ADVERTISEMENT

ನಂದಿಹೋದ ರಂಗದೀವಿಗೆ

ಹಾಡುನಟಿ ಮನೂಬಾಯಿ ನಾಕೋಡ ಉಳಿಸಿಹೋದ ನೆನಪುಗಳು...

ಮಲ್ಲಿಕಾರ್ಜುನ ಕಡಕೋಳ
Published 30 ಅಕ್ಟೋಬರ್ 2018, 5:31 IST
Last Updated 30 ಅಕ್ಟೋಬರ್ 2018, 5:31 IST
ಮನೋಬಾಯಿ ನಾಕೋಡ
ಮನೋಬಾಯಿ ನಾಕೋಡ   

ಭಾನುವಾರ (ಅ.28) ನಿಧನರಾದ ವೃತ್ತಿರಂಗಭೂಮಿಯ ಹಾಡುನಟಿ ಮನೂಬಾಯಿ ನಾಕೋಡ ನಮ್ಮ ಕಾಲದ ಮಹತ್ವದ ಅಭಿನೇತ್ರಿ.

ಎಂಬತ್ತಾರು ಬದುಕಿನ ಸಂಧ್ಯಾಕಾಲವೇ ಆಗಿದ್ದರೂ ‘ಛೇ! ಇನ್ನಷ್ಟು ದಿನಗಳಾದರೂ ಇದ್ದಿದ್ದರೆ...’ ಎಂದು ಗೆಳೆಯರೊಬ್ಬರು ನಿಟ್ಟುಸಿರಿಟ್ಟರು.

ಆಸ್ತಮಾದಿಂದ ಉಸಿರಾಟದ ಸಮಸ್ಯೆ ಉಲ್ಬಣಿಸಿದ್ದರಿಂದ ತಜ್ಞ ವೈದ್ಯರಲ್ಲಿಗೆ ಹೋಗಿ, ಪರೀಕ್ಷೆ ಮಾಡಿಸಿಕೊಂಡು ಮನೆ ಬಳಿ ನಡೆಯುತ್ತಲೇ ಬಂದವರು ಮನೂಬಾಯಿ. ಎರಡು ತಾಸಾಗಿತ್ತಷ್ಟೆ, ಮಂಚದ ಮೇಲೆ ಮಲಗಿದವರು ಏಳಲೇ ಇಲ್ಲ.

ADVERTISEMENT

ಮನೂಬಾಯಿ ಮೂರು ತಿಂಗಳ ಕೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡವರು. ತಂದೆ ಹಾನಗಲ್ ಬಾಬುರಾಯರು, ಸಿಂಪಿಯಲ್ಲಿ ಹೊಯ್ ಹಾಲು ಹಾಕಿ ಹೆತ್ತ ತಾಯಿಯಂತೆ ಜತನ ಮಾಡಿದರು. ಬಾಬುರಾಯರು ಆ ಕಾಲದ ಶ್ರೇಷ್ಠ ಹಾರ್ಮೋನಿಯಂ ವಾದಕ. ವೃತ್ತ, ಕಂದ, ಸೀಸ ಪದ್ಯಗಳಿಗೆ ಸ್ವರ ಸಂಯೋಜನೆ ಮಾಡುವುದಲ್ಲದೇ ಉತ್ತರಾದಿಯ ಖ್ಯಾಲ್ ಟಪ್ಪಾ ಬೋಲ್ ತಾನ್, ಠುಮ್ರಿಗಳ ಪರಿಚಯ ಉಳ್ಳವರಾಗಿದ್ದರು. ಮಕ್ಕಳಾದ ತಾರಾಬಾಯಿ, ಮನೂಬಾಯಿ ಸೋದರಿಯರಿಗೆ ರಂಗ ಸಂಗೀತ, ಜುಳು ಜುಳು ಹರಿಯುವ ತಿಳಿನೀರು ಕುಡಿದಷ್ಟೇ ಸರಳವೆನಿಸಿತು.

