ತಮ್ಮ ಮೊದಲ ಸಂಕಲನ `ಹಕ್ಕಿ ಪಲ್ಟಿ~ ಪ್ರಕಟವಾಗಿ ಎರಡು ದಶಕಗಳಾದವು. ಕವಿತಾ ರಚನೆಯ ಆರಂಭದ ದಿನಗಳು ಹೇಗಿದ್ದವು?
ನನ್ನ ಮೊದಲ ಕವಿತೆ ಬರೆದಿದ್ದೂ ನೆನ್ನೆ ಮೊನ್ನೆ ಅನಿಸುವಂತಿದೆ. ಕಣ್ಣು ಮಿಟುಕಿಸೋದರೊಳಗೆ ಜೀವನದ ಅರ್ಧ ದಾರಿ ಮುಗಿದಿರುತ್ತೆ. ಬದುಕು-ಕವಿತೆಯ ಗುಣ. ಅದು-ಹೊಳಪು ಮತ್ತು ಚಂಚಲತೆ. ಏನೇ ಅಂದುಕೊಂಡರೂ ನಿಮ್ಮ ಪ್ರಶ್ನೆಯಲ್ಲೊಂದು ವ್ಯಾಲಿಡ್ ಅಂಶ ಇದೆ, ಚಾರಿತ್ರಿಕ ಕಾಲದ್ದು.
ಅಡಿಗರ ಕವಿತೆ ಜಡ, ಸಿದ್ಧ ಶೈಲಿಯದ್ದು ಅನಿಸತೊಡಗಿದಾಗ ನನ್ನಂತಹವರಿಗೆ ಬೇರೆ ರೀತಿ ಬರೆಯಬೇಕೆನಿಸಿತು. ಮತ್ತೆ ಎಲ್ಲವನ್ನೂ ಹೊಸತಾಗಿ ಮುಟ್ಟಿಸಿಕೊಳ್ಳಬೇಕಿತ್ತಲ್ಲವೇ? ನಾಲ್ಕು ಜನಕ್ಕೆ ಮುಖ್ಯವಾದ ಮಾತನ್ನು ಹೇಳುವ ಮೊದಲು ನನಗೆ ನಿಜವಾದ ಮಾತನ್ನು ಹೇಳಿಕೊಳ್ಳಬೇಕು ಎಂದು ತಿಳಿದೆ ನಾನು. ತನಗೆ ನಿಷ್ಠವಾದ ಸಂವೇದನೆ ಎಂಬುದು ಸ್ವಲ್ಪ ಅತಿಗೆ ಹೋಗಿ, ನನ್ನ `ಹಕ್ಕಿ ಪಲ್ಟಿ~ ಕವಿತೆಗಳು ಸ್ವಲ್ಪ ವಿಚಿತ್ರವೇ ಆಗಿರಲೂಬಹುದು. ಪುಸ್ತಕ ಬಿಡುಗಡೆ ಮಾಡುವಾಗ ಕುವೆಂಪು ಅವರಿಗೆ `ಹಕ್ಕಿ ಪಲ್ಟಿ~ ಎಂಬ ನುಡಿಗಟ್ಟು ತಮಾಷೆಯಾಗಿ ಚಕಿತಗೊಳಿಸಿತ್ತು!
ನಿಮ್ಮ ಈವರೆಗಿನ ಎಲ್ಲ ಕವಿತೆಗಳು ಒಟ್ಟಾಗಿ ಪ್ರಕಟಗೊಳ್ಳುತ್ತಿರುವ ಸಂದರ್ಭದಲ್ಲಿ ನಿಮ್ಮಲ್ಲಿ ಆಗಿರಬಹುದಾದ ಬದಲಾವಣೆಯನ್ನು ಹೇಗೆ ಗುರುತಿಸುತ್ತೀರಿ?
