ADVERTISEMENT

ಗಿಣಿ ಕುಳಿತ ಗಿಡ

ಚಂದ ಪದ್ಯ

ಪ್ರಜಾವಾಣಿ ವಿಶೇಷ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST
ಭಾವು  ಪತ್ತಾರ್
ಭಾವು ಪತ್ತಾರ್   

ಮೋಹನ್‌ ಪ್ರಾಥಮಿಕ ಶಾಲೆಯ ಶಿಕ್ಷಕ. ಇತ್ತೀಚೆಗೆ ಅವರಿಗೆ ಹೊಸಪಾಳ್ಯ ಎನ್ನುವ ಊರಿಗೆ ವರ್ಗವಾಯಿತು. ಮೊದಲ ದಿನ ಎಷ್ಟೋ ಉತ್ಸಾಹದಿಂದ ಪಾಠಶಾಲೆಗೆ ಹೋದರು. ಅಲ್ಲಿನ ಎಲ್ಲ ಪರಿಸರವನ್ನು ಗಮನಿಸಿದರು. ಸ್ವಚ್ಛತೆಯಿಲ್ಲದೆ ಕಸಕಡ್ಡಿಗಳಿಂದ ತುಂಬಿರುವುದನ್ನು ಕಂಡು ಅವರಿಗೆ ಬಹಳ ನೋವಾಯಿತು. ಸಂಜೆ ಆಟದ ಬಯಲಿನಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸಭೆ ಸೇರಿಸಿದರು.

ಹುಡುಗರೆಲ್ಲ ಚೆದುರಿದ ಕೂದಲಿನಿಂದ ಕೊಳಕು ಮೈಯಿಂದ ಕೂಡಿದ್ದು ಗದ್ದಲ ಮಾಡುತ್ತ ತಂತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರನ್ನು ಸಾಲಾಗಿ ನಿಲ್ಲಿಸಲು ತಮ್ಮ ಮಾತನ್ನು ಅವರು ಕೇಳುವಂತೆ ಮಾಡಲು ಬಹಳ ಕಷ್ಟಪಡಬೇಕಾಯಿತು. ಅವರೆಲ್ಲ ಸುಮ್ಮನಾದ ಮೇಲೆ ಅವರು–

‘ಪ್ರಿಯ ವಿದ್ಯಾರ್ಥಿಗಳೇ ನೀವು ಗಲಾಟೆ ಮಾಡದೆ ಕೇಳುವುದಾದರೆ ನಿಮಗೊಂದು ಒಳ್ಳೆಯ ಮಾತು ಹೇಳುತ್ತೇನೆ. ನೀವು ಯಾವಾಗಲಾದರೂ ಗಿಣಿಗಳನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದರು.

ನೋಡಿರುವುದಾಗಿ ತಲೆದೂಗಿದವರು ತುಂಬ ಕಡಿಮೆ ಇದ್ದರು.
‘ಹಾಗಾದರೆ ನಿಮ್ಮಲ್ಲಿ ಬಹಳ ಮಂದಿ ಗಿಣಿಗಳನ್ನೇ ನೋಡಿಲ್ಲ ಅಂತಾಯಿತು. ಪ್ರತಿ ದಿನ ಅವುಗಳನ್ನು ನೋಡುತ್ತ ಅವುಗಳೊಂದಿಗೆ ಆಡುತ್ತ ಖುಷಿ ಪಡುವುದು ನಿಮಗೆ ಇಷ್ಟವೇನಾ?’ ಎಂದು ಕೇಳಿದರು.

‘ಹೌದು ಸಾರ್‌..... ತುಂಬಾ ಇಷ್ಟ’ ಎಂದರು ಹುಡುಗರು ಒಕ್ಕೊರಲಿನಿಂದ.
‘ಹಾಗಾದರೆ ನೀವು ದಿನವೂ ಅವುಗಳೊಂದಿಗೆ ಆಡಿಕೊಳ್ಳುವ ಹಾಗೆ ಮಾಡುತ್ತೇನೆ. ಪ್ರತಿ ದಿನಾ ನೀವು ನಾನು ಹೇಳಿದ ಹಾಗೆ ಕೇಳಬೇಕು. ಕೆಲವೇ ದಿನಗಳಲ್ಲಿ ಗಿಣಿಗಳು ಬರುತ್ತವೆ’ ಅಂದರು ಮೋಹನ್‌.

‘ಹಾಗೇ ಆಗಲಿ ಸಾರ್‌.... ಏನು ಮಾಡಬೇಕೋ ಹೇಳಿ’ ಅಂದರು ಹುಡುಗರೆಲ್ಲ.
‘ಯಾವ ದಿನ ಏನು ಮಾಡಬೇಕೆನ್ನುವುದನ್ನು ಆಯಾ ದಿನವೇ ಹೇಳುತ್ತೇನೆ. ಶಾಲೆಗೆ ಚಕ್ಕರ್‌ ಕೊಡುವವರಿಗೆ ಗಿಣಿಗಳು ಕಾಣಿಸುವುದಿಲ್ಲ. ತಿಳಿಯಿತಾ? ಇವತ್ತು ಎಲ್ಲರೂ ಮನೆಗೆ ಹೋಗಿರಿ. ನಾಳೆ ಬೆಳಿಗ್ಗೆ ಶಾಲಾ ಸಮಯಕ್ಕಿಂತಲೂ ಒಂದು ಗಂಟೆ ಮುಂಚಿತವಾಗಿ ಬನ್ನಿ’ ಎಂದರು ಶಿಕ್ಷಕರು.


ಮಾರನೆಯ ದಿನ ಬಹಳ ಮುಂಚಿತವಾಗಿಯೇ ಸಾಕಷ್ಟು ಹುಡುಗರು ಬಂದರು. ಮೋಹನ್‌ ಕೆಲವರು ಹುಡುಗರು ಆವರಣವನ್ನೆಲ್ಲ ಗುಡಿಸಿ ಸಾರಿಸಲು, ಕೆಲವರು ಸಸಿಗಳನ್ನು ನೆಡಲು ಕೆಲಸ ಹಚ್ಚಿದರು.

ಆವತ್ತಿನಿಂದ ಶಾಲಾ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಲು, ಗಿಡಮರಗಳನ್ನು ನೆಡಲು ಎಲ್ಲ ವಿದ್ಯಾರ್ಥಿಗಳು ನಾನು ಮುಂದು ತಾನು ಮುಂದು ಎಂದು ಮುನ್ನುಗ್ಗಿ ಬಂದು ಕಾರ್ಯ ನಿರ್ವಹಿಸತೊಡಗಿದರು. ಅವರೆಲ್ಲ ವೈಯಕ್ತಿಕವಾಗಿ ಕೂಡ ಸ್ವಚ್ಛವಾಗಿರುವಂತೆ ಕಲಿಸಿದರು ಶಿಕ್ಷಕರು.

ಹಾಗೆ ಒಂದು ವರ್ಷ ಕಾಲ ಕಳೆಯಿತು. ಶಾಲಾ ಆವರಣ ಬಹಳ ಅಚ್ಚಕಟ್ಟಾಗಿ ಸಿದ್ಧವಾಯಿತು. ಗಿಡಮರಗಳು ಪೊಗದಸ್ತಾಗಿ ಬೆಳೆಯುತ್ತಿವೆ. ಸೀಬೆ ಮರವೊಂದು ಚೆನ್ನಾಗಿ ಹಣ್ಣು ಬಿಟ್ಟಿತು. ಒಂದು ದಿನ ಒಬ್ಬ ವಿದ್ಯಾರ್ಥಿ ಮೋಹನ್‌ ಬಳಿಗೆ ಓಡಿ ಬಂದು–

‘ಸಾರ್‌ ಸಾರ್‌ ಸೀಬೆ ಮರದ ಮೇಲೆ ಗಿಣಿ ಕುಳಿತಿದೆ. ನೋಡೋಣ ಬನ್ನಿ’ ಅಂದ ಏದುಸಿರುಬಿಡುತ್ತ!

ಎಲ್ಲ ಆ ಮರದ ಬಳಿಗೆ ಹೊರಟರು. ಸೀಬೆ ಹಣ್ಣು ತಿನ್ನುತ್ತಿದ್ದ ಗಿಣಿ ಕಾಣಿಸಿತು. ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಮಾರನೆಯ ದಿನ ಮತ್ತಷ್ಟು ಗಿಣಿಗಳು ಬಂದುವು. ಹಣ್ಣನ್ನು ತಿಂದವು. ಇಂಪಾಗಿ ಸದ್ದು ಮಾಡಿದವು. ಸೊಂಪಾಗಿ ಹಾರಾಡಿದವು.

ಅವುಗಳನ್ನು ನೋಡುತ್ತ ಅವುಗಳ ಪಲುಕುಗಳನ್ನು ಕೇಳುತ್ತ ಮಕ್ಕಳೆಲ್ಲ ಕುಣಿದು ಕುಪ್ಪಳಿಸಿದರು. ಅಂದಿನಿಂದ ಅವರಿಗೆಲ್ಲ ಶಾಲೆ ಬಹಳ ಆಕರ್ಷಣೀಯ ಸ್ಥಳವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT