ADVERTISEMENT

ಆಯ್ಕೆ

ವಿ.ಪ್ರಾಣೇಶರಾವ್
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಇಂದಿನಕಾಲದ ಒಂದು ನಗರ. ಆ ನಗರದಲ್ಲೊಂದು ಜನ ವಾಹನಗಳಿಂದ ತುಂಬಿ ಗಿಜಿಗುಡುವ ಬೀದಿ. ಎಲ್ಲಿ ನೋಡಿದರೂ ಹೊಗೆ ದೂಳಿನಿಂದ ಕೂಡಿದ ಕಲುಷಿತ ವಾತಾವರಣ.

ಲಾರಿ ಟ್ರಕ್ಕುಗಳ ಕಿವಿಗಡಚಿಕ್ಕುವ ಸದ್ದು. ನಡುನಡುವೆ ಹೋಟೆಲು ಸೆಲೂನ್‌ಗಳಿಂದ ತೂರಿಬರುವ ಹಾಡು-ಪ್ರಚಾರಗಳ ಅಬ್ಬರ. ಇಂಥ ಸನ್ನಿವೇಶದ ಒಂದು ಬೆಳಗು.

ಸಮಯ ಸುಮಾರು ಎಂಟೂವರೆಯಿಂದ ಒಂಬತ್ತರ ನಡುವೆ. ಅಲ್ಲೊಂದು ಬೀದಿಯ ತಿರುವಿನಲ್ಲಿ ಶಾಲಾ ಬಸ್ಸಿಗಾಗಿ ಕಾದುಕುಳಿತ ಮಕ್ಕಳು. ಕೆಲವರು ತಮ್ಮ ಭಾರವಾದ ಚೀಲಗಳನ್ನು ಹೊತ್ತು ಊಟದ ಡಬ್ಬಿ- ನೀರಿನ ಬಾಟಲಿಗಳೊಡನೆ ಬಸ್ಟಾಪಿಗೆ ಬಂದು ತಲುಪುತ್ತಿದ್ದಾರೆ. ಕೆಲವರು ಮಾತನಾಡುತ್ತಾ ಕುಳಿತಿದ್ದಾರೆ.

ಕೆಲವರು ಜಗಳವಾಡುತ್ತಿದ್ದಾರೆ. ಇನ್ನೂ ಕೆಲವರು ಹಾಡು, ಸಿನಿಮಾ ಮಾತುಗಳಲ್ಲಿ ತಲ್ಲೆನರಾಗಿದ್ದಾರೆ. ಅವರಲ್ಲಿ ಒಬ್ಬ ಹುಡುಗ ಮಾತ್ರ ಒಂದು ಪ್ರಶಸ್ತವಾದ ಸ್ಥಳವನ್ನು ಆಯ್ದುಕೊಂಡು ತನ್ನ ಪಾಠವನ್ನು ಓದುತ್ತಾ ಕುಳಿತುಕೊಂಡಿದ್ದಾನೆ. ಓದಿನ ನಡುನಡುವೆ ಏನೋ ಯೋಚನೆಗಳು, ಮಂಪರು...

ರಸ್ತೆ ಕಡೆಯಿಂದ ಬರುವ ದೂಳಿನ ಜೊತೆಗೆ ಹತ್ತಿರದ ಗ್ಯಾರೇಜಿನಿಂದ ರಬ್ಬರ್ ಸುಡುವ ವಾಸನೆ. ಪಾಠ ಓದುತ್ತಾ ಕುಳಿತ ಹುಡುಗನಿಗೆ ಇಂಥ ದೂಳು ವಾಸನೆಗಳೆಂದರೆ ಏನೋ ಭಯ ನಡುಕ. ಏಕೆಂದರೆ ಅವನ ಗೆಳೆಯನಿಗೆ ದೂಳಿನಿಂದ ಉಸಿರಾಟದ ತೊಂದರೆ. ಆಗ ಅವನ ಪಾಡು ನೋಡುವಂತಿಲ್ಲ.

ಡಾಕ್ಟರು ಅದನ್ನು `ಅಲೆರ್ಜಿಕ್ ಬ್ರಾಂಕೈಟಿಸ್~ ಎಂದು ಕರೆದು ಏನೇನೊ ಮಾತ್ರೆ ಔಷಧ ಕೊಟ್ಟು `ಸ್ವೀಟ್ಸ್ ತಿನ್ಬೇಡ, ಐಸ್ಕ್ರೀಂ ತಿನ್ಬೇಡ~ ಅಂತ ಅಡ್ಡಿ ಮಾಡಿದ್ದಾರೆ. ಗೆಳೆಯನ ಈ ಕತೆಯನ್ನೆಲ್ಲ ಕುರಿತು ಯೋಚಿಸುವಾಗ ಇವನಿಗೆ ತುಂಬ ದಿಗಿಲಾಗುತ್ತದೆ. ಕರವಸ್ತ್ರದಿಂದ ಮೂಗು ಮುಚ್ಚಿಕೊಳ್ಳುತ್ತಾನೆ.