ಅಕ್ಕ ತಾರಾಬಾಯಿ ಜತೆ ಚಕ್ಕಡಿ ಗಾಡಿಯಲ್ಲಿ ಹೋಗಿ, ಪರ ಊರುಗಳಲ್ಲಿನ ನಾಟಕಗಳನ್ನು ಮನೂಬಾಯಿ ನೋಡುತ್ತಿದ್ದರು. ಹಾನಗಲ್ಲಿಗೆ ಯಾವುದೇ ಕಂಪನಿ ಬರಲಿ, ಅಪ್ಪನ ಕಾಲುಪೆಟ್ಟಿಗೆ ಅಕ್ಕ ಪಕ್ಕ ಅಕ್ಕ–ತಂಗಿಯರಿಗೆ ಸೀಟು ಕಾಯಂ. ಬಾಲ್ಯದ ಇಂತಹ ನೂರಾರು ನೆನಪುಗಳನ್ನು ಮನೂಬಾಯಿ ತಮ್ಮ ಭಾವಕೋಶದಲ್ಲಿ ಕಡೇ ಗಳಿಗೆವರೆಗೂ ಜತನವಿಟ್ಟುಕೊಂಡಿದ್ದರು. ಅಕ್ಕನಿಗೆ ಹಾಡುಗಾರಿಕೆಯಲ್ಲಿ ಪಾಂಡಿತ್ಯವಿದ್ದರೆ, ಮನೂಬಾಯಿ ಅವರಿಗೆ ನೃತ್ಯ ಮತ್ತು ನಟನೆಯಲ್ಲಿ ಪ್ರಾವೀಣ್ಯ. ವಾರಕ್ಕೊಮ್ಮೆ ಹುಬ್ಬಳ್ಳಿಯಲ್ಲಿ ರುಚಿಕರ ಗಿರಮಿಟ್ ಜತೆಗೆ ಸುಂದರ ಹಿಂದಿ ಸಿನಿಮಾ. ನೋಡಿಬಂದ ಮೇಲೆ ಮನೆಯಲ್ಲೇ ತಾಲೀಮು. ಅಮೀರಬಾಯಿ, ಗೋಹರಬಾಯಿ ಸೋದರಿಯರು ಬೀಳಗಿಯಲ್ಲಿ ದನ ಕಾಯುತ್ತಿದ್ದವರು ಮುಂಬೈಗೆ ಹೋಗಿ ರಂಗ ಸಂಗೀತ ವಿದ್ಯೆ ಕಲಿತು ರಾಷ್ಟ್ರ ಖ್ಯಾತಿ ಗಳಿಸುತ್ತಿದ್ದುದನ್ನು ಹೇಳುತ್ತಲೇ ಇಬ್ಬರೂ ಅವರ ಸಮಕ್ಕೆ ಬೆಳೆಯಲು ಅಪ್ಪ ನೆರವಾದರು.

ಅಪ್ಪನ ಹಾರ್ಮೋನಿಯಂ ಜುಗಲ್‌ಬಂದಿಗೆ ತಾಸುಗಟ್ಟಲೆ ನರ್ತಿಸುತ್ತಿದ್ದುದನ್ನೂ ಮರೆತಿರಲಿಲ್ಲ.

ಅಮರಫಲ್, ಘೋಡಾ ಸವಾರ, ಚಲನ ಪ್ರಪಂಚದಂತಹ ಈ ಕಾಲದ ನಾವು ಕಂಡರಿಯದ ಶ್ರೇಷ್ಠ ಪರಂಪರೆಯ ನಾಟಕಗಳಲ್ಲಿ ನಾಯಕಿ ಪಾತ್ರ ಅಭಿನಯಿಸುವ ಮೂಲಕ ವೃತ್ತಿರಂಗದ ಮೌಲ್ಯಗಳನ್ನು ಬದುಕಿನುದ್ದಕ್ಕೂ ಉಳಿಸಿಕೊಂಡರು. ಆರ್ಥಿಕವಾಗಿ ಎಷ್ಟೇ ಕಷ್ಟ ಬಂದರೂ ಕೈ ಬಿಡಲಿಲ್ಲ. ಅಂತೆಯೇ ಅವರು ಉಂಡ ಕಷ್ಟಗಳೇ ಹೆಚ್ಚು. ಕಂಡ ಗೌರವ–ಸುಖಗಳು ಕಡಿಮೆ.

ತುಂಬು ಗರ್ಭಿಣಿಯಾಗಿದ್ದಾಗ ಹಳ್ಳಿಯೊಂದರಲ್ಲಿ ಕ್ಯಾಂಪ್. ಕಲೆಕ್ಷನ್ ಕಮ್ಮಿ. ಊಟಕ್ಕೂ ತತ್ವಾರ. ಹಗಲು ಹೊಲಗಳಲ್ಲಿ ಕಳೆ ತೆಗೆದು ರಾತ್ರಿ ಪಾತ್ರ ಹಾಕುವುದಾಗಿತ್ತು. ಹೆರಿಗೆಯಾದ ರಾತ್ರಿಯೂ ಪಾತ್ರ ಮಾಡಿದರು.

