ADVERTISEMENT

ಯುವ ಶಿಲ್ಪಿಯ ಕಲಾ ಲೋಕ

ವಿದ್ಯಾಶ್ರೀ ಗಾಣಿಗೇರ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಕೃಷ್ಣ ನಾಯಕ್ ಅವರ ಕಲಾಕೃತಿ
ಕೃಷ್ಣ ನಾಯಕ್ ಅವರ ಕಲಾಕೃತಿ    

ಸಾಂಪ್ರದಾಯಿಕ ಶೈಲಿಯಲ್ಲಿ ಶಿಲ್ಪರಚನೆಗೆ ಹೆಸರಾಗಿರುವ ಕೃಷ್ಣ ನಾಯಕ್‌ ಅವರದು ಬಹುಮುಖ ಪ್ರತಿಭೆ. ಕಲ್ಲು, ಮರ, ಪ್ಲಾಸ್ಟಿಕ್‌, ಫೈಬರ್‌, ಮಣ್ಣು ಸೇರಿದಂತೆ ಬೇರೆ ಬೇರೆ ಮಾಧ್ಯಮ ಬಳಸಿ ಕಲಾಕೃತಿಗಳನ್ನು ರಚಿಸುವುದು ಅವರ ವಿಶೇಷ.

ಅವರಶಿಲ್ಪ ಕಲಾಕೃತಿಗಳು ನೋಡುಗನನ್ನು ತನ್ನ ಮುಂದೆ ಒಂದೆರಡು ಕ್ಷಣ ಹಿಡಿದಿಡುವಂತವೆ. ದಿಟ್ಟಿಸಿ ನೋಡುತ್ತ ನಮ್ಮೊಳಗೆ, ನಮ್ಮ ಮನದಾಳಕ್ಕೆ ಇಳಿಯುವಂತವೆ. ಗಂಗರಸ ಶಿಲ್ಪಕಲಾ ಕಾಲೇಜಿನಲ್ಲಿ ಐದು ವರ್ಷ ತರಬೇತಿ ಪಡೆದಿರುವ ಕೃಷ್ಣ ಈಗ ಬೆಂಗಳೂರಿನಲ್ಲಿ ತಮ್ಮದೆ ಸ್ವಂತ ಆರ್ಟ್‌ ಗ್ಯಾಲರಿಯನ್ನು ಆರಂಭಿಸಿದ್ದಾರೆ. ಕಾರವಾರದ ಅವರು ಸದ್ಯ ಬೆಂಗಳೂರಿನಲ್ಲೇ ವಾಸವಿದ್ದಾರೆ.

‘ನಾನು ಹತ್ತನೇ ತರಗತಿಯಲ್ಲಿದ್ದಾಗ ನನ್ನ ತಂದೆ ಪೇಂಟಿಂಗ್ ಮಾಡುತ್ತಿದ್ದರು. ಅದನ್ನುನೋಡಿಯೇ ನಾನೂ ಪೇಂಟಿಂಗ್ ಮಾಡಲು ಶುರುಮಾಡಿದೆ. ಕ್ರಮೇಣ ಚಿತ್ರ ಬಿಡಿಸುವ ಹವ್ಯಾಸ ಮೈಗಂಟಿಕೊಂಡಿತು. ಮನಸ್ಸಿಗೆ ತೋಚಿದಂತೆ ಚಿತ್ರಗಳನ್ನು ರಚಿಸುತ್ತಿದ್ದೆ. ಅವು ಸುಂದರವಾಗಿ ರೂಪುಗೊಳ್ಳುತ್ತಿದ್ದವು. ಅದನ್ನು ಕಂಡ ಶಾಲೆಯ ಶಿಕ್ಷಕರು ಕೆಲ ಸಲಹೆ ನೀಡಿ ಇನ್ನೂ ಚೆಂದವಾಗಿ ಚಿತ್ರಗಳನ್ನು ರಚಿಸುವಂತೆ ಪ್ರೋತ್ಸಾಹಿಸಿದರು. ಅದು ನನ್ನಲ್ಲಿನ ಕಲಾವಿದನನ್ನು ಜಾಗೃತಗೊಳಿಸಿತು. ಬಳಿಕ ಚಿಕ್ಕ ಚಿಕ್ಕ ಮೂರ್ತಿಗಳನ್ನು ಕೆತ್ತಲು ಶುರುಮಾಡಿದೆ. ಕ್ರಮೇಣ ನನಗೆ ಶಿಲ್ಪಕಲೆಯಲ್ಲಿ ಒಲವು ಹೆಚ್ಚಿತು ಎನ್ನುತ್ತಾರೆ ಕೃಷ್ಣ ನಾಯಕ್‌.

ADVERTISEMENT

‘ಶಿಕ್ಷಕರಂತೆಯೇ ನನ್ನ ಪ್ರತಿಭೆ ಗುರುತಿಸಿದ್ದು ನನ್ನ ತಂದೆ. ಅವರು ಕೂಡಾ ಚಿತ್ರಬಿಡಿಸುತ್ತಿದ್ದರು. ಒಂದು ರೀತಿ ಹೇಳುವುದಾದರೆ, ಈ ಕಲೆ ನನಗೂ ಬಂದಿದೆ. ಚಿತ್ರಕಲೆ ಮತ್ತು ಶಿಲ್ಪಕಲೆ ಇವೆರಡೂ ನನ್ನ ಕಣ್ಣುಗಳಿದ್ದ ಹಾಗೆ. ಕಾಲೇಜಿನಲ್ಲಿ ಶಿಲ್ಪಕಲೆಯ ಹಲವು ಪ್ರಕಾರಗಳ ಬಗ್ಗೆ ಅಲ್ಲಿ ಪರಿಚಯವಾಯಿತು. ಶಿಲ್ಪಕಲಾ ಕ್ಷೇತ್ರದಲ್ಲಿಯೇ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ದೃಢ ನಿರ್ಧಾರ ಮಾಡಿ ಶ್ರದ್ಧೆಯಿಂದ ಈ ಕಲೆ ಕಲಿತೆ’ ಎನ್ನುತ್ತಾರೆಕೃಷ್ಣ.

‘ಶಿಲ್ಪಕಲೆಗೆ ನನ್ನ ತಂದೆಯೇ ನನಗೆ ಸ್ಪೂರ್ತಿ. ಕಲೆಯ ಮಹತ್ವವನ್ನು ತಿಳಿಸಿಕೊ‌ಟ್ಟಿದ್ದು ಅವರು. ನಾನು ಶಿಲ್ಪಕಲೆ, ಫೈಬರ್ ಮ್ಯೂರಲ್, ಪೇಂಟಿಂಗ್‌, ತಾಮ್ರದಲ್ಲಿ ಕಲಾಕೃತಿಗಳನ್ನು ರಚಿಸುತ್ತೇನೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಹಮ್ಮಿಕೊಂಡ ಹಲವಾರು ಶಿಬಿರಗಳಲ್ಲಿ ಭಾಗವಹಿಸಿ
ದ್ದೇನೆ’ ಎನ್ನುವ ಅವರು 15 ವರ್ಷಗಳಿಂದ ಇದೇ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡಿದ್ದಾರೆ ಅಂತೆ. ನಗರದಲ್ಲಿ ಕಲ್ಲುಗಳು ಸಿಗದ ಕಾರಣ ಮೈಸೂರು, ಕಾರ್ಕಳಗಳಿಂದ ಅವುಗಳನ್ನು ತರಿಸಿಕೊಂಡು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ.

‘ಈ ಬಾರಿ 25 ಶಿಲ್ಪಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇನೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದಇದು ನನ್ನ ಮೊದಲ ಏಕವ್ಯಕ್ತಿ ಶಿಲ್ಪಗಳ ಪ್ರದರ್ಶನ. ಎಲ್ಲ ತರಹದ ಶಿಲ್ಪಗಳನ್ನು ಪ್ರದರ್ಶನಕ್ಕಿಟ್ಟಿದ್ದೇನೆ. ಈ ಬಾರಿ ಬುದ್ಧನ ಪ್ರತಿಮೆಗೆ ಆದ್ಯತೆ ನೀಡಿದ್ದೇನೆ. ಬುದ್ಧ ಶಾಂತಿಯ ಪ್ರತೀಕವಾದ್ದರಿಂದ ನಾನು ಬುದ್ಧನ ನಾನಾ ಭಂಗಿಯ ಶಿಲ್ಪಗಳನ್ನು ಪ್ರದರ್ಶನಕ್ಕಿಟ್ಟಿದ್ದೇನೆ’ ಎನ್ನುವ ಕೃಷ್ಣ ನಾಯಕಿ ಅವರಿಗೆವಾದಿರಾಜ ಪ್ರಶಸ್ತಿ, ಚಾರ್ಮಿಂಗ್ ಚಿರಂತನ್‌ ವರ್ಷದ ಕಲಾವಿದ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಭಾಜನರಾಗಿದ್ದಾರೆ. ಕಾರವಾರ, ಮೈಸೂರು, ಬೆಂಗಳೂರು ಹಲವಾರು ಕಡೆಗಳಲ್ಲಿ ನಾನು ಪ್ರದರ್ಶನ ನೀಡಿದ್ದೇನೆ’ ಎನ್ನುತ್ತಾರೆ ಅವರು.

ಕೃಷ್ಣ ನಾಯಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.