ADVERTISEMENT

ತುಡುಕದಿರು ಜೀವವ

ಕವಿತೆ

ಚಂದ್ರಶೇಖರ ತಾಳ್ಯ
Published 18 ಜೂನ್ 2016, 19:30 IST
Last Updated 18 ಜೂನ್ 2016, 19:30 IST

ಪ್ರಭುವೆ
ನನಗೀಗ ಅರ್ಥವಾಗುತ್ತಿದೆ
ಶಬ್ದಾರ್ಥಗಳಾಚೆ
ಮಿಂಚಿ ಹೋದೊಂದು ಮೌನ

ಹೂವು ಘಮ ಘಮಿಸಿ
ಪರಿಮಳದ ದಿವ್ಯ ದರ್ಶನದಲ್ಲಿ
ಮುಚ್ಚದ ಕಣ್ಣೆವೆಗಳಲ್ಲಿ
ಹೂವೇ ಕಾಣೆಯಾದ ಪರಿಯಂತೆ...

ಪರ್ವತದೆದೆಯ
ಒಳ ಗವಿಯ ಗವಿಯಲ್ಲಿ
ಇಷ್ಟಲಿಂಗದ ಜ್ಯೋತಿ
ಬೆಳಗಿದ ಬೆಳಗೊಂದು
ಒಳ ಒಳಗೆ ಇಳಿದಂತೆ...

ADVERTISEMENT

ಪಾಕದೊಳಗೊಂದು ರುಚಿ
ಹೊಕ್ಕು
ರಸನದ ಅಂಗಳದಲ್ಲಿ
ರಸದ ಬಾವಿಯ ತುಡುಕದಂತೆ

ಅದೋ
ಅಲ್ಲಿ
ತುಸು ದೂರದಲ್ಲಿ
ಮುಗಿದ ಕರದೊಳಗೊಂದು
ಏನೂ ಇರದ ಸ್ಥಿತಿಯೆಂಬ ನಿರಾಳ

ಉಸಿರು ನಿಂತರೂ ಉಸಿರಾಡುವ
ಲೀಲೆಯೊಳಗೆ
ಅರ್ಥಾಂತರದ ಭಾಷಾಂತರ–
ವೊಂದು
ಈಗಲೀಗ ಈ ಘಳಿಗೆಯಲ್ಲಿ
ಘಟಿಸುತ್ತಿರುವುದಲ್ಲಾ...!

ಪ್ರಭುವೆ
ಬೈಯದಿರು; ದುಡುಕದಿರು
ತುಡುಕದಿರು
ಎನ್ನ ಪ್ರಾಣಲಿಂಗದ ತುದಿಗೆ
ಆತು; ಜೋತು ಬಿದ್ದ ಜೀವವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.