ADVERTISEMENT

ಅಮೆರಿಕದ ಕನ್ನಡಿಗರ ಜೊತೆ ಹತ್ತುದಿನ

ಪದ್ಮರಾಜ ದಂಡಾವತಿ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ನಗರ ಎಂದರೆ ಒಂದು ಕಾಡು. ಮರಳುಗಾಡು. ನಿಮಗೆ ಯಾರೂ ಗೊತ್ತಿಲ್ಲದ ವಿದೇಶದ ನಗರದಲ್ಲಿ ಬಂದು ಇಳಿದಾಗ ಪರಿಚಿತ ಮುಖವೊಂದು ಎದುರುಗೊಳ್ಳದೇ ಇದ್ದರೆ ಆಗುವ ಕಕ್ಕಾವಿಕ್ಕಿ ಅಷ್ಟಿಷ್ಟಲ್ಲ. ಕಾಡಿನಲ್ಲಿ, ಮರಳುಗಾಡಿನಲ್ಲಿ ಎತ್ತ ಹೋದರೂ ಒಂದೇ.

ದಾರಿ ಕಾಣುವುದೇ ಇಲ್ಲ. ಗುರುತು ಪರಿಚಯವಿಲ್ಲದ ನಗರ ಕೂಡ ಒಂದು ಕಾಡು. ನಾನು ಮತ್ತು ಚಂದ್ರಶೇಖರ ಕಂಬಾರರು ಅಟ್ಲಾಂಟಾದಲ್ಲಿ ಬೆಳಿಗ್ಗೆ ಮೂರು ಗಂಟೆಗೆ ಎದ್ದು ಆಗಷ್ಟೇ ಕೊಟ್ಟ ವಿಮಾನದ ಟಿಕೆಟ್ ಹಿಡಿದುಕೊಂಡು ನೇವಾರ್ಕ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ನಮ್ಮನ್ನು ಎದುರುಗೊಳ್ಳುವವರು ಯಾರೂ ಇರಲಿಲ್ಲ.

ಒಬ್ಬರು ಬರುತ್ತಾರೆ ಎಂದು ಗೊತ್ತಿತ್ತಾದರೂ ಅವರ ಸಂಪರ್ಕ ಸಂಖ್ಯೆ ನಮ್ಮ ಬಳಿ ಇರಲಿಲ್ಲ. ನೇವಾರ್ಕ್ ವಿಮಾನ ನಿಲ್ದಾಣ ಮುಟ್ಟಿದಾಗ ಬೆಳಿಗ್ಗೆ ಹತ್ತೂವರೆ. ಬೇರೆಯವರನ್ನು ಎದುರುಗೊಳ್ಳಲು ಅವರ ಹೆಸರಿನ ಫಲಕ ಹಿಡಿದುಕೊಂಡು ಏಕೆ ನಿಲ್ಲುತ್ತಾರೆ ಎಂದು ನನಗೆ ಮೊದಲ ಬಾರಿಗೆ ಅರ್ಥವಾಯಿತು.

ADVERTISEMENT

ನಾನು ಕಂಬಾರರು ಕೆಲ ಹೊತ್ತು ಅತ್ತ ಇತ್ತ ಸುಳಿದಾಡಿ ಏನು ಮಾಡಬೇಕು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾಗ ಬಿರುಗಾಳಿಯಂತೆ ಒಬ್ಬ ಮಹಿಳೆ ವಿಮಾನ ನಿಲ್ದಾಣ ಪ್ರವೇಶಿಸಿ ಮತ್ತೆ ನಾವು ಕಾಣದ್ದರಿಂದಲೋ ಏನೋ ಹೊರಗೆ ಹೊರಟಿದ್ದರು. ಅಟ್ಲಾಂಟಾದಲ್ಲಿ ನಡೆದ `ಅಕ್ಕ~ ಸಮ್ಮೇಳನದಲ್ಲಿ ನಾನು ಅವರ ಜತೆ ಒಂದು ಕ್ಷಣ ಮಾತನಾಡಿದ್ದೆ.

ಅವರು, ಎರಡು ವರ್ಷಗಳ ಹಿಂದೆ ನಡೆದ ನ್ಯೂಜೆರ್ಸಿ `ಅಕ್ಕ~ ಸಮ್ಮೇಳನದ ಆತಿಥೇಯ ಅಧ್ಯಕ್ಷೆ ಉಷಾ ಪ್ರಸನ್ನಕುಮಾರ್. ಅವರನ್ನು ಐ.ಎಂ.ವಿಠಲಮೂರ್ತಿಯವರು `ಇವರು ಅಮೆರಿಕೆಯ ಕಿತ್ತೂರು ರಾಣಿ ಚೆನ್ನಮ್ಮ~ ಎಂದು  ಪರಿಚಯ ಮಾಡಿಕೊಟ್ಟಿದ್ದರು. `ನಾನು ನನ್ನ ಗಂಡನನ್ನು ನಿಯಂತ್ರಣದಲ್ಲಿ ಇಟ್ಟುಕೊಂಡುದಕ್ಕೆ ಮೂರ್ತಿ ಹಾಗೆ ಹೇಳುತ್ತಿದ್ದಾರೆ~ ಎಂದು ಉಷಾ ನಗೆಯಾಡಿದ್ದರು.

`ಯಾವ ಹೆಂಡತಿ ಮಾಡದ ಕೆಲಸ ಅದು?~ ಎಂದು ನಾನೂ ನಗೆಯಾಡಿದ್ದೆ. ಅವರ ಹೆಸರು ಹಿಡಿದು ಕೂಗುತ್ತ ಹಿಂದೆಯೇ ಹೋಗಿ ನಿಲ್ಲಿಸಿದೆ. ಅವರು ಒಂದು ಕಡೆ ನಿಂತು ಹುಡುಕುತ್ತಿದ್ದರು. ನಾವು ಇನ್ನೊಂದು ಕಡೆ ನಿಂತಿದ್ದೆವು.

`ಅಮೆರಿಕೆಯಲ್ಲಿ ಯಾರಾದರೂ ಹೀಗೆ ಕರೆದುಕೊಂಡು ಹೋಗಲು ಬರುತ್ತಾರೆ ಎಂದು ಹೇಳಿದ್ದರೆ ಖಂಡಿತ ಬಂದೇ ಬರುತ್ತಾರೆ. ಹೆದರಬೇಕಿಲ್ಲ~ ಎಂದು ಹೇಳುತ್ತ ಕಾರು ಓಡಿಸುತ್ತಿದ್ದ ಉಷಾ ಬೆಂಗಳೂರಿನ ಜೆ.ಪಿ.ನಗರದ ಮಹಿಳೆ.

ಮನೆಯಲ್ಲಿ ಅವರಿಗೆ ಎಷ್ಟು ಕೆಲಸವಿತ್ತೋ? ಏನೋ? ತಾವೇ ನಲವತ್ತು ಐವತ್ತು ಕಿಲೋ ಮೀಟರ್ ಕಾರು ಓಡಿಸಿಕೊಂಡು ಬಂದಿದ್ದರು. ಮನೆ ತಲುಪುತ್ತಿದ್ದಂತೆಯೇ, `ಇಡ್ಲಿ ಮಾಡಿದ್ದೇನೆ. ಸ್ನಾನ ಮಾಡಿ ಬನ್ನಿ~ ಎಂದರು.

ತಿಂಡಿ ತಿನ್ನುವಾಗ `ಮಧ್ಯಾಹ್ನ ಊಟಕ್ಕೆ ಏನು ಮಾಡಲಿ~ ಎಂದರು. `ಬಿಸಿ ಬಿಸಿ ಅನ್ನ ಸಾರು ಮಾಡಿ ಸಾಕು~ ಎಂದೆ. ಅವರ ಗಂಡ ವಿ.ಪ್ರಸನ್ನಕುಮಾರ್ ಕಚೇರಿಯ ಮೀಟಿಂಗ್ ಅನ್ನು ಅರ್ಧಕ್ಕೇ ಬಿಟ್ಟು ಇಂಡಿಯನ್ ಸ್ಟೋರ್‌ಗೆ ಹೋಗಿ ಒಂದಿಷ್ಟು ಸೋನಾ ಮಸೂರಿ ಅಕ್ಕಿ, ಹೀರೇಕಾಯಿ, ಕೋಸು ಎಂದೆಲ್ಲ ತಂದರು.

ನಮಗೆ ಸರಿಯಾಗಿ ಮಾಹಿತಿ ಕೊಡದೆ ಹೋದುದಕ್ಕೆ `ಶಾಪ~ ಎನ್ನುವಂತೆ ಕಪ್ಪಣ್ಣ ಹಾಗೂ ಅವರ ಜತೆಗೆ ಟಿ.ಎನ್.ಸೀತಾರಾಮ್ ಮತ್ತು ಡುಂಡಿರಾಜ್ ಅವರಿದ್ದ ವಿಮಾನ ದಾರಿ ಮಧ್ಯದ ಯಾವುದೋ ನಿಲ್ದಾಣದಲ್ಲಿ ಎರಡು ಗಂಟೆ ನಿಂತು ತಡವಾಗಿ ಹೊರಟಿತ್ತು. ಒಂದು ಗಂಟೆಗೆ ಬಂದು ನಮ್ಮ ಜತೆ ಊಟಕ್ಕೆ ಸೇರಬೇಕಾದವರು ಐದು ಗಂಟೆಗೆ ಬಂದರು.

