ADVERTISEMENT

ಅಮ್ಮನ ಕಾಳಜಿ ಮಗಳ ಬಯಕೆ

ಥಳುಕು ಬಳುಕು

ವಿಶಾಖ ಎನ್.
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST
ಅಮ್ಮನ ಕಾಳಜಿ ಮಗಳ ಬಯಕೆ
ಅಮ್ಮನ ಕಾಳಜಿ ಮಗಳ ಬಯಕೆ   

ಬಾಲ್ಯದಲ್ಲಿ ಸಹಪಾಠಿಗಳ ಮೂದಲಿಕೆಗೆ ಗುರಿಯಾಗಿ, ಕಾಲೇಜು ಸಹಪಾಠಿಗಳಿಂದ ಎದೆಯಿಲ್ಲದ ಹುಡುಗಿ ಎಂಬ ಮೂದಲಿಕೆ ಕೇಳಿಸಿಕೊಂಡು, ಬಾಲಿವುಡ್ ಓಣಿಗೆ ಮೂವತ್ತೆರಡರ ಹರೆಯದಲ್ಲಿ ಕಾಲಿಟ್ಟ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಅವರದ್ದು ಸಾಂಪ್ರದಾಯಿಕ ಮನಸ್ಸು. ತುಂಡುಡುಗೆ ತೊಟ್ಟರೂ ಮನಸ್ಸು ಆತ್ಮಸಖನ ಹುಡುಕಾಟದಲ್ಲಿರುತ್ತದೆ ಎನ್ನುವ ಅವರಿಗೆ ಬೇಗ ಮದುವೆಯಾಗುವ ಬಯಕೆಯಾಗಿದೆ.

`ನಾನೊಬ್ಬ ಹೆಣ್ಣು. ಹಾರ್ಮೋನ್‌ಗಳು ಸರಿಯಾಗಿಯೇ ಇವೆ. ಮದುವೆಯಾಗಬೇಕು, ಅಮ್ಮನಾಗಬೇಕು ಎಂಬುದು ಸಹಜ ಬಯಕೆ. ವಯಸ್ಸಾದಂತೆ ಹೆಣ್ಣುಮಕ್ಕಳಿಗೆ ಅಭದ್ರತೆ ಕಾಡುತ್ತದೆ. ನಾನೂ ಅದಕ್ಕೆ ಹೊರತಲ್ಲ. ಆದರೆ ಆತ್ಮಸಖ ಸಿಗುವುದು ಆಕಸ್ಮಿಕ. ಅದೃಷ್ಟ ಇರಬೇಕು. ಅದಕ್ಕಾಗಿ ಹುಡುಕುತ್ತಾ ಕೂರುವುದೂ ಸಾಧ್ಯವಿಲ್ಲ' ಎಂದು ನರ್ಗೀಸ್ ಹೇಳಿದ್ದು ಅವರಮ್ಮ ಗೂಗಲ್‌ನಲ್ಲಿ ಪ್ರಶ್ನೆ ಕೇಳಿದ ಒಂದು ವರ್ಷದ ನಂತರ.

ಹಾಗೆ ನೋಡಿದರೆ ನಟಿಯಾದ ಮಗಳನ್ನು ನೋಡಲು ನರ್ಗೀಸ್ ಅವರ ಅಮ್ಮ ಭಾರತಕ್ಕೆ ಬಂದದ್ದೇ ಇಲ್ಲ. ಆನ್‌ಲೈನ್‌ನಲ್ಲಿ ನಿಯತಕಾಲಿಕೆಗಳನ್ನು ಓದುತ್ತಾ, ಮಗಳ ಕುರಿತು ಪ್ರಕಟವಾಗುವ ಗಾಸಿಪ್‌ಗಳನ್ನು ಕಂಡು ಬೆಚ್ಚಿಬೀಳುತ್ತಾ, `ಇದೇನಮ್ಮಾ ಮಗಳೇ... ಹೌದೇ' ಎನ್ನುತ್ತಾ ತಮ್ಮ ವ್ಯವಹಾರದಲ್ಲಿ ತಾವು ತೊಡಗಿಕೊಂಡಿದ್ದಾರೆ. ಅವರು ದೂರದಿಂದ ಕೇಳುವ ಪ್ರಶ್ನೆಗಳೇ ನರ್ಗೀಸ್‌ಗೆ ತನಗೆ ಅಮ್ಮನ ಮಾರ್ಗದರ್ಶನ ಇನ್ನೂ ಲಭ್ಯ ಎನ್ನಿಸಲು ಕಾರಣವಂತೆ.

