ADVERTISEMENT

ಓದುಗರ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

`ಶ್ರೀಗಂಧದ ಮರ ರಾಜಕುಮಾರ್~ (ಏ. 22, ಬರಗೂರು ರಾಮಚಂದ್ರಪ್ಪ) ಒಂದು ಉತ್ಕೃಷ್ಟ ಬರಹ. ರಾಜಕುಮಾರರ ಸಾಂಸ್ಕೃತಿಕ-ಸಾಮಾಜಿಕ ಕೊಡುಗೆಯನ್ನು ಲೇಖಕರು ವಿವರವಾಗಿ ವಿಶ್ಲೇಷಿಸಿರುವುದು ಈಗಿನ ಯುವ ನಟರಿಗೆ ಮಾದರಿಯಾಗಿದೆ.
-ಎಂ.ಎಲ್. ಲಕ್ಷ್ಮಣರಾವ್, ದಾವಣಗೆರೆ; ಶೃತಿ ಕೆ. ಮಠದ, ಚಿತ್ರದುರ್ಗ

ಮತ್ತೆ `ಬರ~ ಬೇಡ (ಡಿ.ವಿ. ರಾಜಶೇಖರ) ಅವರ ಅನುಭವ ಕಥನ ನನ್ನ ಮನ ಕಲಕಿತು. ಬಿಜಾಪುರ ಜಿಲ್ಲೆಯ ಇಂಡಿಯಲ್ಲಿ ಬರದಿಂದ ತತ್ತರಿಸಿದ ರೈತಾಪಿ ಜನರು ದನಕರುಗಳನ್ನು ಸಾಕಲು ಸಾಧ್ಯವಾಗದೆ, ಹೋಟೆಲ್‌ನಲ್ಲಿ ತಿಂದ ಬಜಿಯ ಬದಲಿಗೆ ತಮ್ಮ ಜಾನುವಾರುಗಳನ್ನು ಬಿಟ್ಟುಹೋದ ದುರಂತವನ್ನು ನಾನು ಕಂಡಿದ್ದೇನೆ. ಅಂಥ ಪ್ರಸಂಗಗಳು ಮರುಕಳಿಸದಿರಲಿ. 

`ಗಾಣಕ್ಕೆ ಸಿಕ್ಕ ಗಬಾಳಿಗರು~ (ಏ. 28, ವೀರಣ್ಣ ಮಡಿವಾಳರ) ಲೇಖನ ಕಾರ್ಮಿಕರ ದಿನಕ್ಕೆ ಮುನ್ನುಡಿಯಂತಿತ್ತು. ಕಬ್ಬು ಕಡಿಯುವ ಕಾಯಕವನ್ನೇ ನಂಬಿಕೊಂಡಿರುವ ಗಬಾಳಿಗರ ಬದುಕು ವಿಷಾದ ಉಂಟು ಮಾಡಿತು. ಸಮಾಜದ ಮುಂಚೂಣಿಗೆ ಬರದ ಇಂಥ ವರ್ಗಗಳ ಬಗ್ಗೆ ಅರಿವು ಮೂಡಿಸುವ ಲೇಖನಗಳು ಹೆಚ್ಚಾಗಬೇಕು.
-ಎಚ್. ಅಂಬಿಕಾ, ಕೊಪ್ಪಳ

`ಮೂರು ಅಪಗತೆಗಳು~ (ಪರಿಸರಪ್ರಿಯ) ತನ್ನ ಧ್ವನಿಶಕ್ತಿಯಿಂದ ಗಮನ ಸೆಳೆಯಿತು. ಮರಗಳನ್ನು ಬೆಳೆಸಲು ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಅಲಕ್ಷ್ಯದಿಂದ ವರ್ತಿಸುತ್ತಿರುವ ಸರ್ಕಾರಿ ಇಲಾಖೆಗಳಿಗೆ ಬರಹ ಚಾಟಿ ಏಟು ನೀಡುವಂತಿದೆ.
-ಎಂ.ಬಿ. ಹರೀಶ್, ಮೈಸೂರು

ADVERTISEMENT

`ದರೋಜಿಯ ಕರಡಿಗಳು~ (ಮಲ್ಲಿಕಾರ್ಜುನ ಡಿ.ಜಿ.) ಲೇಖನ ಹೊಸಪೇಟೆಯ ದರೋಜಿ ವನ್ಯಧಾಮದ ಬಗ್ಗೆ ತಿಳಿಸಿಕೊಟ್ಟಿತು. ಅಲ್ಲದೇ ಕರಡಿಧಾಮಕ್ಕೆ ಭೇಟಿ ನೀಡಬೇಕೆಂದು ಪ್ರೇರೇಪಿಸಿತು.
-ಲಕ್ಷ್ಮಣ್. ಡಿ.ಆರ್, ರಿಪ್ಪನ್‌ಪೇಟೆ

ಈ ಬಾರಿಯ `ಚಿತ್ರರೂಪಕ~ದಲ್ಲಿ ವಿಶ್ವವಿಖ್ಯಾತ ಕಲಾವಿದ ಸಾಲ್ವಡೋರ್ ಡಾಲಿ ಅವರ ಪರಿಚಯ ವಿವರವಾಗಿ ಮೂಡಿಬಂದಿದೆ.  `ಪರ್ಸಿಸ್ಟೆನ್ಸ್ ಆಫ್ ಮೆಮೊರಿ~ ಕಲಾಕೃತಿ ತನ್ನೊಳಗೆ ಹಲವು ಕವಿತೆಗಳನ್ನು ಅಡಗಿಸಿಟ್ಟುಕೊಂಡಿರುವುದು ಮಾತ್ರವಲ್ಲ, ವರ್ತಮಾನದ ಅನೇಕ ಸಂಕಟಗಳ ವ್ಯಕ್ತರೂಪದಂತಿದೆ.
-ಇಮ್ರಾನ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.