ADVERTISEMENT

ಒಂದು ಊರಿನ ವೃತ್ತಾಂತ

(ಒಂದು ವಿನೋದಮಯ-ಪದ್ಯವು)

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಈ ಊರು ಮುಂಚಿನಂತಿಲ್ಲ
ಮುಂದೆ ಹೆಂಗಿರುತ್ತೋ ಊಹಿಸುವಂತಿಲ್ಲ

ಈಗಿನಂತಿರುವ ಈ ಊರಲ್ಲಿ
ನೀಟಾದ ಕಾಂಕ್ರೀಟ್ ರಸ್ತೆಗಳಿವೆ
ಸುವ್ಯವಸ್ಥಿತ ಚರಂಡಿಗಳಿವೆ
ಅಚ್ಚುಕಟ್ಟಾದ ವಾಸದ ಮನೆಗಳಿವೆ
ಆಸ್ಪತ್ರೆಯ ಭವ್ಯ ಕಟ್ಟಡಗಳಿವೆ
ಸುಂದರ ಐಷಾರಾಮಿ ಶಾಲಾ-ಕಾಲೇಜುಗಳಿವೆ
ಪೊಲೀಸು ಸ್ಟೇಷನ್ನೋ ಕಣ್ಣು ಕೋರೈಸುತ್ತಿದೆ
ಜೈಲಿನ ಗೋಡೆಗಳ ಮೇಲೆ ನೀಟಾದ ಅಕ್ಷರಗಳಲ್ಲಿ
ಸ್ವಾತಂತ್ರ್ಯದ ಕನಸು ಬಿತ್ತುವ ವಾಕ್ಯಗಳ ಕೆತ್ತಿ
ಜೈಲು ದೇವಸ್ಥಾನದಂತೆ ಕಂಗೊಳಿಸುತ್ತಿದೆ
ದೇವಸ್ಥಾನಗಳೋ ಅಭೂತ, ಅಭೇದ್ಯ
ಗಗನ ಮುಟ್ಟುವ ಕಲಶ, ನಂದದ ನಂದಾದೀಪ
ಅಲ್ಲಿ ಗರ್ಭಗುಡಿಯಲ್ಲಿ ದೈವದ ಕಣ್ಣೇ ಕುಕ್ಕಿ ಕುರುಡಾದಂತೆ
ಪಾಪ ಪುಣ್ಯಗಳೆಂಬ ವ್ಯತ್ಯಾಸವಳಿದು
ಸ್ವರ್ಗವೊಂದೇ ನೆಲೆಗೊಂಡಿದೆ.

ಊರಿನ ತುಂಬೆಲ್ಲ ದೊಡ್ಡ ದೊಡ್ಡ ಮಾಲ್‌ಗಳಿವೆ
ಅಲ್ಲಿ ಬೇಕಾದ್ದು ಬೇಡಾದ್ದು ಎಲ್ಲ ಸಿಕ್ಕುತ್ತದೆ
ಏನು ಬೇಕಾದರೂ ಬಿಕರಿಯಾಗುತ್ತದೆ.
* * *
ಇಲ್ಲಿ ಮನುಷ್ಯರು ದಿನಾ ಸ್ನಾನ ಮಾಡುತ್ತಾರೆ
ಸೋಫಿನ ಪರಿಮಳ ತುಂಬಿ ಗಾಳಿ ಗಂಧವಾಗಿ
ಊರೆಲ್ಲ ನಾರುತ್ತದೆ
ಸುಗಂಧ ದ್ರವ್ಯಗಳ ಪೂಸಿ, ಸುವಾಸಿತ ಸೊಗಸುಗಾರರಾಗಿ
ರಾಜಕೀಯದ ಕೀಲಿ ಕೈ ಸದಾ ತೋರು ಬೆರಳಲ್ಲಿ-
ರಿಂಗು ರಿಂಗು ತಿರುಗಿಸುತ್ತಾ ರಾಜಕೀಯದ ಉಸಿರನ್ನೇ ಉಸಿರಾಡುತ್ತಾರೆ
ಈ ಉಸಿರೇ ಈ ಊರಿನ ಗಾಳಿ, ಪವನ, ಮಾರುತ, ಚಂಡಮಾರುತ
ಅವರೆಲ್ಲ ಸುಖವಾಗಿರುವಂತೆ ಕಾಣಿಸುತ್ತಾರೆ
ಯಾಕೆಂದರೆ ಅವರೆಲ್ಲ ಮುಂಜಾನೆಗೇ ವಾಕಿಂಗು ಹೋಗುತ್ತಾರೆ
ಪ್ರಾಣಾಯಾಮ, ವ್ಯಾಯಾಮ ಎಲ್ಲವನ್ನೂ ಮಾಡುತ್ತಾರೆ.
* * *

ಹೆಣ್ಣು ಗಂಡೆಂಬ ಭೇದವಿಲ್ಲದೆ ಸುತ್ತುವ ನೋಟ
ಅ-ಸಾಮಾನ್ಯವೆಂದೇನೂ ಅಲ್ಲ
ಹೆಣ್ಣು ಗಂಡಿನೊಳಕ್ಕೂ, ಗಂಡು ಹೆಣ್ಣಿನೊಳಕ್ಕೂ
ಸಲೀಸು ಸಾತಿ, ಸಲೀಸು ಹೊಕ್ಕು, ಸಲೀಸು ಆಟವಾಡುತ್ತಾರೆ
ಇಲ್ಲಿ ಅಸಂಖ್ಯ ವಿಚ್ಛೇದನದಲ್ಲೂ ಮದುವೆಯೆಂಬುದು
ವಿಜೃಂಭಿತ, ಚುಂಬಿತ, ವಾಂಛಿತ, ಕ್ರೀಡಾ ವಿನೋದಿತ.
ಹಾಗಾಗಿ ಈಗ ಎಲ್ಲರೂ
ಕೂಡಿದ್ದ ಕಳೆಯುತ್ತಾ, ಕಳೆದದ್ದ ಕೂಡಿಸುತ್ತಾ
ಲೆಕ್ಕವೇ ಪ್ರಾಣವಾಗಿ, ಆಸೆಯೇ ಕಾಸಾಗಿ
ಕಾಸಿನ ಕಿಮ್ಮತ್ತಿನಲ್ಲಿ ಮಗ್ನರಾಗಿ
ವಿಶ್ವವೇ ಅಂಗೈಯೊಳಗೆ ಲಿಂಗವಾಗಿ
ಜಂಗಮವೆ ಮೈವೆತ್ತಂತೆ ಸ್ಥಾವರ ನೆಲೆ ನಿಂತು
ನಿಶ್ಚಿಂತರಂತೆ ತೋರುತ್ತಾರೆ
ಸಾವಿನಾಟಕ್ಕಂಜದ ಧೀರರು, ಶೂರರು ಇವರೆಲ್ಲ
ಅಣು ತೃಣಗಳ ಕಣ್ಣೋಟದಲ್ಲೇ ಸೀಳಿ
ದ್ವಿ-ದಳನ, ವಿ-ದಳನ, ಸಹಸ್ರ-ದಳನ ಶಕ್ತಿ ನಿರ್ವಚನ.
ದಿಗ್ಮಂಡಲ, ಗಗನ ಮಂಡಲ ತಾರಾಮಂಡಲ ಭೇದಿಸಿ
ಚಂದ್ರ ಸೂರ್ಯರನೆ ಆಳಿಕೆಯಾಗಿಸಿ
ಮಂಗಳನಂಗಳದಲ್ಲೊಂದು ಅಂಗಡಿ ತೆರೆದು,
ಬಡ್ಡಿಸಮೇತ ಮತ್ತೆ ಭೂ ಮಂಡಲಕ್ಕಿಳಿದು
ಅಲ್ಲಿಗೂ ಇಲ್ಲಿಗೂ ಹಗಲಿರುಳು ಸವೆಸುವರು
ಸೃಷ್ಟಿಯ, ಮರುಸೃಷ್ಟಿಯ ತದ್ರೂಪಿನ ಚತುರರು
ಹಾಲಾಹಲಕ್ಕಂಜದ ನಂಜುಂಡರು
ಆಮೇಲಾಮೇಲೆ ಭಸ್ಮಾಸುರ ವರ ಪ್ರಸಾದಿತರೆಂಬ
ವದಂತಿಗೆ ಕಿವಿಗೊಡದವರು, ಈ ಊರವರು.

ADVERTISEMENT

ಅಂತೂ ಈಗಿನ ಈ ಊರು
ಈಗಿರುವಂತಿರುವೀ ಊರು ಭಂಗಗೊಳ್ಳದ
ಕ್ಷೇಮದ ತವರು, ಅಮರಾವತಿಯ ಕೊಸರು
***
ಅಯ್ಯಾ ನಾನೂ ಈ ಊರಿನವನೆ,
ಇದರ ರಕ್ತ, ಮಾಂಸ, ಇದರ ನರ, ಇದರ ಮಿದುಳೆಂಬುದು
ನಿಮ್ಮ ದಿವ್ಯ ಪ್ರಜ್ಞೆಯಲ್ಲಿರಲಿ.
ನಾನು ಕವಿಯೆಂಬುದು ಸೆಕೆಂಡರಿಯಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.