ADVERTISEMENT

ಅನಾಮಿಕನೂ, ಚರಿತ್ರೆಯ ಚಲನೆಗಳೂ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST
ಅನಾಮಿಕನೂ, ಚರಿತ್ರೆಯ ಚಲನೆಗಳೂ
ಅನಾಮಿಕನೂ, ಚರಿತ್ರೆಯ ಚಲನೆಗಳೂ   

ಬಾಳಿನ ಎಳೆಹರೆಯದಲ್ಲಿ ತೀರ ಸಹಜವಾಗಿ, ಅಪ್ರಜ್ಞಾಪೂರ್ವಕವಾಗಿ ಒದಗಿ ಬರುವ ಪ್ರಭಾವಗಳಲ್ಲಿ ನಮ್ಮ ಹಿರಿಯರ ಪಾಲು ದೊಡ್ಡದು. ಅದನ್ನು ಅರಿಯುವುದು, ಬಿಡಿಸಿಕೊಳ್ಳುವುದು ಅಷ್ಟು ಸುಲಭ ಕೂಡ ಅಲ್ಲ. ಎಷ್ಟೋ ಸಲ ಅವು ಸ್ವತಃ ನಮ್ಮ ವ್ಯಕ್ತಿತ್ವದ ಭಾಗವೇ ಆಗಿಬಿಟ್ಟಿರುತ್ತವೆ. ಪತ್ರಕರ್ತರಾದ ಲಕ್ಷ್ಮಣ ಕೊಡಸೆಯವರು ತಮ್ಮ ಮಾಗಿದ ವಯಸ್ಸಿನಲ್ಲಿ , ಸುಮಾರು ಮೂರು ದಶಕಗಳ ಬರವಣಿಗೆಯ ಹಿನ್ನೆಲೆಯೊಂದಿಗೆ ಅಂಥದ್ದೊಂದು ಆಳವಾದ ವಿವೇಚನೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈ ಕಿರು ಕೃತಿಯ ಕೇಂದ್ರವ್ಯಕ್ತಿ ಅವರ ತಂದೆ.

ಕುತೂಹಲದ ಸಂಗತಿ ಎಂದರೆ ಇಲ್ಲೆಲ್ಲೂ ಅವರ ತಂದೆಯವರ ಹೆಸರಿನ ನೇರ ಪ್ರಸ್ತಾಪವಿಲ್ಲ. (ಒಮ್ಮೆ ಮಾತ್ರ ಆಂಶಿಕ ವಿವರಗಳಲ್ಲಿ ಆಕಸ್ಮಿಕವೆಂಬಂತೆ ಕಾಣಿಸಿಕೊಂಡಿದೆ!). `ಒಬ್ಬ ಅನಾಮಿಕ ಹಳ್ಳಿಗನ ಕಥೆ~ ಎಂದೇ ಕೃತಿಯ ಉಪಶೀರ್ಷಿಕೆಯೂ ಹೇಳುತ್ತದೆ. ಇಪ್ಪತ್ತನೆಯ ಶತಮಾನದ ಅರವತ್ತು ಎಪ್ಪತ್ತರ ದಶಕಗಳಲ್ಲಿ ಮಲೆನಾಡಿನ ಹಿಂದುಳಿದ ಜನಾಂಗಗಳು ಅಷ್ಟಷ್ಟಾಗಿ ಹೊಸಕಾಲಕ್ಕೆ ಮೈಯೊಡ್ಡಿಕೊಳ್ಳುತ್ತಿದ್ದ ದಿನಗಳವು.

ಅಂಥದೊಂದು ಕಾಲಘಟ್ಟದ ಎಚ್ಚೆತ್ತ ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾಣುವ ಮೇಲಿನಮನೆ ಕೊಡಸೆ ಯಜಮಾನರು ಆಧುನಿಕ ಶಿಕ್ಷಣ ಮತ್ತು ಅದು ಸೃಷ್ಟಿಸಿದ ಅವಕಾಶಗಳ ಮೂಲಕ ಮೂಲತಃ ಕೃಷಿ ಪ್ರಧಾನವಾದ ತನ್ನ `ಪರಪಂಚ~ಕ್ಕೆ ಹೊಸ ವಿಸ್ತರಣೆ ಪಡೆದುಕೊಳ್ಳುವ ಕುತೂಹಲಕಾರಿ ಅಧ್ಯಾಯಗಳಿವು. ಸಮಾಜವು ಶಿಕ್ಷಣದ ಮೂಲಕ ವಿಕಾಸ ಪಡೆಯಬೇಕೆಂಬ ಕಳಕಳಿ ಅವರದು. ಆಧುನಿಕತೆ ಮತ್ತು ಪರಂಪರೆಯ ಜೀವಿತ ಕ್ರಮಗಳನ್ನು ಒಗ್ಗೂಡಿಸುವ ಹದಕ್ಕಾಗಿ ಅವರು ತುಡಿಯುವುದು ಆದರ ಹುಟ್ಟಿಸುತ್ತದೆ. ಅವರೊಬ್ಬ ಅನಾಮಿಕ ಹಳ್ಳಿಗರಿರಬಹುದು, ಆದರೆ ಇಂಥ ಅನೇಕ ಪ್ರಗತಿಶೀಲ ಸಾಮಾನ್ಯರ ಸಹಜ ತಿಳಿವಳಿಕೆಯಿಂದಲೇ ಚರಿತ್ರೆಯಲ್ಲಿ ಚಲನೆಗಳು ಸಾಧ್ಯವಾಗಿವೆ.

ರಾತ್ರಿ ಅಡಿಕೆ ಸುಲಿತದ ಹೊತ್ತಿಗೆ ವಡ್ಡಾರಾಧನೆಯ `ಸುಕುಮಾರಸ್ವಾಮಿಯ ಕಥೆ~ ಓದುವ ಸ್ವಾರಸ್ಯಕರ ಸನ್ನಿವೇಶದೊಂದಿಗೆ ಸ್ಮೃತಿಯ ಪುಟಗಳು ತೆರೆದುಕೊಳ್ಳುತ್ತವೆ. ಗದ್ದೆ, ತೋಟಗಳ ಸಾಗುವಳಿ ಮಾಡುತ್ತ ನಾಯ್ಕರು ಮಕ್ಕಳನ್ನು ಓದಿಸಿದ್ದು, ಬಡ ಕೃಷಿಕ ಕುಟುಂಬದ ದೈನಿಕದ ಕಷ್ಟಸುಖಗಳು, ಲಯಬದ್ಧವಾಗಿ ಕರಕರಕರ ಎಂದು ಅಡಿಕೆ ಸುಲಿವ ಅವರ ವಿಶೇಷ ಕೌಶಲ್ಯ, ಅಡಿಕೆ ಬೇಯಿಸುವ ವಿವರ, ಇತ್ತ ಅಡಿಕೆ ಕೆಲಸ ಮಾಡುತ್ತ ಮಕ್ಕಳಿಂದ ರಾಮಾಯಣ, ಮಹಾಭಾರತ, ಕಾನೂರು ಓದಿಸಿ, ತಪ್ಪಿದಾಗ ಅಡಿಕೆ ಸಿಪ್ಪೆಯಿಂದಲೇ ಹೊಡೆದು ತಿದ್ದುತ್ತಿದ್ದ ಬಗೆ, ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬನಿಗೂ ಅವಶ್ಯವೆಂಬ ಅವರ ಕಳಕಳಿ, ರಿಪ್ಪನ್‌ಪೇಟೆಯಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಿ ಹಳ್ಳಿಮಕ್ಕಳಿಗೆ ಅನುಕೂಲ ಮಾಡಿಕೊಡಲು ಅವರು ವಹಿಸಿದ ಶ್ರಮ, ಮಕ್ಕಳ ಓದಿಗಾಗಿ ಕಳ್ಳು ತಯಾರಿಸಿ ಹಣ ಹೊಂದಿಸಿದ್ದು, ಭ್ರಷ್ಟ ವ್ಯವಸ್ಥೆಯಿಂದ ಬೇಸರಗೊಂಡು ಎಪ್ಪತ್ತೈದನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದು, ಭಂಗಿ ಸೇವನೆಯ ಆನಂದ, ಆತಿಥ್ಯ, ಎಂದೂ ಮಾತಿಗೆ ತಪ್ಪದ ಎಚ್ಚರ, ಸಾಮಾಜಿಕ ಜವಾಬ್ದಾರಿಗಳ ಸಮರ್ಥ ನಿರ್ವಹಣೆಯ ಮಾದರಿಗಳು... ಹೀಗೆ ಹತ್ತಾರು ರೀತಿಗಳಲ್ಲಿ ತಂದೆಯವರ ವ್ಯಕ್ತಿತ್ವವನ್ನು ಕೃತಿ ಅನಾವರಣಗೊಳಿಸುತ್ತಾ ಹೋಗುತ್ತದೆ. ಅವರು ಮಾಡಿಟ್ಟುಹೋದ ಉಯಿಲು ಸುಶಿಕ್ಷಿತ ಜನರ ಲೋಭದಿಂದಾಗಿ ಪಡೆಯುವ ತಿರುವುಗಳು ಲೇಖಕರಲ್ಲಿ ಅಸಹಾಯಕ ದಿಗ್ಭ್ರಮೆ ಹುಟ್ಟಿಸಿವೆ.

