ADVERTISEMENT

ಜಾಗತಿಕ ಒಳನೋಟದ ವ್ಯಂಗ್ಯಚಿತ್ರಗಳು

ಸುಬ್ರಹ್ಮಣ್ಯ ಎಚ್.ಎಂ
Published 3 ಮೇ 2019, 20:15 IST
Last Updated 3 ಮೇ 2019, 20:15 IST
ಪರೇಶ್ ನಾಥ್ ಕಾರ್ಟೂನ್‌
ಪರೇಶ್ ನಾಥ್ ಕಾರ್ಟೂನ್‌   

ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟು, ಅಂತರಿಕ ಯುದ್ಧ, ಯೂರೋಪಿನ ರಾಷ್ಟ್ರಗಳ ನಿರುದ್ಯೋಗ, ಗಡಿ ಸಮಸ್ಯೆ, ಏಷ್ಯಾಖಂಡದ ಜನರ ವಲಸೆ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದವರು ಖ್ಯಾತ ವ್ಯಂಗ್ಯಚಿತ್ರಕಾರ ಪರೇಶ್‌ ನಾಥ್‌.

ಒಡಿಶಾ ರಾಜ್ಯದ ಪರೇಶ್‌ ಇಂಗ್ಲಿಷ್‌ ಮತ್ತು ಅಮೆರಿಕ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರು. ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಒಳನೋಟ ಹೊಂದಿರುವ ವ್ಯಂಗ್ಯಚಿತ್ರಕಾರ. ದೇಶದಲ್ಲಿನ ನೋಟು ನಿಷೇಧ, ಕಪ್ಪು ಹಣದ ಬಗ್ಗೆಯೂ ಅವರ ತೀಕ್ಷ್ಣ ಗೆರೆಗಳ ವ್ಯಂಗ್ಯಚಿತ್ರಗಳು ಗಮನಾರ್ಹವಾಗಿವೆ.

ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯು ಮೇ 5ರಂದು ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ಮೇ 4ರಂದು ಪರೇಶ್ ನಾಥ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದೆ.

ADVERTISEMENT

ಸದ್ಯ ದುಬೈನ ‘ಖಲೀಜ್ ಟೈಮ್ಸ್’ನಲ್ಲಿ ಅವರು 2005ರಿಂದ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಒಡಿಶಾದ ದಿನಪತ್ರಿಕೆ ‘ಸಮಾಜ‘ದಲ್ಲಿ ಪ್ರಾರಂಭಿಸಿದರು. 1989-1990ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‍ನಲ್ಲಿ ಕೆಲ ಕಾಲ ಕೆಲಸ ಮಾಡಿದರು. ನಂತರ ದೆಹಲಿಯ ‘ನ್ಯಾಷನಲ್ ಹೆರಾಲ್ಡ್’ನಲ್ಲಿ 1990ರಿಂದ 2008ರವರೆಗೆ ಪ್ರಧಾನ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದರು.

ವಿಶ್ವಸಂಸ್ಥೆ ನೀಡುವ ‘ರಾನನ್ ಲೂರೀ ವ್ಯಂಗ್ಯಚಿತ್ರ ಪ್ರಶಸ್ತಿ’ಯನ್ನು 2000 ಮತ್ತು 2001ರಲ್ಲಿ ಸತತವಾಗಿ ಎರಡು ವರ್ಷ ಪಡೆದ ಪ್ರಥಮ ಭಾರತೀಯ ವ್ಯಂಗ್ಯಚಿತ್ರಕಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫ್ರಾನ್ಸ್ ದೇಶದ ಪ್ರತಿಷ್ಟಿತ ಗೌರವವಾದ ‘ ಲೆ ಷವಲೀರ್’ (ನೈಟ್‍ಹುಡ್) ಪ್ರಶಸ್ತಿಯನ್ನು 2004ರಲ್ಲಿ ‘ಇಂಟರ್ ನ್ಯಾಷನಲ್ ಎಡಿಟೋರಿಯಲ್ ಕಾರ್ಟೂನ್ ಫೆಸ್ಟಿವಲ್’ ನಲ್ಲಿ ಪಡೆದ ಹಿರಿಮೆ ಅವರದ್ದು. ಅವರ ರಾಜಕೀಯ ವ್ಯಂಗ್ಯಚಿತ್ರಗಳು ದೇಶ-ವಿದೇಶಗಳ ಅಸಂಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಪ್ರದರ್ಶನಗೊಂಡಿವೆ.

ಅಲ್ಲದೆ, ವಾಷಿಂಗ್ಟನ್‌ ಪೋಸ್ಟ್, ನ್ಯೂಯಾರ್ಕ್‌ ಟೈಮ್ಸ್‌, ಲಾಸ್‌ ಏಂಜಲೀಸ್‌ ಟೈಮ್ಸ್‌, ನ್ಯೂಸ್‌ವೀಕ್‌‌ ಸೇರಿದಂತೆ ಜಗತ್ತಿನ ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡು ಜನರ ಗಮನ ಸೆಳೆದಿವೆ.

ವ್ಯಂಗ್ಯಚಿತ್ರ ಪ್ರದರ್ಶನ
ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ ನಂ.1 ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ,ಬೆಂಗಳೂರು
ಉದ್ಘಾಟನೆ: ಮೇ 4ರಂದು ಬೆಳಿಗ್ಗೆ 10.30 ಗ್ಯಾಲರಿ ಸಮಯ: ಬೆಳಿಗ್ಗೆ 10ರಿಂದ ಸಂಜೆ 6, ಈ ಪ್ರದರ್ಶನ ಮೇ18ರವರೆಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಸಂಪರ್ಕ: ವಿ.ಜಿ.ನರೇಂದ್ರ, 99800917428

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.