ADVERTISEMENT

ತುಪ್ಪದ ನದಿಯಲ್ಲಿ...

ಆನಂದತೀರ್ಥ ಪ್ಯಾಟಿ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಇಬ್ಬರಿಂದ ಹಿಡಿದು ಮೂವತ್ತು ಮಂದಿ ಕುಳಿತುಕೊಳ್ಳಬಹುದಾದ ಬೋಟ್‌ಗಳು. ದಟ್ಟ ಪೊದೆಗಳ ಮಧ್ಯೆ ಮೆಲ್ಲಗೆ ಹೋಗುವಾಗ ನಾವು ನೋಡಿರದ ದೊಡ್ಡ ಪಕ್ಷಿಗಳು ಕೈಗೆ ಸಿಗುವಷ್ಟು ದೂರದಲ್ಲಿ ಕುಳಿತಿರುವುದನ್ನು ಕಂಡು ರೋಮಾಂಚನ. ಸ್ವಲ್ಪ ಮೇಲಕ್ಕೆ ದೃಷ್ಟಿ ಹಾಯಿಸಿದರೆ, ಮಿಂಚುಳ್ಳಿಯೊಂದರ ಕೊಕ್ಕಿನಲ್ಲಿ ಮೀನು! `ಎಷ್ಟು ಬೇಕಾದರೂ ಫೋಟೋ ತಗೊಳ್ಳಿ. ಆದರೆ ಗದ್ದಲ ಮಾತ್ರ ಮಾಡಬೇಡಿ~ ಎಂಬುದು ಬೋಟ್ ಚಾಲಕನ ಮನವಿ. ಸುತ್ತ ತಿರುಗಾಡಿ ಸಮುದ್ರದ ಬಳಿ ಬಂದರೆ ಹಸಿವೆ ತಣಿಸಲು `ಓಲಾಡುವ ರೆಸ್ಟೋರೆಂಟ್~ ಸಿದ್ಧವಾಗಿರುತ್ತದೆ. ಈ ಬೋಟ್‌ನಿಂದ ಆ ಹಡಗಿಗೆ ದಾಟಿ, ಅಲ್ಲಾಡುವ ಕುರ್ಚಿ-ಟೇಬಲ್ ಮೇಲೆ ತಿಂಡಿ ಸವಿಯಬಹುದು!

ಇದು ಪೂವರ್ ಹಿನ್ನೀರ ವಿಹಾರದ ಸ್ಯಾಂಪಲ್.
ಕೇರಳದ ಕೋವಲಂನಿಂದ ಕನ್ಯಾಕುಮಾರಿಗೆ ಸಾಗುವ ಮಾರ್ಗ ಮಧ್ಯೆ ಸಿಗುವ ಸಣ್ಣ ಪಟ್ಟಣ ಪೂವರ್. ಇಲ್ಲಿ ಹಲವು ಸಂಸ್ಥೆಗಳು ಹಿನ್ನೀರ ವಿಹಾರ ನಡೆಸುತ್ತವೆ. ಪ್ರವಾಸಿಗರನ್ನು ಅವರ `ಆರ್ಥಿಕ ಅನುಕೂಲತೆಗೆ ತಕ್ಕಂತೆ~ ವಿಹಾರಕ್ಕೆ ಕರೆದೊಯ್ಯುವ ವ್ಯವಸ್ಥೆ ಇದ್ದು, ಎರಡು ತಾಸುಗಳಿಂದ ಇಡೀ ದಿನದ ಪ್ಯಾಕೇಜ್ ಲಭ್ಯ.

ಪಶ್ಚಿಮ ಘಟ್ಟದಲ್ಲಿ ಜನಿಸುವ ನೈಯಾರ್ ನದಿ ಅರಬ್ಬಿ ಸಮುದ್ರವನ್ನು ಸೇರುವ ಜಾಗ ಈ ಪೂವರ್. ಅಂದಹಾಗೆ, ನೈ ಅಂದರೆ ತುಪ್ಪ; ಅರ್ ಅಂದರೆ ನದಿ (ನೈಯಾರ್ ಅಂದರೆ `ತುಪ್ಪದ ನದಿ~). ನದಿಯು ಸಮುದ್ರವನ್ನು ಸೇರುವ ದಾರಿಯ ಬಲದಂಡೆಗೆ ಅನೇಕ ಸಂಸ್ಥೆಗಳು ದೋಣಿ ವಿಹಾರ ನಡೆಸುತ್ತವೆ. ಒಂದೊಂದು ವಿಹಾರವೂ ಒಂದೊಂದು ಬಗೆ.
ಇಬ್ಬರೇ ಕುಳಿತು ಹೋಗಬಹುದಾದ ಚಿಕ್ಕ ಬೋಟ್‌ನಿಂದ ಹಿಡಿದು ಪಾರ್ಟಿ ನಡೆಸಬಹುದಾದ ದೊಡ್ಡ ಬೋಟ್‌ಗಳು ಇಲ್ಲಿ ಬಾಡಿಗೆಗೆ ಲಭ್ಯ.

ವಿಲಾಸಿ ಪ್ರವಾಸಿಗರಿಗೆ ಮನೆಯನ್ನೇ ನಿರ್ಮಿಸಿದ ಬೋಟ್ ಇವೆ. ಅವರೇ ಸ್ವತಃ ಚಲಾಯಿಸಿಕೊಂಡು, ನದಿ ಮಧ್ಯೆ ಹೋಗಿ ಬೇಕೆನಿಸಿದಷ್ಟು ಸಮಯ ಇದ್ದು ಬರಬಹುದು. ನದಿಯಿಂದ ತುಸು ಒಳಗೆ ಚಾಚಿಕೊಂಡ ಎರಡು ತೆಂಗಿನ ಮರಗಳಿಗೆ ಕಟ್ಟಿದ ಜೋಕಾಲಿಯಲ್ಲಿ ಸುಮ್ಮನೇ ದಿನವಿಡೀ ಮಲಗುವ ಸೋಮಾರಿಗಳಿಗೆ ಕಾಲಕಾಲಕ್ಕೆ ತಿಂಡಿ - ಪಾನೀಯ ಸರಬರಾಜಿಗೆ ಪ್ರತ್ಯೇಕ ದೋಣಿಗಳೂ ಇವೆ!

ನಾಲ್ಕೈದು ಜನರನ್ನು ಕರೆದೊಯ್ಯುವ ದೋಣಿಗಳು ಹೆಚ್ಚಿನ ಮಜಾ ಕೊಡುತ್ತವೆ. ನದಿಯೊಳಗೇ ಬೆಳೆದ ಸಸ್ಯಗಳನ್ನು ಕತ್ತರಿಸಿ ರೂಪಿಸಿದ ಕಿರು ದಾರಿಯಲ್ಲಿ ದೋಣಿ ಮೆಲ್ಲಗೇ ಸಾಗುತ್ತದೆ. ಅನೇಕ ಬಗೆಯ ಪಕ್ಷಿಗಳನ್ನು ಹತ್ತಿರದಿಂದ ನೋಡಲು ಇಲ್ಲಿ ಸಾಧ್ಯ. ಎರಡು ಕಿಲೋಮೀಟರ್ ದೂರ ಸಾಗಿದ ಬಳಿಕ ನೈಯಾರ್ ಸಮುದ್ರ ಸೇರುವ ಜಾಗದಲ್ಲಿ ಪ್ರವಾಸಿಗರನ್ನು ಇಳಿಸಲಾಗುತ್ತದೆ.

ಸಮುದ್ರದ ಅಬ್ಬರಕ್ಕೆ ಬೆರಗಾಗಿ, ಶುಭ್ರ ಉಸುಕಿನಲ್ಲಿ ಒಂದಷ್ಟು ಹೊತ್ತು ಆಟವಾಡಿ ದಣಿದು ಮರಳಿ ದೋಣಿ ಹತ್ತಿದರೆ ಮುಂದಿನ ತಾಣ `ಫ್ಲೋಟಿಂಗ್ ರೆಸ್ಟೊರೆಂಟ್~- ಅಂದರೆ, ತೇಲುವ ಹೋಟೆಲ್. ಹಡಗು ತೊನೆದಾಡಿದರೆ, ಒಳಗಿರುವ ಟೇಬಲ್- ಕುರ್ಚಿ ಎಲ್ಲಕ್ಕೂ ನಡುಕ. ಇಲ್ಲಿ ಒಂದಕ್ಕೆ ಮೂರ‌್ನಾಲ್ಕರಷ್ಟು ಬೆಲೆ ತೆತ್ತು ತಿಂಡಿ ಸೇವಿಸಬಹುದು (ಇದೇನೂ ನೆಲದ ಮೇಲಿನ ಹೋಟೆಲ್ ಅಲ್ಲವಲ್ಲ?!). ಅರ್ಧ ವೃತ್ತಾಕಾರದ ಈ ಪಯಣದಲ್ಲಿ ಹೆಚ್ಚು ಹಣ ನೀಡಿದರೆ, ನದಿ ಮಧ್ಯದ ಸಣ್ಣ ದ್ವೀಪದಲ್ಲಿ ಇಳಿದು ಅಲ್ಪ ಹೊತ್ತು ಸೌಂದರ್ಯ ಸವಿಯುವ ಅವಕಾಶವೂ ಉಂಟು.

`ಕ್ರಿಕೆಟ್ ಸ್ಟಾರ್ ಮಹಮ್ಮದ್ ಕೈಫ್ ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದರು. ಇಲ್ಲಿವೆ ನೋಡಿ ಅವರ ಫೋಟೋ...~ ಎಂದೋ, `ಇಂಗ್ಲೆಂಡಿನ ಮಿನಿಸ್ಟರ್ ದಿನವಿಡೀ ನಮ್ಮ ದೋಣಿಯಲ್ಲಿ ಸುತ್ತಾಡಿ, ಭಾರೀ ಖುಷಿಪಟ್ಟರು~ ಎಂದೋ ವಿಹಾರ ಸಂಸ್ಥೆಯ ಪ್ರತಿನಿಧಿಗಳು ಗ್ರಾಹಕರನ್ನು ಪುಸಲಾಯಿಸುತ್ತಾರೆ. ಅವರು ತೋರಿಸುವ ಆಕರ್ಷಕ ಫೋಟೋ ನೋಡಿಯೂ ಉದಾಸೀನ ಮಾಡಿ, ಸುಮ್ಮನೇ ಹೋದರೆ ನಿಮಗೇ ನಷ್ಟ. ತುಸು ಹೆಚ್ಚು ಎನಿಸುವಷ್ಟು ದುಡ್ಡು ಕೊಟ್ಟರೂ ಸದಾ ಕಾಲ ನೆನಪಿನಲ್ಲಿ ಉಳಿಯುವ ದೋಣಿವಿಹಾರದ ಅನುಭವ ಪೂವರ್‌ನ ವೈಶಿಷ್ಟ್ಯ.



-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT