ADVERTISEMENT

‘ರಂಗಭೂಮಿಯಲ್ಲೇ ಎಲ್ಲಾ ಐತೆ...’

children theater

ಮಂಜುಶ್ರೀ ಎಂ.ಕಡಕೋಳ
Published 11 ಅಕ್ಟೋಬರ್ 2018, 20:00 IST
Last Updated 11 ಅಕ್ಟೋಬರ್ 2018, 20:00 IST
ಚಂದ್ರಕೀರ್ತಿ
ಚಂದ್ರಕೀರ್ತಿ   

‘ಬೆನಕ’ ತಂಡದ ಮೂಲಕ ಬಾಲನಟನಾಗಿ ರಂಗಭೂಮಿಗೆ ಪದಾರ್ಪಣೆ ಮಾಡಿದವರು ರಂಗನಟ ಮತ್ತು ನಿರ್ದೇಶಕ ಚಂದ್ರಕೀರ್ತಿ. ಬಾಲ್ಯದಲ್ಲಿ ಅಂತರ್ಮುಖಿಯಾಗಿ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದಾಗ ಚಿಕ್ಕಮ್ಮ ಕೃಷ್ಣವೇಣಿ ನೀಡಿದ ಸಲಹೆ ಮೇರೆಗೆ ರಂಗಶಿಬಿರಕ್ಕೆ ಹೋದಾಗ ಚಂದ್ರಕೀರ್ತಿ ಅವರ ಸ್ವಭಾವ ಬದಲಾಯಿತಂತೆ.

ಅಂದಿನಿಂದ ಬೆಳೆದ ರಂಗದ ಮೇಲಿನ ಪ್ರೀತಿಯನ್ನೂ ಇಂದಿಗೂ ಅವರು ಉಳಿಸಿ ಕೊಂಡಿದ್ದಾರೆ.

ಐದು ವರ್ಷಗಳ ಕಾಲ ಖ್ಯಾತ ರಂಗನಿರ್ದೇಶಕಿ ಪ್ರೇಮಾ ಕಾರಂತ ಅವರ ರಂಗಗರಡಿಯಲ್ಲಿ ಪಳಗಿದ ಅವರು ‘ಬೆನಕ’ ತಂಡದ ಕಾಯಂ ಸದಸ್ಯರಾದರು. ದೊಡ್ಡವನಾದ ಮೇಲೆ ಬೆನಕದ ಜತೆಗೆ ಸಮುದಾಯ, ಕಲೆಕ್ಟಿವ್ ಥಿಯೇಟರ್, ಸಂಚಾರಿ ಥಿಯೇಟರ್‌ ತಂಡಗಳಲ್ಲಿ ನೇಪಥ್ಯ ರಂಗಭೂಮಿಯ ಎಲ್ಲಾ ಮಗ್ಗಲುಗಳನ್ನು ಕಲಿತ ಅವರು, ಪ್ರೊಡಕ್ಷನ್ ಇನ್‌ಚಾರ್ಜ್‌ನಿಂದ ಹಿಡಿದು ವಸ್ತ್ರವಿನ್ಯಾಸದ ತನಕ ಹಲವು ಆಯಾಮಗಳನ್ನು ಅರಿತುಕೊಂಡರು.

ADVERTISEMENT

ಜೀವನೋಪಾಯಕ್ಕಾಗಿ ಪದವಿ ಗಳಿಸಿ, ಸುದ್ದಿವಾಹಿನಿಯೊಂದರಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸವನ್ನೂ ಮಾಡಿದ್ದಾಯಿತು. ಆದರೆ, ರಂಗಭೂಮಿಯ ಸೆಳೆತ ಅಷ್ಟು ಸುಲಭವಾಗಿ ಬಿಡಲಿಲ್ಲ. ವೃತ್ತಿಯ ಜತೆಗೆ ಪ್ರವೃತ್ತಿಯಾದ ರಂಗಭೂಮಿಯನ್ನು ಸರಿಸಮನಾಗಿ ನಿಭಾಯಿಸ ತೊಡಗಿದ ಅವರು ಶಾಲೆಯೊಂದರಲ್ಲಿ ಮಕ್ಕಳಿಗೆ ರಂಗಶಿಕ್ಷಕನಾಗಿ, ನಂತರ ಆ ವಿಭಾಗದ ಮುಖ್ಯಸ್ಥನಾಗಿಯೂ ಕೆಲಸ ಮಾಡಿದರು.

