ADVERTISEMENT

ಸಂಗೀತದ ಮೆಲುಕು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಮಲ್ಲೇಶ್ವರದ `ಸಪ್ತಕ~ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಮಧುರ ಅನುಭವ ನೀಡಿತು.

ಪ್ರಾರಂಭದಲ್ಲಿ ಸುಶೀಲಾ ಮೆಹ್ತಾ (ಲಲಿತಾ ಜೆ.ರಾವ್ ಅವರ ಶಿಷ್ಯೆ) ಸಂಧ್ಯಾಕಾಲದ ಸುಮಧುರ ರಾಗ ಮುಲ್ತಾನಿಯಲ್ಲಿ ಆಗ್ರಾ ಘರಾಣೆಯ ಸಾಂಪ್ರದಾಯಿಕ ಶೈಲಿಯಲ್ಲಿ `ನೊಂತೊಂ~ ಮಾಡಿ, ವಿಲಂಬಿತ ಏಕ್ ತಾಳದಲ್ಲಿ ಗೋಕುಲ ಗಾಮಾ ಬಂದಿಶ್‌ನ್ನು ವಿಸ್ತಾರವಾಗಿ ಆಲಾಪಿಸಿದರು.

ನಂತರ ಧೃತ್ ಲಯದಲ್ಲಿ `ನೈನಮೇ ಆನಬಾನ~  ಚೀಜನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ನಂತರ ಋತು ರಾಗ ಗೌಡಮಲ್ಹಾರದ ಮಧ್ಯಲಯ ತೀನತಾಳದಲ್ಲಿ ಕಾಹೇ ಹೊ ಹಾಗೂ ಧೃತ್ ಲಯದಲ್ಲಿ ರುಮಜುಮ ಬಾದರವಾ ಬರಸೆ ಚೀಜನ್ನು ವಿದ್ವತ್ ಪೂರ್ಣವಾಗಿ ಹಾಡಿದರು. ತಬಲಾದಲ್ಲಿ ಗುರುಮೂರ್ತಿ ವೈದ್ಯ, ಹಾರ್ಮೊನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಹಕರಿಸಿದರು.

ಬಳಿಕ ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪಂಡಿತ್ ರಾಜೀವ ತಾರಾನಾಥ ಹಾಗೂ ಕೋಲ್ಕತ್ತದ ಪಂಡಿತ್ ಪಾರ್ಥ ಚಟರ್ಜಿ ಅವರ ಸರೋದ್ ಹಾಗೂ ಸಿತಾರ ಜುಗಲ್‌ಬಂದಿ ಅತ್ಯಂತ ಪ್ರಭಾವಿಯಾಗಿ ಮೂಡಿಬಂತು. 

ರಾಗ ಹೇಮ್ ಬಿಹಾಗ್‌ದಲ್ಲಿ (ಹೇಮಂತ್ ಮತ್ತು ಬಿಹಾಗ್ ರಾಗದ ಮಿಶ್ರಣ, ಮೇಹರ್ ಘರಾನಾದ ಬಾಬಾ ಅಲ್ಲಾವುದ್ದೀನ್ ಖಾನ್ ಅವರು ಪ್ರಚುರ ಪಡಿಸಿದ್ದು) ಸುಂದರವಾಗಿ ಆಲಾಪ ಹಾಗೂ ಜೋಡ್ ನುಡಿಸಿ ಧೃತ್ ತೀನ್ ತಾಳದಲ್ಲಿ ಮಾಡಿದ  ನುಡಿಸಾಣಿಕೆ ಅತ್ಯಂತ ಚೇತೋಹಾರಿಯಾಗಿತ್ತು. 

ಜುಗಲ್‌ಬಂದಿಗೆ ಅವಶ್ಯವಾಗಿ ಇರಬೇಕಾದ ಸಮಾನ ಮನೋಧರ್ಮ, ಒಂದೇ ಪರಂಪರೆಯಲ್ಲಿ ಮಾಡಿದ ಸಾಧನೆ, ಪರಸ್ಪರ ಪೂರಕವಾಗಿ ನುಡಿಸುವ ಸ್ವರ ಸಂಚಾರ ಎಲ್ಲವೂ ಮೇಳೈಸಿದ್ದರಿಂದ ಶ್ರೋತೃಗಳನ್ನು ಮೈಮರೆಸುವಲ್ಲಿ ಯಶಸ್ವಿಯಾದರು.  ಕೊನೆಯಲ್ಲಿ ಧುನ್ ನುಡಿಸಿದರು.

ಇವರಿಗೆ ಪಂಡಿತ್ ರವೀಂದ್ರ ಯಾವಗಲ್ ಸಮರ್ಥವಾಗಿ ತಬಲಾ ನುಡಿಸಿ ಕಾರ್ಯಕ್ರಮದ ಅಂದ ಹೆಚ್ಚಿಸುವಲ್ಲಿ ಕಾರಣರಾದರು. ಕಿಕ್ಕಿರಿದು ಸೇರಿದ್ದ ರಸಿಕರು  ಸುಶ್ರಾವ್ಯ ಸಂಗೀತ ಸಂಜೆಯ ಸವಿಯ ಮೆಲುಕುತ್ತಾ ದೀರ್ಘ ಕರತಾಡನ ಮಾಡಿದ್ದು ಸತ್ಯ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.