ADVERTISEMENT

ಕುಂಚದಲ್ಲಿ ‘ಬ್ಲೂ ಸಿಟಿ’ ಅನಾವರಣ

​ಪ್ರಜಾವಾಣಿ ವಾರ್ತೆ
Published 22 ಮೇ 2014, 19:30 IST
Last Updated 22 ಮೇ 2014, 19:30 IST
ಕುಂಚದಲ್ಲಿ ‘ಬ್ಲೂ ಸಿಟಿ’ ಅನಾವರಣ
ಕುಂಚದಲ್ಲಿ ‘ಬ್ಲೂ ಸಿಟಿ’ ಅನಾವರಣ   

ಎತ್ತ ನೋಡಿದರೂ ಹಳೆಯ ಕಲ್ಲಿನ ಮನೆಗಳು. ಗೋಡೆಗಳಿಗೆ ಬಳಿದ ನೀಲಿ ಬಣ್ಣ ಕಣ್ಣಿಗೆ ಕೋರೈಸುತ್ತದೆ. ರಸ್ತೆ ಬದಿಯಲ್ಲಿ ಬಿಡಾಡಿ ಹಸುಗಳು, ಮನೆ ಮುಂದೆ ಹಳೆಯ ಬಜಾಜ್‌ ಬೈಕ್‌ಗಳು...

ಈ ಮೇಲಿನ ಎಲ್ಲಾ ದೃಶ್ಯಗಳು ಕಂಡುಬಂದದ್ದು ಕಲಾವಿದ ಕೂ­­ಡಲಯ್ಯ ಹಿರೇಮಠ್‌ ಅವರ ಕುಂಚದಲ್ಲಿ ಅನಾವರಣಗೊಂಡ ‘ದಿ ಜೋಧ್‌ಪುರ್‌ ಬ್ಲೂಸ್‌’ ಸರಣಿಯ ಜಲವರ್ಣ ಚಿತ್ರಗಳಲ್ಲಿ.

ನಿವೃತ್ತಿ ಆರ್ಟ್ ಕ್ವಾರ್ಟರ್ ಸಹಯೋಗದೊಂದಿಗೆ ಚಿತ್ರಕಲಾ ಪರಿಷತ್ತಿನಲ್ಲಿ ಮೇ 25ರವರೆಗೆ ನಡೆಯುತ್ತಿರುವ ಈ ಚಿತ್ರಕಲಾ ಪ್ರದರ್ಶನದಲ್ಲಿ ಬ್ಲೂ ಸಿಟಿಯನ್ನು ಚಿತ್ರಗಳ ಮೂಲಕ ಕಣ್ತುಂಬಿಕೊಳ್ಳಬಹುದು.

ಅಂದಹಾಗೆ, ಕೂಡಲಯ್ಯ ಹಿರೇಮಠ್ ಅವರು ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ದೊಡ್ಡ ಹೆಸರು ಮಾಡಿದವರು. ಪಿ.ಯು.ಸಿ ವರೆಗೆ ನಿಪ್ಪಾಣಿಯಲ್ಲಿ ಓದಿದರು. ನಂತರ ಪುಣೆಯಲ್ಲಿ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದರು.

ಒಮ್ಮೆ ಜೋಧ್‌ಪುರಕ್ಕೆ ಹೋಗಿದ್ದ ಹಿರೇಮಠ್‌ ಅವರಿಗೆ ಅಲ್ಲಿನ ಪಾರಂಪರಿಕ ಕಟ್ಟಡಗಳ ಸೌಂದರ್ಯ ಕಣ್ಮನ ಸೆಳೆಯಿತಂತೆ. ಕಲ್ಲಿನ ಕಟ್ಟಡಗಳು, ಬಿಡಾಡಿ ಹಸುಗಳು, ಕೆಲವು ಮನೆಗಳ ಮುಂದೆ ಕಂಡುಬರುವ ಬಜಾಜ್‌ ಬೈಕುಗಳು ಇವರಿಗೆ ಚಿತ್ರ ರಚಿಸಲು ಸ್ಫೂರ್ತಿ ಆದವು.

‘ಜೈಪುರದಂತೆ ನನಗೆ ಗಮನ ಸೆಳೆದ ಮತ್ತೊಂದು ನಗರ ಜೋಧ್‌ಪುರ. ಇಲ್ಲಿನ ರಾಜರು ಸೈನಿಕರ ವಾಸಕ್ಕಾಗಿ ಕಟ್ಟಿಸಿದ ತಾಣವೇ ‘ಬ್ಲೂ ಸಿಟಿ’. ನೀಲಿ ಬಣ್ಣ ಬಳಿದ ಮನೆಗಳನ್ನು ದೂರದಿಂದ ನೊಡುವುದೇ ಒಂದು ವಿಶೇಷ ಅನುಭವ. ಆ ಮನೆಗಳ ಎದುರು ಒಂದೊಂದು ಬೈಕ್‌ ಕಂಡು ಬರುತ್ತದೆ. ಕೆಲ ಬೈಕ್‌ಗಳು ಕೆಟ್ಟಿದ್ದರೂ ಸುಮ್ಮನೇ ನಿಲ್ಲಿಸಿರುತ್ತಾರೆ. ಆ ಪಾರಂಪರಿಕ ಸೊಬಗನ್ನು ನೋಡುವುದೇ ಆನಂದ. ಅಲ್ಲಿನ ಒಂದೊಂದು ಸ್ಥಳವನ್ನು ವಿವಿಧ ಕೋನಗಳಲ್ಲಿ ಚಿತ್ರಿಸಿದ್ದೇನೆ. ಕೆಲವು ನನ್ನ ಸ್ವಂತ ಸಂಯೋಜನೆಯ ಚಿತ್ರಗಳೂ ಇವೆ’ ಎನ್ನುತ್ತಾರೆ ಕಲಾವಿದ ಕೂಡಲಯ್ಯ.

‘ಬುಲ್’ ಹಾಗೂ ‘ರೇಸ್‌’ ಸರಣಿಯ ಚಿತ್ರಗಳನ್ನು ಬಿಡಿಸಿದ್ದ ಕೂಡಲಯ್ಯ ಅವರು ಇದೀಗ ‘ದಿ ಜೋಧ್‌ಪುರ್‌ ಬ್ಲೂಸ್‌’ ಸರಣಿ ಜಲವರ್ಣ ಚಿತ್ರಗಳನ್ನು ರಚಿಸಿದ್ದಾರೆ.

2012ರಲ್ಲಿ ಪುಣೆಯಲ್ಲಿ, 2013ರಲ್ಲಿ ಮುಂಬೈನ ಜಹಂಗೀರ್‌ ಆರ್ಟ್‌ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದ ಕೂಡಲಯ್ಯ ಬೆಂಗಳೂರಿನಲ್ಲಿ ತಮ್ಮ ಎರಡನೇ ಏಕವ್ಯಕ್ತಿ ಪ್ರದರ್ಶನ ಆಯೋಜಿಸಿದ್ದಾರೆ. 2005ರಿಂದ 2008ರವರೆಗೆ ಚಿತ್ರಸಂತೆಯಲ್ಲೂ ಇವರ ಚಿತ್ರಗಳು ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿವೆ.

ಅಂದಹಾಗೆ, ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ  ‘ದಿ ಜೋಧ್‌ಪುರ್‌ ಬ್ಲೂಸ್‌’ ಪ್ರದರ್ಶನವಿರುತ್ತದೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.