ADVERTISEMENT

ಒಲವೇ ಜೀವನ ಚಿತ್ತಾರ

ಅಮಿತ್ ಎಂ.ಎಸ್.
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST
ಒಲವೇ ಜೀವನ ಚಿತ್ತಾರ
ಒಲವೇ ಜೀವನ ಚಿತ್ತಾರ   

ಜೀವನಾನುಭವ ಮತ್ತು ಸಾಮಾಜಿಕ ಕಳಕಳಿಯ ಮೂಸೆಯಲ್ಲಿ ಅರಳಿದ ಕಲಾಕೃತಿಗಳವು. ಚರಿತ್ರೆಯ ಘಮಲು ಇನ್ನೂ ಹಸಿಯಾಗಿರುವಂತೆ, ಭವಿಷ್ಯದ ಆಶಯ ಆತಂಕಗಳು ವಾಸ್ತವದಲ್ಲೇ ಸುಳಿದಾಡಿದಂತೆ, ವರ್ತಮಾನದ ಬದುಕು ಹುಟ್ಟು ಸಾವಿನ ನಡುವೆ ಹೊರಳಾಡುತ್ತಿರುವಂತೆ ಕಲ್ಪನೆ ಮತ್ತು ನೈಜತೆಯ ನೆಲೆಗಟ್ಟಿನಲ್ಲಿ ಬಣ್ಣಗಳಿಗೆ ಜೀವ ತುಂಬಿದವರು ಕಲಾವಿದ ಬಿ.ಡಿ.ಜಗದೀಶ್.

2001ರಲ್ಲಿ ಅಮೆರಿಕ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ಸಂದರ್ಭವದು. ಅತ್ತ ಬಿನ್ ಲಾಡೆನ್ ಕುರಿತು ಜಗತ್ತಿನ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಾಗ ಇತ್ತ ಜಗದೀಶ್ ಮೇಲೂ ಮಾಧ್ಯಮಗಳ ದೃಷ್ಟಿ ಬಿತ್ತು. ಪೊಲೀಸರೂ ಇವರ ಮೇಲೆ ಕಣ್ಣಿಟ್ಟರು.

ದೇಶವಿದೇಶದ ಪತ್ರಿಕೆ, ವಾಹಿನಿಗಳಲ್ಲಿ ಜಗದೀಶ್ ಸುದ್ದಿಯಾದರು. ಲಾಡೆನ್ ಮತ್ತು ಜಗದೀಶ್ ನಡುವೆ ಸಂಪರ್ಕವಿದೆಯೇ ಎಂಬ ಪ್ರಶ್ನೆಗಳನ್ನು ಮಾಧ್ಯಮಗಳು ಹುಟ್ಟುಹಾಕಿದವು. ಇದಕ್ಕೆ ಕಾರಣವಾಗಿದ್ದು ಜಗದೀಶ್ ಅವರ ಒಂದು ಕಲಾಕೃತಿ.

ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ ನೆಲಸಮವಾಗುವ ಚಿತ್ರಣವನ್ನು ದುರಂತ ಸಂಭವಿಸುವ ನಾಲ್ಕು ವರ್ಷಗಳ ಮೊದಲೇ ಜಗದೀಶ್ ತಮ್ಮ ಕಲಾಕೃತಿಯಲ್ಲಿ ಮೂಡಿಸಿದ್ದರು. 1995ರಲ್ಲಿ ಅಮೆರಿಕದಲ್ಲಿ ನಡೆದ ಅಪರಾಧ ತಡೆ ಕುರಿತ ಸಮ್ಮೇಳನವೊಂದರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಸುತ್ತಮುತ್ತ ಹಾರಾಡುತ್ತಿದ್ದ ವಿಮಾನ - ಹೆಲಿಕಾಪ್ಟರ್‌ಗಳನ್ನು ಕಂಡಿದ್ದರು.

ಒಂದು ವೇಳೆ ಈ ವಿಮಾನಗಳು ಕಟ್ಟಡದ ಒಳಹೊಕ್ಕರೆ? ಇಂಥದ್ದೊಂದು ಕಲ್ಪನೆ ಅವರ ಮನಸಿನಲ್ಲಿ ಮೂಡಿತ್ತು. ಆ ಪ್ರಶ್ನೆಯೇ ಕಲಾಕೃತಿಯಾಗಿ ಜೀವದಳೆಯಿತು. ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಮಾನ, ನೆಲಕ್ಕುರುಳುತ್ತಿರುವ ಕಟ್ಟಡದ ಭಾಗಗಳು, ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ದೂಳು, ಅವಶೇಷಗಳಡಿ ಸಿಕ್ಕವರ ಆಕ್ರಂದನ...

