ADVERTISEMENT

ಕೃಷ್ಣಸುಂದರಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ನಾನವಳನು ನನ್ನ ಕೃಷ್ಣಸುಂದರಿ ಎಂದೇ ಕರೆವೆ
ಯಾರು ಏನೆಂದರೂ ನನಗಿಲ್ಲ ಗೊಡವೆ

ನನಗಿನ್ನೂ ನೆನಪಿದೆ
ಮೋಡ ಮುಸುಕಿದ ಆ ದಿನ:

ಅವಳ ಆ ಕಳ್ಳ ನೋಟ
ಆ ದಾವಣಿ ಪಾದ ಚುಂಬಿಸುವ ಮಾಟ
ಬೆನ್ನ ಮೇಲೆ ಹೊಯ್ದೊಡುವ ಹೆರಳ ಆಟ

ADVERTISEMENT

ಅಯ್ಯೋ, ನೀವವಳನ್ನು ಕರಿಯಳು ಎನ್ನುವಿರಿ
ನಾನೊ ಅವಳ ಕಪ್ಪು ಕಂಗಳ ಮಿಂಚ ಕಾಣ್ವೆ

ಮುಸ್ಸಂಜೆಯ ಮಬ್ಬುಗತ್ತಲಲ್ಲಿ
ಆ ಹುಲ್ಲುಗಾವಲಿನಲ್ಲಿ
ಅವಳ ಗೋವುಗಳ ಹಿಂಡು ಮರೆಯಾಗುತ್ತಿದೆ
ಪಕ್ಕದ ಗುಡಿಸಲಿನಿಂದ ಅವಸರದಲವಳು
ಹೊರಬರಲು
ಮಳೆ ಮೋಡಗಳತ್ತ ಮೇಲ್ನೋಟ ಬೀರುವಳು

ಅಯ್ಯೋ, ನೀವವಳನ್ನು ಕರಿಯಳು ಎನ್ನುವಿರಿ
ನಾನೊ ಅವಳ ಕಪ್ಪು ಕಂಗಳ ಮಿಂಚ ಕಾಣ್ವೆ
ಭತ್ತದ ಪೈರ ತುದಿಯ ನೇವರಿಸುತ್ತ
ಪೂರ್ವದ ಗಾಳಿ ಬೀಸುತ್ತಿರಲು
ಹೊಲದ ಬದುವಿನ ಬದಿಯಲ್ಲಿ
ನಾ ಒಂಟಿಯಾಗಿ ನಿಂತ ಹೊತ್ತು
ನನಗೇನು ಮೋಡಿ ಮಾಡಿದಳೊ
ಅದು ಅವಳಿಗೇ ಗೊತ್ತು

ಅಯ್ಯೋ, ನೀವವಳನ್ನು ಕರಿಯಳು ಎನ್ನುವಿರಿ
ನಾನೊ ಅವಳ ಕಪ್ಪು ಕಂಗಳ ಮಿಂಚ ಕಾಣ್ವೆ

ತಹತಹಿಸುವ ಮೇ ತಿಂಗಳಿನ
ಹೃದಯದೊಳಗಿನ ಮೋಡದ
ಬೆಡಗ ಬೆರಗು ಅವಳು
ಸಂಧ್ಯಾಕಾಲದ ನೀರವತೆಯಲ್ಲಿನ
ಗಿಡಮರಗಳ ಮೇಲಿನ
ತೆಳು ನೆರಳು ಅವಳು

ಜೂನ್ ತಿಂಗಳಿನ ಭೋರ್ಗರೆವ ರಾತ್ರಿಗಳ
ಮೌನೋನ್ಮಾದದ ವಿಸ್ಮಯವು ಅವಳು.

ಯಾರು ಏನೆಂದರೂ ನನಗಿಲ್ಲ ಗೊಡವೆ
ನಾನವಳನು ಕೃಷ್ಣಸುಂದರಿ ಎಂದೇ ಕರೆವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.