ADVERTISEMENT

ಇವ ಕಡಲೂರಿನ ಶಿವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 19:30 IST
Last Updated 26 ಫೆಬ್ರುವರಿ 2011, 19:30 IST
ಇವ ಕಡಲೂರಿನ ಶಿವ
ಇವ ಕಡಲೂರಿನ ಶಿವ   

ಒಂದೆಡೆ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಚಿನ್ನದ ಬಿಲ್ವಪತ್ರೆಗಳು. ಹಿನ್ನೆಲೆಯಲ್ಲಿ ಕತ್ತಲು. ಬಿಲ್ವಪತ್ರೆ ದೇವರ ಇರುವಿಕೆಯ ಸಂಕೇತವಾ? ಕತ್ತಲು ಬದುಕಿನ ತಿಮಿರದ ಬಿಂಬವಾ? ಅಲ್ಲೇ ಕಾಣುವ ಗಾಢ ಕೆಂಪು ಬಣ್ಣವು ಜ್ಞಾನ, ಆನಂದವನ್ನು ಪ್ರತಿಪಾದಿಸುತ್ತವಾ? ತಮಿಳುನಾಡಿನ ಚಿದಂಬರಂನಲ್ಲಿ ನಿಂತಾಗ ಹೀಗನ್ನಿಸುತ್ತದೆ. ಶಿವರಾತ್ರಿಯ ಸಿದ್ಧತೆಯಲ್ಲಿರುವ ಭಕ್ತಮನಗಳಿಗೆ ಚಿದಂಬರಂ ಹರುಷದ ಹುಲ್ಲುಗಾವಲಿನಂತೆ. ಕಡಲೂರು ಜಿಲ್ಲೆಯ ಕೊಲ್ಲಿಡ್ಯಾಂ ನದಿ ಕಣಿವೆಯಲ್ಲಿರುವ ಈ ದೇಗುಲದಲ್ಲಿಯ ಶಿವನ ಪೂಜೆ ನಿರ್ವಿಕಾರ ಕಲ್ಪನೆಯಲ್ಲಿ ನಡೆಯುತ್ತದೆಂಬುದು ವಿಶೇಷ.

ಪಂಚ ಶೈವ ದೇವಸ್ಥಾನಗಳಲ್ಲಿ ಚಿದಂಬರಂ ಆಕಾಶವನ್ನು, ತಿರುವಾನೈಕಾವಲ್ ಜಂಬುಕೇಶ್ವರ ಜಲವನ್ನು, ಕಂಚಿ ಏಕಾಂಬರೇಶ್ವರ ಭೂಮಿಯನ್ನು, ತಿರುವಣ್ಣಾಮಲೈ ಅರುಣಾಚಲೇಶ್ವರ ಅಗ್ನಿಯನ್ನು, ಕಾಳಹಸ್ತಿ ಗಾಳಿಯನ್ನು ಪ್ರತಿಬಿಂಬಿಸುತ್ತವೆ. ಈ ದೇವಸ್ಥಾನದಲ್ಲಿ ಶೈವ ಮತ್ತು ವೈಷ್ಣವ ಎರಡೂ ಸಂಪ್ರದಾಯದ ಭಕ್ತರು ಪೂಜೆ ಸಲ್ಲಿಸುತ್ತಾರೆ.

ದೇವಾಲಯದ ಒಳ ಹೋಗಲು 9 ದ್ವಾರಗಳಿವೆ. ದೇಗುಲದ ಪ್ರಾಂಗಣದಲ್ಲಿ ಈಶ್ವರನ ನಾಟ್ಯ ರೂಪದ 108 ಭಂಗಿಗಳನ್ನು ಕಾಣಬಹುದು.ದೇವಾಲಯದ ವಾಸ್ತು ಕೂಡ ವೈಶಿಷ್ಟವಾಗಿದೆ. ಇಲ್ಲಿ ಐದು ಸಭೆಗಳು ಇವೆ. ಮೊದಲನೆಯದು ಚಿಟ್ ಸಭೈ. ಇದರಲ್ಲಿ ನಟರಾಜನು ದೇವತೆ ಶಿವಾಗಮ ಸುಂದರಿ ಜೊತೆ ಕೂಡಿದ್ದಾನೆಂಬುದು ನಂಬಿಕೆ.

ಎರಡನೆಯದು ಕನಕ ಸಭೈ. ಇದು ಚಿಟ್ ಸಭೈ ಎದುರಲ್ಲಿ ಇದೆ. ಮೂರನೆಯದು ನೃತ್ಯ ಸಭೈ. ಇದು ಕೊಡಿಮರ (ಧ್ವಜಸ್ತಂಭ)ದ ಪಕ್ಕದಲ್ಲೇ ಇದೆ. ಐತಿಹ್ಯದ ಪ್ರಕಾರ ದೇವರು ಕಾಳಿಯ ಜೊತೆ ನೃತ್ಯ ಮಾಡಿ ಗೆದ್ದು ತನ್ನ ಸಾರ್ವಭೌಮತೆಯನ್ನು ತೋರಿಸಿರುವುದು ಇಲ್ಲೇ. ನಾಲ್ಕನೆಯ ಅಂಕಣ ರಾಜಾ ಸಭೈ. ಒಂದು ಸಾವಿರ ಕಂಬಗಳನ್ನು ಹೊಂದಿರುವ ದೊಡ್ಡ ಪ್ರಾಂಗಣ. ‘ಸಹಸ್ರಾರಾಮ’ ಎಂದು ಕರೆಯಲ್ಪಡುವ ಈ  ಸಹಸ್ರ ದಳದ ಕಮಲದ ಚಿಂತನೆ ಹೊಂದಿದೆ. ಐದನೆಯ ಅಂಕಣ ದೇವಸಭೈನಲ್ಲಿ ಪಂಚಮೂರ್ತಿಗಳು ಪ್ರತಿಷ್ಠಾಪಿತಗೊಂಡಿವೆ.
 
ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ವಿವಿಧ ಸ್ವರೂಪಗಳ ದರ್ಶನ ಇಲ್ಲಿ ಸಾಧ್ಯ. ಶಿವಗಂಗಾ ಕಲ್ಯಾಣಿ, ಪರಮಾನಂದ ಕೂಪಂ, ಕುಯ್ಯ ತೀರ್ಥಂ, ಪುಲಿಮಾಡು, ವ್ಯಾಘ್ರಪಥ ತೀರ್ಥಂ, ನಾಗಚೇರಿ, ಬ್ರಹ್ಮ ತೀರ್ಥ, ತಿರುಪಾರ್‌ಕಡಲ್ ಇಲ್ಲಿನ ಪ್ರಮುಖ ತೀರ್ಥಘಟ್ಟಗಳು.
ಚೆನ್ನೈನಿಂದ 240 ಕಿ.ಮೀ. ದೂರದಲ್ಲಿ ಚಿದಂಬರಂ ಇದೆ. ಕೊಲ್ಲಿಡ್ಯಾಮ್ ಹಾಗೂ ಶ್ರೀಕಾಶಿಯಿಂದ 20 ಕಿ.ಮೀ, ಕರೈಕ್ಕಲ್ ನಿಂದ 60 ಕಿ.ಮೀ. ಅಂತರದಲ್ಲಿ ಇದೆ. ಬೆಂಗಳೂರಿನಿಂದ ಮೈಲಾಡುತೊರೈವರೆಗೆ ರೈಲಿನಲ್ಲಿ ಹೋಗಬಹುದು.

ಅಲ್ಲಿಂದ 60 ಕಿ.ಮೀ. ಪ್ರಯಾಣ ರಸ್ತೆಯಲ್ಲೇ ಆಗಬೇಕು. ನಟರಾಜ ದೇವಸ್ಥಾನದ ಸಮೀಪ ತಿಳೈ ಕಾಳಿ ದೇವಸ್ಥಾನ ಮತ್ತು15 ಕಿ.ಮೀ. ದೂರದಲ್ಲಿ ಪಿಚಾವರಂ ಇದೆ. ಇದೊಂದು ಸಮುದ್ರ ಕಿನಾರೆಯ ರೆಸಾರ್ಟ್. ಸಿಹಿ ನೀರು ಲಭ್ಯವಿರುವುದರಿಂದ ತರಹೇವಾರಿ ಪಕ್ಷಿಗಳು ಇಲ್ಲಿವೆ. ದೇಶದ ಪ್ರಥಮ ರಾಷ್ಟ್ರೀಯ ಪಳೆಯುಳಿಕೆ ಮರಗಳ ಉದ್ಯಾನ ಫಾಸಿಲ್ ವುಡ್ ಪಾರ್ಕ್‌ಗೂ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.