`ನೋಡಲು ಮರಳುಗಾಡಲ್ಲೇನಿದೆ?~ ಎಂದು ಹೇಳುವವರು ಒಮ್ಮೆ ಗುಜರಾತ್ ರಾಜ್ಯದ ಕಚ್ ಜಿಲ್ಲೆಯ `ಶ್ವೇತ ಮರುಭೂಮಿ~ಯನ್ನು ನೋಡಲೇಬೇಕು. ಮರಳುಗಾಡು ಹೀಗೂ ಇರುತ್ತದೆ ಎಂದು ಅಚ್ಚರಿ ಪಡಬೇಕಾದರೆ ಇದೇ ಸೂಕ್ತ ಸ್ಥಳ.
ಅಹಮದಾಬಾದ್‌ನಿಂದ ಸುಮಾರು ಮೂರು ತಾಸಿನ ಪ್ರಯಾಣದ ನಂತರ ಕಣ್ಣಮುಂದೆ ತೆರೆದುಕೊಳ್ಳುವ ಶ್ವೇತ ಸಮುದ್ರದಂಥ ಮರಳು. ಎಷ್ಟು ದೂರ ಕಣ್ಣು ಹರಿಸಿದರೂ ಬಿಳಿ ಹಾಸು. ಹೊತ್ತು ಇಳಿಯುವ ಹೊತ್ತಿನಲ್ಲಿ ಆ ವಿಶಾಲ ಬಯಲಿನಲ್ಲಿ ನಿಂತರೆ ಸೂರ್ಯಾಸ್ತದ ಅಂದ ಇನ್ನೂ ಚೆಂದ.
ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಎಂದು ಹೇಳುವಂತೆಯೇ `ಒಮ್ಮೆಯಾದರೂ ಶ್ವೇತ ಮರುಭೂಮಿಯ ಪ್ರಕೃತಿ ಶ್ರೀಮಂತಿಕೆ ನೋಡಲೇಬೇಕು~ ಅನಿಸುವುದು ಸಹಜ. ವಿದೇಶಿ ಪ್ರವಾಸಿಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆದು ತರುವ ವಿಶೇಷ ಆಕರ್ಷಣೆಯೂ ಈ ಮರಳುಗಾಡಿಗಿದೆ.
ಕೈಗಾರಿಕಾ ಕ್ಷೇತ್ರದಲ್ಲಿ ಚುರುಕಾಗಿ ಬೆಳೆಯುತ್ತಿರುವ ಈ ಭಾಗದಲ್ಲಿ ಅನೇಕ ಕಂಪೆನಿಗಳು ತಲೆಎತ್ತಿವೆ. ಆದರೆ ಅವೆಲ್ಲವೂ `ರಣ್ ಆಫ್ ಕಚ್~ ಮರುಭೂಮಿಯ ಅಂಚಿನಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.
ಆದ್ದರಿಂದ ಮರಳುಗಾಡಿನ ಸೊಗಸಿಗೆ ಕಾರ್ಖಾನೆಗಳ ಹೊಗೆಯ ಸೋಂಕು ತಾಗಿಲ್ಲ. ಬೆಳದಿಂಗಳಿನಲ್ಲಿ ಎದುರಿಗೆ ಇದ್ದವರ ಮುಖಗಳನ್ನು ಸ್ಪಷ್ಟವಾಗಿ ಕಾಣಿಸುವ ಬೆಳಕು ಇಲ್ಲಿರುತ್ತದೆ. ಚಂದಿರನ ಬೆಳಕು ಶ್ವೇತ ಮರಳಿನಿಂದ ಇನ್ನಷ್ಟು ಪ್ರಕಾಶಮಾನ. ಹುಣ್ಣಿಮೆಯ ಆಸುಪಾಸಿನ ದಿನಗಳಲ್ಲಿ ಬಣ್ಣ ಬೆಳಕಿನ ನೃತ್ಯ ನೋಡುವುದು ಸಾಧ್ಯ.
ಇಲ್ಲಿನ ಜನರು ಇದನ್ನು `ಚಿರ್ ಬತ್ತಿ~ (ಭೂತ ಬೆಳಕು) ಎಂದು ಕರೆಯುತ್ತಾರೆ.
ಹಗಲು ಹೊತ್ತು ಭಾರೀ ತಾಪಮಾನ; ರಾತ್ರಿಯಾದರೆ ಕೊರೆಯುವ ಚಳಿ. ಅದೇ ಇಲ್ಲಿನ ವಿಶೇಷ. ಗೆಳೆಯರೊಂದಿಗೆ `ಕ್ಯಾಂಪ್ ಫೈರ್~ ಹಾಕಿಕೊಂಡು ಕುಳಿತರೆ ಕಾಲ ಉರುಳಿದ್ದೇ ಗೊತ್ತಾಗದು. ಸ್ವಲ್ಪ ಎಚ್ಚರವಂತೂ ಅಗತ್ಯ.
ಚೇಳು ಹಾಗೂ ಹಾವು ಸುಳಿದಾಡುವುದು ಹೆಚ್ಚು. ಟೆಂಟ್ ಕ್ಯಾಂಪ್ ಹೊಂದಿರುವ ರೆಸಾರ್ಟ್‌ಗಳಲ್ಲಿ ತಂಗಿದ್ದರೆ ಸ್ವಲ್ಪ ಸುರಕ್ಷತೆ. ಆದರೆ ನಿಜವಾದ ಸೊಗಸು ಇರುವುದು ಹೊರಸುಗಳ ಮೇಲೆ ಕುಳಿತು ಊಟ ಮಾಡುವಲ್ಲಿ ಹಾಗೂ ಅದರ ಮೇಲೆಯೇ ಮೈಚೆಲ್ಲಿ ಮಲಗುವುದರಲ್ಲಿ. ಸೊಳ್ಳೆ ಕಾಟವಂತೂ ಇಲ್ಲವೆಂದೇ ಹೇಳಬೇಕು.
ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುವುದಿಲ್ಲ ಎಂದಾದರೆ ಬಂದ ವಾಹನದಲ್ಲಿಯೇ ಸಾಕಷ್ಟು ನೀರು ತಂದುಕೊಳ್ಳುವುದು ಒಳಿತು. ಏಕೆಂದರೆ ನೀರಡಿಕೆ ಎಂದರೆ ದೂರ ದೂರಕ್ಕೂ ಬರಿ ನೀರಿದೆ ಎನ್ನುವ ಭ್ರಮೆ ಅಷ್ಟೇ ಇಲ್ಲಿ! ವಿಶಾಲವಾಗಿ ಹರಡಿಕೊಂಡಿರುವ ಈ ಮರುಭೂಮಿ ಎರಡು ಭಾಗವಾಗಿದೆ.
ಒಂದು `ಪುಟ್ಟ ರಣ್~ ಹಾಗೂ ಇನ್ನೊಂದು `ಮಹಾ ರಣ್~. ಆದರೆ ಮಹಾ ರಣ್ ನೋಡುವುದೇ ವಿಶೇಷ ಎನಿಸುತ್ತದೆ. ಏಕೆಂದರೆ ವಿಸ್ತಾರ ಹೆಚ್ಚು. ಆದರೆ ಮಹಾ ರಣ್ ಮೂಲಕ ಸಾಗಿ ದೇಶದ ಗಡಿಯ ಕಡೆಗೆ ಹೋಗಿ ನೋಡುವುದು ಸ್ವಲ್ಪ ಕಷ್ಟ. ಅತ್ತ ಹೋಗಲು ಗಡಿ ಭದ್ರತಾ ಪಡೆಯಿಂದ ಅನುಮತಿ ಪತ್ರ ಹೊಂದಿರಬೇಕು.
`ಕಾಲೊ ಡುಂಗಾರ್~ ಕಡೆಯಲ್ಲಿ ನೋಡುವುದಕ್ಕೆ ಯಾವುದೇ ತೊಡಕಿಲ್ಲ. ಶ್ವೇತ ಮರಳುಗಾಡಿನಲ್ಲಿ ರಾತ್ರಿಯೊಂದನ್ನು ಕಳೆಯುವುದಕ್ಕೆ ಪ್ರವಾಸ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ.
ಏಕೆಂದರೆ ಈ ಮರುಭೂಮಿಯ ನಿಜವಾದ ಸೊಗಸು ಕಾಣುವುದೇ ರಾತ್ರಿಯಲ್ಲಿ. ಚಂದಿರನ ಬೆಳಕು ಇದ್ದರಂತೂ ಅದೊಂದು ಸ್ವಪ್ನಸದೃಶ ಲೋಕ! ಇಂಥದೊಂದು ಅದ್ಭುತ ಅನುಭವ ಪಡೆದು ಕಚ್ ಜಿಲ್ಲೆಯಲ್ಲಿ ಇನ್ನಷ್ಟು ಪ್ರವಾಸಿ ತಾಣಗಳನ್ನು ನೋಡಬಹುದು.
ಜಿಲ್ಲೆಯಲ್ಲಿ ದೊಡ್ಡ ಪಟ್ಟಣವಾದ ಭುಜ್, ವಾಣಿಜ್ಯ ನಗರಿಯಾದ ಗಾಂಧಿಧಾಮ್, ಬಂದರು ಪ್ರದೇಶ ಕಂಡ್ಲಾ ಮತ್ತು ಮುಂದ್ರಾ, ಹಳೆಯ ನಗರ ಅಂಜಾರ್, ಕಡಲ ತೀರ ಮಾಂಡ್ವಿ, ಐತಿಹಾಸಿಕ ನಗರಿ ಡೋಲಾವಿರಾ, ಭೂಕಂಪ ಕೇಂದ್ರ ಎನಿಸಿಕೊಂಡಿರುವ ಭಚಾವು ಹಾಗೂ `ಬಾಂದಣಿ~ ವಸ್ತ್ರಕ್ಕೆ ಖ್ಯಾತಿಯಾಗಿರುವ ಅಜಾರಖಪುರ ಕೂಡ ವಿಶಿಷ್ಟವಾದ ಸಾಂಸ್ಕೃತಿಕ ಚಹರೆಗಳಿಂದ ನೆನಪಿನಲ್ಲಿ ಉಳಿಯುತ್ತವೆ.
ಪ್ರಯಾಣ ಮಾರ್ಗದರ್ಶಿ
* ಬೆಂಗಳೂರಿನಿಂದ ಮುಂಬೈ ಇಲ್ಲವೆ ನೇರವಾಗಿ ಅಹಮದಾಬಾದ್‌ಗೆ ವಿಮಾನ ಸಂಪರ್ಕ ಲಭ್ಯ. ಅಹಮದಾಬಾದ್‌ಗೆ ಉದ್ಯಾನನಗರಿಯಿಂದ ರೈಲು ಸೇವೆಯೂ ಇದೆ.
* ಅಹಮದಾಬಾದ್‌ನಿಂದ ರಸ್ತೆ ಮಾರ್ಗವಾಗಿ ಕಚ್ ಜಿಲ್ಲೆ ತಲುಪಬಹುದು. ಗುಣಮಟ್ಟದ ರಸ್ತೆಗಳಿರುವ ಕಾರಣ 204 ಕಿ.ಮೀ. ದೂರದ ಮಾರ್ಗವನ್ನು ಮೂರು ತಾಸಿನಲ್ಲಿ ಸುಲಭವಾಗಿ ಕ್ರಮಿಸಬಹುದು.
* ಗುಜರಾತ್ ರಾಜ್ಯದ ಪೂರ್ವೋತ್ತರ ಜಿಲ್ಲೆಯಾದ ಕುಚ್ ವಿಸ್ತಾರ 45,000 ಚ.ಕಿ.ಮೀ. ಇದೆ. ಅದರಲ್ಲಿ ಮರುಭೂಮಿಯೇ ಹೆಚ್ಚು. ಆದ್ದರಿಂದ ಆ ಭಾಗದ ಪರಿಚಯ ಇರುವವರನ್ನು ಜೊತೆಗೆ ಕರೆದುಕೊಂಡು ಹೋಗುವುದು ಒಳಿತು. ವಾಹನ ಚಾಲಕ ಸ್ಥಳೀಯನಾದರೆ ಇನ್ನೂ ಒಳ್ಳೆಯದು.
* ಧಾರ್ಡೊ ತಲುಪಿ ಅಲ್ಲಿಂದ 3 ಕಿ.ಮೀ. ದೂರ ಸಾಗಿದರೆ ಸಾಕು ಶ್ವೇತ ಮರುಭೂಮಿ ಸಿಗುತ್ತದೆ.
* ಈ ಭಾಗದಲ್ಲಿ ಪ್ರವಾಸಿಗಳ ಅನುಕೂಲಕ್ಕಾಗಿ ಟೆಂಟ್ ರೆಸಾರ್ಟ್‌ಗಳು ತಲೆ ಎತ್ತಿವೆ. ಸ್ವಲ್ಪ ದುಬಾರಿ. ವಾಹನ ನಿಲ್ಲಿಸಿದಲ್ಲಿಯೇ ಕ್ಯಾಂಪ್ ಫೈರ್ ಹಾಕಿಕೊಂಡೂ ರಾತ್ರಿ ಕಳೆಯಬಹುದು.
* ಪ್ರವಾಸದ ನೆನಪಿಗಾಗಿ ಕಚ್ ಕರಕುಶಲ ಕಲೆಯ ಮಡಿಕೆ, ಪ್ರತಿಮೆ ಹಾಗೂ
ಸಾಂಪ್ರದಾಯಿಕ ಉಡುಪುಗಳನ್ನು ಕೊಳ್ಳಬಹುದು.
*ಅಹಮದಾಬಾದ್ ಮಾರ್ಗವಾಗಿ ಹೋಗುವಾಗ ಸಿಗುವ ಕೆನ್ಸ್‌ವಿಲ್ಲೆ ಗಾಲ್ಫ್ ಕ್ಲಬ್ ನೋಡುವಂಥ ಸ್ಥಳ.
* ಶ್ವೇತ ಮರುಭೂಮಿಯ ಕಾಡುಕತ್ತೆಗಳು ಅಪರೂಪದ ವನ್ಯಜೀವಿ. ಹಿಂಡಾಗಿ ಕಾಣುವುದು ಅಪರೂಪ. ಕುರುಚಲು ಹುಲ್ಲಿರುವ ಕಡೆ ಕಾಯ್ದರೆ ವಿಶೇಷ ಕತ್ತೆ ಕಣ್ಣಿಗೆ ಬಿದ್ದೀತು.
*ಸುರೇಂದ್ರನಗರ ರೈಲು ನಿಲ್ದಾಣ ಈ ಮರುಭೂಮಿಯಲ್ಲಿನ ವಿಶೇಷ ಆಕರ್ಷಣೆ. ಈ ಮಾರ್ಗವಾಗಿ ಹಾದು ಹೋಗುವ ಐಷಾರಾಮಿ ರೈಲನ್ನು ನೋಡುವುದೇ ವಿಶೇಷ ಅನುಭವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.