ADVERTISEMENT

ಕರೆ, ಬರೇ ಕರೆ

ಕವಿತೆ

ಡಾ.ನಾ.ಮೊಗಸಾಲೆ
Published 5 ಸೆಪ್ಟೆಂಬರ್ 2015, 19:51 IST
Last Updated 5 ಸೆಪ್ಟೆಂಬರ್ 2015, 19:51 IST
ಕರೆ, ಬರೇ ಕರೆ
ಕರೆ, ಬರೇ ಕರೆ   

ಬರೀ ನೀಲಿ
ನೀಲ ಆಕಾಶವೇ ಆಕಾಶವಾದಂತೆ
ಅಥವಾ ಆಕಾಶವೇ ನೀಲವಾದಂತೆ
ಇರುವಿರಿ ನೀವು

ಕೆಳಗೆ ಎಷ್ಟೊಂದು  ಹಸಿರು
ಉರಿದು ಆರಿದ ಭೂಮಿಯನ್ನು ಗೆದ್ದು
ಒದ್ದು

ನಡುವೆ ಬಣ್ಣವೇ ಇಲ್ಲದ ನಾನು
ಬರೇ ಕಪ್ಪು
ಕಪ್ಪು ಕಪ್ಪಾದಂತೆ
ಅಥವಾ ನಿಗಿ ನಿಗಿ  ಉರಿದ ಕೆಂಡ
ತಾನಾಗಿಯೇ ತಣಿದು ಕಪ್ಪಾದಂತೆ

ADVERTISEMENT

ಈ ಎಲ್ಲವನ್ನೂ ಗೆಲ್ಲುವ ಮಾತು
ಇಲ್ಲಿ ಎಲ್ಲೋ ಉಗ್ರಗಾಮಿಗಳಿಂದ
ಆತ್ಮಹತ್ಯಾ ದಾಳಿ ರೂಪದಲ್ಲಿ
ಬದಲಾಗಬೇಕೆಂಬಂತೆ  ನೀಲಿ
ಉರಿದು ಹಸಿರು
ಆಗಬೇಕೆನ್ನುವಂತೆ ಕಪ್ಪು


ಸುಮ್ಮನೇ ತಿರುಗಿಸುತ್ತ ಕುಳಿತೆ
ಭೂಗೋಳವ
ತಿರುತಿರುಗಿ ತಿರುಗುತ್ತಾ ಹೋದ ಹಾಗೆ
ಖಂಡಾಂತರಗಳೆಲ್ಲ ಮಾಯವಾಗಿ
ಬರೇ ಒಂದು ಬೆಳಕು
ಬೆಳದಿಂಗಳು ನಕ್ಕಂತೆ ಮಗುವಾಗಿ
ಬಂದರೆ

ಎತ್ತಿಕೊಳ್ಳಲು ಬಿಡಿ ನನಗೆ
ಆ ಮಗುವ
ಅಥವಾ ನೀವು ಏರಿಸಿಕೊಳ್ಳಿ ತೊಡೆ ಮೇಲೆ ನಿಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.