ADVERTISEMENT

ತೆಂಗಿನ ಚಿಪ್ಪು, ಕಪ್ಪೆಚಿಪ್ಪುಗಳಿಂದೆಲ್ಲ ಕಲಾಕೃತಿ: ಗ್ರಾಮೀಣ ಪ್ರತಿಭೆ ದಾಖಲೆ ಗರಿ

‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಶಿವಮೂರ್ತಿ ಭಟ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:31 IST
Last Updated 29 ಜನವರಿ 2022, 19:31 IST
ತಾವು ರಚಿಸಿದ ಕಲಾಕೃತಿಗಳೊಂದಿಗೆ ಶಿವಮೂರ್ತಿ ಭಟ್ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಪ್ರಮಾಣ ಪತ್ರ ಮತ್ತು ಪದಕವನ್ನು ಹೆಮ್ಮೆಯಿಂದ ತೋರಿಸುತ್ತಿರುವುದು
ತಾವು ರಚಿಸಿದ ಕಲಾಕೃತಿಗಳೊಂದಿಗೆ ಶಿವಮೂರ್ತಿ ಭಟ್ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಪ್ರಮಾಣ ಪತ್ರ ಮತ್ತು ಪದಕವನ್ನು ಹೆಮ್ಮೆಯಿಂದ ತೋರಿಸುತ್ತಿರುವುದು   

ಕಾರವಾರ: ಇವರ ಕೈ ಚಳಕದಲ್ಲಿ ತೆಂಗಿನ ಚಿಪ್ಪು ಕೂಡ ಸುಂದರ ಕಲಾಕೃತಿಯಾಗುತ್ತದೆ. ಶಿಲೆಯು ಶಿಲ್ಪವಾಗಿ ರೂಪು ತಳೆಯುತ್ತದೆ. ಬೇರುಗಳು ಹಕ್ಕಿ, ಸರೀಸೃಪ, ಕೋತಿ, ಮನುಷ್ಯ ಮುಂತಾದ ಆಕಾರ ಪಡೆಯುತ್ತವೆ. ಇಂತಹ ಅಪರೂಪದ ಪ್ರತಿಭೆ ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗರಿಮೆ ಪಡೆದುಕೊಂಡಿದ್ದಾರೆ.

ಕುಮಟಾ ತಾಲ್ಲೂಕಿನ ಮೂರೂರು ಗ್ರಾಮದ ಸಿದ್ದರಮಠದ ನಿವಾಸಿ ಶಿವಮೂರ್ತಿ ಭಟ್ ಈ ಸಾಧನೆ ಮಾಡಿದವರು. ತೆಂಗಿನ ಚಿಪ್ಪು, ಕಪ್ಪೆಚಿಪ್ಪು, ಮರದ ಬೇರು, ಕಲ್ಲುಗಳಿಂದ ಅತಿ ಹೆಚ್ಚು ಕಲಾಕೃತಿಗಳನ್ನು ರಚಿಸಿದ ಕೀರ್ತಿ ಹೆಗ್ಗಳಿಕೆ ಅವರದ್ದಾಗಿದೆ.

ಬೇರು, ಚಿಪ್ಪಿನಲ್ಲಿ ಹಕ್ಕಿ ಕಲಾಕೃತಿ

ಬಾಲ್ಯದಿಂದಲೂ ಅಡಿಕೆ ತೋಟ ಹಾಗೂ ಪಕ್ಕದ ಕಾಡಿನಲ್ಲಿರುವ ವಿವಿಧ ಆಕೃತಿಗಳಲ್ಲಿರುವ ಮರದ ಬೇರುಗಳನ್ನು ಸಂಗ್ರಹಿಸುತ್ತಿದ್ದರು. ಅವುಗಳನ್ನು ತಮ್ಮ ಪರಿಕಲ್ಪನೆಯಲ್ಲಿ ಬಗ್ಗಿಸಿ, ಕೆತ್ತನೆ ಮಾಡಿ ಅದಕ್ಕೊಂದು ರೂಪು ಕೊಡುವ ಹವ್ಯಾಸ ಹೊಂದಿದ್ದರು. ಬರಬರುತ್ತ ಇವರ ಆಸಕ್ತಿಯು ಕಲ್ಲು ಹಾಗೂ ತೆಂಗಿನ ಗರಟೆಗಳಲ್ಲಿ ಕೂಡ ಶಿಲ್ಪ ಮತ್ತು ಕಲಾಕೃತಿಗಳನ್ನು ರಚಿಸುವತ್ತ ಹೊರಳಿತು.

ADVERTISEMENT

ಈಗ ಇವರು ಒಂದಿಂಚು ಉದ್ದ ಮತ್ತು ಅಗಲದಿಂದ, ಹತ್ತಾರು ಅಡಿಗಳವರೆಗಿನ ಕಲಾಕೃತಿಗಳನ್ನು ರಚಿಸುತ್ತಾರೆ. ಇಲ್ಲಿಯವರೆಗೆ 400ಕ್ಕೂ ಹೆಚ್ಚು ಸುಂದರ ಕಲಾಕೃತಿಗಳು, ದೇವರ ವಿಗ್ರಹಗಳು, ಪ್ರಾಣಿ, ಪಕ್ಷಿ, ಹೂವಿನ ಕುಂಡ, ಮನೆ ಕೆಲಸದ ಸಾಮಗ್ರಿ, ಗೋಡೆಗೆ ತೂಗುಹಾಕುವ ಆಕರ್ಷಕ ಚೌಕಟ್ಟುಗಳನ್ನು ನಿರ್ಮಿಸಿದ್ದಾರೆ. ತೆಂಗಿನ ಕಾಯಿ ಚಿಪ್ಪು, ಮರಗಳ ಬೇರು, ಸಮುದ್ರ ಚಿಪ್ಪು ಮತ್ತು ಕಲ್ಲುಗಳಲ್ಲಿ ರಚಿಸಿರುವ ಕಲಾಕೃತಿಗಳು ಮನೆಯ ತುಂಬ ಆಕರ್ಷಿಸುತ್ತವೆ.

ಇವರ ಕೌಶಲವನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗುರುತಿಸಿದ್ದು, 2021ರ ನ.6ರಂದು ದೃಢಪಡಿಸಿದೆ. ಅದರ ಪ್ರಮಾಣಪತ್ರ ಮತ್ತು ಪದಕವನ್ನು ಈಚೆಗೆ ಸ್ವೀಕರಿಸಿದ್ದಾರೆ. ತಮ್ಮ ಕಲಾಕೃತಿಗಳನ್ನು ಬೆಂಗಳೂರು, ಗೋವಾದಲ್ಲಿ ಪ್ರದರ್ಶನ ಮಾಡಿದ್ದಾರೆ. ಗ್ರಾಮೀಣ ಯುವಕನ ಸಾಧನೆಯನ್ನು ಶ್ಲಾಘಿಸಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸನ್ಮಾನಿಸಿದ್ದಾರೆ. ಶಿವಮೂರ್ತಿ ಪ್ರಸ್ತುತ ಮೂರೂರು ಪ್ರಗತಿ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ತಯಾರಿಕೆಯನ್ನು ಕಲಿಸುತ್ತಾರೆ.

‘ತಾಳ್ಮೆ, ಸಮಯ ಅಗತ್ಯ’:‘ತಂದೆ ಸೂರ್ಯನಾರಾಯಣ ಗಣೇಶ ಭಟ್ ವಿವಿಧ ಕಲಾಕೃತಿಗಳನ್ನು ಕೆತ್ತನೆ ಮಾಡುತ್ತಿದ್ದರು. ಅವರಿಂದ

ಬೇರು, ಕಾಂಡದಿಂದ ಕೋತಿ ಕಲಾಕೃತಿ

ಪ್ರೇರಣೆ ಪಡೆದು ನಾನೂ ಮೂರ್ತಿ ಕೆತ್ತನೆ ಆರಂಭಿಸಿದೆ. ಹೊಸತನ ಬೇಕು ಎಂದು ಮರದ ಬೇರು, ತೆಂಗಿನ ಚಿಪ್ಪಿನಿಂದ ಕೆತ್ತನೆ ಮಾಡಿದೆ. ಒಂದೊಂದು ಕಲಾಕೃತಿಗೂ ನಾಲ್ಕು ದಿನಗಳಿಂದ ಒಂದು ವಾರ ಬೇಕಾಗುತ್ತದೆ’ ಎಂದು ಶಿವಮೂರ್ತಿ ಭಟ್ ಹೇಳುತ್ತಾರೆ.

‘ತೆಂಗಿನ ಚಿಪ್ಪು ಗಟ್ಟಿಯಾಗಿರುವ ಕಾರಣ ಅದು ತುಂಡಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಬಹಳ ತಾಳ್ಮೆ ಬೇಕಾಗುತ್ತದೆ. ನುಸಿ ಪೀಡೆಯಿಂದ ಸೊರಗಿದ ತೆಂಗಿನ ಕಾಯಿಯ ಗೆರಟೆ ಬೇರೆ ಬೇರೆ ಆಕಾರದಲ್ಲಿರುತ್ತದೆ. ಅದು ಕಲಾಕೃತಿಗೆ ಚೆನ್ನಾಗಿರುತ್ತದೆ. ಸೀಯಾಳದ ಬಿಳಿ ಗೆರಟೆಯಲ್ಲೂ ಉತ್ತಮ ಕಲಾಕೃತಿ ಮೂಡುತ್ತದೆ’ ಎಂದು ವಿವರಿಸುತ್ತಾರೆ.

ಬೇರಿನಿಂದ ಬಾಲಿಕೆಯ ವಿಗ್ರಹ
ಶಿಲ್ಪಕಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.