಸ್ತೀರ್ಣದ ಈ ಕಲೆಯ ಗುಡಿಸಲಿನಲ್ಲಿ ನೂತನ ಪ್ರಯೋಗಗಳಿಗೆ ಮುಕ್ತ ಅವಕಾಶ. ಸೆಣಬಿನ ಚಪ್ಪಲಿ, ಎಂಬ್ರಾಯ್ಡರಿ ಸೀರೆ, ಕುರ್ತಾ, ಸ್ಕರ್ಟ್, ಮಕ್ಕಳ ಫ್ರಾಕ್, ಬಳೆ, ಆಟಿಕೆ, ಮನೆಯ ಅಲಂಕಾರಿಕ ಸಾಮಾಗ್ರಿಗಳು, ಪೇಂಟಿಂಗ್, ಕುರ್ಚಿ, ಮೇಜು... ಹೀಗೆ ಇಲ್ಲಿರುವ ಎಲ್ಲವೂ ವಿಭಿನ್ನ ಶೈಲಿಯಲ್ಲಿ ತಯಾರಾದವು.

`ನಾವು ಚೆನ್ನೈ ಮೂಲದವರು. ಅಲ್ಲಿ ಕಟ್ಟಡ ಕೊರತೆಯಿಂದಾಗಿ ಬೆಂಗಳೂರಿಗೆ ಬಂದೆವು. ಇಲ್ಲಿ ಹಲವು ವರ್ಷಗಳ ಹಿನ್ನೆಲೆಯಿದ್ದ ಮನೆ ಸಿಕ್ಕಾಗ ಅದನ್ನು ಕೆಡವದೇ ಇದ್ದುದರಲ್ಲೇ ಹೊಸತೇನನ್ನಾದರೂ ಮಾಡಬೇಕೆಂಬ ಹಂಬಲ ಈ ಎಲ್ಲಾ ಕೆಲಸಗಳಿಗೆ ಪ್ರೇರಣೆ ನೀಡಿತು~ ಎನ್ನುತ್ತಾರವರು.

ಇಲ್ಲಿ ಸುಮಾರು 20 ಮಂದಿ ಕಲಾವಿದರು ಉದ್ಯೋಗ ಪಡೆದಿದ್ದಾರೆ. ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ಕಲೆಯ ಹರಿವನ್ನು ಕಣ್ತುಂಬಿಕೊಳ್ಳಬಹುದು.

`ಬೆಳವಣಿಗೆಯ ಸಂಕೇತ ಸಂಖ್ಯೆ ಅಲ್ಲ~
`ಕಲೆಯ ಬೆಳವಣಿಗೆ ಎಂಬುದು ತಯಾರಿಸಿದ ಕಲಾಕೃತಿಗಳ ಒಟ್ಟು ಮೊತ್ತವಲ್ಲ. ಕಲಾಕೃತಿಗೆ ನೀಡುವ ಹೊಸತನವೇ ಕಲೆ. ಹಿಂದಿನ ದಿನದ ಆಲೋಚನೆಗೆ ಭಿನ್ನವಾಗಿ ಇಂದಿನ ಯೋಚನೆ ಕಾರ್ಯಗತವಾದರೆ ಯಾವುದು ಹೊಸದು ಎಂಬು ಜಿಜ್ಞಾಸೆ ಮೂಡುತ್ತದೆ. ಇದೇ ನಮಗೆ ಪ್ರೇರಣೆ. ನಮಗೆ ಬೇಕಾದ ಯಾವುದೇ ವಸ್ತುಗಳಿಗೆ ಮಧ್ಯವರ್ತಿಗಳ ಸಂಪರ್ಕ ಇಲ್ಲ. ನೇರವಾಗಿ ರೈತರಿಂದಲೇ ಖರೀದಿಸಿ, ಗ್ರಾಹಕರಿಗೆ ನೀಡುವ ವೈಶಿಷ್ಟ್ಯ ಬಿಂಬ ಆರ್ಟ್ ಹಟ್‌ನದ್ದು~ ಎಂದು ದೀಪಕ್‌ವಿವರಿಸಿದರು.

ನಗರದ ಮಧ್ಯೆ ಇರುವ ಬಿಂಬ: ಆರ್ಟ್ ಹಟ್ ಒಳ ಹೊಕ್ಕು ಕಲಾಕೃತಿಗಳ ಅಂದವನ್ನು ಕಣ್ಣಲ್ಲಿ ತುಂಬಿಕೊಂಡು ಮರಳುವಾಗ ಯಾವುದೋ ಹಳ್ಳಿಮನೆ ಪ್ರವೇಶಿಸಿ ಹೊರಬಂದ ಅನುಭವವಾಗುತ್ತದೆ. ಹೊರಟ ಕೊನೆಕ್ಷಣದಲ್ಲೂ ಅವರು ಹೇಳುವ ಮಾತು ಅದೇ... `ಇದು ಸ್ಮಾರಕ ಸ್ಥಳವಾಗುವುದು ಬೇಡ, ಕಲೆಯ ಕುರಿತು ನೈಜ ಪ್ರೀತಿ ಇರುವವರು ಮಾತ್ರ ಕೈಜೋಡಿಸಿ, ಕಲೆಯನ್ನು ಬೆಳಗಿಸೋಣ.~ ಮನೆಯಲ್ಲೇ ಕುಳಿತು ಬಿಂಬ ಆರ್ಟ್ ನೋಡಬೇಕೆಂದಾದರೆ ಈ ವೆಬ್‌ಸೈಟ್ ನೋಡಿ: www.bimbaartfoundation.org

ದೀಪಿಕಾ ಮಾತಿಗೆ ಸಿಗಬೇಕಾದರೆ: 98866 35069. 

ರಸಲೋಕ...
ಸಣ್ಣ ವಸ್ತುಗಳಿಗೆ ಜೀವ ತುಂಬಿ ವೇದಿಕೆ ಮೇಲೆ ಪ್ರದರ್ಶನ ಏರ್ಪಡಿಸುವ `ರಸಲೋಕ~ ಪ್ರತಿ ಶನಿವಾರದ ವಿಶೇಷ. ಒಂದೂವರೆ ಗಂಟೆ ಹೊತ್ತು ಅಲ್ಲಿ ತಯಾರಾದ `ಮೈನ್ಯೂಟ್ ಮಿನಿಯೇಚರ್~ಗಳು ಮಾತನಾಡುತ್ತವೆ. ಪ್ರತಿ ವಾರವೂ ಪುರಾಣದ ಪಾತ್ರಗಳು ವೇಷಧರಿಸಿ ತಮ್ಮ ಕತೆ ಹೇಳಿಕೊಳ್ಳುತ್ತವೆ. ದೀಪಿಕಾ ಈ ಪಾತ್ರಗಳಿಗೆ ಧ್ವನಿ ನೀಡುವ ಮೂಲಕ ರಸಲೋಕವನ್ನೇ ಸೃಷ್ಟಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT