ADVERTISEMENT

ಕಾಡಿನ ಅಂಚಲ್ಲಿ ನಮ್ಮ ಸಂಘದ ಮಿಂಚು

ಕೆ.ಎಚ್.ಓಬಳೇಶ್
Published 8 ಡಿಸೆಂಬರ್ 2012, 20:20 IST
Last Updated 8 ಡಿಸೆಂಬರ್ 2012, 20:20 IST

ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನ ಸುಮಾರು 33 ಸಾವಿರ ಕುಟುಂಬಗಳಿಗೆ `ನಮ್ಮ ಸಂಘ' ಅಡುಗೆ ಅನಿಲದ ಸಂಪರ್ಕ ಕಲ್ಪಿಸಿದೆ. ಉರುವಲಿಗಾಗಿ ಆ ಭಾಗದ ಕಾಡಿನ ಅವಲಂಬನೆ ಶೇ 85ರಷ್ಟು ಕಡಿಮೆಯಾಗಿದೆ. ಯಾವುದೇ ಸರ್ಕಾರಿ ನೆರವು, ಬೆಂಬಲ ಇಲ್ಲದ ಈ ಸಾಧನೆಯ ರೂವಾರಿ `ನಮ್ಮ ಸಂಘ' ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿದೆ.

ಮೇಲುಕಾಮನಹಳ್ಳಿಯ ಚೆಕ್‌ಪೋಸ್ಟ್ ದಾಟಿ ಬಂಡೀಪುರಕ್ಕೆ ಸಾಗುವುದೆಂದರೆ, ಅದೊಂದು ರಸಾನುಭವದ ಹಾದಿ. ಕಾಡಿನ ನಿಶ್ಚಲ ಮೌನ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅಪಾರ ವನ ಸಂಪತ್ತು ಕಣ್ಣಿಗೆ ಮುದ ನೀಡುತ್ತದೆ. ರಸ್ತೆಯ ಅಂಚಿನಲ್ಲಿ ಜಿಗಿದು ಮರೆಯಾಗುವ ಚುಕ್ಕಿಜಿಂಕೆಗಳ ಹಿಂಡು ನೋಡುಗರನ್ನು ಮೈಮರೆಸುತ್ತದೆ.

ಅರಣ್ಯ ಇಲಾಖೆಯ ವಾಹನ ಏರಿ ಸಫಾರಿಗೆ ತೆರಳಿದರೆ ಕಾಡೆಮ್ಮೆಯ ದೃಷ್ಟಿಯುದ್ಧದ ಅನುಭವವೂ ನಿಮ್ಮದಾಗಬಹುದು. ಹುಲಿ ಕಂಡರೆ ಅದರ ಗಾಂಭೀರ್ಯದ ನಡಿಗೆಗೆ ಮನಸ್ಸು ಪುಳಕಗೊಳ್ಳುತ್ತದೆ. ಅಮ್ಮನ ಆಸುಪಾಸಿನಲ್ಲಿಯೇ ತೊನೆಯುತ್ತ ಮೆಲ್ಲನೆ ಹೆಜ್ಜೆಇಡುವ ಆನೆಮರಿಯ ಚಿನ್ನಾಟ ಮೋಡಿ ಮಾಡುತ್ತದೆ. ಕಾಜಾಣದ ಕೂಗು ಪುಳಕಗೊಳಿಸುತ್ತದೆ.

ಒಂದು ಕ್ಷಣಕಾಲ ಈ ರಸಾನುಭೂತಿಯನ್ನು ಬದಿಗೊತ್ತಿ. ನಿಮ್ಮ ಕಣ್ಣಿಗೆ ಕಾಣುವ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಕೆನ್ನಾಯಿ, ಜಿಂಕೆ, ಸಿಂಗಳೀಕ, ಕಪಿ ಇತ್ಯಾದಿ ಪ್ರಾಣಿಗಳನ್ನು ಪಟ್ಟಿ ಮಾಡುತ್ತಾ ಸಾಗಿ. ನೆಲದಾಳದಲ್ಲಿ ಹುದುಗಿರುವ ಎರೆಹುಳುವಿನಿಂದ ಹಿಡಿದು ಡೊಳ್ಳಿಮರದ ಮೇಲೆ ಕುಳಿತ ಪಕ್ಷಿಗಳ ಹಿಂಡನ್ನು ಪಟ್ಟಿ ಮಾಡಿದರೆ ಬಂಡೀಪುರದ ಜೀವವೈವಿಧ್ಯ ವಿಸ್ಮಯಗೊಳಿಸುತ್ತದೆ.

ಬಂಡೀಪುರ, ನಾಗರಹೊಳೆ, ವಯನಾಡು, ಮಧುಮಲೈ ಅರಣ್ಯವನ್ನು ಒಂದೆಡೆ ಬೆಸೆಯುವ ಈ ಪ್ರದೇಶಕ್ಕೆ `ನೀಲಗಿರಿ ಜೈವಿಕ ವಲಯ' ಎಂಬ ಮಾನ್ಯತೆ ಸಿಕ್ಕಿದೆ. ಈ ಪ್ರದೇಶದ ಒಟ್ಟು ವಿಸ್ತೀರ್ಣ 5,500 ಚ.ಕಿ.ಮೀ. ಮನುಷ್ಯನ ಸಂಘರ್ಷವಿಲ್ಲದೆ ಆನೆ ಸಂತತಿಯನ್ನು ಬಹುಕಾಲದವರೆಗೆ ಪೋಷಿಸುವ ಶಕ್ತಿ ಈ ಜೈವಿಕ ವಲಯಕ್ಕಿದೆ.

ಸಫಾರಿ ಮುಗಿದ ತಕ್ಷಣವೇ ಜೀವಜಗತ್ತಿನ ವಿಸ್ಮಯವನ್ನು ಮೆಲುಕು ಹಾಕುತ್ತ ನಿಮ್ಮ ಪಯಣ ಮತ್ತೆ ಮೇಲುಕಾಮನಹಳ್ಳಿ ಕಡೆಗೆ ಸಾಗುತ್ತದೆ. ಚೆಕ್‌ಪೋಸ್ಟ್ ದಾಟಿದ ತಕ್ಷಣವೇ ರಸ್ತೆಯ ಅಕ್ಕಪಕ್ಕ ಹೊರಳುವ ನಿಮ್ಮ ದೃಷ್ಟಿ ಹಸಿರು ಮೆತ್ತಿಕೊಂಡಿರುವ ಕಟ್ಟಡದತ್ತ ನೆಟ್ಟರೆ ಅಚ್ಚರಿಯೇನಿಲ್ಲ.

ಆ ಕಟ್ಟಡದ ಮುಂದೆ ಐದಾರು ಸರಕು ಸಾಗಣೆ ಆಟೋಗಳು ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ತುಂಬಿಕೊಂಡು ಹಳ್ಳಿಗಳಿಗೆ ತೆರಳಲು ಸಜ್ಜಾಗಿರುತ್ತವೆ. ಆಟೋದ ಚಾಲಕ ನಿಧಾನವಾಗಿ ಚಲಿಸುತ್ತಿರುವ ನಿಮ್ಮ ವಾಹನವನ್ನು ಹಿಂದಿಕ್ಕಿ ಮುಂದೆಯೂ ಹೋಗಬಹುದು. ಮೂರ‌್ನಾಲ್ಕು ಕಿ.ಮೀ. ಕ್ರಮಿಸಿದ ಚಾಲಕ ಸಂಚಾರ ನಿಯಮದ ಬಗ್ಗೆ ಕೈಸನ್ನೆ ಮಾಡಿ ಕಾಡಂಚಿನ ಕಚ್ಚಾರಸ್ತೆಯತ್ತ ಆಟೋ ತಿರುಗಿಸುತ್ತಾನೆ.

ಆಗ ನಿಮ್ಮ ಮನದಲ್ಲಿ ಕುತೂಹಲ ಇಮ್ಮಡಿಗೊಳ್ಳುತ್ತದೆ. ಅರಣ್ಯದ ಅಂಚಿನ ಗ್ರಾಮಸ್ಥರು ಉರುವಲಿಗಾಗಿ ಸೌದೆ ಬಳಸುತ್ತಾರಲ್ಲವೇ? ಎಂಬ ಸಣ್ಣ ಆಲೋಚನೆಯೂ ಕಾಡುತ್ತದೆ. ಅದೇ ಗೊಂದಲದಲ್ಲಿ ನೀವು ಮುಳುಗುತ್ತೀರಿ. ಆದರೆ, ಆ ಆಟೋದ ಹಿಂದಿನ ಯಶೋಗಾಥೆಯನ್ನು ಕೆದಕಿದರೆ ಪರಿಸರ ಸಂರಕ್ಷಣೆಯಲ್ಲಿ ವಿಶ್ವಕ್ಕೆ ಮಾದರಿಯಾದ ಯಶಸ್ವಿ ಪ್ರಯೋಗವೊಂದರ ಇತಿಹಾಸದ ಪುಟವೇ ತೆರೆದುಕೊಳ್ಳುತ್ತದೆ.

ಅದು `ನಮ್ಮ ಸಂಘ'
`ನಮ್ಮ ಸಂಘ'ದ ಹೆಸರಿನಡಿ ಈ ಪ್ರಯೋಗ ಪ್ರಸ್ತುತ ಜನಾಂದೋಲನವಾಗಿ ರೂಪುಗೊಂಡಿದೆ. ದಶಕದ ಹೊಸ್ತಿಲಿನಲ್ಲಿ ಸಂಘ ಇದೀಗ  ನಿಂತಿದೆ. ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಇದರ ರೂವಾರಿಗಳು. ಶಾಲಾ ಮಕ್ಕಳು, ಅಂತರರಾಷ್ಟ್ರೀಯ ಕ್ರೀಡಾಪಟುಗಳು, ಪರಿಸರ ಕುರಿತು ಆಸಕ್ತಿ ಹೊಂದಿರುವ ರಾಜಕಾರಣಿಗಳು, ವಕೀಲರು, ಬಂಧುಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರ ಪರಿಸರ ಸಂರಕ್ಷಣೆಯ ಆಶಯದ ಬೇರುಗಳು `ನಮ್ಮ ಸಂಘ'ದ ನೆರಳಿನಡಿ ಗಟ್ಟಿಗೊಂಡಿವೆ.

ಸಂಘದ ಯಶೋಗಾಥೆ ಹಿಂದೆ ಸರ್ಕಾರ ಅಥವಾ ವಿದೇಶಿ ಆರ್ಥಿಕ ನೆರವು ಇಲ್ಲ. ವಿವಿಧ ಕ್ಷೇತ್ರಕ್ಕೆ ಸೇರಿದ ಜನರು ಸಂಭಾವನೆ ಇಲ್ಲದೆ ಮಾಡುತ್ತಿರುವ ಸಮಾಜ ಸೇವೆಯೇ ಸಂಘದ ಯಶಸ್ಸಿನ ಹಿಂದಿರುವ ಗುಟ್ಟು.
ಅರಣ್ಯದ ಅಂಚಿನಲ್ಲಿ ಸೂರು ಕಟ್ಟಿಕೊಂಡವರ ಜೀವನ ನಿಜಕ್ಕೂ ತ್ರಾಸದಾಯಕ. ನಿತ್ಯ ಹಸಿರು ನೋಡಿದರೂ ಬದುಕು ಮಾತ್ರ ಹಗಲು ಕತ್ತಲು. ಕಾಡಂಚಿನ ಜನರಿಗೆ ಉರುವಲಿನದ್ದೇ ದೊಡ್ಡ ಚಿಂತೆ. ಹೀಗಾಗಿ, ಸೌಟು ಹಿಡಿದ ಹೆಂಗಳೆಯರದು ಪ್ರತಿದಿನವೂ ಸೌದೆಗಾಗಿ ಹೆಣಗಾಟ. ಮತ್ತೊಂದೆಡೆ ಅಡುಗೆ ಮನೆಯ ಹೊಗೆಯಿಂದ ಬದುಕು ನರಕಸದೃಶ.

ರಾಷ್ಟ್ರದಲ್ಲಿ ಹುಲಿಗಳ ಸಾಂದ್ರತೆ ಹೆಚ್ಚಿರುವ ತಾಣಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವೂ ಒಂದಾಗಿದೆ. ಈ ಉದ್ಯಾನದ ಅಂಚಿನಲ್ಲಿ 190 ಗ್ರಾಮಗಳಿವೆ. ಸುಮಾರು 2 ಲಕ್ಷದಷ್ಟು ಜನಸಂಖ್ಯೆಯಿದೆ. ಈ ಜನರ ಸಾಮಾಜಿಕ ಹಾಗೂ ಆರ್ಥಿಕಮಟ್ಟ ಸುಧಾರಣೆ ಕಂಡಿಲ್ಲ. ಇದರ ಪರಿಣಾಮ ಸೌದೆಗಾಗಿ ಅವರು ಕಾಡು ಅವಲಂಬಿಸಿದ್ದು ಸಹಜ. ಪ್ರತಿದಿನವೂ ಕುಟುಂಬವೊಂದರ ಅಡುಗೆಗಾಗಿ ಬಳಕೆಯಾಗುತ್ತಿದ್ದ ಸೌದೆಯ ಪ್ರಮಾಣ 10 ಕೇಜಿ.

ಇಷ್ಟು ಸಂಖ್ಯೆಯ ಜನರಿಂದ ನಿತ್ಯವೂ ಸುಮಾರು 3.50 ಲಕ್ಷ ಕೇಜಿಯಷ್ಟು ಉರುವಲು ಬೂದಿಯಾಗುತ್ತಿತ್ತು. ಇದಕ್ಕಾಗಿ ನೂರಾರು ಗಿಡ-ಮರಗಳು ನೆಲಕ್ಕುರುಳುತ್ತಿದ್ದವು.ಜನರು ಕಾಡು ಪ್ರವೇಶಿಸುತ್ತಿದ್ದ ಪರಿಣಾಮ ಭೌತಿಕ ಜಗತ್ತಿನ ತಾಳಕ್ಕೆ ತಕ್ಕಂತೆ ಜೀವಸಂಕುಲ ರೂಪಿಸಿಕೊಂಡಿದ್ದ ಬದುಕು ನಿತ್ಯವೂ ಏರಿಳಿತ ಕಾಣುತ್ತಿತ್ತು. ಭೌತಿಕ ಜಗತ್ತಿನ ಲಯತಪ್ಪಿದ ಈ ಬದಲಾವಣೆಗೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಲು ಉದ್ಯಾನದಲ್ಲಿದ್ದ ವನ್ಯಜೀವಿಗಳು ಹೆಣಗಾಡುತ್ತಿದ್ದವು.

ಮತ್ತೊಂದೆಡೆ ಭೌತಿಕ ನಿಯಮ ಹಾಗೂ ಬದಲಾವಣೆಗೆ ಅನುಗುಣವಾಗಿ ಜೀವಸಂಕುಲ ರೂಪಿಸಿಕೊಂಡಿರುವ `ಜೈವಿಕ ಗಡಿಯಾರ'ದ ಮುಳ್ಳುಗಳು ಸವಕಳಿಯ ಹಾದಿ ಹಿಡಿದಿದ್ದವು. ಜೀವಿಯೊಂದರ ಹುಟ್ಟು, ಬೆಳವಣಿಗೆ, ಆಹಾರದ ಅನ್ವೇಷಣೆ, ವಂಶಾಭಿವೃದ್ಧಿ, ವಲಸೆ ಇತ್ಯಾದಿ ಚಟುವಟಿಕೆಗೆ ನಿತ್ಯವೂ ಸೌದೆಗಾಗಿ ಕಾಡಿಗೆ ಹೋಗುತ್ತಿದ್ದ ಸುಮಾರು 5 ಸಾವಿರ ಮಂದಿ ಪರಿಸರಕ್ಕೆ ತೊಡಕಾಗಿ ಪರಿಣಮಿಸಿದ್ದರು.

ಮುಂಜಾನೆಯೇ ಜನರು ಅರಣ್ಯದೊಳಕ್ಕೆ ಉರುವಲು ಸಂಗ್ರಹಿಸಲು ತೆರಳುತ್ತಿದ್ದರು. ಇದರಿಂದ ವನ್ಯಜೀವಿಗಳ ನಿರ್ಭೀತ ಬದುಕಿಗೆ ಸಂಚಕಾರ ಎದುರಾಗಿತ್ತು. ಕೆಲವರು ಕಾಡುಪ್ರಾಣಿಗಳ ದಾಳಿಗೂ ತುತ್ತಾಗಿದ್ದರು. ಇನ್ನೊಂದೆಡೆ ಕಾಡುಗಳ್ಳರು, ಬೇಟೆಗಾರರು ಕಾಡಂಚಿನ ಜನರನ್ನು ದಾಳವಾಗಿ ಬಳಸಿಕೊಂಡು ಅಮೂಲ್ಯವಾದ ಮರಗಳು, ಅಪರೂಪದ ಪ್ರಾಣಿ, ಪಕ್ಷಿಗಳ ಜೀವಕ್ಕೆ ಮುಳುವಾಗಿದ್ದರು. ಕಳ್ಳಬೇಟೆ ಎಗ್ಗಿಲ್ಲದೆ ಸಾಗಿತ್ತು.

ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳು ಬದುಕಿನ ನೆಲೆಯನ್ನೇ ಕಳೆದುಕೊಂಡಿದ್ದವು. ಬಂಡೀಪುರ-ಮಧುಮಲೈ ಅರಣ್ಯದಲ್ಲಿ ಕೆನ್ನಾಯಿಗಳ (ವೈಲ್ಡ್ ಡಾಗ್) ಜೀವನ ರಹಸ್ಯದ ಹುಡುಕಾಟದಲ್ಲಿದ್ದ ಕೃಪಾಕರ ಸೇನಾನಿ ಕಾಡಿನ ಅಂಚಿನಲ್ಲಿ ನಡೆಯುತ್ತಿದ್ದ ಈ ಚಟುವಟಿಕೆ ಮೇಲೆ ಸೂಕ್ಷ್ಮವಾಗಿ ನಿಗಾ ಇಟ್ಟಿದರು. ಉರುವಲಿಗಾಗಿ ಕಾಡು ಬರಿದಾಗುತ್ತಿರುವುದನ್ನು ತಪ್ಪಿಸಲು ಪರ್ಯಾಯ ಮಾರ್ಗದ ಆಲೋಚನೆಯಲ್ಲಿ ತೊಡಗಿದರು. ಆಗ ಹುಟ್ಟಿಕೊಂಡಿದ್ದೇ `ನಮ್ಮ ಸಂಘ'.

ಸೌದೆ ಬದಲಿಗೆ ಗೋಬರ್ ಅನಿಲ ಸೌಲಭ್ಯ ಅಥವಾ ಸೌರಶಕ್ತಿ ಬಳಸಿ ಗ್ರಾಮೀಣರಿಗೆ ಅನುಕೂಲ ಕಲ್ಪಿಸುವ ಯೋಚನೆ ಮೊದಲಿಗೆ ಅವರಲ್ಲಿ ಮೊಳಕೆಯೊಡೆಯಿತು. ಆದರೆ, ಈ ಸೌಲಭ್ಯದ ನಿರ್ವಹಣಾ ಸಮಸ್ಯೆ ಸವಾಲಾಗಿ ಕಂಡಿತು. ಕೊನೆಗೆ, ಪ್ರತಿ ಕುಟುಂಬಕ್ಕೂ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಯೋಜನೆ ಮಂಡಿಸಿದ್ದು, ಆಗ ಬಂಡೀಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಡಿ. ಯತೀಶ್‌ಕುಮಾರ್.
ಆ ವೇಳೆ ನಿಮ್ಮಿಂದ ಈ ಕೆಲಸ ಕಾರ್ಯಸಾಧುವಾಗದು ಎಂದು ಸವಾಲು ಎಸೆದವರೇ ಹೆಚ್ಚು.

ಸ್ನೇಹಿತರ ಸಹಕಾರದ ನಿರೀಕ್ಷೆಯೊಂದಿಗೆ ಉರುವಲಿಗಾಗಿ ಗ್ರಾಮೀಣರು ಪಡುತ್ತಿದ್ದ ಸಂಕಷ್ಟದ ನಿವಾರಣೆ ಹಾಗೂ ಕಾಡಿನ ಅವಲಂಬನೆಯನ್ನು ಕಡಿಮೆಗೊಳಿಸಲು 2003ರಲ್ಲಿ `ನಮ್ಮ ಸಂಘ' ಕಾರ್ಯಾರಂಭ ಮಾಡಿತು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಿಂದ ಹಿಡಿದು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆವರೆಗೂ ಸುಮಾರು 150 ಕಿ.ಮೀ.ವರೆಗೆ ಹಬ್ಬಿರುವ ಅರಣ್ಯದ ಅಂಚಿನ ಜನರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವುದು ಆರಂಭದಲ್ಲಿ ಸವಾಲಿನ ಕೆಲಸವಾಗಿತ್ತು. ಆದರೆ, ಸ್ನೇಹಿತರ ಬಳಗಕ್ಕೆ ಇದು ಕಷ್ಟವಾಗಲಿಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಯತೀಶ್‌ಕುಮಾರ್ ಅವರ ಸಹಕಾರದೊಂದಿಗೆ ಸಂಘದಿಂದ ಕೆಲವು ಕುಟುಂಬಗಳಿಗೆ ಪ್ರಾಯೋಗಿಕವಾಗಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಯಿತು.

ಪ್ರಸ್ತುತ ಉದ್ಯಾನದ ಅಂಚಿನ ಹಳ್ಳಿಗಳಲ್ಲಿ ಸುಮಾರು 40 ಸಾವಿರ ಕುಟುಂಬಗಳಿವೆ. ಈಗ ಒಟ್ಟು 33 ಸಾವಿರ ಕುಟುಂಬಗಳಿಗೆ ಎಲ್‌ಪಿಜಿ ಸೌಲಭ್ಯ ನೀಡಲಾಗಿದೆ. ಜತೆಗೆ, ಸಂಘದಿಂದಲೇ ಉಚಿತವಾಗಿ ಸ್ಟವ್ ನೀಡಲಾಗುತ್ತದೆ. ಪ್ರತಿ ಗ್ರಾಮಕ್ಕೆ ತೆರಳಿ ಸಿಲಿಂಡರ್ ಪೂರೈಸಲಾಗುತ್ತಿದೆ. ಈ ಸೇವೆಯಲ್ಲಿ ಇಂದಿಗೂ ಸಣ್ಣದೊಂದೂ ಲೋಪ ಎದುರಾಗಿಲ್ಲ. ಈಗ ಉರುವಲಿಗಾಗಿ ಕಾಡಿನ ಅವಲಂಬನೆ ಶೇ. 85ರಷ್ಟು ಕಡಿಮೆಯಾಗಿದೆ ಎಂಬುದು ವಿಶೇಷ. 

ಕಾಡಿನ ಅಂಚಿನ ಭಿನ್ನ ಚಿತ್ರಗಳು!

ದಶಕದ ಹಿಂದೆ ಬಂಡೀಪುರದ ಅಂಚಿನ ಗ್ರಾಮಗಳಲ್ಲಿದ್ದ ಚಿತ್ರಣವೂ ಬದಲಾಗಿದೆ. ಮಹಿಳೆಯರು ಕಾಡು ತಿರುಗುವುದು ಈಗ ಹಳೆಯ ಕಥೆ. ಹೊಗೆಯಾಡುತ್ತಿದ್ದ ಮನೆಗಳಲ್ಲಿ ಸಿಲಿಂಡರ್‌ಗಳು ತಳವೂರಿವೆ. ಹೊಗೆ ಸೇವಿಸಿ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಹೆಂಗಳೆಯರ ಮೊಗದಲ್ಲಿ ಮಂದಹಾಸ ಇಣುಕಿದೆ. ಸುಮಾರು 90 ಹಳ್ಳಿಗಳಲ್ಲಿ ಪ್ರತಿಯೊಂದು ಕುಟುಂಬವೂ ಸಂಪೂರ್ಣವಾಗಿ ಎಲ್‌ಪಿಜಿ ಸೇವೆ ಪಡೆದಿದೆ ಎಂಬುದೇ `ನಮ್ಮ ಸಂಘ'ದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ.

ಬೆಳಿಗ್ಗೆಯೇ ಕಾಡಿಗೆ ತೆರಳಿ ಸೂರ್ಯ ನೆತ್ತಿಗೇರುವ ವೇಳೆಗೆ ಸೌದೆ ತಂದು ದಣಿವಾರಿಸಿಕೊಳ್ಳುತ್ತಿದ್ದ ಜನರಲ್ಲಿ ಅರಣ್ಯ ಸಂರಕ್ಷಣೆಯ ತಿಳಿವಳಿಕೆಯೂ ಮೂಡಿದೆ. ಸೌದೆಗಾಗಿ ನಾಶವಾಗಿದ್ದ ಅರಣ್ಯ ಪ್ರದೇಶದಲ್ಲಿ ಈಗ `ಜೈವಿಕ ಗಡಿಯಾರ'ದ ಮುಳ್ಳುಗಳು ಸದ್ದಿಲ್ಲದೆ ಚಲಿಸಲು ಆರಂಭಿಸಿವೆ.

