ADVERTISEMENT

ದೇವವೃದ್ಧರು: ವೃದ್ಧರ ಬದುಕಿಗೆ ಕನ್ನಡಿ

ಡಾ.ಧನಂಜಯ ಕುಂಬ್ಳೆ
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST
`ದೇವವೃದ್ಧರು' ಕಿರುನಾಟಕದ ಒಂದು ದೃಶ್ಯ
`ದೇವವೃದ್ಧರು' ಕಿರುನಾಟಕದ ಒಂದು ದೃಶ್ಯ   

ಆಧುನಿಕತೆಯ ಹೊಸ ಗಾಳಿ, ಕೈಗಾರಿಕೀಕರಣ, ನಗರೀಕರಣ ಇತ್ಯಾದಿಗಳ ಬಿರುಸು, ಶಿಕ್ಷಣ ಹಾಗೂ ಔದ್ಯೋಗಿಕ ಕಾರಣಗಳಿಂದ ಉಂಟಾದ ವಲಸೆ; ಸಮೂಹಚಿಂತನೆ, ಕುಟುಂಬ ಚಿಂತನೆಗಿಂತ ಭಿನ್ನವಾಗಿ ವ್ಯಕ್ತಿಗತ ಆಲೋಚನೆಗೆ ಒತ್ತು... ಮೊದಲಾದವು ನಮ್ಮ ನಮ್ಮ ಊರುಗಳಲ್ಲಿ ಇತ್ತೀಚೆಗೆ ಉಂಟು ಮಾಡಿದ ತಲ್ಲಣಗಳು ಒಂದೆರಡಲ್ಲ.

ಮಕ್ಕಳ ಕಲರವದಿಂದ ಜೀವನೋತ್ಸಾಹದ ಆಡೊಂಬೊಲವಾಗಿದ್ದ ನಮ್ಮ ಹಳ್ಳಿಗಳಲ್ಲಿ ಇಂದು ಕೇವಲ ವೃದ್ಧರು ಮಾತ್ರ ಇದ್ದಾರೆ. ಮಕ್ಕಳು ಪರ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಮಕ್ಕಳು ಪೇಟೆಯ ಕಾನ್ವೆಂಟುಗಳಲ್ಲಿ ಬೇರೆ ಬೇರೆ ಸ್ಟ್ಯಾಂಡರ್ಡ್‌ಗಳಲ್ಲಿ ಕಲಿಯುತ್ತಿದ್ದಾರೆ. ಹಳ್ಳಿಗಳು ಅರವತ್ತು ದಾಟಿದವರನ್ನೇ ತುಂಬಿಕೊಂಡು ಸಹಜ ವೃದ್ಧಾಶ್ರಮಗಳಾಗುತ್ತಿವೆ.

ವರ್ತಮಾನದ ಈ ಅವಸ್ಥೆಯನ್ನು ಬಿಂಬಿಸುವ ಕಿರುನಾಟಕ `ದೇವವೃದ್ಧರು'. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಾನ್ವಿತ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಈ ಪ್ರಯೋಗ ದೊಡ್ಡ ಬಂಗಲೆಯೊಳಗೆ ಅನಾರೋಗ್ಯದಿಂದ ಬಳಲುತ್ತಿರುವ ಒಂಟಿ ವೃದ್ಧೆಯೊಬ್ಬಳ ಸುತ್ತ ಹೆಣೆದಿದೆ. ಹಳೆಮನೆಯೊಂದರಲ್ಲಿ ಒಂಟಿ ಮುದುಕಿ. ತೊಟ್ಟಿಲೊಂದರಲ್ಲಿ ತನ್ನ ಮಗನಿರುವ ಹಳೆಯ ಗ್ರೂಪ್‌ಫೋಟೊ ಒಂದನ್ನು ತೂಗುತ್ತಾ ಮಲಗಿರುತ್ತಾಳೆ. ಅಲ್ಲಿಗೆ ಕಾನೇಶುಮಾರಿಗಾಗಿ ಬರುವ ತಂಡದೊಂದಿಗಿನ ಮಾತುಕತೆಯಲ್ಲಿ ವಿದೇಶದಲ್ಲಿರುವ ಮಗನನ್ನು ಕಾಣುವ ತಾಯಿಯ ಹಂಬಲ ವ್ಯಕ್ತಗೊಳ್ಳುತ್ತದೆ.

ಮಗನ ಆಣತಿಯಂತೆ ಕೆಲವೇ ಕ್ಷಣದಲ್ಲಿ ನಾಲ್ಕು ಮಂದಿ ಐಷಾರಾಮಿ ವೃದ್ಧಾಶ್ರಮಕ್ಕೆ ಮುದುಕಿಯನ್ನು ಕರೆದೊಯ್ಯಲು ಬರುತ್ತಾರೆ. ಮುದುಕಿ ಮನೆಬಿಟ್ಟು ಬರಲು ಒಪ್ಪದಿದ್ದಾಗ ಕೊನೆಗೆ ಒತ್ತಾಯಪೂರ್ವಕ ವೃದ್ಧಾಶ್ರಮಕ್ಕೆ ಸೇರಿಸುವುದು. ಅಲ್ಲಿ ಮುದುಕಿಯ ರೋದನ.

ಆಗ ನಿರೂಪಕರು `ನಮ್ಮ ದೇಶದ ಸಂಸ್ಕೃತಿಯನ್ನು ಕಟ್ಟೋದಕ್ಕೆ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯವನ್ನು ಬೆಸೆಯೋದಕ್ಕೆ ಶ್ರಮವಹಿಸಿದ ಹಿರಿಯರನ್ನು ನಾವೆಂದೂ ಮರೆಯಬಾರದು. ನಮ್ಮನ್ನು ಹೊತ್ತು-ಹೆತ್ತು, ಸಾಕಿ ಸಲಹಿದ ಅಪ್ಪ, ಅಮ್ಮ, ಅಜ್ಜ, ಅಜ್ಜಿ- ಮುಂತಾದವರನ್ನು ಕಡೆಗಣಿಸದೆ ಯಾವುದೋ ಕಣ್ಣಿಗೆ ಕಾಣದ ದೇವರನ್ನು ಪೂಜಿಸುವ ಬದಲು ನಮ್ಮ ಮನೆಯಲ್ಲೇ ಇರುವ ಹಿರಿಯ ಚೇತನಗಳಿಗೆ ಪ್ರೀತಿ-ವಾತ್ಸಲ್ಯದ ಪೂಜೆ ಸಲ್ಲಿಸುವ ಮೂಲಕ ನಾವೆಲ್ಲರೂ ಪುಣ್ಯ ಕಟ್ಟಿಕೊಳ್ಳೋಣ' ಎಂದು ಸಾರುತ್ತಾರೆ. `ಹಿರಿಯರೇ ನಮ್ಮ ನಿಜವಾದ ದೇವರು' ಎಂದು ಸಂದೇಶ ಬೀರುತ್ತಾ ಈ ಕಿರುನಾಟಕ ಮುಕ್ತಾಯಗೊಳ್ಳುತ್ತದೆ.

ವರ್ತಮಾನದಲ್ಲಿ ನಡೆಯುತ್ತಿರುವ ಯುದ್ಧ, ಬಾಂಬ್ ಸ್ಫೋಟ, ಭಯೋತ್ಪಾದನೆ, ಗಲಭೆ, ದೊಂಬಿ, ಹಿಂಸಾಚಾರ, ಕೋಮುಗಲಭೆ, ವಿಭಜನೆ ಮುಂತಾದವುಗಳಿಂದ ನಡೆದ ರಕ್ತಪಾತ, ಜನರ ಮಾರಣ ಹೋಮ- ಇವೆಲ್ಲಕ್ಕೂ ಮುಖ್ಯ ಕಾರಣ ಹಿರಿಯರ ಮಾರ್ಗದರ್ಶನ ಇಲ್ಲದಿರುವುದು ಮತ್ತು ಹಿರಿಯರೊಂದಿಗೆ ಭಾವನಾತ್ಮಕ ಸಂಬಂಧ ಹೊಂದದಿರುವುದು ಎಂಬ ಧ್ವನಿ ನಾಟಕದ್ದು.

ವೃದ್ಧೆಯ ಪಾತ್ರದಲ್ಲಿ ನೋಡುಗರ ಕರುಳು ಚುರುಕೆನ್ನುವಂತೆ ಅಶ್ವಿನಿ ಅಭಿನಯಿಸಿದ್ದಾರೆ. ಉಳಿದಂತೆ ಅಭಿಜಿತ್ ಕುಮಾರ್, ಮಂಜುನಾಥ್, ಸುನಿಲ್, ಸಿಂಚನ, ಸಿಂಧು ಲವಲವಿಕೆಯ ನಡೆಯಿಂದ ನಾಟಕಕ್ಕೆ ಜೀವ ತುಂಬಿದ್ದಾರೆ. ನಾಟಕಕ್ಕೆ ಸಂಗೀತ ಸಹಕಾರ ಶುಭಕರ ಪುತ್ತೂರು ಅವರದ್ದು.

ನಿರ್ದೇಶನದ ಜತೆಗೆ ರಚನೆ, ಸಂಗೀತ, ಬೆಳಕು, ವಸ್ತ್ರವಿನ್ಯಾಸ, ರಂಗಪರಿಕರ ಹೀಗೆ ಎಲ್ಲವೂ ಜೀವನ್‌ರಾಂ ಇವರದ್ದು. ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ, ದಕ್ಷಿಣ ವಲಯ ಅಂತರ್ ವಿವಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಈ ಕಿರುನಾಟಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ತಂಡ ದುಬೈ, ಅಬುದಾಬಿಗಳಲ್ಲಿಯೂ ಪ್ರದರ್ಶನ ನೀಡಿ ಬಂದಿದೆ.

ಅತ್ಯಂತ ಕಡಿಮೆ ಮಾತು ಮತ್ತು ಸರಳ ಆದರೂ ಪರಿಣಾಮಕಾರಿ ದೃಶ್ಯಗಳನ್ನೊಳಗೊಂಡ `ದೇವವೃದ್ಧರು' ಸಾಮಾಜಿಕ ಕಾಳಜಿ, ಮಾನವೀಯ ಸ್ಪಂದನ ಹೊಂದಿರುವ ರಂಗಪ್ರಯೋಗ. ಎರಡು ಗಂಟೆಯ ದೀರ್ಘ ನಾಟಕದಲ್ಲಿ ಸಿಗಲಾರದ ಆಳಗಳೆಲ್ಲ ಕೇವಲ ಹದಿನೈದು ನಿಮಿಷದ ಪ್ರಯೋಗದಲ್ಲಿ ಅದ್ಭುತವಾಗಿ ಮೂಡಿಸಿರುವುದು ನಿಜವಾದ ರಂಗಸಾಹಸವೇ ಸರಿ. ಪ್ರೇಕ್ಷಕನ ಕಣ್ಣಂಚಿನಲ್ಲಿ ಒಂದು ಹನಿ ಜಿನುಗುವಂತೆ ಮಾಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.