ADVERTISEMENT

ಕುಂಚವಾಲಾ ಸಬಾವಾಲಾ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 19:30 IST
Last Updated 26 ನವೆಂಬರ್ 2011, 19:30 IST
ಕುಂಚವಾಲಾ ಸಬಾವಾಲಾ
ಕುಂಚವಾಲಾ ಸಬಾವಾಲಾ   

ಹೆಸರಾಂತ ಉದ್ಯಮಿ ಸರ್ ಕೊವಾಸ್ಜೀ ಜಹಾಂಗೀರ್ ಅವರ ಮೊಮ್ಮಗ ಜಹಾಂಗೀರ್ ಸಬಾವಾಲಾ ಪಾರ್ಸೀ ಕುಟುಂಬದವರು. ಹುಟ್ಟಿದ್ದು 1922ರ ಆಗಸ್ಟ್ 5ರಂದು, ಮುಂಬೈನಲ್ಲಿ.

ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಿತ ಮೇಲೆ ಯೂರೋಪ್‌ಗೆ ಹೋಗಿ ಫೈನೆಸ್ಟ್ ಆರ್ಟ್ಸ್ ಕಲಿತರು. ಅವರ ಕಲೆಯ ಮೇಲೆ ಯೂರೋಪ್ ವಾಸ ದೊಡ್ಡ ಪರಿಣಾಮ ಬೀರಿತು.

`ಇಂಪ್ರೆಷನಿಸಂ~ ಹಾಗೂ `ಕ್ಯೂಬಿಸಂ~ನಿಂದ ಪ್ರಭಾವಿತರಾದ ಸಬಾವಾಲಾ ಅವರು ಕ್ಯಾನ್‌ವಾಸ್ ಮೇಲೆ ಗಣಿತದ ರೇಖೆಗಳು, ಆಕಾರಗಳನ್ನು ಬಣ್ಣದಲ್ಲಿ ಮೂಡಿಸಿದರು. ಆಯಿಲ್ ಪೇಂಟ್ ಬಳಸಿ ಅವರು ಮೂಡಿಸಿದ ಕಲಾಕೃತಿಗಳು ಶಾಂತಿ ಸಂದೇಶವನ್ನು ಅಡಗಿಸಿಟ್ಟುಕೊಂಡಂಥವು.

ಅವರು ಮೂಡಿಸಿದ ಮನುಷ್ಯಾಕೃತಿಗಳು ಕಡಲಿನ ಚಿತ್ರಗಳೂ ಸೊಗಸಾಗಿವೆ. 60 ವರ್ಷಗಳ ತಮ್ಮ ಕಲಾ ಬದುಕಿನಲ್ಲಿ ಸಬಾವಾಲಾ ದೇಶ ವಿದೇಶಗಳಲ್ಲಿ 30ಕ್ಕೂ ಹೆಚ್ಚು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದರು.

1977ರಲ್ಲಿ ಪದ್ಮಶ್ರೀ 2007ರಲ್ಲಿ ಲಲಿತಕಲಾರತ್ನ ಪ್ರಶಸ್ತಿಗಳಿಗೆ ಸಬಾವಾಲಾ ಭಾಜನರಾದರು. ಅರುಣ್ ಖೋಪ್ಕರ್ ಎಂಬುವರು ಸಬಾವಾಲಾ ಕಲಾ ಬದುಕನ್ನು ಆಧರಿಸಿದ `ಕಲರ್ಸ್‌ ಆಫ್ ಆಬ್ಸೆನ್ಸ್~ ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. 1994ರಲ್ಲಿ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಂದಿತು.

ಸರಳ ಜೀವನ ನಡೆಸಿದ ಸಬಾವಾಲಾ ಅವರಿಗೆ ತಮ್ಮದೇ ಆದ ಸಣ್ಣ ಗೆಳೆಯರ ಬಳಗವಿತ್ತು. ಅವರು ಹಾಗೂ ಅವರ ಗೆಳೆಯ ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದರು.
 
ಮರುದಿನವೇ ಆ ಗೆಳೆಯನ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದರು. ಇದೇ ವರ್ಷ ಸೆಪ್ಟೆಂಬರ್ 2ರಂದು ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ಮೃತಪಟ್ಟರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.