ADVERTISEMENT

‘ಟ್ರಡಿಷನ್ ಮೈಸೂರು’ ಚಿತ್ತಾರ

ಶಶಿಕುಮಾರ್ ಸಿ.
Published 21 ಡಿಸೆಂಬರ್ 2018, 19:40 IST
Last Updated 21 ಡಿಸೆಂಬರ್ 2018, 19:40 IST
   

ಗಣಪನಿಗೆ ಕೈತುತ್ತು ನೀಡುತ್ತಿರುವ ಗೌರಿ, ರಾಮ–ಸೀತೆಗೆ ನಮಿಸುತ್ತಿರುವ ಹನುಮ, ಕೃಷ್ಣನಿಗೆ ಬೆಣ್ಣೆ ಹಿಡಿದು ನಿಂತ ಯಶೋದೆ... ಹೀಗೆ ಪ್ರತಿ ಕಲಾರಸಿಕನ ನೋಟಕ್ಕೆ ಭಿನ್ನ ಗ್ರಹಿಸುವಿಕೆ ದಕ್ಕುವಂತಿದೆ. ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿರುವ ‘ಟ್ರಡಿಷನಲ್ ಮೈಸೂರು’ ಕಲಾಪ್ರದರ್ಶನ. ಈ ಪ್ರದರ್ಶನದಲ್ಲಿ ಕಲಾಕೃತಿಗಳ ಪ್ರಮುಖ ಆಕರ್ಷಣೆ ಶ್ರೀಮಂತಿಕೆಯ ಕಲಾಸೊಬಗು.

ಟ್ರಡಿಷನಲ್ ಮೈಸೂರು ಕಲಾಪ್ರದರ್ಶನ ಆಯೋಜಿಸಿದವರು ಶೋಭನಾ ಉದಯ್‌ಶಂಕರ್. ಹಿರಿಯ ಕಲಾವಿದೆಯೂ ಹೌದು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಚಿಕ್ಕವಯಸ್ಸಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.

ಕಲೆಯ ಹಿನ್ನೆಲೆ ಹೊಂದಿರದ ಕುಟುಂಬದಿಂದ ಬಂದ ಶೋಭನಾ ಅವರಿಗೆ ಸ್ವಂತ ಆಸಕ್ತಿಯಿಂದಲೇ ಕಲೆಯ ನಂಟು ಬೆಳೆದುಕೊಂಡಿತಂತೆ. ಅಪ್ಪ–ಅಮ್ಮನ ಹಾಗೂ ಶಾಲಾ ಶಿಕ್ಷಕರಿಂದ ಚಿತ್ರಗಳ ರಚನೆ ವಿಚಾರದಲ್ಲಿ ಮಾರ್ಗದರ್ಶನ ಪಡೆದ ಅವರು ಆಯಿಲ್ ಪೇಯಿಂಟಿಂಗ್ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ಕಲಾಕೃತಿಗಳನ್ನು ರಚಿಸುವತ್ತ ಮುಖಮಾಡಿ ಯಶಸ್ವಿಯಾದವರು.

ADVERTISEMENT

‘ವಿವಾಹವಾದ ಬಳಿಕ ಪತಿಯೊಂದಿಗೆ ದೇಶದ ಹಲವು ಭಾಗಗಳಿಗೆ ವಾಸ್ತವ್ಯ ಬದಲಾಯಿಸಬೇಕಾಯಿತು. ಪತಿ ಭಾರತೀಯ ಏರ್‌ವೇಸ್‌ನ ಉನ್ನತ ಹುದ್ದೆಯಲ್ಲಿದ್ದರು. ಬೇರೆ ಬೇರೆ ಕಡೆಗೆ ವರ್ಗಾವಣೆ ಆಯಿತು. ಅದು ನನ್ನ ಕಲಾಸಕ್ತಿಗೆ ಹೊಸ ಹಾದಿಯನ್ನು ತೆರೆದಟ್ಟಿತ್ತು. ದೇಶದ ನಾನಾ ಭಾಗಗಳಲ್ಲಿ ನಾನು ವಾಸ ಮಾಡಿದ್ದೇನೆ. ಅಲ್ಲೆಲ್ಲ ಅಪರೂಪದ ಕಲೆಗಳ ಪರಿಚಯವಾಯಿತು. ಅದು ನನ್ನ ಜ್ಞಾನವನ್ನು ಮತ್ತಷ್ಟು ವಿಸ್ತಾರಗೊಳಿಸುತ್ತಾ ಸಾಗಿತ್ತು’ ಎನ್ನುವ ಶೋಭನಾ ಸದ್ಯ ಮೈಸೂರು ಶೈಲಿಯ ಕಲೆಗೆ ಕಟ್ಟುಬಿದ್ದಿದ್ದಾರೆ.

‘ದೇಶದ ಹಲವೆಡೆ ನೆಲೆಸಿ ವಾಪಾಸ್ ಬೆಂಗಳೂರಿಗೆ ಬಂದಿದ್ದೇನೆ. ಊರೂರು ಸುತ್ತಿದರೂ ನಮ್ಮೂರೇ ನಮಗೆ ಲೇಸು. ಮೈಸೂರಿಗೆ ಹೋಗಿದ್ದಾಗೊಮ್ಮೆ ಮೈಸೂರು ಶೈಲಿಯ ಕಲೆಯ ಪರಿಚಯವಾಯಿತು. ಅದು ನನ್ನ ಕಲಾ ಬದುಕಿನ ಹಾದಿಯನ್ನೇ ಬದಲಿಸಿತು. ಮೈಸೂರು ಶೈಲಿಯ ಕಲೆಗೆ ಮನಸೋತ ನಾನು ಅದನ್ನು ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಿದೆ’ ಎನ್ನುತ್ತಾರೆ ಅವರು.

‘ಶ್ರೀಮಂತ ಕಲಾಸೊಬುಗು ಹೊಂದಿದ ಕಲಾಪ್ರಕಾರವೆಂದರೆ ಅದು ಮೈಸೂರು ಶೈಲಿಯ ಕಲೆ. ಈ ಕಲೆ ಕಲಿಯಬೇಕೆಂಬ ನನ್ನ ಆಸೆ ಈಡೇರಿಸಲು ನೆರವಿಗೆ ಸಿಕ್ಕವರು ಕಲಾವಿದ ಜೆ.ದುಂಡರಾಜ. ಈ ಶೈಲಿಯ ಆಳ–ಅಗಲದ ಬಗ್ಗೆ ಅವರಿಂದಲೇ ಕಲಿತೆ. ಹೆಚ್ಚಿನ ಅಭ್ಯಾಸಕ್ಕೆ ನೆರವಾದವರು ಕಲಾವಿದ ನರಸಯ್ಯ’ ಎನ್ನುವ ಅವರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಲಿಲ್ಲ.

‘24 ವರ್ಷಗಳ ಹಿಂದೆ ಕಲಿತ ಮೈಸೂರು ಶೈಲಿಯ ಕಲೆಯಲ್ಲಿ ಇಂದಿಗೂ ತೊಡಗಿಕೊಂಡಿದ್ದೇನೆ. ಈ ಶೈಲಿಯಲ್ಲಿ ಏನೋ ಒಂದು ಸೆಳೆತವಿದೆ. ಅದು ನನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಇದು ನನ್ನ ಜೀವಾಳವೇ ಆಗಿದೆ’ ಎನ್ನುತ್ತಾರೆ.

ನನ್ನ ಬದುಕಿನಲ್ಲಿ ನನಗೊಂದು ಗುರುತು ನೀಡಿದ್ದು ಮೈಸೂರು ಶೈಲಿಯ ಕಲೆ. ಇದು ಮಹತ್ವದ್ದು ಹೌದು. ಈ ಕಲಾ ರೂಪದ ಸಂಕೀರ್ಣತೆಯೂ ದೈಹಿಕ ಹಾಗೂ ಮಾನಸಿಕ ನಿರೂಪಕವಾಗಿದೆ. ಕಲಾಕೃತಿಗಳನ್ನು ಆಳವಾಗಿ ಅವಲೋಕಿಸಿದರೆ ಆಧ್ಯಾತ್ಮಿಕ ಅರ್ಥವನ್ನು ಈ ಕಲೆಯ ಶ್ರಮ ತೋರುತ್ತದೆ. ವೈಯಕ್ತಿಕವಾಗಿ, ನನ್ನೆಲ್ಲ ಒತ್ತಡ ಹಾಗೂ ಚಿಂತೆಗಳ ನಿವಾರಕವಾಗಿಯೂ ಈ ಕಲೆ ನನ್ನಲ್ಲಿ ಬೆರೆತಿದೆ’ ಎನ್ನುತ್ತಾರೆ.

**

ಸ್ಥಳ: ಚಿತ್ರಕಲಾ ಪರಿಷತ್ತು

ದಿನಾಂಕ: ಡಿ.25ರ ವರೆಗೆ

ಸಮಯ: ಬೆಳಿಗ್ಗೆ 10ರಿಂದ ರಾತ್ರಿ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.