ADVERTISEMENT

‘ನೇಕಾರ ಪೇಟೆ’ಯ ಬದುಕಿನ ಕಥೆ; ಎಳೆ ಎಳೆ ಕೂಡಿ, ಬಲೆಯಾಗಿ...

ಆದರ್ಶ ಕೆ.ಜಿ.
Published 21 ಸೆಪ್ಟೆಂಬರ್ 2019, 19:30 IST
Last Updated 21 ಸೆಪ್ಟೆಂಬರ್ 2019, 19:30 IST
ಬಲೆ ಹೆಣೆಯುವುದು ತುಂಬಾ ನಾಜೂಕಿನ ಕೆಲಸ
ಬಲೆ ಹೆಣೆಯುವುದು ತುಂಬಾ ನಾಜೂಕಿನ ಕೆಲಸ   

ಕರಾವಳಿಯ ಆ ಪುಟ್ಟ ಊರಿನ ಕಿರಿದಾದ ಹಾದಿಯೊಂದರಲ್ಲಿ ಸಾಗುವಾಗ ಸಿಕ್ಕಿದ್ದು ಸಣ್ಣ ಸಣ್ಣ ಮನೆಗಳ ಗುಂಪು. ಅಲ್ಲೊಂದು ನೋಟ ಬೀರಿದಾಗ ಅರೆರೆ... ಏನಿದು? ಪ್ರತಿಯೊಂದು ಮನೆಯ ಮುಂದೆಯೂ ಬಲೆಗಳು ಜೋತು ಬಿದ್ದಿವೆಯಲ್ಲ ಎಂಬ ಸೋಜಿಗ. ಹಾಗಾದರೆ ಇವುಗಳೆಲ್ಲ ಮೀನುಗಾರರ ಮನೆಗಳೇ ಇರಬೇಕು ಎಂದುಕೊಂಡು ಮುಂದೆ ಸಾಗುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಕಣ್ಣಿಗೆ ಬಿದ್ದದ್ದು ‘ನೇಕಾರ ಪೇಟೆ’ ಎಂಬ ಫಲಕ. ಆ ಹೆಸರು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಅಂದಹಾಗೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆ ಊರಿನ ಹೆಸರು ಉಜಿರೆ. ಈ ಪುಟ್ಟ ಊರಿನ ‘ಪೇಟೆ’ ಫಲಕ ಅಲ್ಲಿನವರ ಕಸುಬು ಮತ್ತು ಬದುಕಿನ ಕಥೆಗೆ ಒಂದು ರೀತಿಯಲ್ಲಿ ಹೆಡ್ಡಿಂಗ್‌ ಕೊಟ್ಟಂತಿತ್ತು.

ಆ ಪೇಟೆಯೊಳಗೆ ನುಗ್ಗಿದಾಗ ಮೊದಲು ಸಿಕ್ಕಿದ್ದು ಸಣ್ಣ ಹಂಚಿನಮನೆ. ಮಳೆ ನೀರು ಒಳಗೆ ಬರಬಾರದೆಂದು ಹಾಕಿಕೊಂಡ ಚಪ್ಪರದೊಳಗೆ ಇಡೀ ಮನೆಯ ಜೀವನಸೂತ್ರದಂತಿರುವ ಬಣ್ಣ ಬಣ್ಣಗಳ ಬಲೆಗಳ ರಾಶಿ. ಅಲ್ಲಲ್ಲಿ ಚದುರಿಹೋದ ಆಟಿಕೆಗಳನ್ನು ಜೋಡಿಸುತ್ತಾ ತಮ್ಮದೇ ಲೋಕದಲ್ಲಿ ಮುಳುಗಿರುವ ಪುಟ್ಟ ಮಕ್ಕಳು. ಇದೆಲ್ಲದರ ನಡುವೆ ಮೂಲೆಯೊಂದರ ಕಂಬದ ಕೆಳಗೆ ತದೇಕ ಚಿತ್ತದಲ್ಲಿ ನೂಲಿನ ತುದಿ ಹಿಡಿದು, ಗಂಟುಗಳನ್ನು ಹಾಕಿ ಬಲೆ ಹೆಣೆಯುತ್ತಿರುವ 80 ವರ್ಷದ ಹಿರಿಯ ಜೀವ. ಕೈಯಲ್ಲಿ ಕೊಂತಿಯನ್ನು (ಹೆಣೆಯುವ ಕಡ್ಡಿ) ಹಿಡಿದು ಬಲೆ ಹೆಣೆಯುವ ವೃತ್ತಿಯಲ್ಲಿ ತಲ್ಲೀನರಾಗಿದ್ದ ಅವರ ಹೆಸರು ಬಾಬು ನಾಯಕ.

