ADVERTISEMENT

‘ಮೂಡಲಪಾಯ ಯಕ್ಷಗಾನ’ ಕಲೆಗೆ ಜೀವ ತುಂಬುವ ಚಿಣ್ಣರು!

ಗಣಂಗೂರು ನಂಜೇಗೌಡ
Published 24 ಆಗಸ್ಟ್ 2025, 0:30 IST
Last Updated 24 ಆಗಸ್ಟ್ 2025, 0:30 IST
<div class="paragraphs"><p>ಮಕ್ಕಳಿಂದ ‘ಕರ್ಣ ಅರ್ಜುನರ ಕಾಳಗ’ ಪ್ರಸಂಗ ಪ್ರದರ್ಶನ</p></div>

ಮಕ್ಕಳಿಂದ ‘ಕರ್ಣ ಅರ್ಜುನರ ಕಾಳಗ’ ಪ್ರಸಂಗ ಪ್ರದರ್ಶನ

   
ನಶಿಸಿ ಹೋಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸುವ ಯತ್ನ ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಇಲ್ಲಿನ ಮಕ್ಕಳು ‘ಕರ್ಣ ಅರ್ಜುನರ ಕಾಳಗ’ ಪ್ರಸಂಗವನ್ನು ನಾಡಿನ ವಿವಿಧೆಡೆ ಪ್ರದರ್ಶಿಸುತ್ತಿದ್ದಾರೆ.

ಈ ಮಕ್ಕಳಿಗೆ ಇನ್ನೂ ಹನ್ನೆರಡು ವರ್ಷ ಕೂಡ ತುಂಬಿಲ್ಲ. ನಶಿಸಿ ಹೋಗುವ ಹಾದಿಯಲ್ಲಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸಲೇಬೇಕು ಎಂದು ಪಣ ತೊಟ್ಟವರಂತೆ ಪೌರಾಣಿಕ ಕಲೆಗೆ ಜೀವ ತುಂಬುತ್ತಿರುವ ಈ ಚಿಣ್ಣರ ‍ಅಮಿತಾಸಕ್ತಿ ಮತ್ತು ಭಾವಾಭಿನಯ ಬೆರುಗು ಮೂಡಿಸುತ್ತದೆ.

ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಐದು ವರ್ಷಗಳಿಂದ ದೇಸಿ ಕಲೆಯಾದ ಮೂಡಲಪಾಯ ಯಕ್ಷಗಾನವನ್ನು ಅನುಭವಿಸಿ ಅಭಿನಯಿಸುತ್ತಿದ್ದಾರೆ. ಅದನ್ನೇ ಉಸಿರಾಡುವವರಂತೆ ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ. ಪೌರಾಣಿಕ ಕಥೆ ‘ಕರ್ಣ ಅರ್ಜುನರ ಕಾಳಗ’ ಪ್ರಸಂಗವನ್ನು ಮನೋಜ್ಞವಾಗಿ ಅಭಿನಯಿಸುವ ಈ ಮಕ್ಕಳ ಪ್ರೌಢಿಮೆಗೆ ಹಿರಿಯ ಕಲಾವಿದರೂ ತಲೆದೂಗುತ್ತಿದ್ದಾರೆ.

ADVERTISEMENT

21 ಪ್ರದರ್ಶನ ಕಂಡ ‘ಕಾಳಗ’

ಈ ಕಿರಿಯ ಕಲಾವಿದರ ತಂಡ ಪ್ರದರ್ಶಿಸುತ್ತಿರುವ ‘ಕೃಷ್ಣ ಅರ್ಜುನರ ಕಾಳಗ’ ಮೂಡಲಪಾಯ ಯಕ್ಷಗಾನ ಪ್ರಸಂಗ ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ 21 ಪ್ರದರ್ಶನಗಳನ್ನು ಕಂಡಿದೆ. ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರಗಳಲ್ಲಿ ಎರಡು ಪ್ರದರ್ಶನಗಳಾಗಿವೆ. ತುಮಕೂರು, ದಾವಣಗೆರೆ, ಪಾಂಡವಪುರ ಇತರ ಕಡೆಗಳಲ್ಲೂ ಪ್ರದರ್ಶನಗೊಂಡಿದೆ.

ಮೇಲುಕೋಟೆಯಲ್ಲಿ 2025ರ ಮಾರ್ಚ್‌ ತಿಂಗಳಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ‘ಸುಗ್ಗಿ ಮಕ್ಕಳ ನಾಟಕೋತ್ಸವ’ದಲ್ಲಿ ಕೂಡ ಈ ಮಕ್ಕಳ ನಾಟಕ ಪ್ರದರ್ಶಿಸಿದ್ದಾರೆ. ಮೈಸೂರಿನಲ್ಲಿ ನಡೆದ ‘ಸುಬ್ಬಣ್ಣ ಸ್ಮರಣೆ–2024 ನಾಟಕೋತ್ಸವ’ದಲ್ಲಿ ಈ ಮಕ್ಕಳ ಪರಕಾಯ ಪ್ರವೇಶಕ್ಕೆ ಹಿರಿಯ ಕಲಾವಿದರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತು.

ಕಥಾವಸ್ತು:

ಒಂದು ಗಂಟೆ ಅವಧಿಯ ಈ ನಾಟಕ ಕರ್ಣ ಮತ್ತು ಅರ್ಜುನರ ನಡುವೆ ನಡೆಯುವ ಯುದ್ದದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕೃಷ್ಣನ ಸಾರಥ್ಯದಲ್ಲಿ ಅರ್ಜುನನು ಕರ್ಣನನ್ನು ಕೊಲ್ಲುವ ಸನ್ನಿವೇಶದ ನಡುವೆ ದುರ್ಯೋಧನ, ದುಶ್ಯಾಸನ, ದ್ರೌಪದಿ, ಮಾಯಾಕೃಷ್ಣ, ಕರ್ಣನ ಸಾರಥಿ ಶಲ್ಯ ಕೂಡ ಬಂದು ಹೋಗುತ್ತಾರೆ.

ಶಾಲೆಯ ಮುಖ್ಯ ಶಿಕ್ಷಕ ಪ.ಮಾ. ನಂಜುಂಡಸ್ವಾಮಿ ಶಾಲೆಯ ಹನ್ನೆರಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ನಾಟಕಕ್ಕೆ ಅಣಿಗೊಳಿಸಿದ್ದಾರೆ. ಕರ್ಣ(ಶರತ್‌), ಅರ್ಜುನ (ತೇಜಸ್‌), ಕೃಷ್ಣ(ನವ್ಯಾ), ದುರ್ಯೋದನ(ದರ್ಶನ್‌), ದುಶ್ಯಾಸನ(ಪೃಥ್ವಿಕ್‌), ದ್ರೌಪದಿ(ಪೂರ್ವಿಕಾ), ಮಾಯಾಕೃಷ್ಣ(ಭವ್ಯಾ), ಶಲ್ಯ(ದಿವ್ಯಾ) ಅಮೋಘವಾಗಿ ಅಭಿನಯಿಸುತ್ತಾರೆ.

ಕರ್ಣ–ಅರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರಸಂಗದ ಕಥಾವಸ್ತುವನ್ನು ಮಂಜುನಾಥ ಎಲ್‌. ಬಡಿಗೇರ ಪರಿಷ್ಕರಣೆ ಮಾಡಿಕೊಟ್ಟಿದ್ದಾರೆ. ಭಾಗವತಿಕೆಯಲ್ಲಿ ರವೀಂದ್ರ ತಲಕಾಡು, ಮದ್ದಳೆ ವಾದನದಲ್ಲಿ ಮೈಸೂರಿನ ಶ್ರೀಕೃಷ್ಣ ಚೈತನ್ಯ ಇದ್ದಾರೆ. ಮುಖವಾಣಿ ನಾರಾಯಣಸ್ವಾಮಿ ಅವರದ್ದು. ಈ ಅನುಭವಿಗಳ ತಂಡ ಜತೆಗೂಡಿರುವುದರಿಂದ ಮಕ್ಕಳ ಅಭಿನಯ ಮನೋಜ್ಞವಾಗಿ ಮೂಡಿಬರುತ್ತಿದೆ.

ಇದೇ ವಿದ್ಯಾರ್ಥಿಗಳ ತಂಡ ಐತಿಹಾಸಿಕ ನಾಟಕಗಳಾದ ಎಚ್ಚೆಮ ನಾಯಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ನಾಟಕಗಳನ್ನು ಕಲಿತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿದ್ದಾರೆ. ಬಿ.ವಿ. ಕಾರಂತರ ‘ಪಂಜರದ ಶಾಲೆ’ ನಾಟಕದ ತಾಲೀಮು ನಡೆಸಿ ಎರಡು ಪ್ರದರ್ಶನ ನೀಡಿದ್ದಾರೆ. ‘ಗೋವಿನ ಹಾಡು’ ನೃತ್ಯ ರೂಪಕದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಪ್ರೇರಕ ಶಕ್ತಿ ಪಿಎಂಎನ್‌

ಮೂಡಲಪಾಯ ಯಕ್ಷಗಾನ ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಿ, ತರಬೇತಿ ನೀಡಿ, ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಮಟ್ಟಿಗೆ ಮಕ್ಕಳನ್ನು ಸಜ್ಜುಗೊಳಿಸಿದವರು ಶಾಲೆಯ ಮುಖ್ಯ ಶಿಕ್ಷಕ ಪ.ಮಾ. ನಂಜುಂಡಸ್ವಾಮಿ. ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯದಲ್ಲಿ ‘ಪಿಎಂಎನ್‌’ ಎಂದೇ ಹೆಸರಾಗಿರುವ ನಂಜುಂಡಸ್ವಾಮಿ, 2016ರಲ್ಲಿ ದೊಡ್ಡಬ್ಯಾಡರಹಳ್ಳಿ ಶಾಲೆಗೆ ವರ್ಗಾವಣೆಗೊಂಡು ಬಂದ ಬಳಿಕ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಚಿತ್ರಣವೇ ಬದಲಾಗಿದೆ. ಇವರು ರಂಗಭೂಮಿ ಕಲಾವಿದ ಮತ್ತು ಗಾಯಕರೂ ಹೌದು.

ರಜಾ ದಿನಗಳಲ್ಲಿ ಮಕ್ಕಳಿಗೆ ನಾಟಕ ಮತ್ತು ಸಂಗೀತ ತರಬೇತಿ ನೀಡುತ್ತಿದ್ದು, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರ ಸಲಹೆಯಂತೆ ಮೂಡಲಪಾಯ ಯಕ್ಷಗಾನ ಕಲೆಯ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದ್ದಾರೆ. ನಾಟಕ ಪ್ರದರ್ಶನಕ್ಕೆ ಅಗತ್ಯವಾದ ರಂಗ ಸಜ್ಜಿಕೆ, ಪ್ರಯಾಣ, ಪ್ರಸಾದನ, ಊಟೋಪಚಾರದ ಬಹುಪಾಲು ಖರ್ಚನ್ನು ತಾವೇ ಭರಿಸುತ್ತಾರೆ.

‘ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಸಮಾಜೋದ್ಧಾರದ ಆಶಯ ಬಿತ್ತುವುದೇ ಶಿಕ್ಷಕನ ಕರ್ತವ್ಯ’ ಎಂದು ಭಾವಿಸಿರುವ ಇವರು ‘ಮಕ್ಕಳು ತೃಪ್ತಿದಾಯಕ ಪ್ರದರ್ಶನ ನೀಡಿದರೆ ಮತ್ತು ಜನರು ಅದನ್ನು ಮೆಚ್ಚಿಕೊಂಡರೆ ಅದೇ ದೊಡ್ಡ ಪ್ರಶಸ್ತಿ’ ಎಂದು ವಿನಮ್ರವಾಗಿ ಹೇಳುತ್ತಾರೆ.

ಶಿಕ್ಷಣದಲ್ಲಿ ರಂಗಕಲೆ

ಈ ಶಾಲೆಯ ಮಕ್ಕಳ ಅದೃಷ್ಟವೋ ಎಂಬಂತೆ ಶಿಕ್ಷಣ ಇಲಾಖೆ ‘ಶಿಕ್ಷಣದಲ್ಲಿ ರಂಗ ಕಲೆ’ ಪರಿಕಲ್ಪನೆಯನ್ನು ಪರಿಚಯಿಸಿತು. ಆ ಅವಕಾಶವನ್ನು ಬಳಸಿಕೊಂಡು ಪ.ಮಾ. ನಂಜುಂಡಸ್ವಾಮಿ ಮಕ್ಕಳಿಗೆ ನಾಟಕ, ನೃತ್ಯ, ಹಾಡುಗಾರಿಕೆಯನ್ನು ಕಲಿಸಲಾರಂಭಿಸಿದರು. ಪಠ್ಯವನ್ನು ನಾಟಕದ ಸಂಭಾಷಣೆ, ಕಥೆ ಮತ್ತು ಹಾಡಿನ ರೂಪದಲ್ಲಿ ಕಲಿಸಲು ಆರಂಭಿಸಿದರು.

‘ಆಡಿ ಕಲಿ– ನೋಡಿ ತಿಳಿ’ ತತ್ವಕ್ಕೆ ಪೂಕರವಾದ ಈ ವಿಧಾನ ಪಠ್ಯ ವಿಷಯಗಳ ಕಲಿಕೆಗೆ ಪರಿಣಾಮಕಾರಿ ಮಾರ್ಗ ಎಂಬುದನ್ನು ಮನಗಂಡರು. ನಾಟಕ, ನೃತ್ಯ, ಸಂಗೀತ ಕಲಿಕೆಯು ಟಿವಿ ಮತ್ತು ಮೊಬೈಲ್‌ ಗೀಳಿನಿಂದ ಮಕ್ಕಳನ್ನು ದೂರ ಇಡಹುದು ಎಂಬುದನ್ನೂ ಅರಿತರು. ಹೀಗೆ ಕಲಿತ ವಿಷಯ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಎಂಬುದು ಖಚಿತವಾದ ಮೇಲೆ ಇದನ್ನೇ ಮುಂದುವರೆಸಿದರು. ನಾಟಕ ಮತ್ತು ಸಂಗೀತದತ್ತ ಮಕ್ಕಳ ಮನಸ್ಸು ಹೊರಳುವಂತೆ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

‘ನಾಟಕ, ನೃತ್ಯ ರೂಪಕ, ಹಾಡುಗಳನ್ನು ಕಲಿಯುತ್ತಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಪಠ್ಯ ವಿಷಯದ ಕಲಿಕೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿದೆ. ಸಂವಹನ ಕೌಶಲ ಕೂಡ ಸಿದ್ದಿಸಿದೆ’ ಎಂಬುದು ಪ.ಮಾ. ನಂಜುಂಡಸ್ವಾಮಿ ಅವರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.