‘ಹರಿಶ್ಚಂದ್ರ’ದ ತಾರಾಮತಿ, ‘ಬಾಣಸಿಗ ಭೀಮ’ದ ದ್ರೌಪದಿ, ‘ಲಂಕಾದಹನ’ದ ಸೀತೆ, ‘ಘೋಡಾ ಸವಾರ’ದ ದೇವರಾಣಿ, ಕಿತ್ತೂರ ಚೆನ್ನಮ್ಮ, ಚಿತ್ರಾಂಗದ, ಮಹಾಸತಿ ಅನಸೂಯ ಹೀಗೆ ಪೌರಾಣಿಕ ನಾಟಕಗಳಲ್ಲದೇ ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲೂ ಹೆಸರು ಮಾಡಿದರು. ಪ್ರೇಕ್ಷಕನೊಬ್ಬ ಇವರ ಪಾತ್ರ ಮೆಚ್ಚಿ ವಜ್ರದುಂಗುರ ಉಡುಗೊರೆಯಾಗಿ ನೀಡಿದ್ದನ್ನು ಪತಿರಾಯ ಅಪಾರ್ಥ ಮಾಡಿಕೊಂಡು ಜಗಳ ಮಾಡಿದ್ದನ್ನು ಮುಪ್ಪಿನಲ್ಲೂ ಮರೆತಿರಲಿಲ್ಲ. ನಾಯಕಿ, ಖಳ ನಾಯಕಿ, ವಿನೋದ ವಾರಿಧಿಯಾಗಿಯೂ ಸೈ.

‘ನಾವು ರಂಗಭೂಮಿಯ ಗಂಧರ್ವರು ಅಳಿಸುವುದಕ್ಕಿಂತ ಸಹೃದಯರ ಮನಸು ಅರಳಿಸುವುದನ್ನು ಕಲಿಯಬೇಕು.

ನನ್ನ ಮದುವೆ ವಿಷಯದಲ್ಲಿ ಅಪ್ಪನಿಗೆ ತಕರಾರುಗಳಿದ್ದವು. ‘ನಿನ್ನ ಮಡಿಲಲ್ಲೇ ಪ್ರಾಣ ಬಿಡುವೆ... ನನ್ನ ಪ್ರೇಮ ಪುತ್ಥಳಿ...ಅನುರಾಗ ಸಿಂಧುವೇ..’ ಮುಂತಾಗಿ ನಾಯಕನಟನ ಮಾತುಗಳಂತೆ ಮರುಳು ಮಾಡುವ ಕಂಪನಿ ಮಾಲೀಕರೇ ವಿಲನ್‌ಗಳಾಗುತ್ತಾರೆ ಎನ್ನುವುದು ನನ್ನ ಬದುಕಿನಲ್ಲಿ ಸಾಬೀತುಗೊಳ್ಳುವಷ್ಟರಲ್ಲಿ ಅಪ್ಪನನ್ನು ಕಳಕೊಂಡಿದ್ದೆ. ಮಕ್ಕಳ ಬದುಕಲ್ಲಿ ಪುನರಪಿಸಬಾರದೆಂದುಕೊಂಡೆನಾದರೂ ಸಾಧ್ಯವಾಗಲಿಲ್ಲ. ವೃತ್ತಿರಂಗನಟಿಯರು ಶಾಪಗ್ರಸ್ತರೆಂದು ಅಪ್ಪ ಹೇಳುತ್ತಿದ್ದುದು ಸುಳ್ಳಾಗುತ್ತಿಲ್ಲ...’ ಇಂತಹ ನೂರಾರು ನೋವು–ನಲಿವುಗಳನ್ನು ಮೆಲುಕು ಹಾಕುತ್ತಾ, ಬದುಕಿನ ಎಂಬತ್ತಕ್ಕೂ ಹೆಚ್ಚು ವಸಂತಗಳನ್ನು ಬಾಳಿ ಬದುಕಿದ ಈ ರಂಗಚೇತನ ತನ್ನ ಕಿರಿಯ ಮಗಳು ಭಾರತಿ (ಹಿರಿಯ ರಂಗನಟಿ) ಬಳಿ ಸಂಧ್ಯಾಕಾಲವನ್ನು ಐದಾರು ದಶಕ ಕಾಲ ದಾವಣಗೇರಿಯ ಎಲ್ಲಮ್ಮ ನಗರ, ವಿನಾಯಕ ನಗರದಲ್ಲಿ ಸಂತಸದಿಂದ ಕಳೆದರು. ಇನ್ನೊಬ್ಬ ಮಗಳು ಕಲ್ಪನಾ, ಮಗ ವಿನಾಯಕ, ರಾಜು ಅವರೂ ಕಲಾವಿದರೇ.

ಅಗಾಧ ನೆನಪುಗಳ, ರಂಗೋತ್ಸಾಹದ ಇವರ ಕುರಿತು ವಾರ್ತಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿವೆ. ಕಲಬುರ್ಗಿ ರಂಗಸಂಗಮ ಪ್ರಶಸ್ತಿ, ನಾಟಕ ಅಕಾಡಮಿ ಜೀವಮಾನ ಪ್ರಶಸ್ತಿಗಳೂ ಸಂದಿವೆ.

(ಲೇಖಕರು ರಂಗ ವಿಮರ್ಶಕ, ‘ರಂಗ ಸಮಾಜ’ದ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.