ಕೆಲವು ತಿಂಗಳುಗಳ ಹಿಂದೆ ಈ ನಟಿ ಕುಸಿದುಹೋಗಿದ್ದರು. ಕೋಣೆಯ ಮಂಚದ ಮೇಲೆ ಚಾದರವನ್ನು ಮುಖದವರೆಗೆ ಎಳೆದುಕೊಂಡು ತಾಸುಗಟ್ಟಲೆ ಅತ್ತಿದ್ದರು. `ರಾಕ್‌ಸ್ಟಾರ್' ಸಿನಿಮಾ ನಂತರ ಅವರಿಗೆ ಸಿಕ್ಕಿದ್ದ ಇನ್ನೊಂದು ಅವಕಾಶ ಕೈತಪ್ಪಿದ ದುಃಖ ತಡೆಯಲಾಗದ ಸಂದರ್ಭ ಅದು.

ಅಕ್ಷಯ್ ಕುಮಾರ್ ನಾಯಕತ್ವದ `ಖಿಲಾಡಿ 786' ಚಿತ್ರಕ್ಕೆ ನರ್ಗೀಸ್ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದರು. ಆ ಪಾತ್ರಕ್ಕೆ ಕಷ್ಟಪಟ್ಟು ಸಿದ್ಧತೆ ನಡೆಸಿದರು. ಕಥಕ್ ಕಲಿಸುವ ಶಾಲೆ ಸೇರಿದರು. ತೊದಲುತ್ತಿದ್ದ ಹಿಂದಿ ಸರಿಪಡಿಸಿಕೊಳ್ಳಲೆಂದು ಒಬ್ಬ ಮೇಡಂ ಅನ್ನು ಗೊತ್ತುಮಾಡಿಕೊಂಡರು. ನಡುವೆ ನ್ಯೂಯಾರ್ಕ್‌ಗೆ ಹೋಗಿ ಒಂದು ವಾಯ್ಸ ಕೋರ್ಸ್ ಕೂಡ ಮುಗಿಸಿಕೊಂಡು ಬಂದರು. ಬೆಳಿಗ್ಗೆ 7ಕ್ಕೆ ಶ್ರಮಪಡಲು ಪ್ರಾರಂಭಿಸಿದರೆ ಸಂಜೆ 5ರವರೆಗೆ ಬಿಡುವೇ ಇರುತ್ತಿರಲಿಲ್ಲ. ಎರಡನೇ ಚಿತ್ರದಲ್ಲಿ ನೆಲೆ ಕಂಡುಕೊಳ್ಳಲೇಬೇಕು ಎಂದು ಇಷ್ಟೆಲ್ಲಾ ಕಷ್ಟಪಡುತ್ತಿದ್ದ ಅವರಿಗೆ ಒಂದು ದಿನ ಫೋನ್ ಬಂತು. ಅಕ್ಷಯ್ ಕುಮಾರ್ ಅವರ `ಹರಿ ಓಂ ಪ್ರೊಡಕ್ಷನ್ಸ್'ನ ವ್ಯವಸ್ಥಾಪಕರು ಬರಹೇಳಿದರು. `ಆ ಪಾತ್ರಕ್ಕೆ ನೀವು ತುಂಬಾ ಸೆಕ್ಸಿ ಎನಿಸುತ್ತಿದ್ದೀರಂತೆ. ಅದಕ್ಕೆ ನೀವು ಸೂಕ್ತವಲ್ಲ ಎಂದು ತೀರ್ಮಾನಿಸಿದ್ದಾರೆ. ವೀ ಆರ್ ಸಾರಿ...' ಎಂದು ಅವರು ಹೇಳಿದ್ದೇ ನರ್ಗೀಸ್‌ಗೆ ನಿಂತ ನೆಲ ಕುಸಿದಂತಾಯಿತು.