ಹೀಗೆ ನಾಲ್ಕು ವರ್ಷದ ಬಳಿಕ ನಡೆದ ದಾಳಿಯ ನೀಲನಕ್ಷೆಯಂತೆ ಈ ಕಲಾಕೃತಿ ಮಾಧ್ಯಮಗಳ ಕಣ್ಣಿಗೆ ಕಂಡದ್ದು ಅಚ್ಚರಿಯೇನಲ್ಲ. ಈಗ `ಜೀರೋ~ ಸ್ಥಳದಲ್ಲಿ ಇರಿಸಲು ಈ ಕಲಾಕೃತಿ ಸೇರಿದಂತೆ ಜಗದೀಶ್ ಅವರ ವಿವಿಧ ಕಲಾಕೃತಿಗಳಿಗೆ ಬೇಡಿಕೆ ಬಂದಿದೆ.

ವರ್ಣಚಿತ್ರ ಮತ್ತು ಶಿಲ್ಪಕಲೆ ಎರಡೂ ಪ್ರಕಾರಗಳಲ್ಲಿ ಜಗದೀಶ್ ಅವರ ಸುಮಾರು ಮೂರು ದಶಕಗಳ ಸಾಧನೆ ಅನನ್ಯ. ತೀರ್ಥಹಳ್ಳಿ ತಾಲ್ಲೂಕಿನ ಬಾಣಂಕಿ ಎಂಬ ಪುಟ್ಟ ಗ್ರಾಮದಲ್ಲಿನ ಕಡುಬಡತನದ ಕುಟುಂಬದಲ್ಲಿ ಜನಿಸಿದ (1955) ಅವರ ಕುಂಚದಲ್ಲಿ ಅದ್ದಿದ ಬಣ್ಣ ಮೂಡಿಸಲು ಪ್ರೇರೇಪಿಸಿದ್ದು ಬಣ್ಣಹೀನ ಬದುಕಿನ ಚಿತ್ರಣವನ್ನೇ.
 
ಧಾನ್ಯ ತುಂಬುವ ಚೀಲಗಳಿಂದ ಸೆಣಬಿನ ದಾರಗಳನ್ನು ಕಿತ್ತು ಅದನ್ನೇ ಕುಂಚವನ್ನಾಗಿಸಿ ಬರೆಯುತ್ತಿದ್ದ ದಿನಗಳವು. ಆಗ ಚಿತ್ರಬಿಡಿಸಲು ಬೇಕಾದ ಕಾಗದ ತರುವಷ್ಟೂ ಆರ್ಥಿಕ ಚೈತನ್ಯ ಇರಲಿಲ್ಲ. ಜೊತೆಗೆ ಆಗಿನ ಸಾಮಾಜಿಕ ಸ್ಥಿತಿಗತಿಯೂ ಈ ಕಲಾಮಾಧ್ಯಮಕ್ಕೆ ಹತ್ತಿರವಿರಲಿಲ್ಲ.

ಆದರೆ ಸಂಕಷ್ಟದ ಆ ದಿನಗಳು ಜಗದೀಶ್ ಅವರ ಕಲಾಜಗತ್ತಿನ ಹಸಿವನ್ನು ಹತ್ತಿಕ್ಕಲಿಲ್ಲ. ಬದಲಾಗಿ ಕಲಾವಿದನ ಕಲಾಭಿವ್ಯಕ್ತಿಯ ಮನಸಿನಲ್ಲಿ ಹೊಸ ಆಯಾಮಗಳಿಗೆ ಜೀವ ನೀಡಿತು. ಕಟ್ಟೆಹಕ್ಕಲಿನಲ್ಲಿ ಪ್ರೌಢಶಾಲೆ ಮೆಟ್ಟಿಲು ತುಳಿದಾಗ ಅವರಲ್ಲಿದ್ದ ಚಿತ್ರಕಲೆ ಮತ್ತು ಟೆರಾಕೋಟಾ ಕಲಾ ಪ್ರತಿಭೆ ಬೆಳಕಿಗೆ ಬಂದಿತು.

ಪಿಯುಸಿ ಬಳಿಕ ಬೆಂಗಳೂರಿನ ದಿಕ್ಕು ಹಿಡಿದ ಬಳಿಕ ಜಗದೀಶ್ ಬದುಕು ಬದಲಾಯಿತು. `ಕೆನ್ ಕಲಾ ಶಾಲೆ~ಯಲ್ಲಿ ಚಿತ್ರಕಲೆಯ ಒಳಗಣ್ಣಿನ ಪರಿಚಯವಾಯಿತು. ವೈ.ಸುಬ್ರಹ್ಮಣ್ಯ ರಾಜು ಅವರಂತಹ ಕಲಾವಿದರ ಗರಡಿಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಕರಗತವಾಯಿತು. ಆರ್.ಎಂ.ಹಡಪದ್ ಅವರ ಮಾರ್ಗದರ್ಶನ ಕಲೆಯ ನವ ಪ್ರಯೋಗಗಳ ಸಾಧ್ಯತೆಗಳನ್ನು ಕಲಿಸಿತು. ಕಲೆಯ ಒಂದು ಪ್ರಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ಅವರದ್ದಲ್ಲ.

ಸಾಂಪ್ರದಾಯಿಕ ಕಲೆ, ನವ್ಯಕಲೆ, ಸೆರಿಯಾಲಜಿ, ಕ್ಯೂಬಿಸಂ, ಪಾಯಿಂಟಲಿಸಂ... ಇವೆಲ್ಲಾ ಕೆಲವು ಕಾಲಘಟ್ಟದ ಕಲಾ ವಿಧಾನದ ಅನ್ವೇಷಣೆಗಳಷ್ಟೇ. ಅದನ್ನು ವರ್ಗೀಕರಿಸುವುದು ಸರಿಯಲ್ಲ. ಅನುಕರಣೆಯಂತೂ ನಮ್ಮ ವೈಯಕ್ತಿಕ ಸೃಜನಶೀಲತೆಯ ಸಾಮರ್ಥ್ಯವನ್ನೇ ಅಂತ್ಯಗಾಣಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಪಿಕಾಸೋ, ವ್ಯಾನ್‌ಗೋ, ಮೈಕಲಾಂಜೆಲೋ, ಡಾ ವಿಂಚಿ ಇವರೆಲ್ಲಾ ಪ್ರಸಿದ್ಧ ಚಿತ್ರಕಾರರು. ಹಾಗೆಂದು ಅವರ ಶೈಲಿ ಅಥವಾ ಚಿತ್ರಕಲಾ ಪ್ರಕಾರವನ್ನು ಇಂದಿನವರು ಅನುಕರಿಸಿದರೆ ಅವರ ಶ್ರೇಯಸ್ಸೆಲ್ಲವೂ ಆ ಚಿತ್ರಕಾರರಿಗೆ ಸಲ್ಲುತ್ತದೆಯೇ ಹೊರತು ಅವರನ್ನು ಅನುಕರಿಸಿದವರಿಗಲ್ಲ. ಅವರ ಈ ಮಾತುಗಳನ್ನು ಅವರ ಕಲಾಕೃತಿಗಳು ಸಹ ಧ್ವನಿಸುತ್ತವೆ.

ಜಗದೀಶ್ ಅವರ ಕಲಾಕೃತಿಗಳಲ್ಲಿ ಅಭಿವ್ಯಕ್ತಗೊಂಡಿರುವ ವೈಚಾರಿಕ ಚಿಂತನೆಗಳು, ಸಾಮಾಜಿಕ ಕಳಕಳಿಯ ಸಂಗತಿಗಳು, ಸಾಮಾನ್ಯ ಜನಜೀವನದ ತವಕ ತಲ್ಲಣಗಳು ಸಮಾಜದ ನಿರ್ಭೀತ ಚಿತ್ರಣಗಳೆಡೆಗಿನ ಅವರ ಬದ್ಧತೆಯ ಪ್ರತೀಕಗಳು. ಸಾಂದರ್ಭಿಕವಾಗಿ ಜನ್ಮತಳೆದ ಈ ಚಿತ್ರಗಳು ಸಾರ್ವಕಾಲಿಕವಾಗಿ ಮೌಲಿಕ ಎನಿಸುವುದಕ್ಕೆ ಸಾಗರದಾಚೆಗಿನ ಹತ್ತು ಹಲವು ರಾಷ್ಟ್ರಗಳಿಗೂ ಅವು ಸಾಗಿರುವುದೇ ನಿದರ್ಶನ.

