ADVERTISEMENT

ತುತ್ತೂರಿ ಪದ್ಯದ ನೆನಪು

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ಚಿತ್ರಗಳು: ಮದನ್‌ ಸಿ.ಪಿ.
ಚಿತ್ರಗಳು: ಮದನ್‌ ಸಿ.ಪಿ.   

ಸುಮಾರು 60 ವರ್ಷಗಳ ಹಿಂದೆ ,ಅಂದರೆ 1956ರಲ್ಲಿ ಮೈಸೂರಿನಲ್ಲಿದ್ದ ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಆಗ ನನಗೆ 10 ವರ್ಷ. ನಮ್ಮ ಮೊಟ್ಟ ಮೊದಲ ವಾಸ್ತವ್ಯ ನಮ್ಮ ಸೋದರಮಾವ ಟೀಯೆಸ್ಸಾರ್‌ ಅರ್ಥಾತ್‌ ಟಿ.ಎಸ್‌. ರಾಮಚಂದ್ರರಾವ್‌ ಅವರ ಮನೆಯಲ್ಲಿ.

ಅಂದು ಭಾನುವಾರ, ಬೆಳಿಗ್ಗೆ 10ರ ಸಮಯ. ಟೀಯೆಸ್ಸಾರ್‌ ತಮ್ಮ ರೂಮಿನಲ್ಲಿ ಕುಳಿತು ಏನನ್ನೋ ಬರೆಯುತ್ತಿದ್ದರು. ಮುಂಬಾಗಿಲು ಟಕ ಟಕ ಸದ್ದಾಯಿತು. ಹೋಗಿ ಬಾಗಿಲನ್ನು ತೆರೆದೆ. ಬಂದ ಅತಿಥಿಯನ್ನು ನೋಡಿ ನನ್ನ ಮೈ ರೋಮಾಂಚನಗೊಂಡಿತು. ಬಂದವರು ಜಿ.ಪಿ. ರಾಜರತ್ನಂ!‘ಟೀಯೆಸ್ಸಾರ್‌ ಇದಾರೇನಪ್ಪ?’ ಎಂದು ಕೇಳಿದಾಗ ನಾನು ‘ಇದಾರೆ ಸಾರ್‌! ಬನ್ನಿ ಒಳಗೆ’ ಎಂದವನೇ ಟೀಯೆಸ್ಸಾರ್ಗೆ ವಿಷಯ ತಿಳಿಸಿದೆ. ಅವರನ್ನು ತಮ್ಮ ರೂಮಿಗೆ ಕರೆದುಕೊಂಡು ಹೋದ ಟೀಯೆಸ್ಸಾರ್‌ ನನಗೆ – ‘ಕಾಫಿ’ ಎಂದಷ್ಟೇ ಹೇಳಿದರು.

ರಾಜರತ್ನಂರವರ ಮುಂದೆ ಹಬೆಯಾಡುತ್ತಿದ್ದ ಕಾಫಿಯ ಕಪ್ಪನ್ನು ಇಟ್ಟ ನಾನು ವಿನೀತಭಾವದಿಂದ – ‘ಸಾರ್‌! ನಿಮ್ಮ ಬಣ್ಣದ ತಗಡಿನ ತುತ್ತೂರಿ ಪದ್ಯವೆಂದರೆ ನನಗೆ ಪಂಚಪ್ರಾಣ’ ಎಂದೆ.

ADVERTISEMENT

‘ಹೌದಾ! ತುಂಬಾ ಸಂತೋಷ. ಎಲ್ಲಿ ಒಂದು ಸಲ ಅದನ್ನು  ಹಾಡು ನೋಡೋಣ’ ಎಂದರು.

ನಾನು ಕಿಂಚಿತ್ತೂ ತಡವರಿಸದೆ ಸುಶ್ರಾವ್ಯವಾಗಿ ಹಾಡಿ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಅವರು ತಮ್ಮ ಹಸ್ತದಿಂದ ಮೃದುವಾಗಿ ನನ್ನ ತಲೆಯನ್ನು ನೇವರಿಸಿ – ‘ತುಂಬಾ ಚೆನ್ನಾಗಿ ಹಾಡುತ್ತೀಯಪ್ಪ! ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹರಸುತ್ತ, ಟೀಯೆಸ್ಸಾರ್‌ಗೆ – ‘ನಿಮ್ಮ ಹುಡುಗ ಪರವಾಗಿಲ್ಲ. ಅವನ ಪದಗಳ ಉಚ್ಚಾರಣೆ ತುಂಬಾ ಸ್ಪಷ್ಟವಾಗಿದೆ.

ದೊಡ್ಡವರ ಬಗೆಗೆ ಅವನಿಗಿರುವ ಗೌರವ ಮೆಚ್ಚಬೇಕಾದದ್ದೇ’ ಎನ್ನುತ್ತ ಎರಡಾಣೆಯ ಬಿಲ್ಲೆಯೊಂದನ್ನು ನನ್ನ ಕೈಯಲ್ಲಿಟ್ಟರು. ನಾನು ಅತೀವ ಸಂಕೋಚದಿಂದ, ‘ಅಯ್ಯೋ ಇದೆಲ್ಲಾ ಏನೂ ಬೇಡಾ ಸಾರ್‌’ ಎನ್ನುತ್ತ ಹಿಂಜರಿದೆ. ಆದರೆ ಟೀಯೆಸ್ಸಾರ್‌ – ‘ದೊಡ್ಡವರು ಆಶೀರ್ವದಿಸಿ ಕೊಡುತ್ತಿದ್ದಾರೆ. ಬೇಡ ಅನ್ನಬಾರದು’ ಎಂದರು.

ಇಂದಿಗೂ ಎಲ್ಲಿಯಾದರೂ ‘ತುತ್ತೂರಿ’ ಪದ್ಯ ಕೇಳಿಸಿದರೆ ಸಾಕು ನನ್ನ ನರನಾಡಿಗಳಲ್ಲಿ ಮಿಂಚಿನ ಸಂಚಾರವಾಗುತ್ತದೆ. ರಾಜರತ್ನಂರವರ ವ್ಯಕ್ತಿತ್ವ ನನ್ನ ಕಣ್ಣಮುಂದೆ ಪ್ರತ್ಯಕ್ಷವಾಗಿ, ಹೃದಯ ಹೂವಿನಂತೆ ಅರಳುತ್ತದೆ. ಅವರು ಆಶೀರ್ವದಿಸಿ ನೀಡಿದ ಆ ಎರಡಾಣೆ ನಾಣ್ಯವನ್ನು ನನ್ನ ನಾಣ್ಯ ಸಂಗ್ರಹದ ಗೋಲಕದಲ್ಲಿ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ.
ಎಂ.ಕೆ. ಮಂಜುನಾಥ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.