ADVERTISEMENT

ಕುಂಬಾರಣ್ಣನ ದೀಪಾರಾಧನೆ!

ಸಿದ್ದು ಆರ್.ಜಿ.ಹಳ್ಳಿ
Published 5 ನವೆಂಬರ್ 2018, 19:45 IST
Last Updated 5 ನವೆಂಬರ್ 2018, 19:45 IST
ಚಿತ್ರ ಶೀರ್ಷಿಕೆಗಳು1.  ಕಲಘಟಗಿಯ ಕುಂಬಾರ ಓಣಿಯಲ್ಲಿರುವ ಗೌರವ್ವ ಅವರ ಮನೆಯಲ್ಲಿ ಬೆಂದ ದೀಪ ಮತ್ತು ಮಡಕೆಗಳನ್ನು ತೆಗೆಯುತ್ತಿರುವುದು2. ಮಣ್ಣನ್ನು ಹದಗೊಳಿಸುತ್ತಿರುವ ಶಿವಪ್ಪ3. ಬಟ್ಟಿ ಕೋಣೆಯಲ್ಲಿ ಬೆಂದ ದೀಪಗಳನ್ನು ಪ್ರತ್ಯೇಕಿಸುತ್ತಿರುವುದು4. ದೀಪಗಳನ್ನು ಮಾಡುತ್ತಿರುವ ಬಸವ್ವ
ಚಿತ್ರ ಶೀರ್ಷಿಕೆಗಳು1.  ಕಲಘಟಗಿಯ ಕುಂಬಾರ ಓಣಿಯಲ್ಲಿರುವ ಗೌರವ್ವ ಅವರ ಮನೆಯಲ್ಲಿ ಬೆಂದ ದೀಪ ಮತ್ತು ಮಡಕೆಗಳನ್ನು ತೆಗೆಯುತ್ತಿರುವುದು2. ಮಣ್ಣನ್ನು ಹದಗೊಳಿಸುತ್ತಿರುವ ಶಿವಪ್ಪ3. ಬಟ್ಟಿ ಕೋಣೆಯಲ್ಲಿ ಬೆಂದ ದೀಪಗಳನ್ನು ಪ್ರತ್ಯೇಕಿಸುತ್ತಿರುವುದು4. ದೀಪಗಳನ್ನು ಮಾಡುತ್ತಿರುವ ಬಸವ್ವ   

ಕಪ್ಪು ಹೆಂಚುಗಳ ಸೂರಿನ, ಮಣ್ಣಿನ ಗೋಡೆಗಳ ಓಣಿಯಂತಿರುವ, ಕತ್ತಲು ತುಂಬಿದ ಕೋಣೆಯಲ್ಲಿ ಸಗಣಿ ಬಗಡ ಹಾಕಿದ ನೆಲದ ಮೇಲೆ ಮನೆ–ಮನ ಬೆಳಗುವ ಸಾವಿರಾರು ಮಣ್ಣಿನ ದೀಪಗಳು ಎಣ್ಣೆ – ಬತ್ತಿಗಾಗಿ ಕಾಯುತ್ತಿದ್ದವು...!

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಕುಂಬಾರ ಓಣಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಗಾಗಿ ಹಣತೆ, ಮದ್ದಿನ ಕುಡಿಕೆ, ಮುಚ್ಚಳಗಳನ್ನು ಅಣಿಗೊಳಿಸುತ್ತಿದ್ದಾಗ ಕಂಡು ಬಂದ ದೃಶ್ಯವಿದು.

ಇಲ್ಲಿ ನೆಲೆಸಿರುವ ಸುಮಾರು 60ರಿಂದ 70 ಕುಂಬಾರ ಕುಟುಂಬಗಳ ಸದಸ್ಯರು ಒಂದು ತಿಂಗಳಿನಿಂದ ಹಬ್ಬಕ್ಕಾಗಿ ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಶತಮಾನ ದಾಟಿರುವ ಮನೆಗಳ ಓಣಿಯಲ್ಲಿ ನಡೆದು ಹೋಗುತ್ತಿದ್ದರೆ, ಮಣ್ಣನ್ನು ಹದಗೊಳಿಸುವ ಸದ್ದು, ಹಸಿ ಮಣ್ಣಿನ ಸುಗಂಧ, ಮನೆಯ ಹಜಾರದಲ್ಲಿ ಸಾಲಾಗಿ ಇಟ್ಟ ದೀಪಗಳ ಸೊಬಗು ಮೈ–ಮನವನ್ನು ತುಂಬಿಕೊಳ್ಳುತ್ತವೆ.

ADVERTISEMENT

ಹಬ್ಬಗಳು ಬಂತೆಂದರೆ ಸಾಕು, ಕುಂಬಾರರ ಕುಟುಂಬಗಳಲ್ಲಿ ಸಡಗರ ಗರಿಗೆದರುತ್ತದೆ. ವ್ಯಾಪಾರವಾಗದೇ ಅಟ್ಟ, ಜಗುಲಿ, ಮನೆಯ ಮೂಲೆ ಸೇರಿದ್ದ ಮಣ್ಣಿನ ಮಡಕೆ–ಕುಡಿಕೆಗಳನ್ನು ಸ್ವಚ್ಛಗೊಳಿಸಿ, ಮನೆಯ ಮುಂಭಾಗ ಒಪ್ಪವಾಗಿ ಜೋಡಿಸುತ್ತಾರೆ. ಈ ವರ್ಷಕ್ಕೆ ಎಷ್ಟು ಬೇಕು ಎಂಬುದನ್ನು ಲೆಕ್ಕ ಹಾಕಿ, ಕೊರತೆ ಇರುವಷ್ಟು ಪ್ರಮಾಣದ ಪರಿಕರಗಳನ್ನು ಸಿದ್ಧಗೊಳಿಸಲು ಅಣಿಯಾಗುತ್ತಾರೆ. ನಾಗರ ಪಂಚಮಿಗೆ ಚಟಿಗಿ; ದಸರಾಕ್ಕೆ ಮುಚ್ಚಳ, ಮಗಿ; ಸಂಕ್ರಾಂತಿಗೆ ಮಡಕೆ–ಕುಡಿಕೆ; ಮಣ್ಣೆತ್ತಿನ ಅಮಾವಾಸ್ಯೆಗೆ ಬಸವಣ್ಣ; ಅದರಂತೆ ದೀಪಾವಳಿಗೆ ಹಣತೆ, ಮದ್ದಿನ ಕುಡಿಕೆಗಳನ್ನು ತಯಾರಿಸುತ್ತಾರೆ. ಸಗಟು ದರದಲ್ಲಿ ಕೊಳ್ಳುವ ವ್ಯಾಪಾರಸ್ಥರು, ಅಕ್ಕಪಕ್ಕದ ಗ್ರಾಮಸ್ಥರೇ ಇವರ ಗ್ರಾಹಕರು.

ಪ್ಲಾಸ್ಟಿಕ್‌, ಸ್ಟೀಲ್‌, ಪಿಂಗಾಣಿ ಸಾಮಗ್ರಿಗಳ ಭರಾಟೆಯಲ್ಲಿ, ವರ್ಷದಿಂದ ವರ್ಷಕ್ಕೆ ಮಣ್ಣಿನ ಪರಿಕರಗಳಿಗೆ ಬೇಡಿಕೆ ಕುಸಿಯುತ್ತಿದ್ದರೂ ಇವರ ಕಾಯಕ ನಿಷ್ಠೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಏಳು–ಬೀಳು, ಎಡರು–ತೊಡರುಗಳ ಮಧ್ಯೆಯೂ ಕುಲಕಸುಬಾದ ‘ಕುಂಬಾರಿಕೆ’ ಕಲೆಗೆ ಜೇಡಿ ಮಣ್ಣಿನಂತೆ ಅಂಟಿಕೊಂಡೇ ಇದ್ದಾರೆ. ಐದಾರು ವರ್ಷಗಳ ಮುಂಚೆ, ಇಲ್ಲಿನ ಒಂದೊಂದು ಮನೆಗಳಲ್ಲಿ 15 ಸಾವಿರದಿಂದ 20 ಸಾವಿರದವರೆಗೂ ದೀಪಗಳನ್ನು ಮಾಡುತ್ತಿದ್ದರು. ಈಗ, 5 ಸಾವಿರದಿಂದ 10 ಸಾವಿರ ದೀಪಗಳನ್ನು ಮಾಡಿದರೆ ಹೆಚ್ಚು. ವ್ಯಾಪಾರ ಕುಸಿತ ಒಂದು ಕಡೆಯಾದರೆ, ಮಣ್ಣು ಮತ್ತು ನೀರಿನ ಸಮಸ್ಯೆ ಮತ್ತೊಂದು ಕಡೆ.

ಅರೆಬೆಂದರೆ ಕಷ್ಟ, ಅತಿಬೆಂದರೆ ನಷ್ಟ!

‘ಕುಂಬಾರ ಓಣಿಗೆ ಸಮೀಪದಲ್ಲಿರುವ ಅಂಚಟಗೇರಿ ಕೆರೆ, ಕಾಲೇಜು ಕೆರೆಗಳಿಂದ ಟ್ರಾಕ್ಟರ್‌ನಲ್ಲಿ ಜೇಡಿ ಮಣ್ಣನ್ನು ತರಿಸಿಕೊಳ್ಳುತ್ತೇವೆ. ಆ ಮಣ್ಣನ್ನು ಎರಡು ದಿನ ಬಿಸಿಲಿನಲ್ಲಿ ಒಣಗಿಸಿ, ಒಂದು ದಿನ ನೀರಿನಲ್ಲಿ ನೆನೆ ಹಾಕುತ್ತೇವೆ. ನಂತರ ಆ ಮಣ್ಣನ್ನು ಹದಗೊಳಿಸಿ, ಕೈಗಳಿಂದ ಹಣತೆಗಳನ್ನು, ತಿಗರಿ (ಚಕ್ರ)ಯಿಂದ ಮಡಕೆ–ಕುಡಿಕೆಗಳನ್ನು ತಯಾರಿಸುತ್ತೇವೆ. ಐದು ನಿಮಿಷದಲ್ಲಿ ಐದಾರು ದೀಪಗಳಿಗೆ ರೂಪು ಕೊಡುತ್ತೇವೆ. ಹಸಿ ಮಣ್ಣಿನ ದೀಪಗಳನ್ನು ಬಿಸಿಲಿನಲ್ಲಿ ಒಣಗಿಸಿ, ನಂತರ ಬಟ್ಟಿ ಕೋಣೆಯಲ್ಲಿ ಒಲೆಗಳಿಗೆ ಕಟ್ಟಿಗೆ ತುಂಬಿ, ದೀಪಗಳನ್ನು ಜೋಡಿಸಿ ಹದವಾಗಿ ಸುಡುತ್ತೇವೆ. ಅರೆಬೆಂದರೆ ಕಷ್ಟ, ಅತಿಬೆಂದರೆ ನಷ್ಟ. ಎಷ್ಟೇ ಎಚ್ಚರಿಕೆ ವಹಿಸಿದರೂ ಶೇ 15ರಿಂದ 20ರಷ್ಟು ಪರಿಕರಗಳು ಹಾಳಾಗುತ್ತವೆ’ ಎಂದು ಕುಲಕಸುಬಿನ ಕಷ್ಟ–ನಷ್ಟಗಳನ್ನು ಗೌರವ್ವ ತಿರುಕಪ್ಪ ತೋಡಿಕೊಂಡರು.

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ!

‘ಒಂದು ಟ್ರಾಕ್ಟರ್‌ ಮಣ್ಣಿನಲ್ಲಿ 25 ಸಾವಿರ ದೀಪ ಮಾಡಬಹುದು. ಟ್ರ್ಯಾಕ್ಟರ್‌ ಬಾಡಿಗೆಗೆ ₹ 500ರಿಂದ ₹ 600 ಕೊಡಬೇಕು. ಒಮ್ಮೆ ಬಟ್ಟಿಯಲ್ಲಿ ₹ 6 ಸಾವಿರದ ಮಾಲು ಹಾಕುತ್ತೇವೆ. ಅದರಲ್ಲಿ ₹ 2 ಸಾವಿರ ಕಟ್ಟಿಗೆಗೇ ಹೋಗುತ್ತದೆ. ಒಣಗಿಸುವಾಗ, ಸುಡುವಾಗ, ಜೋಡಿಸುವಾಗ ಎಷ್ಟೋ ಪರಿಕರಗಳು ಹಾಳಾಗುತ್ತವೆ. ಒಂದು ಡಜನ್‌ ದೀಪಕ್ಕೆ ₹ 30 ಅಂದ್ರೆ, ಗ್ರಾಹಕರು ಅದರಲ್ಲೂ ಚೌಕಾಸಿ ಮಾಡುತ್ತಾರೆ. ನಮ್ಮ ದುಡಿಮೆ ಆರಕ್ಕೇರಲ್ಲ, ಮೂರಕ್ಕೆ ಇಳಿಯಲ್ಲ. ಹೊಟ್ಟೆ–ಬಟ್ಟೆಗೆ ನೇರ ಆಗಿ, ವರ್ಷಕ್ಕೆ ₹ 8–10 ಸಾವಿರ ಉಳಿದರೆ ನಮ್ಮ ಪುಣ್ಯ’ ಎಂದು ವೃತ್ತಿ ಲೆಕ್ಕಾಚಾರ ಬಿಡಿಸಿಟ್ಟರು ಶಿವಪ್ಪ ಸೋಮನಕೊಪ್ಪ.

ಹಿಟ್ಟಿನಂತೆ ರೊಟ್ಟಿ, ಮಣ್ಣಿನಂತೆ ಮಡಕೆ

ಸುಕ್ಕುಗಟ್ಟಿದ ಕೈಗಳಲ್ಲಿ ದೀಪ ಮಾಡುತ್ತಿದ್ದ 80ರ ಇಳಿ ವಯಸ್ಸಿನ ಬಸವ್ವ ಕೊಟಗುಣಶಿ ಅವರದ್ದು ಬತ್ತದ ಉತ್ಸಾಹ. ಮನೆಯ ಕೆಲಸದ ನಡುವೆಯೂ ದಿನಕ್ಕೆ 100ರಿಂದ 150 ದೀಪಗಳನ್ನು ಮಾಡುತ್ತಾರೆ. ‘ಹರೆದಾಗ ನಸುಕಿನ ವ್ಯಾಳೇಕ ಎದ್ದು, ಚಾ ಕುಡ್ದು ತಲಿ ಮ್ಯಾಲ ಕೊಡ, ಹರವಿ, ಗಡಿಗಿ ಹೊತ್ಕೊಂಡು ಹಳ್ಳಿಗಿ ವ್ಯಾಪಾರಕ್ಕ ಅಂತ ಹೋಗ್ತಿನ್ನಿ. ಬಿಸಲ ನೆತ್ತಿ ಸುಡೂ ವ್ಯಾಳ್ಯಾದಾಗ ಮನಿಗಿ ಹೊಳ್ಳಿ ಬರ್ತಿನ್ನಿ. ಈಗ ನಮ್ಮ ದೀಪಗಳನ್ನು ಕೇಳೋರೂ ಯಾರೂ ಇಲ್ಲಾ. ಮೊದಲ ಮಂದಿ ಹೊಲದಾಗ ಮಣ್ಣ ತಂದು ಮಡಕಿ–ಕುಡಕಿ ಮಾಡಿ, ಹಂಗಾಮದ ಹೊತ್ತಿನ್ಯಾಗ ಹೊಲಾ ಹರಗಿ ಕೊಡತಿದ್ವಿ. ಈಗ ಅಂಥಾ ಜಿಗಟ ಮಣ್ಣ ಸಿಗೋದು ಕಷ್ಟಾ ಆಗೇತಿ’ ಎಂದು ಬಸವ್ವ ಬೇಸರ ವ್ಯಕ್ತಪಡಿಸಿದರು.

ಕುಂಬಾರಿಕೆ ಕಸುಬಿನಲ್ಲಿ ತೊಡಗಿರುವ ಇಲ್ಲಿನ ಕೆಲವರು 4–5ನೇ ತರಗತಿಯವರೆಗೆ ಓದಿದ್ದರೆ, ಇನ್ನು ಉಳಿದವರು ಶಾಲೆಯ ಮುಖವನ್ನೇ ನೋಡದವರು. ಇವರಲ್ಲಿ ಬಹುತೇಕರಿಗೆ ಕೃಷಿ ಭೂಮಿ ಇಲ್ಲ. ಗುಡಿ ಕೈಗಾರಿಕೆಗೆ ಸಿಗುವ ಯಾವುದೇ ಸವಲತ್ತುಗಳು ಇವರನ್ನು ತಲುಪಿಲ್ಲ. ಇವರ ಮನೆಗಳಲ್ಲಿ ‘ಝಣ–ಝಣ’ ಕಾಂಚಾಣದ ಸದ್ದಿಗಿಂತ ‘ಠಣ್‌ ಠಣ್‌’ ಮಡಕೆಯೇ ಸದ್ದೇ ಜೋರು. ಮಡಕೆಯ ನೀರು ತಂಪು, ಕುಡಿಕೆಯಲ್ಲಿ ಬೇಯಿಸಿದ ಆಹಾರ ಆರೋಗ್ಯಸ್ನೇಹಿ’ ಎಂದು ಎಲ್ಲರೂ ಹೇಳುತ್ತಾರೆ. ಇಂಥ ತತ್ರಾಣಿ, ಐರಣಿ ತಯಾರಿಸುವ ಕುಂಬಾರರ ಬದುಕು ಅತಂತ್ರವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.