ಅವರ ಜತೆಗೇ ಊಟ ಮಾಡಬೇಕು ಎಂದು ಉಷಾ ಅವರ ಜತೆಗೆ ಅದೂ ಇದೂ ಮಾತನಾಡುತ್ತ ಕುಳಿತಿದ್ದೆ. ಕಂಬಾರರು ಗಡದ್ದು ನಿದ್ದೆ ಮಾಡಿದರು. `ನಿಮಗೆ ಏನಾದರೂ ಸಹಾಯ ಮಾಡಬೇಕೇ~ ಎಂದು ಉಷಾ ಅವರಿಗೆ ಕೇಳಿದೆ. `ಇವತ್ತೇನೂ ಬೇಡ. ನಾಳೆ ಒಂದಿಷ್ಟು ಪಾತ್ರೆ ತೊಳೆಯಬೇಕು. ಬೇಕಾದರೆ ಇನ್ನೊಂದಿಷ್ಟು ಬಟ್ಟೆಗಳು ಇವೆ.

ಅವನ್ನೂ ತೊಳೆಯುವಿರಂತೆ~ ಎಂದರು! `ಒಳ್ಳೆ ಕಥೆಯಾಯಿತಲ್ಲ~ ಎಂದುಕೊಂಡೆ. ಅಮೆರಿಕದ ಕನ್ನಡಿಗರು ಕರ್ನಾಟಕದಿಂದ ಹೋದ ಕನ್ನಡಿಗರನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಾರೆ. ಉಷಾ, `ನಾನು ನಿಮ್ಮ ತಂಗಿ ಇದ್ದಂತೆ.

ಏನೂ ಸಂಕೋಚ ಮಾಡಿಕೊಳ್ಳಬೇಡಿ. ಏನು ಬೇಕಾದರೂ ಕೇಳಿ. ಚಹಾ ಕುಡಿಯುತ್ತೀರಾ? ಕಾಫಿ ಇಷ್ಟವೇ~ ಎಂದು ಕೇಳಿ ಬೇಕು ಅಂದಷ್ಟು ಸಾರಿ ಚಹಾ ಮಾಡಿಕೊಟ್ಟರು. ಅವರಿಗೆ ಬೇಸರವೇ ಇಲ್ಲ ಅನಿಸಿತು. ತಮ್ಮ ಗಂಡ ಪ್ರಸನ್ನ ಅವರನ್ನು ತಾವು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇನೆ ಎಂದು ತಮಾಷೆ ಮಾಡುತ್ತಲೇ ಇದ್ದರು.

ಹಿಂದೂಜಾ ಕಂಪೆನಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುವ ಪ್ರಸನ್ನ ಅಕ್ಕಿ ತಂದು ಇಡುವಾಗ ಗಡಿಬಿಡಿಯಲ್ಲಿ `ವಿಷ್~ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಿ ಕಪ್ಪಣ್ಣ ಕಂಪೆನಿಯನ್ನು ಮನೆಗೆ ಕರೆದುಕೊಂಡು ಬಂದರು. ನಂತರ ಅವರ ಸಂಭ್ರಮ ಶುರುವಾಯಿತು.

ಕೈಯಲ್ಲಿ ಒಂದು ಮೂವಿ ಕ್ಯಾಮೆರಾ ಹಿಡಿದುಕೊಂಡು, `ನಮ್ಮ ಮನೆಗೆ ದಿಗ್ಗಜರು ಬಂದಿದ್ದಾರೆ. ಇಲ್ಲಿ ಕಂಬಾರರು ಕುಳಿತಿದ್ದಾರೆ. ಅವರು ಜ್ಞಾನಪೀಠ ಪ್ರಶಸ್ತಿ ಪಡೆದವರು~ ಎಂದೆಲ್ಲ ರನ್ನಿಂಗ್ ಕಾಮೆಂಟರಿ ಕೊಡುತ್ತ ಧ್ವನಿಮುದ್ರೆ ಆಗುವ ಷೂಟಿಂಗ್ ಶುರು ಮಾಡಿದರು. ಸೀತಾರಾಮ್, ಡುಂಡಿರಾಜ್ ಅವರನ್ನು ಬಳಸಿಕೊಂಡು ನನ್ನ ಬಳಿ ಬಂದು ಕಾಮೆಂಟರಿ ಕೊಡಲು ಶುರು ಮಾಡಿದಾಗ, `ನಾನು ದಿಗ್ಗಜ ಅಲ್ಲ.

ಉಳಿದವರು ಇರಬಹುದೇನೋ~ ಎಂದು ನಕ್ಕೆ. ಅದಕ್ಕೆಲ್ಲ ಅವರು ವಿಚಲಿತರಾಗುವಂತೆ ಕಾಣಲಿಲ್ಲ. ಮರುದಿನ ನಮ್ಮನ್ನು ಷಾಪಿಂಗ್‌ಗೆ ಕರೆದುಕೊಂಡು ಹೋಗಲು ರಾಜು ಎನ್ನುವವರು ಬಂದರು. ಅವರು ಕಪ್ಪಣ್ಣ ಮತ್ತು ಕಂಬಾರರನ್ನು ಮುದ್ದೆ ತಿನ್ನಿಸಲು ಕರೆದುಕೊಂಡು ಹೋದರು.

