ADVERTISEMENT

ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ

ಗೋಪಾಲ ಗುರು
Published 14 ಏಪ್ರಿಲ್ 2019, 9:04 IST
Last Updated 14 ಏಪ್ರಿಲ್ 2019, 9:04 IST
ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ
ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ   

ನನಗೆ ಅಂಬೇಡ್ಕರ್ ಕುರಿತ ಅರಿವು ಮೂಡಿಸಿದ್ದು ನನ್ನ ತಾಯಿ. ಇದಕ್ಕಾಗಿ ಆಕೆ ತನ್ನದೇ ಆದ ವಿಶಿಷ್ಟ ರೂಪಕಗಳನ್ನು ಬಳಸಿದ್ದಳು. ಬಾಬಾ ಸಾಹೇಬರನ್ನು ನನಗೆ ಪರಿಚಯಿಸಲು ಆಕೆ ಜನವರಿ 26ರ ದಿನವನ್ನು ಆರಿಸಿಕೊಂಡಿದ್ದಳು. ಹಲವು ವರ್ಷಗಳ ಹಿಂದಿನ ಆ ಜನವರಿ 26 ನನಗಿನ್ನೂ ನೆನಪಿದೆ. ಅಂದು ಆಕೆ ನನಗೆ ನೀಲಿ ಸಮವಸ್ತ್ರ ತೊಡಿಸಿದ್ದಳು.

ಶಾಲೆಯಲ್ಲಿ ಗಣರಾಜ್ಯ ದಿನದ ಆಚರಣೆ ಇರುವುದು ನನಗೂ ಗೊತ್ತಿತ್ತು. ಆ ದಿನಕ್ಕೆ ಶಾಲೆಯ ಸಮವಸ್ತ್ರ ಖಾಕಿ ನಿಕ್ಕರ್ ಮತ್ತು ಬಿಳಿ ಅಂಗಿ. ಆದರೆ ಅಮ್ಮ ನನಗೆ ನೀಲಿ ಸಮವಸ್ತ್ರ ತೊಡಿಸಿದ್ದಳು. ನಾನಿದನ್ನು ಅವಳಿಗೆ ಹೇಳಿದರೆ ‘ಜನವರಿ 26ಕ್ಕೆ ನೀಲಿ ಸಮವಸ್ತ್ರವೇ ಸರಿ’ ಎಂದಳು. ಅವಳ ತರ್ಕ ಏನೆಂಬುದು ನನಗೆ ಅರ್ಥವೇ ಆಗಲಿಲ್ಲ. ನಾನು ಮತ್ತೆ ಮತ್ತೆ ಖಾಕಿ ನಿಕ್ಕರ್ ಮತ್ತು ಬಿಳಿಯ ಅಂಗಿಗಾಗಿ ಒತ್ತಾಯಿಸುತ್ತಲೇ ಹೋದೆ. ಆಗ ಅವಳು ಜನವರಿ 26 ಎಷ್ಟು ಮುಖ್ಯವಾದ ದಿನ ಎಂದು ವಿವರಿಸಿದಳು.

‘ಈ ದಿನ ಕೇವಲ ದಲಿತರಿಗಷ್ಟೇ ಮುಖ್ಯವಾದ ದಿನವಲ್ಲ. ಇದು ಇಡೀ ದೇಶಕ್ಕೆ ಮುಖ್ಯವಾದ ದಿನ. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಭಾರತದ ಸಂವಿಧಾನವನ್ನು ಬರೆದು ದೇಶಕ್ಕೆ ಕೊಟ್ಟದ್ದು ಜನವರಿ 26ರಂದು’ ಎಂಬುದು ಅವಳ ವಿವರಣೆಯ ಸಾರಾಂಶ. ಭಾರತದ ಸಂವಿಧಾನದ ಕುರಿತಂತೆ ಆಕೆಗೆ ಇದ್ದ ಜ್ಞಾನ ಆ ಕಾಲದಲ್ಲಿ ದಲಿತರ ನಡುವೆ ಪ್ರಚಲಿತವಾಗಿದ್ದ ಮೌಖಿಕ ಕಥನಗಳಿಂದ ಬಂದಿತ್ತು. ಪರಿಣಾಮವಾಗಿ ಸಂವಿಧಾನವನ್ನು ದೇಶ ಔಪಚಾರಿಕವಾಗಿ ಒಪ್ಪಿಕೊಂಡು ಭಾರತವೆಂಬ ಗಣರಾಜ್ಯ ರೂಪುಗೊಂಡಿತು ಎಂಬಂಥ ಮಾತುಗಳೇನೂ ಅವಳ ಬಾಯಿಂದ ಬರಲಿಲ್ಲ. ಆದರೆ ಇಡೀ ದೇಶವನ್ನು ನೀಲ ವರ್ಣದಲ್ಲಿ ಮುಳುಗಿಸುವ ಆಕೆಯ ರೂಪಕ ಗಣರಾಜ್ಯ ದಿನದ ಮಹತ್ವದ ಕುರಿತ ಮಾಹಿತಿಗಿಂತ ದೊಡ್ಡದು.

ADVERTISEMENT

ಅದೇನೇ ಇರಲಿ, ನಾನು ಅಂದು ನೀಲಿ ಸಮವಸ್ತ್ರದಲ್ಲೇ ಶಾಲೆಗೆ ಹೋಗಿದ್ದಂತೂ ನಿಜ. ಜೊತೆಗೆ ನನ್ನ ಕೈಯಲ್ಲಿ ಬಾಬಾಸಾಹೇಬರ

ಚಿತ್ರವೂ ಇತ್ತು– ಎಡಗೈಯಲ್ಲಿ ಸಂವಿಧಾನವನ್ನು ಹಿಡಿದ ಸೂಟುಧಾರಿಯ ಫೋಟೋ. ನನ್ನ ಬಾಲ್ಯದುದ್ದಕ್ಕೂ ಅಂಬೇಡ್ಕರ್ ಅವರ ಚಿತ್ರ ನನ್ನ ಸುತ್ತ ಸುಳಿದಾಡುತ್ತಲೇ ಇರುತ್ತಿತ್ತು. ಆ ಕಾಲದಲ್ಲಿ ನಮ್ಮ ಹಳ್ಳಿಗೆ ಭೇಟಿ ನೀಡುತ್ತಿದ್ದ ಹೋರಾಟಗಾರ ಶಂಕರ್ ಸಕ್ಪಾಲ್ ಅವರ ಬಳಿಯೂ ಈ ಚಿತ್ರವಿರುತ್ತಿತ್ತು.

ನಮ್ಮೂರು ಸೇರಿದಂತೆ ಸುತ್ತಲಿನ ಮೂರು ನಾಲ್ಕು ಹಳ್ಳಿಗಳ ದಲಿತರ ಮನೆಗಳಿಗೆ ಪ್ರತಿ ಮುಂಜಾನೆಯೂ ಭೇಟಿ ನೀಡುತ್ತಿದ್ದ ಸಕ್ಪಾಲ್, ನಮ್ಮಿಂದ ಜೋಳದ ಅಥವಾ ಗೋಧಿಯ ಹಿಟ್ಟನ್ನು ಸಂಗ್ರಹಿಸುತ್ತಿದ್ದರು. ಬಹುತೇಕ ಮನೆಗಳಲ್ಲಿ ಜೋಳದ ಹಿಟ್ಟಷ್ಟೇ ಇರುತ್ತಿದ್ದುದರಿಂದ ಗೋಧಿಯ ಹಿಟ್ಟು ಹೆಚ್ಚಿನ ಪ್ರಮಾಣದಲ್ಲೇನೂ ಅವರಿಗೆ ಸಿಗುತ್ತಿರಲಿಲ್ಲ. ಇದೇನು ಸಕ್ಪಾಲ್ ಅವರ ಹೊಟ್ಟೆ ಪಾಡಿನ ಸಂಗತಿಯಾಗಿರಲಿಲ್ಲ. ಅವರಿಗೆ ಹಳ್ಳಿಯಲ್ಲಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಸ್ಥಾಪಿಸಬೇಕೆಂಬ ಆಸೆಯಿತ್ತು. ಅದಕ್ಕಾಗಿ ಸಂಗ್ರಹಿಸಿದ ಹಿಟ್ಟನ್ನು ಮಾರಿ ಆ ದುಡ್ಡನ್ನು ಕೂಡಿಡುತ್ತಿದ್ದರು. ಹಿಟ್ಟಿನ ಪಡಿಗಾಗಿ ಮನೆಗೆ ಬರುತ್ತಿದ್ದ ಸಕ್ಪಾಲ್ ಕೈಯಲ್ಲಿ ಬಾಬಾಸಾಹೇಬರ ಚಿತ್ರವಿರುತ್ತಿತ್ತು.

ಅಂಬೇಡ್ಕರ್ ಪ್ರತಿಮೆಗಾಗಿ ಒಂದಿಷ್ಟು ಹಿಟ್ಟನ್ನು ಉಳಿಸಲು ನನ್ನ ತಾಯಿ ಯಾವತ್ತೂ ಮರೆಯುತ್ತಿರಲಿಲ್ಲ. ಇದಕ್ಕಾಗಿ ನಾವು ಹೊಟ್ಟೆ ಕಟ್ಟಿದ ದಿನಗಳೂ ಇವೆ. ಸಕ್ಪಾಲ್ ಮತ್ತು ನನ್ನ ತಾಯಿಯ ಈ ಬದ್ಧತೆಯೇ ಅಂಬೇಡ್ಕರ್ ದರ್ಶನಕ್ಕೆ ಇದ್ದ ನೈತಿಕ ಮಹತ್ವವನ್ನು ಹೇಳುತ್ತದೆ.
1959 ಮತ್ತು 1964ರಲ್ಲಿ ಸರ್ಕಾರಿ ಭೂಮಿಗಾಗಿ ನಡೆದ ಸತ್ಯಾಗ್ರಹದ ಸಂದರ್ಭದಲ್ಲೂ ಅಂಬೇಡ್ಕರ್ ನನ್ನ ತಂದೆ–ತಾಯಿಯ ಜೊತೆಗಿದ್ದರು. ಹೌದು, ಈ ಸಂಬಂಧ ಸತ್ಯಾಗ್ರಹದ ಸ್ಥಳಕ್ಕಷ್ಟೇ ಸೀಮಿತವಾಗಿರಲಿಲ್ಲ.

(2015ರ ಏಪ್ರಿಲ್ 12ರಂದು ಪ್ರಜಾವಾಣಿಯ ‘ಮುಕ್ತಛಂದ’ ಪುರವಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ ಇದು. ಅಂಬೇಡ್ಕರ್ ಜಯಂತಿ ನಿಮಿತ್ತ ಮರು ಓದಿಗಾಗಿ ಮತ್ತೆ ಪ್ರಕಟಿಸಲಾಗಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.