ಮನಸ್ಸು ಹೆಚ್ಚು ಸಹಜವಾಗಿದೆ, ಗಾಢವಾಗಿದೆ ಎಂದೆಲ್ಲಾ ಅನಿಸಿದರೂ ಯಾವುದೂ ಕಳೆದು ಹೋಗಿರುವುದಿಲ್ಲ- ಅಂದರೆ ಮೊದಲ ಕವಿತೆಯ ಪುಲಕ ಕಳೆದುಹೋಗಿರಬಾರದು ಅನಿಸುತ್ತೆ.
`ಯಾವುದನು ತಾನೇ ಮೀರಿ ಬೆಳೆಯುವುದಿಲ್ಲಿ
ಎಲ್ಲವೂ ಒಂದಾಗಿ ಇರುತಿರಲು~
ಅಂತ ಇದೆ `ಜೀವಯಾನ~ದಲ್ಲಿ. ಗ್ರಹಿಕೆ ಸಹಜವಾಗುವುದು ಅನ್ನುವುದು ಅಹಂಕಾರಕ್ಕೆ ಸಂಬಂಧ ಪಟ್ಟ ಮಾತು. ಕವಿತೆ ಬರೆಯುವುದು ಇರಲಿ, ನಾವು ಮನುಷ್ಯರಾಗೇ ನಮ್ಮ ಅಹಂಕಾರದ ಒರಟು ಅಂಚುಗಳನ್ನ ಕಳೆದುಕೊಳ್ಳುತ್ತಾ ಹೋಗುವುದು, ಆದಷ್ಟೂ ಪೂರ್ವಗ್ರಹ ಮುಕ್ತ ಮನಸ್ಸನ್ನ ಗಳಿಸುತ್ತ ಹೋಗುವುದು- ಇದೇ ಜೀವನದ ಮತ್ತು ಕವಿತೆಯ `ಸಾಧಿಸಬಹುದಾದ ಸಾಧನೆ~ ಎಂದು ನಾನು ಅಂದುಕೊಂಡಿದ್ದೀನಿ. ಕವಿತೆ ಅದಕ್ಕಾಗೇ ಒದಗಿರುವ ಮಾಧ್ಯಮದಂತೆ ಕಾಣುತ್ತದೆ.
ನಿಮ್ಮ `ಜೀವಯಾನ~ ಕೃತಿಯನ್ನು ಬೇಂದ್ರೆಯವರ `ಸಖೀಗೀತ~ ಮತ್ತು ದೇವನೂರರ `ಒಡಲಾಳ~ ದ ಜೊತೆ ಹೋಲಿಸಲಾಗುತ್ತಿದೆ. ಯಾವ ದೃಷ್ಟಿಯಿಂದ ಈ ಹೋಲಿಕೆ?
`ಒಡಲಾಳ~, `ಜೀವಯಾನ~ ಎರಡರ ಥೀಮೂ ಹಸಿವು. `ಸಖೀಗೀತ~ದ್ದು ಜೀವನದ ಸುಖದುಃಖಗಳ ಮೂಲಕ ಹೊಮ್ಮುವ ಪ್ರೀತಿ. `ಜೀವಯಾನ~ದ ಪದ್ಯಗಳು ಬರುವಾಗ ಅವೆಲ್ಲ ಹಸಿವಿನ ಬಗ್ಗೆ ಇದ್ದಾವೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಮೇಲೆ ನೋಡಿದರೆ ಹಸಿವು ಮತ್ತು ಸಂಕಟದ ಮೂಲಕ ಅವು ಪ್ರೀತಿಯನ್ನೇ ತಲುಪಲು ಹವಣಿಸುತ್ತಿದ್ದವು.
