ADVERTISEMENT

ಖಂಡೇರಾವ್‌ ನೆ‍ನ‍ಪಿನ ಕಲಾಗುಚ್ಛ

ಸುಬ್ರಹ್ಮಣ್ಯ ಎಚ್.ಎಂ
Published 26 ನವೆಂಬರ್ 2018, 20:00 IST
Last Updated 26 ನವೆಂಬರ್ 2018, 20:00 IST
ಊರ ಹೊರವಲಯದ ಚಿತ್ರ
ಊರ ಹೊರವಲಯದ ಚಿತ್ರ   

‘ಕಲೆ ವಿಷಯ ವಿಸ್ತಾರವಾದದ್ದು, ಅದರ ಪರಧಿ ಅಪಾರ. ಅದರ ಪ್ರಕ್ರಿಯೆ ನಿಗೂಢವಾದದ್ದು’ ಎಂಬುದು ನಾಡಿನ ಖ್ಯಾತ ಚಿತ್ರಕಲಾವಿದ ಡಾ.ಜೆ.ಎಸ್. ಖಂಡೇರಾವ್ ಅನುಭವದ ನುಡಿ.

ಶಾಲಾ ದಿನಗಳಲ್ಲಿ ಅಂದವಾದ ಭಾರತ ಭೂಪಟ ಚಿತ್ರಿಸಿ ಶಿಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದವರು ಅವರು. ಹೀಗೆ ಆರಂಭವಾದ ಕಲಾ ಪಯಣದಲ್ಲಿ ಅವರು ಮೇರು ಕಲಾವಿದರಾಗಿ, ನುರಿತ ಉಪನ್ಯಾಸಕರಾಗಿ, ಕಲಾ ಕೇಂದ್ರ ಸ್ಥಾಪಕರಾಗಿ ಮೂಡಿಸಿದ ಹೆಜ್ಜೆ ಗುರುತು ಅನನ್ಯ.

ಕಲಬುರ್ಗಿಯ ಜಗದೇವಪ್ಪ ಶಂಕರಪ್ಪ ಖಂಡೇರಾವ್ 1940ರಲ್ಲಿ ಜನಿಸಿದರು. ಕಲಬುರ್ಗಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಕಲಿತರು. ಮಿಡ್ಲ್‌ಸ್ಕೂಲ್‌ನಲ್ಲಿ ಗುರುವಾದ ಮಹಮ್ಮದ್‌ ಷರಿಷ್‌ ಅವರಿಂದ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು. ಮುಂದೆ ಚಿತ್ರಕಲೆಯಲ್ಲಿ ಪರಿಣತಿ ಸಾಧಿಸಲು ‘ಮುಂಬಯಿ ನೂತನ್‌ ಕಲಾ ಮಂದಿರ’ ಮತ್ತು ಜೆ.ಜೆ. ಕಲಾ ಶಾಲೆ ಸೇರಿ ‍1963ರಲ್ಲಿ ಡಿ‍‍ಪ್ಲೊಮಾ ಪೂರೈಸಿದರು.

ADVERTISEMENT

ತವರಿಗೆ ವಾಪಸ್ಸಾದ ಅವರು, 1965ರಲ್ಲಿ ‘ದಿ ಐಡಿಲ್ ಫೈನ್‌ ಆರ್ಟ್‌’ ಸಂಸ್ಥೆ ಸ್ಥಾಪಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಶ್ರೇಷ್ಠ ಸಂಸ್ಥೆಯಾಗಿ ಬೆಳೆಯಲು ಶ್ರಮಿಸಿದರು. ಮುಂದಿನ ದಿನಗಳಲ್ಲಿ ಈ ಸಂಸ್ಥೆ ರಾಜ್ಯದಲ್ಲೇ ಅತ್ಯುತ್ತಮ ಕಲಾ ಕೇಂದ್ರವಾಗಿ ಹೆಮ್ಮರದಂತೆ ಬೆಳೆದು ನಿಂತಿದ್ದು ಇತಿಹಾಸ. ಇದರ ಹೆಗ್ಗಳಿಕೆ ಖಂಡೇರಾವ್‌ ಅವರಿಗೆ ಸಲ್ಲುತ್ತದೆ.

ಕಲಾ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಕಲಾ ನೈಪುಣ್ಯ ಕಲಿಸುವ ಜತೆ ಜತೆಗೆ ಅಪರೂಪದ ಕಲಾಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆರಂಭದಲ್ಲಿ ಅವರು ಸೃಷ್ಟಿಸಿದ ನಿಸರ್ಗದ ರಮಣೀಯತೆ, ವ್ಯಕ್ತಿಗತ ಚಿತ್ರಗಳು ಅವರ ಕಲಾ ತನ್ಮಯತೆಗೆ ಸಾಕ್ಷಿಯಾಗಿವೆ.

ಅರಮನೆ ರಸ್ತೆಯಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್‌ನಲ್ಲಿ ಖಂಡೇರಾವ್ ಅವರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ. ನ. 30ವರೆಗೆ ಈ ಪ್ರದರ್ಶನ ನಡೆಯಲಿದ್ದು, ಅಪರೂಪದ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ.