ಎರಡು ಮೂರು ದಿನಗಳ ನಂತರ ಶಾಕ್‌ನಿಂದ ಹೊರಬಂದ ನರ್ಗೀಸ್ ಕ್ಲಾಸುಗಳನ್ನು ಮುಂದುವರಿಸಿದರು. ಈಗ ಸ್ಕ್ರಿಪ್ಟ್‌ಗಳನ್ನು ತಿರುವಿಹಾಕುತ್ತಾ, ಯಾವ ಸಿನಿಮಾ ಒಪ್ಪಿಕೊಳ್ಳುವುದು ಎಂದು ಅವರು ಅಳೆದು ತೂಗುತ್ತಿದ್ದಾರೆ. ಕಲಿತ ವಿದ್ಯೆ, ಪಟ್ಟ ಶ್ರಮ ಎಂದಿಗೂ ಕೈಬಿಡುವುದಿಲ್ಲ ಎಂಬುದು ಅವರಾಡುವ ನೀತಿ.

ಯಶ್ ಚೋಪ್ರಾ ಮಗ ಉದಯ್ ಚೋಪ್ರಾ ಜೊತೆಗೆ ನರ್ಗೀಸ್ ಸಂಬಂಧವಿದೆ ಎಂದು ಮೊದಲು ಗಾಸಿಪ್ ಪ್ರಕಟವಾಯಿತು. ಆಮೇಲೆ ಶಾಹೀದ್ ಕಪೂರ್ ಜೊತೆಗೆ ಲಿವ್-ಇನ್ ಸಂಬಂಧ ಇಟ್ಟುಕೊಂಡಿದ್ದಾರೆಂದೂ ಬರೆಯಲಾಯಿತು. ಇವೆಲ್ಲವನ್ನೂ ಸಾರಾಸಗಟಾಗಿ ನಿರಾಕರಿಸುವ ನರ್ಗೀಸ್‌ಗೆ ಇನ್ನು ಕೆಲವೇ ವರ್ಷಗಳಲ್ಲಿ ತಾಯಿಯಾಗುವ ಬಯಕೆ ಇದೆಯಂತೆ.

`ರಾಕ್‌ಸ್ಟಾರ್ ಚಿತ್ರ ಬಂದಮೇಲೆ ನನ್ನ ತುಟಿಯ ಕುರಿತು ಜನ ಮಾತನಾಡಲಾರಂಭಿಸಿದರು. ಒಂದು ವೇಳೆ ನನಗೆ ದೊಡ್ಡ ಸ್ತನಗಳು ಇದ್ದಿದ್ದರೆ ಅವುಗಳ ಬಗ್ಗೆ ಮಾತನಾಡುತ್ತಿದ್ದರು. ನನ್ನ ಪೃಷ್ಠ ತುಂಬಾ ಸುಂದರವಾಗಿದೆ. ಪುಣ್ಯಕ್ಕೆ ರಾಕ್‌ಸ್ಟಾರ್‌ನಲ್ಲಿ ನಾನು ಪಟಿಯಾಲಾ ದಿರಿಸನ್ನು ಹೆಚ್ಚಾಗಿ ತೊಟ್ಟಿದ್ದೆ. ಆದ್ದರಿಂದ ಅದರ ಆಕಾರ ಜನರಿಗೆ ಕಾಣಲಿಲ್ಲ. ಜನ ಇರುವುದೇ ಹೀಗೆ. ಅವರಿಗೆ ನಟಿಯರ ಅಂಗಾಂಗಗಳು, ಚಲನವಲನಗಳು, ಅವರು ಯಾರ ಜೊತೆ ಊಟ ಮಾಡುತ್ತಾರೆ ಎಂಬುದೆಲ್ಲಾ ಚರ್ಚೆಯ ವಸ್ತುಗಳಾಗುತ್ತವೆ.

ಇಲ್ಲಸಲ್ಲದ್ದನ್ನು ಬರೆಯುವವರ ಪತ್ರಿಕಾಧರ್ಮದ ಬಗೆಗೆ ಯೋಚಿಸಿದಾಗ ನನಗೆ ನಿರಾಸೆಯಾಗುತ್ತದೆ. ಅಮ್ಮ ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳುತ್ತಾಳೆ. ಅವಳನ್ನು ನೋಯಿಸಲು ನನಗೆ ಇಷ್ಟವಿಲ್ಲ. ನನಗೂ ಬೇಗ ಅಮ್ಮನಾಗಬೇಕು ಎಂಬ ಆಸೆ ಬಂದಿದೆ... ' ಹೀಗೆಲ್ಲಾ ನುಡಿಯುವ ನರ್ಗೀಸ್ ಎಂದೂ ಯಾರಿಗೂ ಸುಳ್ಳು ವಯಸ್ಸನ್ನು ಹೇಳಿಲ್ಲವಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT