ADVERTISEMENT

ಕಡಲು - ಮುಗಿಲು ನಡುವೆ ಹಕ್ಕಿ ಬಯಲು

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

`ಸಮುದ್ರ ತೀರಕ್ಕೆ ವಲಸೆ ಹಕ್ಕಿಗಳು ಬಂದಿವೆ~. ಗೆಳೆಯ ಸಂತೋಷ ಕುಂದೇಶ್ವರ ಫೋನ್ ಮಾಡಿದಾಗ ನನ್ನ ಮನಸ್ಸೂ ಹಕ್ಕಿಯಾಗಿತ್ತು. ತಕ್ಷಣವೇ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕುಂದಾಪುರಕ್ಕೆ ಹೊರಟೆ. ನನ್ನ ಛಾಯಾಗ್ರಾಹಕ ಮಿತ್ರರಾದ ಹುಬ್ಬಳ್ಳಿಯ ಶಿವಕುಮಾರ ನೆಗಳೂರಮಠ, ಚಂದ್ರಶೇಖರ ತಂಬದ, ದಾವಣಗೇರಿಯ ಹೇಮಚಂದ್ರ ಜೈನ್, ಪುಟ್ಟು, ಅರುಣ, ಬಳ್ಳಾರಿಯ ಕಾಶೀನಾಥ ನೆಗಳೂರಮಠರೂ ಅಗುಳಿನ ಸುದ್ದಿ ಸಿಕ್ಕ ಹಕ್ಕಿಗಳಂತೆ ಧಾವಿಸಿ ಬಂದಿದ್ದರು.

ನಮ್ಮ ಜೊತೆಗೆ ಕುಂದಾಪುರದ ವನ್ಯಜೀವಿ ಛಾಯಾಗ್ರಾಹಕರಾದ ಬಿ.ಉದಯಕುಮಾರ ಶೆಟ್ಟಿ, ವಿನಯಕುಮಾರ ಶೆಟ್ಟಿ, ಕೆ.ವಿಶ್ವನಾಥ, ಸಂತೋಷ ಕುಂದೇಶ್ವರ ಅವರೂ ಸೇರಿಕೊಂಡರು. ನಾವೆಲ್ಲ ಅರಬ್ಬಿ ಸಮುದ್ರ ತೀರಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸುವಂತೆ ಸಮುದ್ರದ ಅಲೆಗಳು ಪ್ರಶಾಂತವಾಗಿದ್ದವು. ಸೂರ್ಯನ ಎಳೆ ಬಿಸಿಲಿನ ಹೊಂಗಿರಣ ಹಾಗೂ ಅನಂತ ನೀಲಾಕಾಶ ಪಕ್ಷಿಗಳ ಹಾರಾಟದ ದೃಶ್ಯಗಳನ್ನು ಸೆರೆಹಿಡಿಯಲು ಹೇಳಿಮಾಡಿಸಿದಂತಿತ್ತು.

`ಕರಾವಳಿ ಉತ್ಸವ~ಕ್ಕೆಂದು ರೂಪಿಸಿದ್ದ, ಇದೀಗ ಶಿಥಿಲಾವಸ್ಥೆಯಲ್ಲಿರುವ ಸೇತುವೆಯ ಮೇಲೆ ನಿಧಾನವಾಗಿ ಹೆಜ್ಜೆ ಹಾಕಿದೆವು. ಸ್ವಲ್ಪ ಆಯ ತಪ್ಪಿದರೂ ಸಮುದ್ರಕ್ಕೆ ಬೀಳುವುದು ನಿಶ್ಚಿತ. ಪ್ರಯತ್ನಪೂರ್ವಕ ಸಾಹಸದೊಂದಿಗೆ ಪಕ್ಷಿಗಳು ಇರುವೆಡೆ ನಮ್ಮ ತಂಡ ಸೇರಿತು. ನೂರಾರು ಪಕ್ಷಿಗಳ ಗುಂಪು ಆ ಕಟ್ಟಿಗೆಯ ಕಂಬಗಳ ಮೇಲೆ ಬಂದು ಕೂರುವುದು, ಮತ್ತೆ ಅಲ್ಲಿಂದ ಹಾರುವುದು ಕಾಣಿಸುತ್ತಿತ್ತು. ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯತೊಡಗಿದೆ.
ಏನೆಂದು ಬಣ್ಣಿಸುವುದು ಆ ಪಕ್ಷಿಗಳ ಸಡಗರವನ್ನು. ಅವುಗಳ ಕಲರವವನ್ನು ಶಬ್ದಗಳಲ್ಲಿ ಹೇಗೆ ಬಣ್ಣಿಸುವುದು. ಒಟ್ಟಾಗಿ ಹಾರುವುದು, ಹಾರುತ್ತಲೇ ಬಂದು ಕೂರುವುದು- ಪಕ್ಷಿವಿಲಾಸ ಮುಂದುವರೆದಿತ್ತು. ನಮ್ಮ ಇರುವಿಕೆಯನ್ನು ಲೆಕ್ಕಿಸದೆ ಸನಿಹಕ್ಕೆ ಬಂದು ಕೂರುತ್ತಿದ್ದವು. ಈ ಪಕ್ಷಿಗಳ ನಡವಳಿಕೆ, ಹಾರಾಡುವ ರೀತಿ, ದೇಹ ರಚನೆ, ಬಣ್ಣ ವಿವರಗಳನ್ನು ನಾನು ನನ್ನ ಪಕ್ಷಿ ವೀಕ್ಷಣಾ ಡೈರಿಯಲ್ಲಿ ಟಿಪ್ಪಣಿ ಮಾಡಿಕೊಂಡೆ.