`ಎರಡು ಪಿಡಚೆ ಅನ್ನ ಒಕ್ಕುಡಿತೆ ಹಾಲು
ನೀರು ನೆರಳು-~
ಎಂದು ಶುರುವಾದದ್ದು ಕೊನೆಯ ಪದ್ಯದ ಕಡೆಯ ಸಾಲುಗಳಲ್ಲಿ ಮಗಳ ಬಗ್ಗೆ-
`ತಾಯಾಗಿ ಬಳಸಿ ತುತ್ತನುಣಿಸಿದೆ ಇವಗೆ
ತುತ್ತಿಗೊಂದೊಂದು ಮುತ್ತನಿಡುವೆ~
ಎಂದು ಹೇಳುತ್ತದೆ. ಪ್ರೀತಿ ಎಂದರೆ ಭಾವುಕತೆಯಲ್ಲ, ಇದು ಸುಖ, ಇದು ದುಃಖ ಎಂಬ ಪೂರ್ವಗ್ರಹವನ್ನೂ ಬಿಟ್ಟು ಅನುಭವವನ್ನು ಮುಟ್ಟಿ ಪಡೆಯುವ ರೀತಿ.
ನೀವು ಬರೆಯೋದಿಕ್ಕೆ ಆರಂಭಿಸಿದ ಮೇಲೆ ಶಿವಪ್ರಕಾಶರ `ಸಮಗಾರ ಭೀಮವ್ವ~ ಬಂತು.
ನಂತರ ದೇವನೂರರ `ಕುಸುಮಬಾಲೆ~ ಬಂತು. ಹೀಗೆ ಶ್ರೇಷ್ಠ ಕಾವ್ಯ ಬಂದಾಗ ಅದರ ಪ್ರಖರತೆಯಿಂದ ನೀವು ಹೇಗೆ ಹೊರಬಂದಿರಿ?
ಸಮಗಾರ ಭೀಮವ್ವ, ಕುಸುಮಬಾಲೆ ಅಂತಹ ಕೃತಿಗಳಷ್ಟೇ ಅಲ್ಲ, ಬೇಂದ್ರೆ, ಪು.ತಿ.ನ., ಅಲ್ಲಮ, ಕುಮಾರವ್ಯಾಸ ಇವರೆಲ್ಲರ ನೆನಪು ಇರದೆ ನಿಜವಾಗಿ ಒಂದಕ್ಷರವನ್ನೂ ಬರೆಯುವುದು ಅಸಾಧ್ಯ. ಆದರೆ ಇವರೆಲ್ಲರನ್ನೂ ಒಳಗೊಂಡ ಕನ್ನಡದ ಸ್ರೋತ ಯಾರಿಗಿಂತಲೂ ದೊಡ್ಡದು. `
ಆಕಾಶವ ಮೀರಿದ ತರು ಗಿರಿಗಳುಂಟೇ~ ಅಂತ ಅಲ್ಲಮ ಹೇಳ್ತಾನೆ. ಬದುಕಿಗಿಂತ ವ್ಯಾಸ, ಶೇಕ್ಸ್‌ಪಿಯರ್‌ಗಳೂ ದೊಡ್ಡವರಲ್ಲ. ಕನ್ನಡದಲ್ಲಿ ಬರೆಯುವವನೊಬ್ಬ ತನ್ನನ್ನು ತನ್ನ ಆಳದಲ್ಲಿ ಮುಟ್ಟಿಕೊಂಡರೆ ಆಗ ಈ ಸ್ರೋತದೊಂದಿಗೆ ಸಂಪರ್ಕದಲ್ಲಿ ಇರುತ್ತಾನೆ. ಮತ್ತು `ರಾಜನ ಸಹವಾಸವಿದ್ದಾಗ ಸೇನಾಪತಿಯ ಭಯವಿಲ್ಲ~.
ಕವಿತೆಗೂ ಕವಿಯ ವ್ಯಕ್ತಿತ್ವಕ್ಕೂ ಯಾವ ರೀತಿಯ ಸಂಬಂಧ ಇರುತ್ತೆ?
ಕವಿಗೆ ಲೋಕಕ್ಕೆ ಕಾಣುವ ಏನೋ ಒಂದು ಸ್ವಭಾವ ಇರುತ್ತದೆ. ಆದರೆ ಕವಿತೆಯ ಮೂಲ ಧರ್ಮವೇ ಅನುಕಂಪ ಅಥವಾ ಸಂವೇದನೆ. ಕವಿತೆ ಎಂಬ ಮಾಧ್ಯಮದ ಒಳಹಾಯ್ದು ಬರುವುದೆಂದರೆ ಇಂತಹ ಒಂದು ಪ್ರಕ್ರಿಯೆಗೆ ಪಕ್ಕಾಗುವುದು.
ಹಾಗಾಗಿ, ತನ್ನ ಸ್ವಭಾವವೇನೂ ಅದಕ್ಕೆ ವಿರುದ್ಧವಾದದ್ದನ್ನೂ ತನ್ನೊಳಗೇ ಕಂಡುಕೊಳ್ಳುವ, ಉದಾಹರಣೆಗೆ- ಸಂತನೊಳಗಿನ ಪಾಪಿ ಪಾಪಿಯೊಳಗಿನ ಸಂತ, ರಾಜನೊಳಗಿನ ಭಿಕ್ಷುಕ ಭಿಕ್ಷುಕನೊಳಗಿನ ರಾಜ- ಜೀವದ ಈ ಸಂಕೀರ್ಣತೆಯನ್ನು ಅರಿಯುವ ಪ್ರಕ್ರಿಯೆ ಆಗಿರುತ್ತೆ ಅದು.
ಶುದ್ಧ ಕವಿತೆ ಎಂದರೆ ಹೇಗಿರಬೇಕು?
ಶುದ್ಧತೆ ಅನ್ನೋದು ಅನೈಸರ್ಗಿಕ. ನಿಸರ್ಗದಲ್ಲಿ ಯಾವುದೂ ಶುದ್ಧವಾಗಿ ಸಿಗಲ್ಲ. ಎಲ್ಲವೂ ಸಂಕರ ಸ್ಥಿತಿಯಲ್ಲೇ ಇರುತ್ತದೆ. ಬಣ್ಣ ರುಚಿ ವಾಸನೆ ಇಲ್ಲದ ನೀರು ಪಠ್ಯಪುಸ್ತಕದಲ್ಲಿ ಮಾತ್ರ ಸಿಗಬಹುದು. ಶುದ್ಧತೆಯ ವಾದ ಬೇರೆಲ್ಲ ಮತಾಂಧತೆಗಿಂತ ಕೆಟ್ಟದ್ದು.
ಆದರೆ, ಕವಿತೆಯಿಂದ ನಾನಾ ನಿರೀಕ್ಷೆಗಳದ್ದೇ- ಸಾಮಾಜಿಕ ಬದಲಾವಣೆ, ಮೋಕ್ಷ ಇತ್ಯಾದಿ- ಮೇಲುಗೈ ಆದಾಗ ಮನಸನ್ನಷ್ಟೇ ಹಿಗ್ಗಿಸುವ ಆ ಶಬ್ದದ- ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಪರಿಣಾಮವಲ್ಲದೆ ಮತ್ಯಾವ ಪ್ರಯೋಜನವೂ ಇರದ ಶುದ್ಧ ಕವಿತೆ ಬೇಕು ಅನಿಸಿಬಿಡುತ್ತದೆ. `ಗುಹೇಶ್ವರಾ ನಿಮ್ಮ ಪೂಜಿಸಿದ ಶರಣಂಗೆ ಆವ ಫಲವೂ ಇಲ್ಲ~ ಎಂಬಂತದ್ದು.
ಕವಿತೆಯ ಅನುಭವ ಅಂದರೆ ಯಾವುದು? ಅನುಭವ ಕವಿತೆಯಾಗುವ ಪ್ರಕ್ರಿಯೆ ಹೇಗೆ?
ಲೋಕಾನುಭವದ ವಿವರಣೆ ಕವಿತೆ ಅಲ್ಲ, ಅನುಭವ ಉಂಟಾಗುವ ರೀತಿ ಅದು. ಅದು ಮನಸ್ಸಿನ ಅನುಭವ. ಕವಿತೆಯಲ್ಲಿರುವ ಸೇಬು ತಿನ್ನಲು ಬರಲ್ಲ.
ನನ್ನ ಮಟ್ಟಿಗೆ ಕವಿತೆ ಅಂದರೆ ಮನಸ್ಸು ಉಂಟಾಗುವುದು. ಅರ್ಥಪೂರ್ಣತೆ ಎನ್ನುವುದು ವಸ್ತುವಿನದ್ದಲ್ಲ, ಅದು ಮನಸ್ಸಿನ ಗುಣ. ಲೋಕಾನುಭವ ಕವಿತೆಯಾಗುವ ಪ್ರಕ್ರಿಯೆ ಅಂದರೆ ಅಕ್ಕಿ ಅನ್ನವಾದಂತೆ. ಹಾಗೇ ಇರುತ್ತೆ, ಆದರೆ ಒಳಗಿಂದ ಬದಲಾಗಿರುತ್ತೆ. ಬೆಂಕಿ ನೀರು ತಾಗಿ ಹದಕ್ಕೆ ಬಂದು ಅರಳಿರುತ್ತೆ, ಆಸ್ವಾದ್ಯವಾಗಿರುತ್ತೆ
ಭಾರತದ ಬಹುತೇಕ ಭಾಷೆಗಳು ತಮ್ಮ ಶ್ರೇಷ್ಠ ಅಭಿವ್ಯಕ್ತಿ ಪಡಕೊಂಡಿರೋದು ಕಾವ್ಯದಲ್ಲಿ. ಈಗ ಕನ್ನಡ ಕವಿತೆಗೆ ಓದುಗರು ಹೇಗೆ ಸ್ಪಂದಿಸುತ್ತಿದ್ದಾರೆ?
ಕಾವ್ಯ ಸಂಗೀತಗಳು ಒಂದು ಜನ ಸಮುದಾಯದ ಅತ್ಯುತ್ತಮ ಅಭಿವ್ಯಕ್ತಿ ಅನ್ನೋದು ನಿಜ. ಈಗ ಕನ್ನಡದಲ್ಲಿ ಕವಿತೆಗೆ ಜನಸ್ಪಂದನ ಕಡಿಮೆಯಿರುವುದಾದರೆ ಅದಕ್ಕೆ ಕಾರಣ ನಮ್ಮ ಜೀವನದ ಕಳಪೆತನವೇ. ಅಭೂತಪೂರ್ವವಾಗಿ ಕಾಣುವ ತಂತ್ರಜ್ಞಾನ ಜನಮಾನಸದ ಈ ಕಳಪೆತನಕ್ಕೆ ಕಾರಣ. ಒಂದೊಂದು ಹೊಸ ವಸ್ತು ಆವಿಷ್ಕಾರವಾದಾಗಲೂ ನಮ್ಮ ಮನೋಮಯ ಕೋಶ ಅಷ್ಟಷ್ಟು ಕುಗ್ಗುತ್ತದೆ. ಯಾರೋ ಅಂದರು: `ಈ ಸಾಹಿತ್ಯ, ಕವಿತೆ ಎಲ್ಲ ನಿರುಪಯುಕ್ತ~ ಎಂದು. ನಾನು ಕೇಳಿದೆ `ನಮ್ಮ ಮಗುತನ ಕಳೆದ ಮೇಲೆ ತಾಯ ಸ್ತನಗಳೂ ನಿರುಪಯುಕ್ತ ಎನ್ನಬಹುದೇ?~
ಬಡತನ, ಅವಮಾನ, ಅಸಹಾಯಕತೆಯನ್ನು ನೀವು ನಿಮ್ಮ ಬದುಕಲ್ಲಿ ಹೇಗೆ ಮೀರಿದಿರಿ?
ನಾನು ಜೀವನದ ಬಗ್ಗೆ ಅಪಾರವಾದ ಕೃತಜ್ಞತೆ ಇರುವವನು. ಈ ಭವದ ಅನುಭವ ಚುಚ್ಚಿದಾಗಲೂ ನನ್ನನ್ನು ಕರಗಿಸುತ್ತೆ. ಚರಂಡಿಯಲ್ಲಿ ಬಿದ್ದಿರುವಾಗಲೂ ನಕ್ಷತ್ರಗಳು ಕಾಣುತ್ತವಲ್ಲವೇ!
ಜೀವಂತವಾಗಿರೋದೇ ದೊಡ್ಡ ಹಬ್ಬ ಎಂದು ತಿಳಿದವನಿಗೆ ಮತ್ತೆಲ್ಲ ಸ್ಥಿತಿಗತಿಗಳೂ ಒಳ್ಳೆಯ ಅನುಭವ ಎಂದೇ ಅನಿಸುವುದು. ಇದನ್ನು ನೀವು ಸಾಮಾಜಿಕವಾದ ಯಥಾಸ್ಥಿತಿವಾದ ಎಂದು ತಿಳಿಯಬಾರದು. ಹೇಗಾದರೂ ಇರಲಿ ಈ ಬದುಕನ್ನು ಬದುಕಿದ್ದು ಒಳ್ಳೆಯದಾಯ್ತು ಅನಿಸಬೇಕು.
ಈವರೆಗೆ ಏಳು ಕೃತಿ ಪ್ರಕಟಿಸಿದ್ದೀರಿ. ಒಂದು ಕೃತಿಗೂ ಅಕಾಡೆಮಿಯ ಪ್ರಶಸ್ತಿ ಬಂದಿಲ್ಲ. ಅಧ್ಯಯನಪೂರ್ಣ ವಿಮರ್ಶಾ ಲೇಖನ ಬಂದಂತಿಲ್ಲ?
ಈಗ ಎಲ್ಲರಿಗೂ ಸಂಸ್ಕೃತಿ ವಿಮರ್ಶೆಯ ಬಗ್ಗೆ ಆಸಕ್ತಿ. (`ಮಕ್ಕಳುಣ್ಣೋ ಕಾಲಕ್ಕೆ ಬಡತನ ಬಂತು~ ಅನ್ನುವಂತಾಗಿದೆ ನಮ್ಮ ಸ್ಥಿತಿ!). ಅದು ಹೆಚ್ಚು ಮುಖ್ಯವಾದ್ದು ಅಂತ. ಮತ್ತು ವಿಮರ್ಶೆ ಎನ್ನುವುದೇ ಒಂದು ಸ್ವಯಂಪೂರ್ಣ ಸೃಜನಶೀಲ ಚಟುವಟಿಕೆ ಎಂದು ಭಾವಿಸುತ್ತ ಕವಿತೆ ಕತೆಯಂಥ ಬರಹದ ಹಂಗು ತೊರೆದ ಸ್ಥಿತಿ.
ರಸ ಅನ್ನುವುದೇ ಹಳೇ ಕಾಲದ ಥಿಯರಿ ಎಂದುಕೊಳ್ಳುವುದರಿಂದ ಕಾವ್ಯಕ್ಕೂ ವಿಮರ್ಶೆಗೂ ಏನೂ ಭೇದವಿಲ್ಲ ಎಂದು ತಿಳಿದವರು ನಾವು! ಎಲ್ಲಕ್ಕಿಂತ ಹೆಚ್ಚಾಗಿ ಈಗಿನ ಸಮಾಜದ ಮನಸ್ಥಿತಿ ಕವಿತೆಯನ್ನೇನು ಬಹಳ ಮುಖ್ಯವೆಂದು ಭಾವಿಸಿದಂತಿಲ್ಲ, ನಮ್ಮ ವಿಚಾರಕ್ಕೆ ಅದು ಬೆಂಬಲಿಸುವಂತಿರುವಾಗ ಅದು ಪರವಾಗಿಲ್ಲ ಅಷ್ಟೇ.
ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದಾರಾ?
