೧
ಮಳೆ ಜಿನುಗಿದಂತೆ
ಮಾತಾಡುತ್ತಾಳೆ ಅವಳು
ಒದ್ದೆಯಾಗಿ
ಮುದಗೊಳ್ಳುತ್ತೇನೆ
ನಾನು
ಮಾಗಿಯ ಚಳಿಯಾಗಿ
ಇಳಿಯುತ್ತಾಳೆ ಅವಳು
ತಬ್ಬಿ
ಬೆಚ್ಚಗಾಗುತ್ತೇನೆ
ನಾನು
ಒಮ್ಮೊಮ್ಮೆ
ವೈಶಾಖದ ಬಿಸಿಲಂತೆ
ಬೆವರು ಇಳಿಸುತ್ತಾಳೆ
ಅವಳು
ನಡುನಡುಗಿ
ಅಡಿ ಹಿಡಿಯುತ್ತೇನೆ
ನಾನು
ಪುನಃ ಅವಳು
ಜಿನುಗು ಮಳೆಯಾಗಿ
ಚಳಿಯಾಗಿ ಮಾಗಿ
ತಬ್ಬಿ ಹಬ್ಬುತ್ತಾಳೆ
ನನ್ನೊಳಗನ್ನು
ಪೊರೆಯುತ್ತಾಳೆ ಅವಳು.
೨
ನನ್ನೊಳಗೆ
ಆಳವಾಗಿ ಬೇರೂರಿದ್ದಾಳೆ
ಅವಳು
ನರನರಗಳನ್ನು
ಹುರಿಗೊಳಿಸಿದ್ದಾಳೆ
ಅವಳು
ಚಿತ್ರ ಬಿಡಿಸುತ್ತಾಳೆ
ಅವಳು
ಚಿತ್ರದಂತೆ ನನ್ನೊಳಗೆ
ಇಳಿದಿದ್ದಾಳೆ ಅವಳು
ಹಾಡುತ್ತಾಳೆ ಅವಳು
ಮಧುರ ಹಾಡಿನಂತೆ
ಕಾಡುತ್ತಾಳೆ ಅವಳು
ಜಿಂಕೆಯಂತೆ
ಜಿಗಿಯಬಲ್ಲಳು ಅವಳು
ಮೊಲದಂತೆ
ಮೃದುವಾದವಳು
ಎದುರಾದರೆ
ಹುಲಿಯಂತೆ ಎರಗಬಲ್ಲಳು!
ನನಗೀಗ
ಪ್ರಿಯವಾದ
ಪಾರಿಜಾತ ಅವಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.