ADVERTISEMENT

ಕವಿತೆ:ವಿಗಡ ವಿಕ್ರಮರಾಯ

ಕೆ.ವಿ.ತಿರುಮಲೇಶ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ವಿಕ್ರಮರಾಯ ಪದತ್ಯಾಗ ಮಾಡಿದ ದಿನ ನನಗೆ ಪಟ್ಟಾಭಿಷೇಕ ಸಾಲು ಸಾಲಿಗೆ
ಸಾಲಭಂಜಿಕೆಗಳಿಗುತ್ತರಿಸಿ-ಮ್ಮ-ಸಾಲು ಸಾಲಿಗೆ ಸಾಲಭಂಜಿಕೆಗಳನೊತ್ತರಿಸಿ-ಏರುವಾಗಲೆ ಎಡವಿ ಮುಗ್ಗರಿಸಿಬಿದ್ದದ್ದು

ಉದ್ದಂಡ ನಮಸ್ಕಾರ ಹಾಗಂತ ಜನ ತಿಳಕೊಂಡು ಇತ್ತ ಕಾಲೂ ಮುರಿದು ಅದೊಂದು ಹೊಸ ಯುಗದ ಹೊಸ ಶೈಲಿಯಾಯ್ತುಆಗಲೇ ಏರಿತ್ತು ಕುಂಟುಕಾಲನು ಎಳಕೊಂಡು ಏಳರಾಷ್ಟ್ರ ಶನಿ

ಭಯಪಡಬೇಡ ಮಿತ್ರನೇ ಒದ್ದದ್ದು ನೆನಪಿದೆಯೆ ಬಾಗಿಲಿಗೆ ಬಂದ ಶೌನಕಶಿಶುವ
ಕಾರಣವಿನಾಅದು ಮಾರುವೇಷದ ನಾನಾಗಿದ್ದೆ ಶನೀಚರ್ ನಿನ್ನ ಕಂಡರೆ ಯಾಕೊ ನನಗೆ ಅಗಾಧ ಪ್ರೇಮ ವಿಗಡ ವಿಕ್ರಮರಾಯ

ನಾನು ಮಾಡಿದ ಮೊದಲ ಘನಕಾರ್ಯ ಕಾರಾಗೃಹದಲ್ಲಿದ್ದ ಅರ್ಧ ಕೈದಿಗಳ ಬೇಷರತ್
ಬಿಡುಗಡೆಇನ್ನರ್ಧ ಕೈದಿಗಳ ತಲೆಕಡಿಸಿ ಹಾಕಿದೆ ಕಾರ್ಯ ಕಾರಣಗಳ ಕೊಂಡಿ ಕಳಚಿದ ಹಾಗೆಕಳಚಿ ಬಿದ್ದುವು ರುಂಡ ಮುಂಡಗಳು

ಯಾಕೆ ಬಿಡುಗಡೆ ಯಾಕೆ ಶಿರಚ್ಛೇದವೆಂದು ಯಾವ ಪ್ರತಿಮೆಯೂ ನನ್ನ ವಿಚಾರಿಸಲಿಲ್ಲ
ಆಮೇಲೆ ಅರ್ಧ ಸಮುದ್ರ ಬತ್ತಿಸುವ ಕೆಲಸ ನೀಡಿದೆನು ಕೆಲಸ ಬಯಸುವ ಜನಕ್ಕೆ
ಅಂತೆಯೇ ಕೆಲವರ ಗಿರಿಕೂಟಗಳಿಗಟ್ಟಿ ಗೊಂಡಾರಣ್ಯಗಳ ಕಿತ್ತು ತರುವಂತೆ ಆಜ್ಞಾಪಿಸಿದೆ

ಮತ್ತೆ ಕೆಲವರನೆಬ್ಬಿಸಿ ನಕ್ಷತ್ರಗಳನೆಣಿಸುವ ಕೆಲಸ ಕೊಡಿಸಿದೆ
ಊರು ಪರವೂರೆಂಬ ಗಡಿಗಳ ಭಂಜಿಸಿದೆ
ಇಷ್ಟಬಂದಂತೆ ಮಾತಾಡಿ ಮನುಷ್ಯರೇ
ಅದರೆ ನಿಶ್ಶಬ್ದಮಾತಾಡಿ

ರಘುವೀರ ಗದ್ಯ ಷೋಡಶಾಯ ಸ್ತೋತ್ರ
ಭೂಸ್ತುತಿ ನಭಸ್ತುತಿ ಸುದರ್ಶನಾಷ್ಟಕ
ಶ್ಯಾಮಲಾದಂಡಕ
ಏನಾದರೊಂದು ದಂಡಕವ

ಹಾಡು ಹಾಡೆಲೆ ಹಾಡು ಸುಂದರವಲ್ಲಿ ಎಂದೆಂದು ಮುಗಿಯದ ಹಾಡು
ಪುನರಪಿ ಪುನರಪಿ ಈವತ್ತು ಇನ್ನೆಂದಿಗೂ
ನೀನೂ ಹುಚ್ಚಿ ನಾನೂ ಸ್ವಸ್ಥಚಿತ್ತನೇನಲ್ಲ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.