ADVERTISEMENT

ದಯಾ ನೀ, ಭವಾ ನೀ

ಕವಿತೆ

ಡಿ.ವಿ.ಪ್ರಹ್ಲಾದ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಹೆರಲು ಕೂತಿದ್ದಾಳೆ ತಾಯಿ
ಸ್ವರದ ನವಿಲುಗಳ
ಕೊರಳ ತಂಬೂರಿಯಲ್ಲಿ

ಆಡತೊಡಗುತ್ತವೆ
ಸ್ವರ ಸೋಪಾನಗಳ ಮೇಲೆ
ಗರಿಬಿಚ್ಚಿದ ಸಾವಿರ ನವಿಲುಗಳು
ಸಾವಿರದ ಕಣ್ಣುಗಳು

ರಣಾರಗುತ ಕಾಣು ಬಾರೋ ಮಗನೇ
ಅಕ್ಷರದಹಂಕಾರಗಳ ಹೊಸಿಲ ಹೊರಗಿಟ್ಟು
ತುಂಬಿ ನಿಂತ ಕಡಲು ಈಗವಳು
ಅಲೆಗಳು ಅವಳ ಮಕ್ಕಳು
ಕುಲುಕಿಸುತ್ತಾಳೆ ಪುಲಕಿಸುತ್ತಾಳೆ
ಹೆದ್ದೆರೆಗಳ ಅಪ್ಪಳಿಸಿ ಹೆದರಿಸುತ್ತಾಳೆ

ADVERTISEMENT

ಮೊಲೆಯಿತ್ತು ಸಲಹುವಳು
ಕುಡಿ ಮಗುವೆ, ತಣಿ
ನನ್ನ ಕುನ್ನಿಯೇ ತಣಿ
ಒಂದು ಬರಿದಾದರೂ ಮತ್ತೊಂದು
ತುಂಬಿ ತುಂಬಿ

ಕಪ್ಪಿರಲಿ ಬಿಳುಪಿರಲಿ
ಹೆಚ್ಚಿರಲಿ ಕಮ್ಮಿಯೇ ಇರಲಿ
ನನ್ನ ಗೋವಿಂದನೆನುವ
ಮೀರೆಯ ಆರ್ತದಲಿ

ಯಾತನೆಯ ಕಟ್ಟೆಗಳೊಡೆದು
ನೆತ್ತರ ಎರಕೊಂಡು
ಬಿರಿ ಹೊಯ್ದಿದ್ದಾಳೆ
ಸಿಕ್ಕು ಬಿದ್ದ ಕೂದಲನ್ನ

ಕಂಡ ಒಂಟಿ ಕೂದಲಿಗೇ ವಿರಾಗಿಯಾದವನನ್ನ
ನೋಡಿ ನಗುತ್ತಾಳವಳು; ಬಾರಯ್ಯಾ ಶೂರ
ಭವದಲ್ಲಿದೆ ಎಲ್ಲ ಭಾವದ ಸೊಲ್ಲು

ಅವಳ ಎದೆಗುದಿಗೆ
ಉಲ್ಕೆಗಳ ಬೆಂಕಿ ಮಳೆಗೆ
ಮಂಡಿಯೂರುತ್ತೇನೆ
ದಯಾ ನೀ
ದಯಾ ನೀ

ಹೆಣ್ಣು ಅವಳು, ಹೆರುತ್ತಲೇ
ಒರಲುವಳು ಸಣ್ಣ ಸಂಗತಿಗೂ
ಸ್ವರಲೋಕದ ಸ್ವರ್ಗ ಜಾತ್ರೆಯ ನಡುವೆ
ಕಳೆದುಹೋಗಳು ಅವಳು
ಭದ್ರ ಹಿಡಿದ ಭವದ ಕೈಬೆರಳು

ಕಾರ್ಯಕ್ಕೆ ಕಾರಣಗಳೆಲ್ಲ
ನಿನ್ನ ಗಂಡು ತೆವಲು
ಅವಳಿಗೆ ಯಾವಾಗಲೂ
ವಿಜಯದ ಅಮಲು

ಅದಕ್ಕೇ ಸುಮ್ಮಗೆ ಹೇಳಿದ್ದು
ದಯಾನೀ ಭವಾನಿ
ದಯಾ ನೀ
ಭವಾ ನೀ

* ದಯಾ ನೀ ಭವಾನಿ ಪರ್ವಿನ್ ಸುಲ್ತಾನ ತಮ್ಮ ಸಂಗೀತ ಕಛೇರಿ ಮುಕ್ತಾಯಕ್ಕೆ ಹಾಡುವ ಮಿಶ್ರ ಭೈರವೀ ರಾಗದ ಒಂದು ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.