ಕಲಾವಿದ ಕಲೆಯಲ್ಲಿ ಪರಿಪಕ್ವಗೊಳ್ಳುವುದು ಅದರಲ್ಲಿ ಅನುಭವ ಗಳಿಸಿದಾಗ. ಸೀಮಿತ ಮತ್ತು ಸಂಕುಚಿತ ಮನೋಭಾವವಿದ್ದರೆ ಅದು ಸಾಧ್ಯವೇ ಇಲ್ಲ. ತಾನು ಕಲ್ಪಿಸಿದ ವಿಷಯ ವಸ್ತುವಿಗೆ ಆಕಾರ ಕೊಡುವುದಷ್ಟೇ ಕಲಾವಿದನ ಕೆಲಸವಲ್ಲ. ಆತ ಸಮಾಜದ ಪ್ರತಿನಿಧಿ. ಕಲಾವಿದನ ಕಲ್ಪನೆ ಬೆರೆತರೂ ಅದು ಸಮಾಜದ ಮುಖಗಳನ್ನು ಪ್ರತಿಬಿಂಬಿಸುವಂತಿರಬೇಕು.

ಕಲೆಯ ಒಳಗು ಹೊರಗುಗಳ ಅರಿವಿಲ್ಲದ ಸಾಮಾನ್ಯನೊಬ್ಬನಿಗೂ ಆ ಚಿತ್ರರೂಪಕ ಮನಮುಟ್ಟುವಂತಿರಬೇಕು. ಮೇಲಾಗಿ ಅದು ತನ್ನದೇ ಚಿತ್ರಣ ಎಂಬ ಭಾವುಕತೆಯನ್ನು ಸೃಷ್ಟಿಸಬೇಕು. ಸಾಮಾಜಿಕ ವ್ಯವಸ್ಥೆಯ ಸಕಾರಾತ್ಮಕ ಬದಲಾವಣೆಗೆ ಅದು ಕಾರಣವಾಗಬೇಕು- ಹೀಗೆ ಕಲೆ ಮತ್ತು ಕಲಾವಿದನ ಕರ್ತವ್ಯದ ಕುರಿತು ವ್ಯಾಖ್ಯಾನಿಸುತ್ತಾರೆ ಜಗದೀಶ್.

ಕಲಾಕೃತಿಗಳು ಭಾಷೆ ಮತ್ತು ಅಭಿನಯ ಎರಡಕ್ಕಿಂತಲೂ ವೇಗವಾಗಿ ಜನರನ್ನು ತಲುಪುತ್ತದೆ ಎನ್ನುತ್ತಾರೆ ಜಗದೀಶ್. ಕಲೆಗೆ ಭಾಷೆಯ ಹಂಗಿಲ್ಲ. ಅದು ಸಾರ್ವತ್ರಿಕ. ಕನ್ನಡಿಗನ ಕಲಾಕೃತಿ ಇರಾನಿಗೂ ಹೋಗುತ್ತದೆ. ಜರ್ಮನಿಯವನಿಗೂ ಇಷ್ಟವಾಗುತ್ತದೆ. ಜಪಾನಿಗನಿಗೂ ಅರ್ಥವಾಗುತ್ತದೆ. ಕಲೆಯ ಸ್ಪಂದನಾ ಶಕ್ತಿ ಅಸಾಮಾನ್ಯ. ಹೀಗಾಗಿ ದೇಶಗಳ ನಡುವಿನ ಸಾಂಸ್ಕೃತಿಕ ರಾಯಭಾರಿಯಾಗುತ್ತದೆ ಎನ್ನುತ್ತಾರೆ ಅವರು.
ಕಲೆಯ್ಲ್ಲಲಿ ವರ್ಗಬೇಧ ಮಾಡುವುದಕ್ಕೆ ಜಗದೀಶ್‌ರ ವಿರೋಧವಿದೆ.

`ದಲಿತ ಕಲಾಸಮ್ಮೇಳನ~ ಎಂದು ದಲಿತ ಕಲಾವಿದರ ಪ್ರತ್ಯೇಕ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದಾಗ ಹಡಪದ್ ಅವರಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಸಾಂಸ್ಕೃತಿಕ ವಲಯದಲ್ಲಿ ವರ್ಗಬೇಧ ಮಾಡುವುದಾದರೆ ಬಣ್ಣಗಳನ್ನೂ ಇದೇ ರೀತಿ ವಿಂಗಡಿಸುತ್ತೀರಾ ಎಂದು ಪ್ರಶ್ನಿಸಿದ್ದರು.

ಒಂದು ವರ್ಗದ ಕಲಾವಿದರನ್ನು ಗುರುತಿಸುವ ಪ್ರಯತ್ನದ ಕುರಿತು ಜಗದೀಶ್ ಅವರಿಗೆ ಭಿನ್ನಾಭಿಪ್ರಾಯವಿರಲಿಲ್ಲ. ಆದರೆ ಅದರೊಟ್ಟಿಗೆ ಕಲೆಯನ್ನು ಸಹ ಸಾಮಾಜಿಕ ನಂಟಿನಿಂದ ದೂರಸರಿಸಿ ವಿಶ್ಲೇಷಿಸುವ ಪ್ರಯತ್ನ ಅಪಾಯಕಾರಿ ಎಂಬುದು ಅವರ ಅಭಿಪ್ರಾಯವಾಗಿತ್ತು.

ಬೆಂಗಳೂರಿನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಕಿಸ್ತಾನದ ಮಗು ನೂರ್ ಫಾತಿಮಾಳಿಗಾಗಿ ಜಗದೀಶ್ ಬರೆದುಕೊಟ್ಟ ಕಲಾಕೃತಿ ಎರಡೂ ರಾಷ್ಟ್ರಗಳ ಸಂಬಂಧದ ಬಿರುಕನ್ನು ಶಾಶ್ವತವಾಗಿ ಮುಚ್ಚುವ ಆಶಯವನ್ನು ವ್ಯಕ್ತಪಡಿಸುತ್ತದೆ. ಇಲ್ಲಿ ದೇಶಗಳ ನಡುವೆ ಇರುವುದು ಒಂದು ವೈರುಧ್ಯ ಮನೋಭಾವದ ಗೆರೆಯಷ್ಟೇ.

ಗೆರೆಯನ್ನಳಿಸಿ ಎರಡೂ ಹೃದಯಗಳನ್ನು ಬೆಸೆಯಬಹುದು ಎಂಬುದು ಜಗದೀಶ್ ಅಭಿಮತ. ಅಣುಒಪ್ಪಂದ ಕುರಿತಂತೆ ರಚಿಸಿದ್ದ ಕಲಾಕೃತಿ ಸಹ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಜಗದೀಶ್ ಪೆನ್ಸಿಲ್‌ನ ರೇಖೆಯಲ್ಲಿ ಮೂಡಿಸಿದ್ದ ತಮ್ಮ ಚಿತ್ರವನ್ನು ನೋಡಿದ ಕುವೆಂಪು, `ಕಲ್ಲಿನ ಬಂಡೆಯಂತಹ ಭಾರವಾದ ಸಮಾಜದ ಕೆಳಗೆ ಒಂದು ಕಲೆಯ ಗರಿಕೆ ಹುಲ್ಲು ಬೆಳೆಯುತ್ತಾ ಇದೆ. ಅದನ್ನು ಹಸು ತಿನ್ನದಂತೆ ಜೋಪಾನವಾಗಿ ಕಾಯ್ದುಕೊಳ್ಳಬೇಕು~ ಎಂದು ಹೇಳಿದ್ದರಂತೆ.

ಜಗದೀಶ್ ರಚಿಸಿದ ವರ್ಣಚಿತ್ರಗಳಂತೆಯೇ ಅವರು ನಿರ್ಮಿಸುವ ಮೂರ್ತಿಗಳಿಗೂ ಅಪಾರ ಬೇಡಿಕೆ. ಕೆಂಪೇಗೌಡ ಪ್ರಶಸ್ತಿ, ಅಮೆರಿಕನ್ ಗೋಲ್ಡನ್ ಬ್ರಷ್ ಅವಾರ್ಡ್, ಜೇಸೀಸ್ ಪ್ರಶಸ್ತಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರಶಸ್ತಿ, ದಸರಾ ಪ್ರಶಸ್ತಿ ಇವು ಕಲಾಪ್ರತಿಭೆಗೆ ಮುಡಿಗೇರಿದ ಕೆಲವು ಕಿರೀಟಗಳು.

ಜಗದೀಶ್ ನಿರ್ಮಿಸಿದ ಕುವೆಂಪು ಅವರ 9.5 ಅಡಿ ಎತ್ತರದ ಕಂಚಿನ ಪ್ರತಿಮೆ ಫೆ.27ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮುಂಭಾಗ ಅನಾವರಣಗೊಳ್ಳಲಿದೆ. ಮತ್ತೊಂದು ಪ್ರತಿಮೆ ಶಿವಮೊಗ್ಗದ ಕುವೆಂಪು ರಂಗಮಂದಿರದ ಎದುರು ಮಾರ್ಚ್ 3ರಂದು ಅನಾವರಣಗೊಳ್ಳಲಿದೆ.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.