`ವಿಶ್ವದ ಸಂರಕ್ಷಣಾ ಪ್ರಯತ್ನಗಳಲ್ಲಿ ಅತ್ಯಂತ ಮಾದರಿ ಹಾಗೂ ಯಶಸ್ವಿ ಪ್ರಯೋಗ' ಎಂದು ಅಮೆರಿಕದ ನಿಯತಕಾಲಿಕೆ `ಫೋರ್ಬ್'ನಿಂದ `ನಮ್ಮ ಸಂಘ'ದ ಕಾರ್ಯಕ್ಕೆ ಪ್ರಶಂಸೆ ಸಿಕ್ಕಿದೆ. `ಸ್ಯಾಂಚುಯರಿ ಏಷ್ಯಾ ಕನ್ಸವೇಶನ್ ಅವಾರ್ಡ್'ಗೂ ಸಂಘ ಭಾಜನವಾಗಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದಾಗ ಜೈರಾಮ್ ರಮೇಶ್ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸದಸ್ಯ ಕಾರ್ಯದರ್ಶಿ ಡಾ.ರಾಜೇಶ್ ಗೋಪಾಲ್ ಕರ್ನಾಟಕಕ್ಕೆ ಭೇಟಿ ನೀಡಿದ್ದ ವೇಳೆ `ನಮ್ಮ ಸಂಘ'ದ ಯಶಸ್ಸಿನ ಕಥೆ ಕೇಳಿ ಮನಸೋತಿದ್ದರು. ದೇಶದ ಎಲ್ಲ ಹುಲಿ ರಕ್ಷಿತಾರಣ್ಯದಲ್ಲಿಯೂ ಈ ಮಾದರಿ ಅಳವಡಿಕೆಗೆ ಸುದೀರ್ಘ ಚರ್ಚೆ ಸಹ ನಡೆಸಿದ್ದರು. ಇದರ ಅನುಷ್ಠಾನದ ಹೊಣೆ ಹೊತ್ತುಕೊಳ್ಳುವಂತೆ ಕೃಪಾಕರ ಸೇನಾನಿ ಜೋಡಿಗೆ ಕೋರಿಕೆ ಮುಂದಿಟ್ಟಿದ್ದರು. ಆದರೆ, `ನಮ್ಮ ಸಂಘ'ದ ಸಾಂಘಿಕ ಸೂತ್ರ ವಿವರಿಸಿದ್ದ ಈ ಜೋಡಿ ಸರ್ಕಾರದ ಮಟ್ಟದಿಂದಲೇ ಅನುಷ್ಠಾನಗೊಳಿಸಲು ಸಲಹೆ ನೀಡಿತ್ತು.

ಪ್ರಸ್ತುತ ಪರಿಸರ ಸಂರಕ್ಷಣೆಗಾಗಿ `ನಮ್ಮ ಸಂಘ' ಸಾಗುತ್ತಿರುವ ಹಾದಿಯಲ್ಲಿ ಸಾರ್ಥಕತೆಯ ಹೆಜ್ಜೆಗುರುತು ಮೂಡಿವೆ. ರಾಷ್ಟ್ರದ ಘೋಷಿತ 41 ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಈ ಮಾದರಿ ಸೂತ್ರ ಜಾರಿಗೊಂಡರೆ ಜೀವಸಂಕುಲಕ್ಕೆ ನೆಮ್ಮದಿಯೂ ಸಿಗಲಿದೆ.

ಹೊಸ ಗಾಳಿ! ಹೊಸ ಬದುಕು!
ಬಂಡೀಪುರ ಜೀವವೈವಿಧ್ಯದ ತಾಣ. ಇದು ನಾಶಗೊಂಡರೆ ಪುನರ್ ಸೃಷ್ಟಿಸುವುದು ಅಸಾಧ್ಯ. ಈ ಕಾಡಿನೊಂದಿಗೆ ಒಡನಾಟವಿದ್ದ ನಮಗೆ ಅರಣ್ಯದ ಅಂಚಿನ ಜನರು ಉರುವಲಿಗಾಗಿ ಪಡುತ್ತಿದ್ದ ಬವಣೆ ಅರ್ಥವಾಗುತ್ತಿತ್ತು. ಮತ್ತೊಂದೆಡೆ ನಿತ್ಯವೂ ಅವರ ಕಾಡಿನ ಅವಲಂಬನೆ ಹೆಚ್ಚುತ್ತಿತ್ತು. ಇದಕ್ಕೆ ಪರ್ಯಾಯ ಹುಡುಕಲು `ನಮ್ಮ ಸಂಘ'ವನ್ನು ಹುಟ್ಟುಹಾಕಲಾಯಿತು.