ಕಾಗದದ ಮೇಲೆ ಜಲವರ್ಣದಲ್ಲಿ ಸೃಷ್ಟಿಯಾದ ವೇ–ಟು ಟೆಂಪಲ್, ಕಲಬುರ್ಗಿ ಹೊರಭಾಗದ ಪ್ರದೇಶ, ಬೆಂಗಳೂರಿನ ಸೆಂಟ್ರಲ್ ಜೈಲಿನ ವಾಚ್‌ಮನ್ ಟವರ್‌, ಕಲಬುರ್ಗಿ ಕಾಳಗಿ ವಿಲೇಜ್‌, ಬಾಂಬೆ ಹೈಕೋರ್ಟ್, ಹಂಪಿ ದೇಗುಲ ಸಂಕೀರ್ಣ, ಸುರಪುರದ ಹಳೇ ಅರಮನೆ, ವಿಲೇಜ್‌ ಕಾರ್ನರ್‌ ಜಲಸಂಕಿ ಚಿತ್ರಗಳು ಗತ ನೆನಪುಗಳ ಪಡಿಯಚ್ಚಿನಂತೆ ಕಾಣುತ್ತವೆ.

ತೈಲವರ್ಣದಲ್ಲಿ ಸೃಷ್ಟಿಸಿರುವ ಬದಾಮಿ, ಐಹೊಳೆ, ಪಟ್ಟದಕಲ್ಲು, ಫಿಗುರೇಟಿವ್ ಚಿತ್ರಕಲೆ, ಪಾರ್ಟ್‌ ಆಫ್‌ ವಿಂಡೊ ವೈಟ್‌ ಹಾಗೂ ವಾರ್ಮ್‌ ಆಂಡ್‌ ಕೂಲ್‌ನಂತಹ ಅಪರೂಪದ ಕಲಾಚಿತ್ರಗಳ ಗುಚ್ಛವೇ ಅರಮನೆ ರಸ್ತೆಯಲ್ಲಿರುವ ಆಧುನಿಕ ಕಲಾ ಸಂಗ್ರಹಾಲಯದಲ್ಲಿ ಪ್ರದರ್ಶನಗೊಂಡಿವೆ.

ಜನಪದರಿಗೂ ಕಲೆ ಮೂಲಕವೇ ಗೌರವ ಸೂಚಿಸುವ ಅವರ ನಡೆ ಮೆಚ್ಚುವಂತಹದ್ದು. ಬಾಲ್ಯದಲ್ಲಿ ನೋಡಿದ ಹಲವು ಕಲಾ ‍ಪ್ರಕಾರಗಳನ್ನು ಚಿತ್ರಕಲೆ ಮೂಲಕ ಮರು ಸೃಷ್ಟಿಸಿದ್ದಾರೆ. ಪುರವಂತರು, ಭೂತೇರು, ಪೋತ್ರಾಜು, ಗೊಂದಲಿಗ ಮೇಳ, ಚೌಡಮ್ಮ ಕುಣಿತ, ಗಂಗೆತ್ತು, ಜೋಕುಮಾರ, ಸುಡುಗಾಡು ಸಿದ್ಧರು, ಮೈಲಾರಲಿಂಗ ಮಲ್ಲಪ್ಪ ಸೇರಿದಂತೆ ಹಲವು ಚಿತ್ರಗಳು ಸ್ಮತಿಪಟಲದಲ್ಲಿ ಮಾಸದಂತೆ ಅವರ ಕುಂಚದಲ್ಲಿ ಅರಳಿವೆ.

ಉತ್ತರ ಕರ್ನಾಟಕದ ಕೆಲ ಭಾಗಗಳು ಅಭಿವೃದ್ಧಿ ವಿಷಯಲ್ಲಿ ಹಿಂದೆ ಉಳಿದಿರಬಹುದು. ಆದರೆ, ಕಲೆ ವಿಷಯದಲ್ಲಿ ಎಂದಿಗೂ ಹಿಂದುಳಿಯಲು ಸಾಧ್ಯವಿಲ್ಲ ಎನ್ನುವ ತೀಕ್ಷ್ಣ ಪ್ರತಿಕ್ರಿಯೆ ಅವರದ್ದು. 79ರ ಇಳಿವಯಸ್ಸಿನಲ್ಲೂ ಸಕ್ರಿಯರಾಗಿ ದುಡಿಯುತ್ತಿರುವ ಕಲಾರಾಧಕ ಅವರು

ಅವರ ಕಲಾ ಸೇವೆ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಲಲಿತ ಕಲಾ ಅಕಾಡೆಮಿ ಗೌರವ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡ ಮಾಡುವ ‘ನಾಡೋಜ’ ಬಿರುದು ಸಂದಿದೆ. ಗುಲ್ಬರ್ಗ ವಿಶ್ವವಿದ್ಯಾಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಲಂಡನ್, ಅಮೆರಿಕ, ಸಿಂಗಪುರ ಸೇರಿದಂತೆ ಹಲವು ದೇಶಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.