ಬಾಬು ನಾಯಕರು 60 ವರ್ಷಗಳಿಂದಲೂ ಬಲೆ ಹೆಣೆಯುವ ವೃತ್ತಿಯನ್ನು ತಪಸ್ಸಿನಂತೆ ಪಾಲಿಸಿಕೊಂಡು ಬಂದವರು. ತಮ್ಮ ಹಿರಿಯರಿಂದ ಒಲಿದುಬಂದ ಕಲೆಯನ್ನೇ ಕಾಯಕವನ್ನಾಗಿ ಮಾಡಿಕೊಂಡವರು. ಕೈಮಗ್ಗವನ್ನೇ ನಂಬಿಕೊಂಡು ಮೊದಲು ಸೀರೆ, ಪಂಚೆ, ಶಾಲುಗಳನ್ನು ನೇಯ್ದು ಮಾರಾಟ ಮಾಡುತ್ತಿದ್ದರು. ಕೈಮಗ್ಗದ ಬಟ್ಟೆಗಳು ಬೇಡಿಕೆ ಕಳೆದುಕೊಂಡ ಮೇಲೆ ಮೀನಿನ ಬಲೆಗಳು ಅವರ ಕೈ ಹಿಡಿದವು.

ADVERTISEMENT

ಇಲ್ಲಿನ ನೇಕಾರರ ಮೂಲ ಹಂಪಿ ಸುತ್ತಲಿನ ಊರುಗಳಂತೆ. ಇವರು ನೂರಾರು ವರ್ಷಗಳ ಹಿಂದೆ ಬದುಕು ಅರಿಸಿ ಕರಾವಳಿಯತ್ತ ವಲಸೆ ಬಂದವರು. ಇಲ್ಲಿಯೂ ನೇಕಾರಿಕೆಯನ್ನೇ ನೆಚ್ಚಿ ಬದುಕಿದವರು. ಕರಾವಳಿಯ ಮೀನುಗಾರರಿಗೆ ಬೇಕಾದ ವಿವಿಧ ವಿನ್ಯಾಸದ ಬಲೆಗಳನ್ನು ಹೆಣೆದು ಕೊಡುವ ಕಾಯಕದಲ್ಲಿ ಅವರು ತೊಡಗಿಸಿಕೊಂಡರು. ಇದೇ ನೋಡಿ ನಮ್ಮ ನೇಕಾರ ಪೇಟೆಯ ಕಥೆ ಎಂದರು ಬಾಬು ನಾಯಕ.

ನೇಕಾರ ಪೇಟೆಯಲ್ಲಿ ಸದ್ಯ ಐವತ್ತು ಮನೆಗಳಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಬಲೆ ಹೆಣೆಯುವುದೇ ಕೆಲಸ. ಇತ್ತೀಚಿನವರೆಗೂ ಮೂರ್ನಾಲ್ಕು ಮನೆಗಳಲ್ಲಿ ಕೈಮಗ್ಗಗಳಿಂದ ಬಟ್ಟೆ ನೇಯುತ್ತಿದ್ದರು. ಇದೀಗ ಎಲ್ಲರ ಮನೆಗಳಲ್ಲೂ ಬಲೆ ಹೆಣೆಯುವುದೇ ಕಾಣುತ್ತದೆ. ಮೀನಿನ ಬಲೆ, ಬಾವಿಗೆ ಹಾಕಲು ಬಳಸುವ ಬಲೆ ಮತ್ತು ತರಕಾರಿ ರಕ್ಷಣೆಯ ಬಲೆಗಳು ತಯಾರಾಗುವುದು ಈ ಪುಟ್ಟ ಮನೆಗಳಲ್ಲೇ.

‘ನಮ್ಮದು ದೇವಾಂಗ ಸಮುದಾಯ. ನೇಕಾರಿಕೆ ನಮ್ಮ ಕುಲ ವೃತ್ತಿ. ದಯಾನಂದಪುರಿ ಸ್ವಾಮೀಜಿ ನಮ್ಮ ಗುರುಗಳು. ನಾವು ಅವರ ಮಾರ್ಗದರ್ಶನವನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದೇವೆ’ ಎನ್ನುತ್ತಾ ಬಾಬು ನಾಯಕರ ಪತ್ನಿ ಸಂಜೀವಿ ತಮ್ಮ ಗಂಡನ ಕೆಲಸದ ಜೊತೆ ಕೈಜೋಡಿಸಿದರು.