ADVERTISEMENT

ಇದಕ್ಕೆ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಕ್ಕಿತು. ಸಂಘದ ಸದಸ್ಯರ ನಿಸ್ವಾರ್ಥ ಸೇವೆಯ ಫಲವಾಗಿ ಅರಣ್ಯ ಸಂರಕ್ಷಣೆ ಸಾಧ್ಯವಾಗಿದೆ. ಸೌದೆಗಾಗಿ ಅರಣ್ಯ ಅವಲಂಬಿಸಿದ್ದ ಗ್ರಾಮೀಣರ ಬದುಕು ಸುಧಾರಣೆ ಕಂಡಿದೆ. ಸಂಘದ ಯಶಸ್ಸಿನ ಹಿಂದೆ ಎನ್‌ಟಿಸಿಎ ಸದಸ್ಯ ಕಾರ್ಯದರ್ಶಿ ಡಾ.ರಾಜೇಶ್ ಗೋಪಾಲ್ ಅವರ ಸಹಕಾರವನ್ನೂ ಅಲ್ಲಗೆಳೆಯುವಂತಿಲ್ಲ.
- ಕೃಪಾಕರ ಸೇನಾನಿ, ಖ್ಯಾತ ವನ್ಯಜೀವಿ ಛಾಯಾಗ್ರಾಹಕರು

ಅವಿಭಕ್ತ ಕುಟುಂಬಕ್ಕೆ ಪೆಟ್ಟು
`ನಮ್ಮ ಸಂಘ'ದಲ್ಲಿ 24 ಮಂದಿ ಸ್ವಯಂಸೇವಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮೇಲುಕಾಮನಹಳ್ಳಿ ಹಾಗೂ ಹೆಗ್ಗಡದೇವನ ಕೋಟೆ ಬಳಿ ಎರಡು ಕಚೇರಿ ಕಾರ್ಯ ನಿರ್ವಹಿಸುತ್ತಿವೆ. ಸಿಲಿಂಡರ್ ಸಾಗಿಸಲು 7 ಸರಕು ಸಾಗಣೆ ಆಟೋಗಳಿವೆ.

ಕಾಡಂಚಿನ 30-35 ಕಿ.ಮೀ. ದೂರದ ಹಳ್ಳಿಗಳಿಗೆ ಸಿಲಿಂಡರ್ ಪೂರೈಸುವುದು ಸವಾಲಿನ ಕೆಲಸ. ಸಾರಿಗೆ ವೆಚ್ಚವೂ ದುಬಾರಿ. ಆದರೆ, ನಿಸ್ವಾರ್ಥ ಸೇವಾ ಮನೋಭಾವ ಹೊಂದಿರುವ ಸಂಘದ ಸದಸ್ಯರಿಗೆ ಇದು ಕಷ್ಟ ಎನಿಸಿಲ್ಲ. ಮನೆ ಬಾಗಿಲಿಗೆ ಸಿಲಿಂಡರ್ ಪೂರೈಸಿದರೂ ಇಂದಿಗೂ ಗ್ರಾಹಕರಿಂದ ಸೇವಾ ಶುಲ್ಕ ಸ್ವೀಕರಿಸುತ್ತಿಲ್ಲ.

ಹೊಸದಾಗಿ ಎಲ್‌ಪಿಜಿ ಸಂಪರ್ಕವೊಂದಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಿಗದಿಪಡಿಸಿರುವ ಶುಲ್ಕವನ್ನಷ್ಟೇ ಸ್ವೀಕರಿಸಲಾಗುತ್ತದೆ. ಗ್ರಾಹಕರಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡುತ್ತಿಲ್ಲ. ಹೀಗಾಗಿ, ಪರಿಸರ ಸಂರಕ್ಷಣೆಯ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಹೆಮ್ಮೆ ಐಒಸಿಗೂ ಇದೆ.

`ಈಗ ಕೇಂದ್ರ ಸರ್ಕಾರ ರಿಯಾಯಿತಿ ದರದಡಿ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನೀತಿ ರೂಪಿಸಿದೆ. ಇದರಿಂದ 8ಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಪ್ರಸ್ತುತ ಸಂಘದ ವ್ಯಾಪ್ತಿ ಎಲ್‌ಪಿಜಿ ಸಂಪರ್ಕ ಪಡೆದಿರುವ ಶೇ. 20ರಷ್ಟು ಅವಿಭಕ್ತ ಕುಟುಂಬಗಳಿವೆ. ಈ ಕುಟುಂಬಗಳ ಮೇಲೆ ಸರ್ಕಾರದ ನೀತಿ ಪರಿಣಾಮ ಬೀರಲಿದೆ' ಎನ್ನುತ್ತಾರೆ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.