ADVERTISEMENT

ಕರುಣೆಯಲ್ಲಿದೆ ತಾಯಿತನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 19:45 IST
Last Updated 1 ಫೆಬ್ರುವರಿ 2019, 19:45 IST
   

ಗುರುವೊಬ್ಬ ಶಿಷ್ಯರೊಂದಿಗೆ ನದಿಯನ್ನು ದಾಟುತ್ತಿದ್ದ. ಹೊಳೆಯಲ್ಲಿ ಚೇಳೊಂದು ಬಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿತ್ತು. ಅದರ ಒದ್ದಾಟವನ್ನು ನೋಡಿ ಗುರುವಿಗೆ ಕರುಣೆ ಬಂದಿತು. ಒಂದು ಎಲೆಯ ಸಹಾಯದಿಂದ ಅವನು ಆ ಚೇಳನ್ನು ನೀರಿನಿಂದ ಮೇಲಕ್ಕೆತ್ತಿ, ದಡದ ಮೇಲೆ ಬಿಡಲು ಮುಂದಾದ. ಆ ಕೂಡಲೇ ಚೇಳು ಗುರುವಿನ ಕೈಯನ್ನು ಕುಟುಕಿತು. ಆಗ ಗುರು ನೋವಿನ ಕಾರಣದಿಂದ ಕೈಯನ್ನು ಒಮ್ಮೊ ಕೊಡವಿದ. ಈಗ ಮತ್ತೆ ಚೇಳು ನೀರಿನಲ್ಲಿ ಬಿದ್ದಿತು.

ಆದರೆ ಗುರು ಸುಮ್ಮನಾಗಲಿಲ್ಲ. ಪುನಃ ಆ ಚೇಳನ್ನು ನೀರಿನಿಂದ ಮೇಲಕ್ಕೆತ್ತಿದ. ಚೇಳು ಕೂಡ ಅದರ ಹಳೆಯ ಚಾಳಿಯನ್ನೇ ಮುಂದುವರಿಸಿತು. ಗುರು ನೋವಿನ ಕಾರಣದಿಂದ ಮತ್ತೆ ಕೈ ಝಾಡಿಸಿದ; ಅದು ನೀರಿಗೆ ಬಿದ್ದಿತು. ಈ ಘಟನೆ ಹತ್ತಾರು ಸಲ ಮರುಕಳಿಸಿತು. ಶಿಷ್ಯರಿಗೆ ಇದು ಬಹಳ ಸೋಜಿಗವೆನಿಸಿತು. ಕುತೂಹಲವನ್ನು ತಡೆಯಲಾರದೆ ಅವರು ಗುರುವನ್ನು ಕೊನೆಗೂ ಪ್ರಶ್ನಿಸಿದರು:

‘ಗುರುಗಳೇ ಇದೇನು? ಆ ಚೇಳು ಕಡಿಯುವುದನ್ನು ಬಿಡುತ್ತಿಲ್ಲ! ನೀವು ಅದನ್ನು ರಕ್ಷಿಸುವುದನ್ನು ಬಿಡುತ್ತಿಲ್ಲ!! ಆ ಕೃತಘ್ನ ಚೇಳನ್ನು ರಕ್ಷಿಸಲೇಬೇಕೆಂಬ ಹಟವಾದರೂ ನಿಮಗೇಕೆ?’

ADVERTISEMENT

ಆಗ ಗುರು ಹೀಗೆಂದ: ‘ನೋಡಿ ಮಕ್ಕಳೆ! ಕುಟುಕುವುದು ಚೇಳಿನ ಸ್ವಭಾವ; ರಕ್ಷಿಸುವುದು ಗುರುವಿನ ಸ್ವಭಾವ. ಚೇಳು ಹೇಗೆ ತನ್ನ ಸ್ವಭಾವವನ್ನು ಬಿಡುವುದಿಲ್ಲವೋ ಅದೇ ರೀತಿಯಲ್ಲಿ ನಾನು ಕೂಡ ನನ್ನ ಸ್ವಭಾವವನ್ನು ಬಿಡಬಾರದಲ್ಲವೆ?’ ಗುರುವಿನ ಉಪದೇಶ ಶಿಷ್ಯರಿಗೆ ಅರ್ಥವಾಯಿತು.

* * *

ಮೇಲಿನ ಘಟನೆಗೆ ಹತ್ತಿರವಾಗಿರುವಂಥದ್ದು ನಮ್ಮ ಮನೆಯಲ್ಲಿ, ಕಚೇರಿಯಲ್ಲಿ, ರಸ್ತೆಯಲ್ಲಿ ನಡೆಯುತ್ತಲೇ ಇರುತ್ತವೆ.

ಹಸುಗೂಸುಗಳು ಪದೇ ಪದೇ ಕೊಳಕನ್ನು ಮಾಡಿಕೊಳ್ಳುತ್ತಲೇ ಇರುತ್ತವೆ. ಮತ್ತೆ ಮತ್ತೆ ಗಲೀಜನ್ನು ಮಾಡಿಕೊಳ್ಳುತ್ತಿದೆ ಎಂದು ತಾಯಿಯಾದವಳು ಆ ಮಗುವನ್ನು ತಿರಸ್ಕರಿಸುವಳೆ? ಹೀಗೆಯೇ ನಾವೆಲ್ಲರೂ ತಾಯಿತನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು . ಇದನ್ನೇ ಸಹಾನುಭೂತಿ ಎನ್ನುವುದು; ಕರುಣೆ ಎನ್ನುವುದು.

ಲೆಕ್ಕದಲ್ಲಿ ಪದೇ ಪದೇ ತಪ್ಪುತ್ತಿದ್ದೇವೆ ಎಂದು ಶಿಕ್ಷಕರು ನಮಗೆ ಪಾಠ ಮಾಡುವುದನ್ನೇ ನಿಲ್ಲಿಸಿದರೆ ಹೇಗೆ? ಅಷ್ಟೇಕೆ, ನಮಗೆ ಮತ್ತೆ ಮತ್ತೆ ರೋಗಗಳು ಕಾಡುತ್ತವೆ. ಕಾಯಿಲೆಗಳು ಬರುತ್ತವೆ ಎಂದು ನಾವು ಎಂದಾದರೂ ನಮ್ಮನ್ನು, ನಮ್ಮ ಶರೀರವನ್ನು ಪ್ರೀತಿಸುವುದು ಕಡಿಮೆಯಾಗುತ್ತದೆಯೆ?

ಪ್ರಕೃತಿಯಲ್ಲೂ ಹಲವು ಘಟನೆಗಳು ಮರುಕಳಿಸುತ್ತಲೇ ಇರುತ್ತವೆ; ಬೇಸಿಗೆಯಾದ ಮೇಲೆ ಮಳೆಗಾಲ, ಆಮೇಲೆ ಚಳಿಗಾಲ, ಮತ್ತೆ ಬೇಸಿಗೆ – ಹೀಗೆ. ನಾವು ಯಾವುದೋ ಒಂದು ಕಾಲವನ್ನಷ್ಟೆ ಸ್ವೀಕರಿಸುತ್ತೇವೆ ಎಂದು ಹಟ ಮಾಡುವಂತೆಯೇ ಇಲ್ಲ. ಹೀಗೆಯೇ ರಾತ್ರಿ–ಹಗಲು ಸುತ್ತುತ್ತಲೇ ಇರುತ್ತದೆ. ಈ ಸುತ್ತಾಟದಲ್ಲಿಯೇ ಬದುಕಿನ ಸೊಗಸಿರುವುದು ಕೂಡ. ಬೇರೆಯವರ ಬಗ್ಗೆ ಸಹಾನುಭೂತಿಯಿಂದ ಇರಬೇಕು ಎಂದ ಮಾತ್ರಕ್ಕೆ ತಪ್ಪುಗಳನ್ನು ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಅವನ್ನು ತಿದ್ದುವ ಪ್ರಾಮಾಣಿಕತೆಯನ್ನೂ ನಾವು ದಕ್ಕಿಸಿಕೊಳ್ಳಬೇಕಾಗುತ್ತದೆ. ಆದರೆ ಹೀಗೆ ತಿದ್ದುವ ಪ್ರಕ್ರಿಯೆಯಲ್ಲಿ ಜಾಣ್ಮೆ ಇರಬೇಕೇ ವಿನಾ ಒರಟುತನವಿರಬಾರದು; ಕ್ರೌರ್ಯ ಇರಬಾರದು; ಇನ್ನೊಬ್ಬರ ಮನಸ್ಸಿಗೆ, ಆತ್ಮಾಭಿಮಾನಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು; ನಮ್ಮ ವ್ಯಕ್ತಿತ್ವವನ್ನೂ ಘಾಸಿಕೊಳಿಸಿಕೊಳ್ಳಬಾರದು, ಅವರ ವ್ಯಕ್ತಿತ್ವವನ್ನೂ ಸಣ್ಣದು ಮಾಡಬಾರದು. ಇದೇ ಜಾಣ್ಮೆ; ಗುರುವಿನ ಕರುಣೆ. ರೋಗಕ್ಕೆ ಔಷಧವನ್ನು ನೀಡಲೇಬೇಕು; ಆದರೆ ಅಲ್ಲಿ ತಾಯಿತನದ ಪ್ರೀತಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.