ADVERTISEMENT

ಏಕಾಂತದ ಸುಖ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 12:40 IST
Last Updated 22 ಜನವರಿ 2011, 12:40 IST
ಏಕಾಂತದ ಸುಖ
ಏಕಾಂತದ ಸುಖ   

ದೆಹಲಿ ವಿಮಾನ ನಿಲ್ದಾಣ. ಹತ್ತಿರದ ಕಾಫಿ ಶಾಪ್‌ನ ಕೌಂಟರ್ ಎದುರು ಇಬ್ಬರು ನಟೀಮಣಿಯರು. ಇಬ್ಬರೂ ಪರಸ್ಪರ ನಟಿಸಿದ್ದಿಲ್ಲ. ಮೊದಲಿಗೆ ಉಭಯಕುಶಲೋಪರಿ. ಆಮೇಲೆ ಕಾಫಿ ಕುಡಿಯುವ ಸಂಕಲ್ಪ. ದುಡ್ಡು ಯಾರು ಕೊಡಬೇಕು ಎಂದು ಇಬ್ಬರ ನಡುವೆ ಐದು ನಿಮಿಷ ಪ್ರೀತಿಯ ವಾಗ್ವಾದ.

ಎಲ್ಲಕ್ಕೂ ಕಾಫಿ ಶಾಪ್‌ನಲ್ಲಿದ್ದ ಗ್ರಾಹಕರು, ಸಿಬ್ಬಂದಿ ಸಾಕ್ಷಿಯಾಗಿದ್ದರು. ಅಷ್ಟೇ ಏಕೆ, ಇಬ್ಬರೂ ನಟೀಮಣಿಯರ ಸೆಕ್ರೆಟರಿಗಳೂ ಅಲ್ಲಿದ್ದರು.ಇನ್ನೇನು ಕಾಫಿಗೆ ಹಣ ಕೊಡಬೇಕು ಎನ್ನುವಷ್ಟರಲ್ಲಿ, ‘ಸಾರಿ... ಕಾಫಿ ಇಲ್ಲಿ ಸಿಗೋಲ್ಲ; ಅಲ್ಲಿ ಸಿಗುತ್ತೆ ನೋಡಿ...’ ಎಂದು ಅಂಗಡಿಯವನು ಇನ್ನೊಂದು ಕಡೆಗೆ ಬೆರಳು ತೋರಿಸಿದ. ನಟೀಮಣಿಯರ ಕಾಫಿ ಪ್ರೀತಿಯ ಮಾತುಕತೆಯನ್ನು ಅಲ್ಲಿದ್ದವರೆಲ್ಲರೂ ಪುಕ್ಕಟೆಯಾಗಿ ಸವಿದರು.

ಹಾಗೆ ಕಾಫಿ ಶಾಪ್‌ನಲ್ಲಿ ಪ್ರೀತಿಯ ವಿನಿಮಯ ಮಾಡಿಕೊಂಡ ನಟೀಮಣಿಯರು- ವಿದ್ಯಾ ಬಾಲನ್ ಹಾಗೂ ಸೋನಂ ಕಪೂರ್. ಇನ್ನೊಂದು ಕಾಫಿ ಶಾಪ್‌ನಲ್ಲಿ ಕಾಫಿ ಸಿಕ್ಕಿತೆನ್ನಿ. ಆಗ, ಸೋನಂ ಮಾತಿನ ನಡುವೆ, ‘ನೀವು ಯಾರನ್ನಾದರೂ ಇಷ್ಟಪಟ್ಟಿದ್ದೀರಾ? ಮದುವೆ ಆಗುವಿರಾ?’ ಎಂದು ಕೇಳಿದರು. ವಿದ್ಯಾ ಬಾಲನ್ ತನ್ನ ಹ್ಯಾಂಡ್‌ಬ್ಯಾಗ್‌ನಿಂದ ಒಂದು ಮ್ಯಾಗಜೀನ್ ತೆಗೆದು, ಸೋನಂ ಎದುರಲ್ಲಿಟ್ಟರು. ಅದರ ಮುಖಪುಟದಲ್ಲಿ ಖುದ್ದು ವಿದ್ಯಾ ಚಿತ್ರವಿತ್ತು. ಒಳಗಡೆ ಒಂದು ಡಜನ್ ಫೋಟೋಗಳು. ಅವುಗಳ ಅಡಿಯಲ್ಲಿ ವಿದ್ಯಾ ಅಭಿಪ್ರಾಯಗಳು ಪ್ರಕಟವಾಗಿದ್ದವು. ನಿಧನಿಧಾನವಾಗಿ ಓದಿದ ಸೋನಂ, ಬೇರೇನೂ ಹೇಳದೆ ಸುಮ್ಮನೆ ನಕ್ಕರು.