ಮುದ್ದೆ ಜತೆ ಮೂಳೆ ಕೊಟ್ಟರೇ, ಗೊತ್ತಾಗಲಿಲ್ಲ! ಕಪ್ಪಣ್ಣ ಬರೀ ಮುದ್ದೆ ತಿನ್ನಲು ಹೋಗಿರಲಾರರು. ಉಷಾ ಮನೆಯಲ್ಲಿ ಎರಡನೆಯದಕ್ಕೆ ಅವಕಾಶ ಇರಲಿಲ್ಲ! ಮರುದಿನ ಸಂಜೆ ನಮ್ಮೆಲ್ಲರ ಜತೆ ಪ್ರಸನ್ನ ಅವರ ಮನೆಯ ಸೆಲ್ಲಾರ್‌ನಲ್ಲಿ ಸಂವಾದ ಕಾರ್ಯಕ್ರಮವಿತ್ತು.

ಬೃಂದಾವನ ಕನ್ನಡ ಕೂಟದ ಹಲವು ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ವಿಧ ವಿಧದ ಅಡುಗೆ ಮಾಡಿಕೊಂಡು ಬಂದಿದ್ದರು. ಒಬ್ಬರು ಜಿಲೇಬಿ ಪ್ಯಾಕೆಟ್ ತಂದಿದ್ದರು. ಇನ್ನೊಬ್ಬರು ಅನ್ನ, ಮತ್ತೊಬ್ಬರು ಚಪಾತಿ. ಎಲ್ಲದರ ಜತೆಗೆ ಮನೆಯಡುಗೆಯ ಪ್ರೀತಿ. ಕನ್ನಡದ ಸಾಹಿತಿಗಳು, ಕಲಾವಿದರು, ಗಾಯಕರು ಬಂದರೆ ಅವರ ಒಂದು ಕಾರ್ಯಕ್ರಮ ಅಧ್ಯಕ್ಷರ ಮನೆಯಲ್ಲಿ ಇದ್ದೇ ಇರುತ್ತದೆ.

ಪ್ರಸನ್ನ ಅವರ ಮೂರು ಅಂತಸ್ತಿನ ಮನೆಯಲ್ಲಿ ಅವರ ಮಲಗುವ ಕೋಣೆ ಬಿಟ್ಟರೆ ಎಲ್ಲವೂ ನಮ್ಮದೇ ಎನ್ನುವಂತೆ ಇತ್ತು! ಬಾತ್‌ಟಬ್‌ನಲ್ಲಿ ಸ್ನಾನ ಮಾಡಲು ಬಾರದ ನಮ್ಮಲ್ಲಿನ ಒಬ್ಬರು ನೀರನ್ನೆಲ್ಲ ಹೊರಗೆ ಚೆಲ್ಲಿದ್ದರು. ನಿವಾಂತ ಪರಿಸರದಲ್ಲಿನ ಅವರ ಮನೆಯ ಮುಂದೆ, ಹಿತ್ತಲಲ್ಲಿ, ಸೆಲ್ಲಾರ್‌ನಲ್ಲಿ ಕುಳಿತು, ಅಡ್ಡಾಡಿ ಹೊತ್ತು ಕಳೆಯುವುದು ಕಷ್ಟವೇನೂ ಆಗಲಿಲ್ಲ.

ಒಂದೂ ನರಪಿಳ್ಳೆಯಿಲ್ಲದ ರಸ್ತೆಯಲ್ಲಿ ನಾವೆಲ್ಲಿಯಾದರೂ ತಪ್ಪಿಸಿಕೊಂಡು ಬಿಟ್ಟೇವು ಎಂದು ಸಂಜೆ ನಮ್ಮ ಜತೆಗೇ ಉಷಾ ವಾಯು ವಿಹಾರಕ್ಕೂ ಬಂದರು. ಅಮೆರಿಕಾದಲ್ಲಿ ಕನ್ನಡಿಗರು ಸುಖವಾಗಿ ಇದ್ದಾರೆ ಎನಿಸಿತು. ಸದ್ದು ಗದ್ದಲವಿಲ್ಲದ, ಭಯ ಭೀತಿಯಿಲ್ಲದ ಭವ್ಯ ಮನೆಗಳು. 24 ಗಂಟೆ ಬಿಸಿನೀರು. ಕೈಕೊಡದ ವಿದ್ಯುತ್. ಕಾರಿನಲ್ಲಿನ ಬಟನ್ ಒತ್ತಿದರೆ ತೆರೆದುಕೊಳ್ಳುವ ದೂರದ ಷೆಡ್ಡಿನ ಬಾಗಿಲು.

ತಗ್ಗು ದಿನ್ನೆಯಿಲ್ಲದ ರಸ್ತೆಗಳು, ಅಷ್ಟೇನೂ ಅನಿಸದ ಸಂಚಾರ ದಟ್ಟಣೆ, ದಟ್ಟಣೆಯಿದ್ದರೂ ಹಾರ್ನ್ ಹಾಕದ ನಾಗರಿಕ ಪ್ರಜ್ಞೆ, ಕೈ ತುಂಬ ಸಂಬಳ. ಕೇವಲ ಐದು ವರ್ಷ ಕೆಲಸ ಮಾಡಿದವರೂ ಒಂದು ಮನೆ ಕೊಂಡು, ಮೇಲೊಂದು ಬೆಂಜ್ ಕಾರನ್ನೂ ಕೊಂಡುಕೊಂಡಿದ್ದಾರೆ. ಮನೆಗೆ ನೂರಿನ್ನೂರು ಡಾಲರ್ ಕಳಿಸಬೇಕು ಎಂದರೆ ಅದೇನು ಕಷ್ಟದ ಸಂಗತಿಯೂ ಅಲ್ಲ.

ಎರಡು ದಿನ ಬಿಟ್ಟು ಉಷಾ ಪ್ರಸನ್ನ ದಂಪತಿಯನ್ನು ಬೀಳ್ಕೊಳ್ಳುವಾಗ ಸೀತಾರಾಮ್ ಕಣ್ಣಲ್ಲಿ ನೀರು. ನನ್ನನ್ನು ಅಣ್ಣ ಎಂದ ಉಷಾ ಅವರಿಗೆ ಏನೋ ಕಾಣಿಕೆ ಕೊಟ್ಟೆ. ಅವರು ನನಗೆ ನಮಸ್ಕಾರ ಮಾಡಲು ಬಂದರು. `ನಮ್ಮ ಕಡೆ ತಂಗಿಗೂ ಅಣ್ಣನೇ ನಮಸ್ಕಾರ ಮಾಡುತ್ತಾನೆ. ನೀವು ನನಗೆ ನಮಸ್ಕಾರ ಮಾಡಬಾರದು~ ಎಂದೆ. ಅವರ ಮನೆಯಲ್ಲಿ ಇದ್ದ ಅವರ ಅತ್ತೆ ಅದಕ್ಕೆ ಒಪ್ಪಲಿಲ್ಲ. ನಾನೂ ಒಪ್ಪಲಿಲ್ಲ.

ಮೂರು ದಿನಗಳ ಅನುಬಂಧವನ್ನು ಹರಿದು ಹಾಕಿ ಬಂದೆವು. ನಡುವೆ ವೇಳೆ ಸಿಕ್ಕಾಗಲೆಲ್ಲ ಪ್ರಸನ್ನ ಅವರನ್ನು ಗೋಳು ಹೊಯ್ದುಕೊಂಡೆವು. ಅವರಿಬ್ಬರೂ ದಂಪತಿ ನಮ್ಮಂಥವರ ಮುಂದೆ ಸುಮ್ಮ ಸುಮ್ಮನೆ ಜಗಳ ಮಾಡುತ್ತ ಎಷ್ಟೊಂದು ಅನ್ಯೋನ್ಯವಾಗಿದ್ದಾರೆ ಎಂದುಕೊಂಡೆ.

`ನೀವು ಇರುವಾಗ ಮನೆಯಲ್ಲಿ ತುಂಬ ಗಲಾಟೆ ಇತ್ತು. ಇನ್ನು ಬಣ ಬಣ ಆಗುತ್ತದೆ~ ಎಂದರು ಉಷಾ ಮತ್ತು ಅವರ ಅತ್ತೆ. ಹೊರಟು ನಿಂತ ನಮಗೇ ಅಷ್ಟು ಬಣ ಬಣ ಆಗಿತ್ತು. ಇನ್ನು ಅವರಿಗೇನು ಹೇಳುವುದು?

ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಸತ್ಯಪ್ರಕಾಶ್ ಮತ್ತು ರಾಘವಪ್ರಸಾದ್ ಗುಂಡಾಚಾರ್ ಬಂದಿದ್ದರು. ರಾಘವಪ್ರಸಾದ್ ಮನೆ ಮುಂದೆ ನಮ್ಮ ಕಾರು ನಿಲ್ಲುವುದನ್ನು ಹೊರಗಿನಿಂದಲೇ ನೋಡಿದ ಅವರ ಪತ್ನಿ ಸುಷ್ಮಾ ಸಂಭ್ರಮ ಪಟ್ಟುದು, ಗಡಿಬಿಡಿ ಮಾಡಿಕೊಂಡುದು ಇನ್ನೂ ಕಣ್ಣ ಮುಂದೆ ಕಟ್ಟಿದಂತಿದೆ.

ರಾಘವಪ್ರಸಾದ್ ದಾವಣಗೆರೆ ಕಡೆಯವರು. ನಾವು ಮನೆಗೆ ಹೋಗುವುದಕ್ಕಿಂತ ಮುಂಚೆಯೇ ಅವರ ಮನೆಯೊಳಗಿನ ಮೆಣಸಿನ ಕಾಯಿ ಬಜ್ಜಿ, ಮಂಡಕ್ಕಿಯ ಸೂಸಲದ ಘಮ ಬಾಗಿಲಿಗೇ ಬಂತು. ಸುಷ್ಮಾ ಮತ್ತು ರಾಘವಪ್ರಸಾದ್ ಅವರಿಗೆ ನಮಗೆ ಏನು ಆತಿಥ್ಯ ಮಾಡಿದರೂ ಕಡಿಮೆ ಎನಿಸುತ್ತಿತ್ತು.

ರುಚಿ ಹತ್ತಿ ಮೆಣಸಿನಕಾಯಿ ಬಜ್ಜಿ ಹೆಚ್ಚಿಗೇ ತಿಂದು ನಮ್ಮಲ್ಲಿ ಕೆಲವರಿಗೆ ಹೊಟ್ಟೆ ಕೆಟ್ಟಿತು. ಸತ್ಯಪ್ರಕಾಶ್ ಮತ್ತು ರಾಘವಪ್ರಸಾದ್ ಬೇಸರವಿಲ್ಲದೇ ನಮ್ಮನ್ನು ನ್ಯೂಯಾರ್ಕ್ ಸುತ್ತಿಸಿದರು. ದಾರಿಯಲ್ಲಿ ಹಸಿವಾದೀತು ಎಂದು ಊಟ ಕಟ್ಟಿಕೊಂಡು ಬಂದರು. ಊಟ ಮಾಡಲು ಒಂದು ಪಾರ್ಕ್ ಹುಡುಕಿದರು.

`ಏನು ನೋಡುತ್ತೀರಿ ಹೇಳಿ~, `ಅದನ್ನು ನೋಡುತ್ತೀರಾ?~ `ಇದನ್ನು ನೋಡುತ್ತೀರಾ?~ ಎಂದು ಕೇಳಿದರು.  ಮೇಡಂ ಟುಸ್ಸೌಡ್ಸ್ ಮೇಣದ ಪ್ರತಿಮೆಗಳ ವಸ್ತು ಸಂಗ್ರಹಾಲಯದ ಪ್ರವೇಶ ಶುಲ್ಕವನ್ನು ತಾವೇ ತೆತ್ತರು. ಯುವ ವಯಸ್ಸಿನ ಅವರ ಜತೆಗೆ ಸುತ್ತಲು ನಮ್ಮ ಕಾಲಲ್ಲಿ ಅಷ್ಟು ಶಕ್ತಿ ಇರಲಿಲ್ಲ.

 ಮರುದಿನ ಎದ್ದು ಇನ್ನೊಂದು ತುದಿಯ ಜಯಂತ್ ಕೈಗೋನಹಳ್ಳಿಯವರ ಮನೆಗೆ ಹೋಗುವುದಕ್ಕೆ ನಾವು ಸಿದ್ಧರಾಗುತ್ತಿದ್ದಾಗ ಎಲ್ಲರಿಗಿಂತ ಮುಂಚೆ ಎದ್ದಿದ್ದ ಸುಷ್ಮಾ ನಮಗೆಲ್ಲ ದೋಸೆ ಮಾಡಿದ್ದರು. ಅವರ ಮನೆಗೇ ಹೋಗುತ್ತೇವಲ್ಲ ಮತ್ತೆ ತಿಂಡಿ ಏಕೆ ಎಂದರೆ ಅವರ ಮನೆ ತಲುಪಲು ಒಂದೂವರೆ ಗಂಟೆ ಹಿಡಿಯುತ್ತದೆ.

ಅಷ್ಟು ದೂರ ಹೋಗುವಾಗ ನಿಮಗೆ ಹಸಿವೆ ಆಗುತ್ತದೆ ಎಂದು ಮಾಡಿದೆ ಎಂದಳು ಆ ಹೆಣ್ಣು ಮಗಳು. ಎಲ್ಲ ಹೆಣ್ಣು ಮಕ್ಕಳಲ್ಲೂ ಒಂದು ಅಂತಃಕರಣ ಇದ್ದೇ ಇರುತ್ತದೆ ಎಂದುಕೊಂಡೆ. ಒಂದೊಂದೇ ದೋಸೆ ತಿನ್ನಬೇಕು ಎಂದುಕೊಂಡರೂ ರುಚಿ ಹತ್ತಿ ಎರಡೆರಡು ದೋಸೆ ತಿಂದೆವು.

ಅವರ ಮನೆ ಬಿಟ್ಟು ಹೊರಡುವಾಗ ಇಬ್ಬರೂ ಗಂಡ ಹೆಂಡತಿಯನ್ನು ಕೂಡ್ರಿಸಿ ಒಂದು ಶಾಲು ಹೊದಿಸಿದೆವು. ಸುಷ್ಮಾ ಉಮ್ಮಳಿಸಿ ಅಳತೊಡಗಿದರು. ನಮ್ಮ ಕಣ್ಣ ಅಂಚಿನಲ್ಲೂ ನೀರು ತುಳುಕಿತು.

