ADVERTISEMENT

‘ಗಾಯಕಿ’ಯ ಪ್ರಬುದ್ಧತೆ, ಜೋಶಿ ಕಿರಾಣಾ ಗಾಯನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 19:59 IST
Last Updated 29 ಸೆಪ್ಟೆಂಬರ್ 2013, 19:59 IST
ಅಮೃತಾ ಅವರ ಗಾಯನ
ಅಮೃತಾ ಅವರ ಗಾಯನ   

ಧ್ರುಪದ್ ಗಾಯನ ಭಾರತೀಯ ಶಾಸ್ತ್ರೀಯ ಸಂಗೀತದ ಅತ್ಯಂತ ಹಳೆಯದಾದ ಹಾಗೂ ಇನ್ನೂ ಪ್ರಚಲಿತದಲ್ಲಿರುವ ಗಾಯನ ಪ್ರಕಾರ. ಖಯಾಲ್ ಗಾಯನ ಆರಂಭಗೊಂಡದ್ದು ಇದರ ನಂತರವೇ. ಉತ್ತರ ಭಾರತದಲ್ಲಿನ ವಲ್ಲಭ ಸಂಪ್ರದಾಯದ ಭಕ್ತಿ ಚಳವಳಿ ಹಾಗೂ ಪ್ರಕೃತಿ ಪೂಜೆ ಮಾಡುವಲ್ಲಿ ಈ ಧ್ರುಪದ್ ಸಂಗೀತ ಹುಟ್ಟಿತು. ಹಿಂದೂಸ್ತಾನಿ ಸಂಗೀತಕ್ಕೆ ಸೇರಿದ ಯಾವ ಪ್ರಕಾರದ ಗಾಯನಕ್ಕಾದರೂ ತಬಲಾ ಹಾಗೂ ಹಾರ್ಮೋನಿಯಂ ಬಳಸುವುದು ವಾಡಿಕೆ. ಆದರೆ ಇದೇ ಸಂಗೀತದ ಭಾಗವೆನಿಸಿಕೊಂಡಿರುವ ಧ್ರುಪದ್ ಗಾಯನಕ್ಕೆ ಮಾತ್ರ ಪಖವಾಜ್ ಒಂದರದ್ದೇ ಸಾಥ್ ಇರುತ್ತದೆ. ಹಿಂದೆ ಸಾಮಾನ್ಯ ವೀಣೆ ಹಾಗೂ ರುದ್ರ ವೀಣೆಯನ್ನು ಸಾಥ್‌ಗೆ ಬಳಸಲಾಗುತ್ತಿತ್ತಾದರೂ ಈಗ ಅದು ಇಲ್ಲ.

ಇತ್ತೀಚೆಗೆ ‘ಸಪ್ತಕ’ ಹಾಗೂ ಇಂಟರ್‌ನ್ಯಾಷನಲ್ ಚಿಲ್ಡ್ರನ್ಸ್ ಪೀಸ್ ಕೌನ್ಸಿಲ್ ಸಂಯುಕ್ತಾಶ್ರಯದಲ್ಲಿ ಧ್ರುಪದ್ ಹಾಗೂ ಕಿರಾಣಾ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆನರಾ ಯೂನಿಯನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತಾ ಸಿನ್ಹಾ ಮಹಾಪಾತ್ರ (ಧ್ರುಪದ್) ಹಾಗೂ ಶ್ರೀನಿವಾಸ ಜೋಶಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವಿತ್ತು.

ಮೊದಲಿಗೆ ಅಮಿತಾ ಸಿನ್ಹಾ ಮಹಾಪಾತ್ರ ಅವರ ಧ್ರುಪದ್ ಗಾಯನ. ಪಶ್ಚಿಮ ಬಂಗಾಳ ಮೂಲದ ಅಮಿತಾ, ಧ್ರುಪದ್ ಗಾಯಕಿಯ ಮೇರು ಕಲಾವಿದರಾದ ಉಮಾಕಾಂತ್ ಮತ್ತು ರಮಾಕಾಂತ್ ಗುಂಡೇಚಾ ಸಹೋದರರ ಬಳಿ ಧ್ರುಪದ್ ಸಂಗೀತವನ್ನು ಕಲಿಯುತ್ತಿದ್ದಾರೆ.