ಈ ಹೊಗೆ-ದೂಳುಗಳಿಲ್ಲದ ಪರಿಸರವಿದ್ದರೆ ಅದೆಷ್ಟು ಚೆನ್ನ ಅಂತ ಅವನು ಅಂದುಕೊಳ್ಳುವಾಗ ಅವನಿಗೆ ಅಲ್ಲಿ ಯಾರೊ ನಿಲ್ಲಿಸಿಹೋಗಿದ್ದ ಒಂದು ಸೈಕಲ್ ಅದರ ಪಕ್ಕದಲ್ಲಿದ್ದ ಒಂದು ಮೊಪೆಡ್ ಕಾಣಿಸುತ್ತವೆ. ಜಪಾನ್ ದೇಶದಲ್ಲಿ ಪರಿಶುದ್ಧ ವಾತಾವರಣಕ್ಕೆ ಕೈಕೊಂಡ ಕ್ರಮಗಳು, ಚೀನಾ ದೇಶದಲ್ಲಿ ಸ್ವಯಂಚಾಲಿತ ವಾಹನಗಳ ಬದಲಿಗೆ ಬೈಸಿಕಲ್‌ಗಳನ್ನು ಬಳಸುವ ಪದ್ಧತಿ ಕುರಿತು ಶಾಲೆಯಲ್ಲಿ ಹೇಳಿದ್ದುದು ನೆನಪಾಗುತ್ತದೆ.

ಆಗ ಹಿಂದಿನ ರಾತ್ರಿ ನಿದ್ದೆ ಇಲ್ಲದ್ದರಿಂದ ಹುಡುಗ ಹಾಗೇ ನಿದ್ರೆ ಹೋಗುತ್ತಾನೆ. ನಿದ್ದೆಯಲ್ಲೊಂದು ಕನಸು. ಆ ಕನಸಿನಲ್ಲಿ ಸ್ವಲ್ಪ ಹೊತ್ತಿನ ಕೆಳಗೆ ರಸ್ತೆಯಂಚಿನಲ್ಲಿ ನಿಲ್ಲಿಸಿದ್ದ ಸೈಕಲ್ ಮತ್ತು ಮೊಪೆಡ್ ಕಾಣಿಸಿಕೊಳ್ಳುತ್ತವೆ. ಆಶ್ಚರ್ಯವೆಂದರೆ ಅವು ಮನುಷ್ಯರಂತೆ ಸಂಭಾಷಿಸತೊಡಗುತ್ತವೆ.

ಸೈಕಲ್ ಹೇಳುತ್ತದೆ, `ಲೋ ಮೊದ್ದು ಮೊಪೆಡ್ ನೀನು ಶುದ್ಧ ಕೊಳಕ. ಏಕೆಂದರೆ ನೀನು ಕುಡುಕರಂತೆ ಎಣ್ಣೆ ಹಾಕುತ್ತಿ, ನಂತರ ವಿಕಾರವಾಗಿ ಹೊಣೆ ಕಾರುತ್ತಿ. ನಾನು ನೋಡು ಎಷ್ಟು ಶುದ್ಧ. ನನ್ನಿಂದ ಖರ್ಚೂ ಇಲ್ಲ. ಇಂಧನದ ಕೊರತೇನೂ ಇಲ್ಲ. ನೀನು ಪ್ರಪಂಚದ ಇಂಧನಾನೆಲ್ಲ ನುಂಗಿ ನೀರು ಕುಡಿದಿದ್ದಿ. ದಿನ ಬೆಳಗಾದರೆ `ಎನರ್ಜಿ
ಕ್ರೈಸಿಸ್~ ಅಂತ ಪತ್ರಿಕೆಗಳಲ್ಲಿ ಬರ್ತಾ ಇರತ್ತೆ. ಸಾಕು ಸಾಕು, ನನ್ನ ಸಾಮರ್ಥ್ಯ ನಿನಗೆಲ್ಲಿ ಬರಬೇಕು~.

`ನಾನು ನನ್ನ ಮಾಲೀಕನನ್ನು ಎಲ್ಲಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಕರೆದೊಯ್ಯಬಲ್ಲೆ. ನಿನಗೆ ಇದು ಸಾಧ್ಯಾನಾ... ಇನ್ನು ಬಿಸಿಲು ಮಳೆ ಅನ್ನದೆ ನಿನ್ನ ಯಜಮಾನ ಸೈಕಲ್ ತುಳಿದೂ ತುಳಿದು ಸಾಯ್ತಾನೆ ಗೊತ್ತುಂಟಾ...~

`ಆ ಮಾತು ಬಿಡು. ನನ್ನ ಮಾಲೀಕ ನಿನ್ನ ಮಾಲೀಕನಂತಲ್ಲ. ಅವನ ಕೈಕಾಲು ಗಟ್ಟಿ. ಪರಿಶ್ರಮ ಜೀವಿಯಾದ ಅವನು ಸಾಮಾನ್ಯವಾಗಿ ಆರೋಗ್ಯವಂತನೇ, ನಾನೂ ಸಹ. ಮೇಲಾಗಿ ನನ್ನಿಂದ ಅವನಿಗೆ ಖರ್ಚೇ ಇಲ್ಲ. ನನ್ನ ಹೊಟ್ಟೆಗೆ ಸಾಕಷ್ಟು ಗಾಳಿ ತುಂಬಿದರೆ ಸಾಕು. ಅವನನ್ನು ನಾನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಲ್ಲೆ.

ಒಟ್ಟಿನಲ್ಲಿ ನಾನು ಬಡವರ ಆಧಾರಿ ತಿಳಿಯಿತೇ. ಅಲ್ಲದೆ ಪಾಂಡಿಚೇರಿ, ಬೀಜಿಂಗ್, ಸಿಂಗಪುರ ಮೊದಲಾದ ಪೂರ್ವದ ನಗರಗಳಲ್ಲಿ ನನ್ನ ಅಣ್ಣ ತಮ್ಮಂದಿರೇ ಹೆಚ್ಚು. ಅಲ್ಲೆಲ್ಲಾ ನಿನ್ನ ವಂಶಸ್ಥರು ಬಹಳ ಕಡಿಮೆ ಗೊತ್ತೇನು....~ ಎಂದು  ಸೈಕಲ್ ಜಂಬ ಕೊಚ್ಚಿಕೊಳ್ಳುತ್ತಿತ್ತು. ಅಷ್ಟರಲ್ಲಿ, ದೂರದಲ್ಲಿ ಶಾಲಾ ಬಸ್ ಬಂತೆಂದು ಅವನ ಸ್ನೇಹಿತರೆಲ್ಲಾ ಧಡಬಡಿಸಿ ಧಾವಿಸುತ್ತಾರೆ. ಇವನು ಕಣ್ಣುಬಿಟ್ಟು ನೋಡುತ್ತಾನೆ! ಅಲ್ಲಿ ನಿಲ್ಲಿಸಿದ್ದ ಸೈಕಲ್ ನಗುತ್ತಿರುವಂತೆ ಭಾಸವಾಗುತ್ತದೆ. ಅಷ್ಟರಲ್ಲಿ ಮೊಪೆಡ್ ಸವಾರ ಬಂದು ಅದನ್ನು ಚಾಲನೆಗೊಳಿಸುವಾಗ ಅದು ತಟಸ್ಥವಾಗಿರುವುದು ಕಂಡುಬರುತ್ತದೆ.

ಅದಕ್ಕೆ ಹಿಡಿಶಾಪ ಹಾಕುತ್ತಾ ಗ್ಯಾರೇಜಿನೆಡೆಗೆ ತಳ್ಳಿಕೊಂಡು ನಡೆಯುತ್ತಾನೆ. ಹುಡುಗನಿಗೆ ನಗು ಬರುತ್ತದೆ. ಕನಸನ್ನು ನೆನೆದು ಮನಸ್ಸಿನಲ್ಲಿ ಸಂತೋಷಪಡುತ್ತಾನೆ.
ಹುಡುಗ ತುಂಬ ಯೋಚಿಸುತ್ತಾನೆ.
 
ಕೊನೆಗೆ ಒಂದು ಬಣ್ಣ ಬಣ್ಣದ ಸೈಕಲ್ ಕೊಳ್ಳಲು ನಿರ್ಧರಿಸಿ ಎಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಬಸ್ ಹತ್ತಲು ಮಕ್ಕಳ ಮಧ್ಯೆ ಸೇರಿಕೊಳ್ಳುತ್ತಾನೆ. ತನ್ನ ಆಯ್ಕೆ ಸರಿ ಎನಿಸಿ ಅವನ ಮನಸ್ಸಿಗೆ ಬಹಳ ಸಮಾಧಾನವಾಗುತ್ತದೆ.
 -
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.