ರಂಗಾನುಭವದಿಂಧ ‘ಥಿಯೇಟರ್ ಸರ್ಕಲ್’ ಅನ್ನುವ ತಂಡವನ್ನೂ ಕಟ್ಟಿಕೊಂಡರು. ಶಾಲಾಮಟ್ಟದಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಹಲವು ನಾಟಕಗಳಿಗೆ ನಿರ್ದೇಶನ ಮಾಡಿದ್ದರೂ ಚಂದ್ರಕೀರ್ತಿ, ಪರಿಪೂರ್ಣ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದು ‘ಕಕೇಶಿಯನ್ ಚಾಕ್ ಸರ್ಕಲ್’ ನಾಟಕದಿಂದ.

ಶಾಲೆಗಳಲ್ಲಿ ಈಗ ರಂಗಭೂಮಿ ಅನ್ನೋದು ಫ್ಯಾನ್ಸಿ ಸ್ಟೇಟ್‌ಮೆಂಟ್ ಆಗಿದೆ ಎನ್ನುವ ಚಂದ್ರಕೀರ್ತಿ, ಶಾಲೆಗಳನ್ನು ಪ್ರಮೋಟ್ ಮಾಡಲು ಪ್ರೊಡಕ್ಷನ್ ಮಾದರಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಮುಖ್ಯವಾಹಿನಿಯಲ್ಲಿ ಮಕ್ಕಳ ರಂಗಭೂಮಿ ಸಕ್ರಿಯವಾಗಿಲ್ಲ. ಮಕ್ಕಳ ನಾಟಕಗಳು ಬರಬೇಕಿದೆ ಎನ್ನುತ್ತಾರೆ.

ಶಾಲೆಗಳಲ್ಲಿ ರಂಗಪಠ್ಯದ ಅಗತ್ಯವಿದ್ದು, ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ ಮಕ್ಕಳಲ್ಲಿ ಕೀಳರಿಮೆ ತೊಲಗಿಸಿ, ಆತ್ಮವಿಶ್ವಾಸ ಬೆಳೆಸುತ್ತದೆ. ಸಭಾ ಕಂಪನ ನಿವಾರಣೆ, ಸಂವಹನ ಕೌಶಲ ವೃದ್ಧಿಯಾಗುತ್ತದೆ. ಮಕ್ಕಳು ಮನಬಿಚ್ಚಿ ಮಾತನಾಡುವ ಪರಿಸರನ್ನು ರಂಗಭೂಮಿಯ ಶಿಕ್ಷಣ ನೀಡುತ್ತದೆ.

ಎಲ್ಲಕ್ಕಿಂತ ಮನುಷ್ಯಪರವಾಗಿ ಮಕ್ಕಳನ್ನು ರೂಪಿಸುತ್ತದೆ ಎನ್ನುವ ಅಭಿಮತ ಅವರದ್ದು. ‘ರಂಗಭೂಮಿ ಅನ್ನದ ಜತೆಗೆ ಮನಸಿಗೆ ಖುಷಿಯನ್ನೂ ನೀಡುತ್ತದೆ. ಆದರೆ, ಸ್ವಲ್ಪ ತಾಳ್ಮೆ ಬೇಕಷ್ಟೇ. ರಂಗಭೂಮಿಯಲ್ಲೇ ಎಲ್ಲಾ ಐತೆ’ ಅನ್ನುವುದು ಅವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.