ಪ್ರಭಾವಿಸಲು ದೊಡ್ಡ ದೊಡ್ಡವರು ಕಾಯುತ್ತಲೇ ಇರುತ್ತಾರೆ. ಆದರೆ ಪ್ರಭಾವಿತರಾಗುವ ಸಾಮರ್ಥ್ಯ ನಮಗಿರಬೇಕಲ್ಲ! ಅಡಿಗ ಶೈಲಿಯಿಂದ ತಪ್ಪಿಸಿಕೊಳ್ಳಲು ವಾಲ್ಟ್ ವ್ಹಿಟ್‌ಮನ್ನನ ಗದ್ಯಲಯ, ಬಳಿಕ ಅಲ್ಲಮ ಕುಮಾರವ್ಯಾಸ, ನನಗೆ ಒಡನಾಡುವ ಅದೃಷ್ಟವೊದಗಿದ ಪು.ತಿ.ನ, ಅನಂತಮೂರ್ತಿ, ಲಂಕೇಶ್; ಆ ಅದೃಷ್ಟವಿರದೆ ನಾನು ಸದಾ ಜಪಿಸುವ ಬೇಂದ್ರೆ- ಇವರೆಲ್ಲ ನನ್ನ ಮನಸ್ಸನ್ನು ಚೂರು ಪಾರು ತಿದ್ದಿದ್ದಾರೆ.
ಪು.ತಿ.ನ. ಜೊತೆಗಿನ ಒಡನಾಟದ ಬಗ್ಗೆ ಹೇಳಿ?
ಪು.ತಿ.ನ.- ನೆಲದ ಮೇಲೆ ಒಂದಡಿ ಎತ್ತರದಲ್ಲಿ ಚಲಿಸುವ ಜೀವ ಅದು! ಅವರ ಅಪಾರವಾದ ಬುದ್ಧಿಯಷ್ಟೂ ಮನಸ್ಸಾಗಿ ಮಾರ್ಪಟ್ಟಿತ್ತು. ಅದರ ಸುಖದಲ್ಲಿ ಅವರಿದ್ದು, ನೋಡಿದವರಿಗೂ ಆ ಸುಖ ಉಂಟು ಮಾಡುತ್ತಿದ್ದರು. ಕವಿತೆಯೇ ಅವರ ಈ ಮೇಲ್ವೆಗೆ ಕಾರಣ. ಪ್ರೀತಿ, ಕಾಮ, ದೈವ ಯಾವುದೇ ಆದರೂ ಅದು ಮೊದಲು ನನ್ನೊಳಗಿರುವ ಭಾವ. ನಂತರ ಹೊರಗಿನ ವಾಸ್ತವವನ್ನು ಹಾಗೆ ಮಾಡಿಕೊಳ್ಳುತ್ತೇನೆ.
ಕಲ್ಲನ್ನು ವಿಗ್ರಹ ಮಾಡಿಕೊಂಡಂತೆ. ಇದು ನಾನು ಪು.ತಿ.ನ. ಅವರಿಂದ ಕಲಿತದ್ದು. ಮನಸ್ಸಿನ ಸ್ಪರ್ಶದಿಂದ ಬದುಕಿನ ಎಂಥಾ ಸಂಗತಿಯಾದರೂ ಅರಳುತ್ತದೆ- ಇದನ್ನೂ ಅವರಿಂದಲೇ ತಿಳಿದೆ.
ನಿಮ್ಮ ಬೆಸ್ಟ್ ಲೈನ್ಸ್ ಯಾವುದು?
ಅದು ಹೇಗೆ ಹೇಳೋಕಾಗುತ್ತೆ? ಥಟ್ಟನೆ ಹೇಳೋದಾದರೆ-ಈ ಪುಟ್ಟ ಪದ್ಯ;
ಇಡೀ ದಿನ ಸುತ್ತಿದ ಚಕ್ರ ಇರುಳಲ್ಲಿ ನಿಂದಿದೆ
ಬೆಳಕ ಸುರಿಯುತ್ತಿದೆ ದೀಪಗಳು ಮಣ್ಣಿಗೆ
ತುಸುವೇ ತುಯ್ದಂತೆ ರಾಟವಾಳ
ರಾಟವಾಳ ಈಗ ತನಗಾಗಿ ತುಸುವೇ
(ರಾಟವಾಳ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.