ಅಮಿತಾ ಶುದ್ಧ ಕಲ್ಯಾಣ್ (ಕಲ್ಯಾಣ್ ಥಾಟ್) ರಾಗದೊಂದಿಗೆ ಗಾಯನವನ್ನು ಆರಂಭಿಸಿದರು. ಮೊದಲಿಗೆ ಇಪ್ಪತ್ಮೂರು ನಿಮಿಷಗಳ ಗಂಭೀರವಾದ ಆಲಾಪ್ ಗಾಯನ ಇಡೀ ಸಭೆಗೆ ಧ್ರುಪದ್ ಆಲಿಸುವುದಕ್ಕೆ ಅಡಿಪಾಯ ಹಾಕಿತು. ತಾಳದ ಸಹಾಯವಿಲ್ಲದೇ ವಿಲಂಬಿತ್, ಮದ್ಯ ಹಾಗೂ ಧೃತ್ ಗತಿ (ವೇಗ)ಗಳಲ್ಲಿ ಸಾಗಿದ ಜೋಡ್ ಜಾಲಾ ಯಾವುದೇ ಬಂದೀಶ್‌ನ ಬಳಕೆಯಿಲ್ಲದೇ ನೋಂ ತೋಂ, ತನನ ಶಬ್ದಗಳೊಂದಿಗೆ ಲಯ ವಿನ್ಯಾಸಗಳನ್ನು ಒಳಗೊಂಡಿತ್ತು. ಅಮಿತಾ ಗಾಯನದಲ್ಲಿ ಹೊಮ್ಮಿದ ಮೀಂಡ್‌ಗಳು ತಂತಿಯಿಂದ ಹೊಮ್ಮಿದ ಸ್ವರದಷ್ಟೇ ಪ್ರಖರವಾಗಿದ್ದವು. ಅವರ ಮುಖದಲ್ಲಿದ್ದ ಗಾಂಭೀರ್ಯ ಹಾಡುಗಾರಿಕೆಯಲ್ಲೂ ಅಚ್ಚೊತ್ತಿತ್ತು. ವಾದ್ಯ ನುಡಿಸಾಣಿಕೆಯಲ್ಲಿ ಬಳಸಲಾಗುವ ಆಲಾಪ್ ಜೋಡ್ ಜಾಲಾ ವಿಧಾನವನ್ನೇ ಧ್ರುಪದ್ ಗಾಯನದಲ್ಲಿ ಅನುಸರಿಸಲಾಗುತ್ತದೆ.

ಆಲಾಪ್ ಗಾಯನದ ನಂತರ ಚೌತಾಳದಲ್ಲಿ (12 ಪೆಟ್ಟು) ‘ಆದಿ ಪರಬ್ರಹ್ಮ ದೇವ’ ಎಂಬ ಬಂದೀಶ್ ಹಾಡಿದರು. ಅದರ ಮೂಲಕ ರಮೇಶ್‌ಚಂದ್ರ ಜೋಶಿ ಅವರ ಪಖವಾಜ್ ವಾದನವೂ ಆರಂಭವಾಯಿತು. ವಿಲಂಬಿತ್ ಲಯದಲ್ಲಿ ಆರಂಭಗೊಂಡು ಬಂದೀಶ್-ಬೋಲ್‌ಗಳ ಮೂಲಕ ರಾಗವನ್ನು ವಿನ್ಯಾಸಗೊಳಿಸುತ್ತ ಧೃತ್ ಲಯವನ್ನು ತಲುಪಿದಾಗ ಅವರ ಗಾಯನದ ತೀವ್ರತೆಯೂ ಪ್ರಖರವಾಗಿ ಹೆಚ್ಚಿದ ರೀತಿ ಶ್ರೋತೃಗಳಿಗೆ ವಿಶಿಷ್ಟ ಅನುಭೂತಿಯನ್ನು ನೀಡಿತ್ತು. ಸ್ಪಷ್ಟ ಉಚ್ಚಾರ ಹಾಗೂ ನೀರಿನಲ್ಲಿ ಏಳುವ ಅಲೆಯಂತೆ ಹೊಮ್ಮಿದ ಗಮಕಗಳನ್ನು ಹಾಡಿದ ರೀತಿಗೆ ಕೇಳುಗರಿಂದ ಅಪಾರ ಕರತಾಡನದ ಮೆಚ್ಚುಗೆ ದೊರೆಯಿತು.

