ADVERTISEMENT

ಖಾಲಿ ಬಿಳಿ ಗೋಡೆ...

ದೀಪಾವಳಿ ವಿಶೇಷಾಂಕ 2013 ಕವನ ಸ್ಪರ್ಧೆ– ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

ಸಂಜ್ಯೋತಿ ವಿ.ಕೆ.
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಎದುರಿನ ಖಾಲಿ ಬಿಳಿ ಗೋಡೆ
ಗೋಡೆಯಿದ್ದ ಮೇಲೆ, ಬಿಳುಪಿದ್ದ ಮೇಲೆ
ಖಾಲಿ ಹೇಗೆಂದು ಕೇಳಬೇಡಿ ದಮ್ಮಯ್ಯ
ಎದುರಿಗಷ್ಟೇ ಅಲ್ಲ
ಹಿಂದೆ–ಮುಂದೆ, ಅಕ್ಕ-ಪಕ್ಕ, ಮೇಲೆ-ಕೆಳಗೆ ಕೂಡ!
ಬಾಗಿಲು ಕಿಟಕಿಗಳಿಲ್ಲದ ಖಾಲಿ ಬಿಳಿ ಗೋಡೆ

ಗೋಡೆಯೊಳಗಿಂದ ಇದ್ದಕ್ಕಿದ್ದಂತೆ
ಮೊಳೆವ ಕಪ್ಪು–ಹಳದಿ ಕೈಕಾಲುಗಳು
ಚಾಚುತ್ತಾ ಹೊರಹೊರಡುತ್ತಿವೆ
‘ಬಾಗಿಲು ಕಿಟಕಿಗಳಿಲ್ಲವಲ್ಲ,
ಮತ್ತೆ ಹೇಗೆ?’ ಎಂದು ಕೇಳಬೇಡಿ ದಮ್ಮಯ್ಯ
ನನಗೂ ಗೊತ್ತಿಲ್ಲ – ನಂಬಿ

ಮತ್ತೆ ಸರಿರಾತ್ರಿಗೆ ಹಿಂದಿರುಗುತ್ತವೆ
ಕೈತುಂಬಿಕೊಂಡು ತಂದ
ರೇಡಿಯಂ ನಕ್ಷತ್ರಗಳನ್ನು
ಛಾವಣಿಗೆ ಅಂಟಿಸಿ
‘ಆಕಾಶ ಬೇಕೆಂದಿದ್ದೆಯಲ್ಲ ತೊಗೋ’
ಅನ್ನುತ್ತವೆ.
ಜೊತೆಗೆ ತಂದ ಪ್ಲಾಸ್ಟಿಕ್
ಗಿಡ, ಬಳ್ಳಿ, ಹೂ, ಹಣ್ಣುಗಳನ್ನು
ನನ್ನ ಸುತ್ತ ಚಂದ ಜೋಡಿಸಿ
‘ಈ ಬಯಲ ರಾಜ್ಯ ನಿನ್ನದೇ’
ಅನ್ನುತ್ತದೆ ದೇಹವಿಲ್ಲದ್ದೊಂದು ದನಿ

ADVERTISEMENT

ಕ್ಷಣಾರ್ಧದಲ್ಲಿ ಆ ಅದೇ ದನಿ
ಹತ್ತಾಗಿ ನೂರಾಗಿ ಸಹಸ್ರ
ಚೂರಾಗಿ ಒಡೆದು ಚದುರುತ್ತದೆ

ಅಯ್ಯೋ ಎಲ್ಲ ದನಿಗಳೂ
ಕರ್ಣ ಪಿಶಾಚಿಗಳಾಗಿ
ಕಿವಿತಮಟೆಯನ್ನು ಒಡೆದೇಬಿಡುವಂತೆ
ಬಾರಿಸುತ್ತಿವೆ. ತಾಳಲಾರದೆ
ಪ್ರಜ್ಞೆ ತಪ್ಪಿದ ನನ್ನನ್ನು
ಪ್ಲಾಸ್ಟಿಕ್ ಜಗ್ಗಿನಿಂದ ನೀರು
ಚಿಮುಕಿಸುತ್ತಾ
‘ಮಳೆ ಬರುತ್ತಿದೆ ಏಳು ಮಗೂ’
ಎಂದು ಎಬ್ಬಿಸುತ್ತಿದೆ
ಆ ಅದೇ ದನಿ!

ಕಣ್ಣು ಬಿಟ್ಟು ನೋಡಿದರೆ
ಮತ್ತೆ ಸುತ್ತ
ಖಾಲಿ ಬಿಳಿ ಗೋಡೆ!
ಗೋಡೆಯಿದ್ದ ಮೇಲೆ, ಬಿಳುಪಿದ್ದ ಮೇಲೆ
ಖಾಲಿ ಹೇಗೆಂದು ಕೇಳಬೇಡಿ ದಮ್ಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.