ADVERTISEMENT

ಒಳಗಣ ಕಿಚ್ಚು

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಕವಿತೆ

ಬಿಳಿತೊಗಲ ಹೆಣ್ಣವಳು
ಬಿಳಿಜನರ ಮಧ್ಯೆ ಹುಟ್ಟಿದವಳು
ಕಾರೆಕತ್ತಲ ಕಂಡರೆ ಅಂಜುವವಳು
ಅದ್ಹೆಂಗೆ ಬಿದ್ದಳೋ ಮಾಯಗಾರನಿಗೆ

ಕರಿಜನರ ಮಧ್ಯೆ ಹುಟ್ಟಿದವನು
ಕರಿಮೀಸೆ ಬೆಳೆಸಿ ಗಂಡಸಾದವನು
ಗಂಡಗಮ್ಮತ್ತಿನ ಆಟ ಆಡಿದವನು
ಅದ್ಹೆಂಗೆ ಕರಕೊಂಬಂದಾನೊ ಅವಳ

ಮದುವೆಯಾಗಿ ಮುಟ್ಟುಚಿಟ್ಟಾಗಿ
ಅಮ್ಮನ ಮುಟ್ಟಿದ ಸಲುವಾಗಿ
ಕೇರಿಕಟಿಕೊಂಡು ಇರಬೇಕಾಗಿ
ಸೀನೀರ ಕಾಣದವರಾಗಿ ಹಟ್ಟಿಗರು

ADVERTISEMENT

ಒಂದು ಪೂಜೆ ಊರಹಾರುವಯ್ಯನಿಗೆ
ಮನೆಮಗಳು ಮೈಲಿಗೆಯಾಗುವ ಮುನ್ನ
ಮೀಸಲು ಪೂಜೆ ತವರಿಂದ
ತಂಬಿಟ್ಟು ದೀಪಧೂಪದಾರತಿ ಸಾಲಿಗೆ


ಕಿರ‌್ರೆನುವ ಕೋಣ ಜಗ್ಗದ ಹಗ್ಗ
ಮಸೆದ ಕತ್ತಿಯ ಒಸಗೆ ತಾಯಿಗೆ
ರಕ್ತಕಣಿವೆಯಲಿ ಕಾಲಾಡಿ ಗುಡ್ಡ
ಸೇರಿಕೊಳ್ಳಲಿ ಅವಳು ತಡಿಬೇಡಿ

ಸಿಟ್ಟಂತೆ ಅಮ್ಮನಿಗೆ ಕದ್ದು ಮದುವೆ
ಆಗಿ ಬಸಿರಾಗಿಸಿದ್ದಕ್ಕೆ, ಅದಕೆಂದೆ
ಕಪ್ಪುಮೈಯವರ ಕಂಡರೆ ಉರಿದು
ಬೀಳುವಳಂತೆ, ಉರಿಗಣ್ಣಲ್ಲಿ ಪ್ಲೇಗು, ಕಾಲರಾ
ತೂರುವಳಂತೆ

2
ಗಂಡ ಹೆಂಡಿರು ಹೀಗೆ ಭಕ್ತಭವಿಗಳಾಗಿ
ಸಂಸಾರವೆಂಬುದು ಇಜ್ಜೋಡಾಗಿ
ನೈವೇದ್ಯ ಪದಾರ್ಥವೇ ಭಿನ್ನವಾಗಿ
ಯಾವುದು ಶಿವಾರ್ಪಣವೋ ಯಾವಬಲ್ಲ?

ಇದೇ ಮೊದಲ ಸಲವಲ್ಲ, ಸಿಟ್ಟು
ಏನೋ ಒಳಗೊಳಗೆ ಕಿಚ್ಚು
ತೀಡಿ ತೀಡಿ ಉರಿ ಕಾಳ್ಗಿಚ್ಚಾಗಿ
ಇದ್ದವರ ಸುಟ್ಟಿದ್ದು ಬೂದಿ ಹರಡಿದ್ದು
ಯಾವನೋ ನೋಡಿದ-ಕಿಚ್ಚು
ಯಾವನೋ ಕರೆದ-ಕಿಚ್ಚು
ಇನ್ಯಾವನೋ ಬಂದು ದಮ್ಮಯ್ಯ
ನಿನಗಂಡನಿಗೆ ಹೇಳಿ ಕೆಲಸ ಕೊಡಿಸೆಂದ-ಕಿಚ್ಚು

ಸಕ್ಕರೆ ಮಾತಲ್ಲಿ ಸವತಿ ಬಂದಾಳು
ಬಲಗೈಲಿ ಭಾಷೆ ಕೊಟ್ಟುದ ಮರೆತಾನು
ಮೇಕೆದಾಟಿನ ಕಂದರ ಮಧ್ಯೆ
ಬಿದ್ದರೆ ಕೊಚ್ಚಿಹೋಗುವ ಸಂಸಾರ

ಶೈತ್ಯದರಮನೆಯಲಿ ಮಂಜುಗಟ್ಟಿದ
ಮನಸು, ಸತಿಬೇರೆ, ಪತಿದಾರಿ
ಇದ್ದರೂ ಇರಬಾರದೇಕೆ ಒಟ್ಟಿಗೆ
ನಡುವೆ ಸುಳಿವ ಮಕ್ಕಳ ಕರುಳಬಳ್ಳಿ

ಜಗಮಿಥ್ಯ ಜಗನ್ಮಾತೆ
ಅರ್ಥಮಾಡಿಕೋ
ಒಸಗೆ ಒಲವಿನದು
ಏಳಿರಲಿ ಬೀಳಿರಲಿ ನಡೆಯಬೇಕಿನ್ನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.