ವಿದ್ಯಾ ಯಾರನ್ನೂ ಇಷ್ಟಪಟ್ಟಿಲ್ಲ. ಡೇಟಿಂಗ್ ಮತ್ತಿತರ ಸುದ್ದಿ ಹೊಮ್ಮಿದ್ದರೆ ಅದೆಲ್ಲವೂ ಗಾಸಿಪ್ ಅಷ್ಟೇ ಎಂಬುದು ಸ್ಪಷ್ಟನೆ. ಮದುವೆಯ ವಯಸ್ಸು ಮೀರುತ್ತಿದೆಯಲ್ಲವೇ ಎಂದು ಯಾರಾದರೂ ಕಿಚಾಯಿಸಿದರೂ ಅವರು ವಿಚಲಿತರಾಗುವುದಿಲ್ಲ; ‘ಸಿಂಗಲ್ ವುಮೆನ್ ಆರ್ ಸೆಕ್ಸಿ’ (ಅವಿವಾಹಿತ ಮಹಿಳೆಯರು ಸೆಕ್ಸಿ ಆಗಿರುತ್ತಾರೆ) ಎಂದು ಹೇಳಿ ಬಾಯಿಮುಚ್ಚಿಸುತ್ತಾರೆ.
 
ಗಂಡನಾಗುವವನಿಗೆ ಇರಬೇಕಾದ ಅರ್ಹತೆಯ ಅವರ ಪಟ್ಟಿ ಕೂಡ ಉದ್ದವಾಗಿಯೇ ಇದೆ. ಅದರ ಸಾರಾಂಶವನ್ನು ಕೆಲವೇ ಶಬ್ದಗಳಲ್ಲಿ ಹೇಳುವುದಾದರೆ- ಏಕಪತ್ನೀ ವ್ರತಸ್ಥನಾಗಬೇಕು, ಸಿನಿಮಾದವನಾದರೂ ಮನಸ್ಸು ಶುದ್ಧವಿರಬೇಕು, ಡ್ರೆಸ್ ಬಗ್ಗೆ ಅನಗತ್ಯವಾಗಿ ಕಾಮೆಂಟ್ ಮಾಡಬಾರದು, ಕೈ ತೊಳೆದುಕೊಂಡು ಮುಟ್ಟುವಷ್ಟು ಚೆಂದ ಇರಬೇಕು, ಒಳ್ಳೆಯ ಅಭಿರುಚಿ ಇರಬೇಕು, ನೋಡಿದೊಡನೆ ಗೌರವ ಮೂಡುವ ಹಾಗಿರಬೇಕು. ಆದರೆ, ಇಷ್ಟೆಲ್ಲ ಅರ್ಹತೆ ಇರುವ ಗಂಡು ಇನ್ನೂ ವಿದ್ಯಾ ಕಣ್ಣಿಗೆ ಬಿದ್ದಿಲ್ಲವಂತೆ. ಏಕಾಂತದಲ್ಲೇ ಸುಖವಿದೆ ಎಂಬ ತತ್ವವನ್ನೇ ಕೊನೆಗೆ ಅವರು ಸೋನಂ ಕಿವಿಗೆ ಹಾಕಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.