ಬಾಬು ನಾಯಕರ ಮನೆಯಲ್ಲಿ, ಅವರ ಹೆಂಡತಿಯನ್ನು ಒಳಗೊಂಡಂತೆ ಮಗ ಗುರುಪ್ರಸಾದ್, ಸೊಸೆ ಅಕ್ಷತಾ ಕೂಡ ಬಲೆ ಹೆಣೆಯುವ ಕಾಯಕವನ್ನೇ ಮಾಡುತ್ತಾರೆ. ಹಾಗಾಗಿ ಇಡೀ ಮನೆಯ ಬದುಕಿನ ಬಂಡಿ ಬಲೆಯಿಂದಲೇ ಮುಂದೆ ಸಾಗುತ್ತಿದೆ. ಪ್ರತಿನಿತ್ಯ ಒಬ್ಬೊಬ್ಬರೂ ಸುಮಾರು 5 ಮೀಟರ್‌ನಷ್ಟು ಉದ್ದದ ಬಲೆಯನ್ನು ತಯಾರಿಸುತ್ತಾರೆ. ಬೀಸುಬಲೆ, ಹೆಬ್ಬೆಟ್ಟು ಆಯಾ, ಮೂರುಬೆಟ್ಟು ಆಯಾ ಬಲೆ... ಹೀಗೆ ಭಿನ್ನ ಬಲೆಗಳಿವೆ.

60 ವರ್ಷದ ನಿರಂತರ ಕಾಯಕ

ನೂಲುಗಳನ್ನು ಕೈಯಲ್ಲಿ ಹಿಡಿದು ಜೋಡಿಸುತ್ತಾ ಬಲೆ ಹೆಣೆಯುವಿಕೆಯ ಮಧ್ಯೆ-ಮಧ್ಯೆ ಮಾತನಾಡುತ್ತಾ ಬಾಬು ನಾಯಕರು ತಮ್ಮ ಬದುಕಿನ ಅನುಭವವನ್ನು ಎಳೆ ಎಳೆಯಾಗಿ ಬಿಡಿಸತೊಡಗಿದರು. ‘ನನ್ನ ಯೌವ್ವನದ ಕಾಲದಲ್ಲಿ ಪ್ರತಿನಿತ್ಯ ಒಂದಿಷ್ಟು ಬಳೆಗಳನ್ನು, ಹಾಗೆಯೇ ನೇಯ್ದ ಬಟ್ಟೆಗಳನ್ನು ಹೊತ್ತು ಮೂಡಿಗೆರೆ, ಸಾಗರ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ ಕಡೆಗಳಲ್ಲಿ ಮಾರಾಟಕ್ಕೆಂದು ಹೋಗುತ್ತಿದ್ದೆ. ಎಲ್ಲೆಲ್ಲಿ ಜಾತ್ರೆ, ಸಂತೆಗಳು ಇರುತ್ತವೆ ಎಂಬ ಮಾಹಿತಿ ತಿಳಿದುಕೊಂಡು ಹೋಗುತ್ತಿದ್ದೆ. ಆಗೆಲ್ಲಾ ಬೇಡಿಕೆ ಹೆಚ್ಚಾಗಿತ್ತು. ಬರುಬರುತ್ತಾ ಕೈಗಳಿಂದ ತಯಾರಾಗುವ ಬಟ್ಟೆಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಈಗ ಸುತ್ತಲಿನ ಊರುಗಳಿಗೆ ಹೋಗಿ ಬಲೆಗಳನ್ನು ಮಾರುತ್ತೇನೆ ಅಷ್ಟೆ’ ಎಂದು ನಿಟ್ಟುಸಿರು ಬಿಟ್ಟರು.

ಬಲೆಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಮಂಗಳೂರಿನ ಮಾರುಕಟ್ಟೆಯಿಂದ ತರುತ್ತಾರೆ. ಬಳಸುವ ನೂಲಿಗೆ ನೀಡುವ ಬೆಲೆ ಪ್ರತಿ ಕೆ.ಜಿಗೆ ₹ 900. ಇನ್ನು ಕೇವಲ ನೂಲಿನಿಂದ ಬಲೆ ತಯಾರಿಸಲು ಸಾಧ್ಯವಿಲ್ಲ. ಥರ್ಮಕೋಲ್ ತುಂಡು, ಪ್ಲಾಸ್ಟಿಕ್ ಬಾಲ್‍ ಇನ್ನಿತರ ವಸ್ತುಗಳೂ ಬೇಕು. ಬಲೆ ನೀರಿನಲ್ಲಿ ಒಂದೆಡೆ ನಿಲ್ಲಲು ಬೇಕಾಗುವ ಭಾರಕ್ಕಾಗಿ ಬೇಕಾದ ವಸ್ತುಗಳನ್ನು ಮನೆಯಲ್ಲಿಯೇ ಸಿದ್ಧವಾಗುತ್ತವೆ. ಒಂದಷ್ಟು ಮಣ್ಣನ್ನು ತಂದು ನೀರಿನೊಂದಿಗೆ ಸರಿಯಾದ ಹದದಲ್ಲಿ ಮಿಶ್ರಣ ಮಾಡಿ ನಂತರ ತೆಂಗಿನಕಾಯಿ ಸಿಪ್ಪೆಯಲ್ಲಿ ನಿರ್ದಿಷ್ಟ ಹೊತ್ತಿನವರೆಗೆ ಬೆಂಕಿಯಲ್ಲಿ ಬೇಯಿಸಲಾಗುತ್ತದೆ. ಹೀಗೆ ಬೆಂದು ಗಟ್ಟಿಯಾದ ಮಣ್ಣಿನ ತುಂಡುಗಳನ್ನು ನಿರ್ದಿಷ್ಟ ಆಕಾರಕ್ಕೆ ತಂದು ಕಲಾತ್ಮಕವಾಗಿ ಜೋಡಿಸುವ ಮೂಲಕ ಬಲೆಯು ನೀರಿನಲ್ಲಿ ಮುಳುಗಲು ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ.

‘ಬಹು ಹಿಂದಿನ ಕಾಲದಿಂದಲೂ ಕುಲಕಸುಬನ್ನಾಗಿ ನಡೆಸಿಕೊಂಡು ಬರುತ್ತಿರುವ ಈ ವೃತ್ತಿ ಮೂಲೆಗುಂಪಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಉದ್ಯೋಗದಿಂದ ಬದುಕು ನಡೆಸಲು ಸಾಧ್ಯವಾಗದೆ ಬೇರೆ ಬೇರೆ ಕೆಲಸಗಳನ್ನು ಅರಸುತ್ತಾ ಪಟ್ಟಣದತ್ತ ಹೋಗುವ ಪರಿಸ್ಥಿತಿ ಎದುರಾಗಿದೆ. ಯುವಸಮೂಹ ತಮ್ಮ ಮೂಲ ಕಸುಬನ್ನು ಮುಂದುವರಿಸಲು ಆಗದೇ ಪಟ್ಟಣಗಳಲ್ಲಿ ಸಿಗುವ ಹೊಸ ವೃತ್ತಿಗೆ ಹೊಂದಿಕೊಳ್ಳಲೂ ಆಗದೇ ಒದ್ದಾಡುವಂತಾಗಿದೆ’ ಎಂದರು ಬಾಬು ಅವರ ಮಗ ಗುರುಪ್ರಸಾದ್ ನಾಯಕ.

ಮನೆಯ ಒಳಗಿನಿಂದ ಯಾರೋ, ‘ನಾವು ಎಷ್ಟು ಬಲೆ ಹೆಣೆದರೇನು, ಬಟ್ಟೆ ನೇಯ್ದರೇನು, ವ್ಯಾಪಾರ ಇಲ್ಲದಿದ್ದರೆ ಎಲ್ಲವೂ ಹೊಳೆಯಲ್ಲಿ ಹಾಲು ಸುರಿಸಿದಂತೆಯೇ. ಈ ಪುಟ್ಟ ಮಕ್ಕಳು ಒಂದು ಲೋಟ ಹಾಲು ಕುಡಿದು ಚೆನ್ನಾಗಿ ಬಾಳುವಂತಹ ದಿನಗಳು ಯಾವಾಗ ಬರುವವೋ’ ಎಂದದ್ದು ಕಿವಿಯ ಮೇಲೆ ಬಿತ್ತು. ಮರಳಿ ಬರುವಾಗ ಬಡತನದ ಬಲೆಯಲ್ಲಿ ಈ ಕುಟುಂಬಗಳು ಹೇಗೆ ಸಿಕ್ಕಿ ಹಾಕಿಕೊಂಡಿವೆಯಲ್ಲ ಎಂಬ ವಿಷಾದಭಾವ ತುಂಬಿತ್ತು. ಮುಂದೆ ಹೊರಟ ದಾರಿ ಕೂಡ ಕಿರಿದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.