ನಮ್ಮೆದುರು ತೆರೆದುಕೊಂಡಿದ್ದ ಪಕ್ಷಿಗಳ ಲೋಕ- `ದೊಡ್ಡ ಜುಟ್ಟಿನ ರೀವ~ಗಳದು. ದೊಡ್ಡ ಚೊಟ್ಟಿ ರೀವ ಎಂತಲೂ ಕರೆಯುವ ಇವನ್ನು ಇಂಗ್ಲಿಷಿನಲ್ಲಿ ಲಾರ್ಜ್ ಕ್ರಸ್ಟೆಡ್ ಟರ್ನ್ (Large Crested Tern) ಎಂದೂ ಪಕ್ಷಿಶಾಸ್ತ್ರದಲ್ಲಿ ಸ್ಟರ್ನಾ ಬೆರ್ಗೀ (Sterna berggi) ಎಂದೂ ಕರೆಯಲಾಗುತ್ತದೆ. ಚಾರಾಡ್ರೀಪಾರ್ಮಿಸ್ (Charadriiformes) ವರ್ಗದ ಲಾರಿಡೇ (Laridae) ಕುಟುಂಬಕ್ಕೆ ಸೇರಿದ ಹಕ್ಕಿಗಳಿವು.

ದೊಡ್ಡ ಜುಟ್ಟಿನ ರೀವ ಒಂದು ಸಮುದ್ರ ಪಕ್ಷಿ. ತಲೆ ಮೇಲೆ ಕರಿಕಂದು ಬಣ್ಣದ ಜುಟ್ಟು, ನಿಂಬೆ ಹಳದಿ ಬಣ್ಣದ ಚೂಪು ಕೊಕ್ಕು, ಕರಿಯ ಕಾಲು, ಎದೆಯ ಭಾಗ ಬಿಳುಪು, ರೆಕ್ಕೆ ಹಾಗೂ ಬಾಲದ ಪುಕ್ಕಗಳು ಬಿಳಿಮಿಶ್ರಿತ ಕಂದು ಬಣ್ಣ.

ಗಂಡು-ಹೆಣ್ಣುಗಳು ನೋಡಲು ಒಂದೇ ರೀತಿಯಿರುತ್ತವೆ. ಸಮುದ್ರ ತೀರದಲ್ಲಿ ಸಣ್ಣಗುಂಪುಗಳಲ್ಲಿ ಬರುವ ಇವು ನೀರಿನ ಮೇಲೆ ಹಾರಾಡುತ್ತಾ ನೀರಿನಲ್ಲಿನ ಬೇಟೆಯನ್ನು ವೀಕ್ಷಿಸಿ, ನೀಳವಾದ ಕೊಕ್ಕಿನಿಂದ ಮಿಕವನ್ನು ಹಿಡಿದು ತಿನ್ನುತ್ತವೆ. ಮೀನು ಇವುಗಳ ಮುಖ್ಯ ಆಹಾರ. ಭಾರತದ ಸಮುದ್ರ ತೀರಗಳ್ಲ್ಲಲಿ ಮಾತ್ರವಲ್ಲದೇ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾದ ಸಮುದ್ರ ತೀರ ಪ್ರದೇಶಗಳಲ್ಲಿಯೂ ಇವು ಕಂಡುಬರುತ್ತವೆ.
 
ಲಕ್ಷದ್ವೀಪ, ರಾಮೇಶ್ವರ, ಸುಂದರಬನ್, ದ್ವೀಪ ಪ್ರದೇಶಗಳ ಮರಳು ದಿಬ್ಬ ಅಥವಾ ಕಲ್ಲುಬಂಡೆಗಳ ಗುಳಿಗಳಲ್ಲಿ ಗುಂಪುಗಳಲ್ಲಿ ಸಾಮೂಹಿಕವಾಗಿ ಗೂಡು ರಚಿಸಿ ಒಂದು, ಎರಡು, ಕೆಲವೊಮ್ಮೆ ಮೂರು ಮೊಟ್ಟೆಗಳನ್ನಿಡುತ್ತವೆ. ದುಂಡನೆಯ, ಬಿಳಿ ಬಣ್ಣದ ಕೆಂಪು ಮಿಶ್ರಿತ ಕಂದು ಬಣ್ಣದ ಗುರುತುಗಳಿರುವ ಮೊಟ್ಟೆಗಳಿವು. ಏಪ್ರಿಲ್-ಜೂನ್ ಇವುಗಳ ಸಂತಾನದ ಸಮಯ.

ಸೂರ್ಯ ನೆತ್ತಿ ಮೇಲೆ ಬಂದ ಹಾಗೆ ಪಕ್ಷಿಗಳ ಚಟುವಟಿಕೆ ಕಡಿಮೆಯಾಯಿತು. ಕೆಲ ಪಕ್ಷಿಗಳು ಆ ಕಡೆ ಇದ್ದ ತೀರ ಪ್ರದೇಶದಲ್ಲಿ ಹೋಗಿ ಕುಳಿತುಕೊಂಡವು. ಅಲ್ಲಿದ್ದ ಮೀನುಗಾರರನ್ನು ಪಕ್ಷಿಗಳು ಲೆಕ್ಕಿಸಿದಂತಿರಲಿಲ್ಲ.

ಎರಡು ದಿನಗಳ ಕಾಲ ನಮ್ಮ ಪಕ್ಷಿ ವೀಕ್ಷಣೆ ನಡೆಯಿತು. ಅದೊಂದು ಅವಿಸ್ಮರಣೀಯ ಅನುಭವ. ರೀವ ಹಕ್ಕಿಗಳು ಈಗಲೂ ನನ್ನ ಎದೆಯಲ್ಲಿ ಹಾರಾಡುತ್ತಲೇ ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.