ಸತ್ಯಪ್ರಕಾಶ್ ಅವರ ಪತ್ನಿ ದಿವ್ಯಾ ತುಂಬು ಗರ್ಭಿಣಿ. ಯಾವುದೇ ಕ್ಷಣದಲ್ಲಿ ಹೆರಿಗೆ ಆಗಬೇಕಿತ್ತು. ಆಕೆಯನ್ನು ಬಿಟ್ಟು ನಮ್ಮ ಜತೆ ಬೇಸರ, ಆತಂಕವಿಲ್ಲದೆ ಸುತ್ತಿದ ಸತ್ಯಪ್ರಕಾಶ್‌ಗೆ ನಾವು ಬೈದು ಬುದ್ಧಿ ಹೇಳಿದರೂ ಪ್ರಯೋಜನವೇನೂ ಆಗಲಿಲ್ಲ. ಇದು ಎಂಥ ಪ್ರೀತಿ?

ನಮ್ಮ ಊರಿನ ವಿಮಾನ ಹತ್ತುವ ಹಾದಿಯಲ್ಲಿ ಜಯಂತ್ ಅವರ ಮನೆಗೆ ಹೋದರೆ ಅವರು ಮತ್ತು ಅವರ ಪತ್ನಿ ಸುಮಾ ತಿಂಡಿ ಜತೆಗೆ ಊಟಕ್ಕೂ ಸಿದ್ಧತೆ ಮಾಡಿಕೊಂಡಿದ್ದರು. ಒಂದಿಷ್ಟು ಉಪ್ಪಿಟ್ಟು ತಿನ್ನುತ್ತಿದ್ದಂತೆಯೇ ವಿಮಾನಕ್ಕೆ ಹೊರಡುವ ವೇಳೆಯಾಯಿತು. 12.01ಕ್ಕೆ ಹೊರಟು ಬಿಡಿ ಎಂದರು ಜಯಂತ್.

`ಅವರು ರಾಹುಕಾಲ ಕಳೆಯಲಿ ಎಂದು ಕಾಯುತ್ತಿರಬೇಕು~ ಎಂದು ನನ್ನ ಪಕ್ಕ ಕುಳಿತಿದ್ದ ಸೀತಾರಾಮ್ ಗುನುಗಿದರು. `ನನಗೆ ಅದು ಗೊತ್ತೇ ಆಗುವುದಿಲ್ಲ~ ಎಂದೆ. `ನನಗೂ ಗೊತ್ತಿಲ್ಲ. ಇರಬಹುದು ಅನಿಸುತ್ತದೆ~ ಎಂದು ರಾಹುಕಾಲ ಎಣಿಸುವ ಸೂತ್ರವನ್ನೇನೋ ಅವರು ಪಠಿಸಿದರು.

ವಿಮಾನ ನಿಲ್ದಾಣಕ್ಕೆ ಹೊರಟು ನಿಂತ ನನಗೆ ಎರಡು ಚಪಾತಿ ಮತ್ತು ಒಂದು ಸೇಬು ಹಣ್ಣನ್ನು ಕಟ್ಟಿಕೊಟ್ಟು, `ವಿಮಾನದಲ್ಲಿ ನಿಮಗೆ ಯಾವಾಗ ತಿಂಡಿ ಕೊಡುತ್ತಾರೋ ಗೊತ್ತಿಲ್ಲ. ಇಟ್ಟುಕೊಳ್ಳಿ~ ಎಂದು ಬಿಸಿ ಆರದಂತೆ ಅದಕ್ಕೆ ಒಂದು ಫಾಯಿಲ್ ಕಾಗದವನ್ನು ಸುತ್ತಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ `ದಾರಿಬುತ್ತಿ~ ಕಟ್ಟಿಕೊಟ್ಟರು ಸುಮಾ.

ಹೊರಟು ನಿಂತಾಗ `ಮಗಳ ಮದುವೆಗೆ ಬನ್ನಿ~ ಎಂದರು ದಂಪತಿ. `ಅಮೆರಿಕದಲ್ಲಿ ಮಾಡಿದರೆ ನೀವೇ ಕರೆಸಿಕೊಳ್ಳಬೇಕು, ಬೆಂಗಳೂರಿನಲ್ಲಿಯಾದರೆ ನಾವೇ ಬರುತ್ತೇವೆ~ ಎಂದೆ! ಅವರ ಮಗಳ ಮದುವೆ ಎಲ್ಲಿ ಎಂದು ಗೊತ್ತಾಗಲಿಲ್ಲ.

ಭಾರತಕ್ಕೆ ಹೊರಟು ನಿಂತ ನನ್ನನ್ನು ಮತ್ತು ಕಂಬಾರರನ್ನು ಮತ್ತೆ 50 ಕಿಲೋ ಮೀಟರ್ ದೂರದ ನ್ಯೂಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಡಲು ಜಯಂತ್ ಅವರ ಸ್ನೇಹಿತ ಗುರುಪ್ರಸಾದ್ ಅವರು ತಮ್ಮ ಕಾರನ್ನು ತೆಗೆದುಕೊಂಡು ಬಂದಿದ್ದರು.

ನಡು ವಯಸ್ಸಿನ ಈ ಎಲ್ಲ ದಂಪತಿ ಅಪ್ಪಟ ಕನ್ನಡ ಮಾತನಾಡುತ್ತಾರೆ. ಕನ್ನಡದ ಮನಸ್ಸು, ಸೌಜನ್ಯ, ಪ್ರೀತಿ, ಅಂತಃಕರಣ ಎಲ್ಲವೂ ಅವರಲ್ಲಿ ಇವೆ. ಹಾಗೆ ನೋಡಿದರೆ ನಾವೇ ಕೃಪಣರು.

ಬೆಂಗಳೂರಿನಲ್ಲಿ ಯಾರಾದರೂ ಪರಿಚಿತರು ಭೇಟಿಯಾದರೆ, `ಒಂದು ಸಾರಿ ಮನೆಗೆ ಬನ್ನಿ~, `ಒಮ್ಮೆ ಮನೆಗೆ ಬಂದರೆ ಆಗುತ್ತಿತ್ತು; ನಿಮಗೆ ವೇಳೆಯಿಲ್ಲ ಅನಿಸುತ್ತದೆ~, `ಒಮ್ಮೆ ಕರೆಯುತ್ತೇವೆ ಮನೆಗೆ ಬರುವಿರಂತೆ~, `ಕರೆಯೋಣ ಎಂದುಕೊಂಡಿದ್ದೆ ನಿಮಗೆ ವೇಳೆಯಿಲ್ಲವೇನೋ~ ಎಂದೆಲ್ಲ ಅಪ್ಪಟ ಉಪಚಾರದ ಮಾತು ಆಡುವ ನಮಗೂ ಅಮೆರಿಕದ ಕನ್ನಡಿಗರಿಗೂ ಎಷ್ಟೊಂದು ವ್ಯತ್ಯಾಸ ಎಂದುಕೊಂಡೆವು!

ಸೀತಾರಾಮ್ ಅದನ್ನು ಬಹಿರಂಗವಾಗಿಯೇ ಹೇಳಿದರು. ಮುಗಿಸುವುದಕ್ಕಿಂತ ಮುಂಚೆ ಒಂದು ಮಾತು ಬರೆಯಲೇಬೇಕು. ನಾವು ಅಟ್ಲಾಂಟಾಕ್ಕೆ ಹೋದ ದಿನ ಏಳೆಂಟು ಜನರ ತಂಡಕ್ಕೆ ಸಂಗೀತಾ ಪಾಟೀಲ ಎಂಬ ಮಹಿಳೆ ಪುಳಿಯೋಗರೆ, ಮೊಸರನ್ನದ ಪ್ಯಾಕೆಟ್ ಕಟ್ಟಿಕೊಂಡು ಬಂದಿದ್ದರು.

ಅಷ್ಟು ಸೊಗಸಾದ ಪುಳಿಯೋಗರೆಯನ್ನು ನಾನು ನನ್ನ ಜನ್ಮದಲ್ಲಿ ತಿಂದುದು ಅದೇ ಮೊದಲು. ಪಾಟೀಲರು ಎಂದರೆ ಲಿಂಗಾಯತರು ಅಂದರೆ ಕನ್ನಡಿಗರು ಎಂದು ನಾನು ಅವರ ಜತೆಗೆ ಕನ್ನಡದಲ್ಲಿ ಮಾತನಾಡಲು ಹೋದೆ.

ಅವರಿಗೆ ಕನ್ನಡ ಬರುತ್ತಿರಲಿಲ್ಲ. ಅವರು ಪುಣೆಯ ಮಹಿಳೆ. ಪತಿ ಕನ್ನಡಿಗ. ಆದರೆ, ಆ ಮಹಿಳೆ ಎಲ್ಲ ಕನ್ನಡಿಗರಿಗಿಂತ ಹೆಚ್ಚಾಗಿ `ಅಕ್ಕ~ ಸಮ್ಮೇಳನದಲ್ಲಿ ಸಂಭ್ರಮದಿಂದ ಓಡಾಡಿದರು. ನಾನು ಷಿಕಾಗೊ ತಲುಪಿದ ವೇಳೆಗೆ ನನ್ನ ಲಗೇಜು ದೆಹಲಿಯಲ್ಲಿಯೇ ಉಳಿದಿತ್ತು.

ನನ್ನ ಎಲ್ಲ ಬಟ್ಟೆಗಳು ಅದರಲ್ಲಿಯೇ ಇದ್ದುವು. ಅದನ್ನು ದೊರಕಿಸುವವರೆಗೆ ಆ ಮಹಿಳೆ ವಹಿಸಿದ ಮುತುವರ್ಜಿ ಮರೆಯುವುದು ಅಸಾಧ್ಯ. ಪ್ರೀತಿಗೆ, ವಿಶ್ವಾಸಕ್ಕೆ ಭಾಷೆ ಒಂದು ಗಡಿಯೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.