ನಂತರ ಹಂಸಧ್ವನಿ ರಾಗ (ಬಿಲಾವಲ್ ಥಾಟ್)ದಲ್ಲಿ ‘ಸದೋ ಮನ್ ಕಾ’ ಎಂಬ ಖಯಾಲ್ ಹಾಡಿದರು. ಆಮೇಲೆ ಭೂಪ್ (ಕಲ್ಯಾಣ್ ಥಾಟ್) ರಾಗದಲ್ಲಿ ಮತ್ತೊಂದು ‘ನೋಂ ತೋಂ’ ಗಾಯನವನ್ನು ಪ್ರಸ್ತುತಪಡಿಸಿದರು. ಭಾವತೀವ್ರತೆಯನ್ನು ಹೊಂದಿದ್ದ ನೋಂ ತೋಂ ಗಾಯನಕ್ಕೆ ಅಮಿತಾ ಅವರ ಧ್ವನಿ ವಿನ್ಯಾಸವೂ ಪುಷ್ಟಿ ನೀಡಿತು. ಕೊನೆಗೆ ‘ಶಂಕರ ಗಿರಿಜಾಪತಿ’ ಎಂಬ ಗೀತೆಯನ್ನು ಹಾಡಿದರು. ತೀವ್ರ ಲಯದಲ್ಲಿ ಹೆಣೆದ ಸಂಯೋಜನೆಯಲ್ಲಿ ಪಖವಾಜ್ ನಿಚ್ಚಳವಾಗಿ ದನಿ ಮಾಡಿತು. ದಕ್ಷಿಣ ಭಾರತದಲ್ಲಿ ಧೃಪದ್ ಗಾಯನ ಪ್ರಕಾರವನ್ನು ಕಲಿತವರು ವಿರಳಾತಿ ವಿರಳವೆಂದೇ ಹೇಳಬೇಕು. ಹಾಗಾಗಿ ಅದನ್ನು ಖುದ್ದು ಕೇಳಿ ಕಿವಿ ತುಂಬಿಕೊಳ್ಳಲು ಆಗಮಿಸಿದ್ದವರಿಂದ ಸಭಾಂಗಣ ತುಂಬಿತ್ತು.

ಕಿರಾಣಾ ಘರಾಣಾ ಮೋಡಿ
ಅಮಿತಾ ಅವರ ಧ್ರುಪದ್ ಗಾಯನದ ನಂತರ ಶ್ರೀನಿವಾಸ ಜೋಶಿಯವರ (ಪುಣೆ) ಕಿರಾಣಾ ಘರಾಣೆಯ ಗಾಯನ ಆರಂಭವಾಯಿತು. ಪಂ. ಭೀಮಸೇನ ಜೋಶಿ ಅವರ ಪುತ್ರರಾದ ಇವರು ತಂದೆಯವರಲ್ಲಿಯೇ ಸಂಗೀತವನ್ನು ಕಲಿತವರು. ಮಾರು ಬಿಹಾಗ್ ರಾಗ (ಕಲ್ಯಾಣ್ ಥಾಟ್)ದಿಂದ ಗಾಯನವನ್ನು ಆರಂಭಿಸಿದ ಶ್ರೀನಿವಾಸ್, ಒಂದಷ್ಟು ಹೊತ್ತು ಆಲಾಪ್ ಹಾಡಿ ನಂತರ ವಿಲಂಬಿತ್ ಏಕತಾಳದಲ್ಲಿ ‘ರಸಿಯಾ ಆವೋನಾ’ ಎಂಬ ಬಂದೀಶನ್ನು ಸವಿಸ್ತಾರವಾಗಿ ಹಾಡಿದರು.

ನಂತರ ಧೃತ್ ತೀನ್‌ತಾಳದಲ್ಲಿ ‘ಪರಿಮೋಹಿನ ಮಜದತ’ ಹಾಗೂ ‘ತಡಪತ ರೈನ ದಿನ’  ಎಂಬೆರೆಡು ಬಂದೀಶ್ ಹಾಡಿದ ನಂತರ ಮಿಶ್ರ ಖಮಾಜ್ ರಾಗದಲ್ಲಿ ಠುಮ್ರಿ ಹಾಗೂ ತೀರ್ಥ ವಿಠಲ, ಕ್ಷೇತ್ರ ವಿಠಲ ಎಂಬ ಅಭಂಗವನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ಕೊನೆಗೆ ‘ಕಂಗಳಿವ್ಯಾತಕೋ ಕಾವೇರಿ ರಂಗನ ನೋಡದ’ ಎಂಬ ದಾಸರಪದವನ್ನು ಹಾಡಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.

ಜೋಶಿಯವರು ಹಾಡಿದ ಮಾರುದ್ದದ ಸ್ವರವಿನ್ಯಾಸಗಳನ್ನು ಸುಮಧುರವಾಗಿ ಹಾರ್ಮೋನಿಯಂ ನಾದದಲ್ಲಿ ಹೊಮ್ಮಿಸಿದ ಅಶ್ವಿನ್ ವಾಲಾವಲ್ಕರ್ ಹಾಗೂ ತಬಲಾ ಸಾಥ್‌ನಲ್ಲಿ ಉತ್ತಮವಾಗಿ ಸಹಕರಿಸಿದ ಗುರುಮೂರ್ತಿ ವೈದ್ಯ ಅವರಿಗೂ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.