ಶಿಕ್ಷಣದ ಕುರಿತು ಯಜಮಾನರಿಗೆ ಅಪಾರ ನಂಬಿಕೆ ಇತ್ತು. ಆದರೆ ಮನುಷ್ಯನ ಸಣ್ಣತನ, ಸ್ವಾರ್ಥಗಳನ್ನು ಬದಲಾಯಿಸುವಷ್ಟು ನಮ್ಮ ಆಧುನಿಕ ಶಿಕ್ಷಣ ಸಮರ್ಥವಾಗಿಲ್ಲ ಎಂದು ತಿಳಿಯಬೇಕಾಗುತ್ತದೆ. ಈ ಶಿಕ್ಷಣದ ಸೌಲಭ್ಯದಾಚೆಗಿದ್ದ ಹಿರಿಯರ ಜೀವನಕ್ಕೆ ಭದ್ರವಾದ ಮೌಲ್ಯಗಳ ಆಸರೆಯಿತ್ತು. ಅಂಥದೊಂದು ಮೌಲ್ಯವ್ಯವಸ್ಥೆಯನ್ನು ಹೊಸಕಾಲದ ಶಿಕ್ಷಣ ಹೆಚ್ಚು ಕ್ರಮಬದ್ಧವಾಗಿ ಕೊಡಬಹುದೆಂಬ ನಂಬಿಕೆಯೂ ಅವರಿಗಿತ್ತು. ಆದರೆ ಹೊಸಕಾಲ ಹೊಸ ಪ್ರಶ್ನೆಗಳನ್ನು ಹೊತ್ತು ತಂದಿದೆ...

ಅಪರಿಮಿತ ಜೀವನೋತ್ಸಾಹ ಮತ್ತು ಕಷ್ಟವನ್ನು ದೃಢವಾಗಿ ಸಹಿಸುವ ಶಕ್ತಿಯನ್ನು ಹೊಂದಿದ್ದ ಕೊಡಸೆ ಯಜಮಾನರಂಥವರ ಸಾತ್ವಿಕ ಛಲದ ಮೂಲಕವೇ ಉತ್ತರ ಹುಡುಕಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.