ADVERTISEMENT

ಕುಸ್ತಿ ಅಖಾಡದ ಪೈಲ್ವಾನ್‌

ಎಚ್.ಎಸ್.ಶ್ರೀಹರಪ್ರಸಾದ್
Published 23 ಜನವರಿ 2019, 6:30 IST
Last Updated 23 ಜನವರಿ 2019, 6:30 IST
ಕುಸ್ತಿಪಟು ಪೈಲ್ವಾನ್‌
ಕುಸ್ತಿಪಟು ಪೈಲ್ವಾನ್‌   

ಮರಿಯಮ್ಮನಹಳ್ಳಿ: ಹಿರಿಯರಿಂದ ಬಳುವಳಿಯಾಗಿ ಬಂದ ಕುಸ್ತಿ ಕಲೆಯನ್ನು ಕರಗತ ಮಾಡಿಕೊಂಡು ಅದರಲ್ಲಿ ಎತ್ತರದ ಸಾಧನೆ ಮಾಡುತ್ತಿದ್ದಾರೆ ಇಲ್ಲಿನ 24ರ ಹರೆಯದ ಶಶಿಕುಮಾರ.

ಆರನೇ ವಯಸ್ಸಿನಲ್ಲಿ ಕುಸ್ತಿ ಅಖಾಡಕ್ಕಿಳಿದು ಆಗಲೇ ಭರವಸೆ ಮೂಡಿಸಿದವರು ಶಶಿಕುಮಾರ. ಒಂದೊಂದೆ ಹಂತ ದಾಟಿಕೊಂಡು ಬಂದಿರುವ ಅವರೀಗ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಹೆಬ್ಬಯಕೆ ಹೊಂದಿದ್ದಾರೆ.

ಹನ್ನೆರಡನೇ ವಯಸ್ಸಿನಲ್ಲಿ ಕುಸ್ತಿ ಅಖಾಡದಲ್ಲಿ ಎದುರಾಳಿಯನ್ನು ಮಣಿಸಿ ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಪಡೆದ ಶಶಿಕುಮಾರ ಇದರಲ್ಲೇ ಸಾಧನೆ ಮಾಡಬೇಕೆಂಬ ಆಸೆ ಚಿಗುರೊಡೆಯಿತು. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ADVERTISEMENT

ಹತ್ತನೇ ತರಗತಿಯಲ್ಲಿದ್ದಾಗ ಧಾರವಾಡದಲ್ಲಿ ನಡೆದ 64 ಕೆ.ಜಿ. ವಿಭಾಗದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಪಿಯುಸಿಯಲ್ಲಿದ್ದಾಗ ಮಂಗಳೂರು, ಮೈಸೂರಿನಲ್ಲಿ ಏರ್ಪಡಿಸಿದ್ದ 74 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಹೆಸರು ಗಳಿಸಿದರು.

ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ 86 ಕೆ.ಜಿ. ತೂಕದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಪಂಜಾಬ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಜುಡೋ ಪಂದ್ಯಾವಳಿಯಲ್ಲಿಯೂ ಪಾಲ್ಗೊಂಡಿದ್ದಾರೆ.

ಸದ್ಯ ಬಿ.ಕಾಂ ಆರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಶಶಿಕುಮಾರ್, ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ (ಸಿಂಡಿಕೇಟ್‌) ಕ್ರೀಡಾ ವಲಯ ಕೋಟಾದಲ್ಲಿ ವಿದ್ಯಾರ್ಥಿ ಪ್ರತಿನಿಧಿ ಸದಸ್ಯರಾಗಿದ್ದಾರೆ.

ಅಂದಹಾಗೆ, ಶಶಿಕುಮಾರಗೆ ಮನೆಯೇ ಕುಸ್ತಿ ಕಲೆಯ ಪಾಠ ಶಾಲೆ. ಸಮೀಪದ ಲೋಕಪ್ಪನಹೊಲ ಗ್ರಾಮದ ಕುಸ್ತಿಪಟು ಹನುಮಂತಪ್ಪ ಇವರ ಅಜ್ಜ. ಚಿಕ್ಕಪ್ಪ ವಾಸಪ್ಪ, ಕುಸ್ತಿಯಲ್ಲಿ ಹೆಸರು ಮಾಡಿರುವ ಮಾನಜಪ್ಪ, ಹುಲುಗಪ್ಪ, ಸಮಾಣೆಪ್ಪ ಅವರ ಮಾರ್ಗದರ್ಶನದಲ್ಲಿ ಕುಸ್ತಿಯ ಪಟ್ಟುಗಳನ್ನು ಕಲಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.