ADVERTISEMENT

ನನಗೂ ಬೇಕು ಮೀಸಲಾತಿ

ರವೀಂದ್ರ ಭಟ್ಟ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಅವನ ಹೆಸರು ಗಂಗೂ. ಅವನಿಗೆ ಅಪ್ಪ ಯಾರು ಎಂದು ಗೊತ್ತಿಲ್ಲ. ಲೈಂಗಿಕ ಶೋಷಣೆಗೆ ಒಳಗಾದ ಆತನ ತಾಯಿ ಏಡ್ಸ್‌ಗೆ ತುತ್ತಾಗಿ ಸತ್ತು ಹೋದಳು. ಅಪ್ಪ ಯಾರು ಎಂದು ಗೊತ್ತಿಲ್ಲದಿದ್ದರಿಂದ ಆತನಿಗೆ ಜಾತಿ ಇಲ್ಲ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿ ಇಲ್ಲದಿದ್ದರೆ ಬದುಕುವುದು ಹೇಗೆ? ಜಾತಿಯೇ ಇಲ್ಲದಿದ್ದರೆ ಓದುವುದು ಹೇಗೆ? ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕುತ್ತಿದ್ದ ಆತ ಓದಿನ ಬಗ್ಗೆ ಆಲೋಚನೆಯನ್ನೇ ಮಾಡಲಿಲ್ಲ. ಬಾರ್ ಒಂದರಲ್ಲಿ ಕ್ಲೀನರ್ ಆಗಿ ಸೇರಿಕೊಂಡ. ಅದೇ ಅವನ ಮನೆಯಾಯಿತು.

ಆದರೆ ಒಂದು ದಿನ ಬಾಲ ನ್ಯಾಯ ಮಂಡಳಿಯವರು ಆ ಬಾರ್ ಮೇಲೆ ದಾಳಿ ನಡೆಸಿ ಆ ಬಾಲಕನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆತನನ್ನು ಒಂದು ಸ್ವಯಂ ಸೇವಾ ಸಂಸ್ಥೆಗೆ ಒಪ್ಪಿಸಿದರು. ಅಲ್ಲಿ ಆತ ಶಾಲೆಗೆ ಹೋಗಲು ಆರಂಭಿಸಿದ. 7ನೇ ತರಗತಿಯವರೆಗೆ ಅವನಿಗೆ ಏನೂ ತೊಂದರೆಯಾಗಲಿಲ್ಲ. ಆದರೆ 7ನೇ ತರಗತಿ ಮುಗಿಸಿ ಪ್ರೌಢಶಾಲೆಗೆ ಟೀಸಿ ಕೊಡುವಾಗ ಶಾಲೆಯವರು, `ನಿನ್ನ ಜಾತಿ ಯಾವುದು ಎಂದು ಗೊತ್ತಿಲ್ಲದಿದ್ದರಿಂದ ಟೀಸಿ ನೀಡಲಾಗದು~ ಎಂದರು.
 
ಅಷ್ಟರಲ್ಲಿ ಆತನಿಗೆ ಓದಿನ ಹುಚ್ಚು ಹಿಡಿದಿತ್ತು. ಶಿಕ್ಷಣದಿಂದ ಮಾತ್ರ ತಾನು ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವುದು ಮನವರಿಕೆಯಾಗಿತ್ತು. ಅದಕ್ಕೆ ಟೀಸಿ  ಪಡೆಯಲು ಹೋರಾಟ ನಡೆಸಿದ. ಆತ ತನ್ನ ಶಾಲಾ ದಾಖಲೆಯಲ್ಲಿ ಜಾತಿ ಕಾಲಂನಲ್ಲಿ `ಭಾರತೀಯ~ ಎಂದು ನಮೂದಿಸಿದ್ದ. ಹೋರಾಟದ ಫಲವಾಗಿ ಆತನಿಗೆ ಟೀಸಿ ಸಿಕ್ಕಿತು. 10ನೇ ತರಗತಿಯಲ್ಲಿಯೂ ಆತ ಪಾಸಾದ. ಕಾಲೇಜಿನಲ್ಲಿಯೂ ಒಳ್ಳೆಯ ಅಂಕ ಪಡೆದ. ಈಗ ಪದವಿ ಓದುತ್ತಿದ್ದಾನೆ.


`ನನಗೆ ಜಾತಿ ಇಲ್ಲ. ಅದಕ್ಕೆ ನಾನು ಕಾರಣ ಅಲ್ಲ. ನನಗೆ ನನ್ನ ಅಪ್ಪ ಯಾರು ಗೊತ್ತಿಲ್ಲ. ಅದಕ್ಕೂ ನಾನು ಕಾರಣ ಅಲ್ಲ. ಲೈಂಗಿಕ ಶೋಷಣೆಗೆ ಒಳಗಾದ ಅಮ್ಮ ಏಡ್ಸ್‌ನಿಂದ ಸತ್ತು ಹೋದಳು. ಈಗ ನನಗೆ `ನನ್ನದು~ ಎನ್ನುವ ಐಡೆಂಟಿಟಿ ಇಲ್ಲ. ಆದರೂ ನಾನು ಓದಬೇಕು. ಏನನ್ನಾದರೂ ಸಾಧಿಸಬೇಕು. ನಾನು ನನ್ನ ಜಾತಿ `ಭಾರತೀಯ~ ಎಂದು ಮಾಡಿಕೊಂಡೆ.

ಹೀಗೆ ಭಾರತೀಯ ಜಾತಿಯನ್ನು ಇಟ್ಟುಕೊಂಡರೂ ಉಪಯೋಗವಾಗಲಿಲ್ಲ. ನಾನು ಹೋದಲ್ಲಿ ಬಂದಲ್ಲಿ ನನ್ನ ಜಾತಿ ಕೇಳುವ, ಆ ಮೂಲಕ ನನ್ನನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರಿಯುತ್ತಲೇ ಇತ್ತು. ನಾನೊಬ್ಬ ಜಾತಿ ಇಲ್ಲದ ಮನುಷ್ಯ ಎಂದರೆ, `ನೀನು ಬದುಕಲೇ ನಾಲಾಯಕ್ಕು~ ಎಂಬಂತೆ ನನ್ನನ್ನು ಕಾಣುತ್ತಿದ್ದರು. ನಾನು ಭಾರತೀಯ ಎಂದು ಹೇಳಿಕೊಂಡರೂ, `ನೀನು ಭಾರತೀಯ ನಿಜ. ಆದರೆ ನಿನ್ನ ಜಾತಿ ಯಾವುದು ಹೇಳು~ ಎಂದು ನನ್ನನ್ನು ಹಂಗಿಸುತ್ತಿದ್ದರು. `ಜಾತಿ ಇಲ್ಲದೆ ಬದುಕೋದು ಕಷ್ಟ ಸರ್~ ಎಂದು ಆತ ಕಣ್ಣೀರುಗರೆದ.

ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಮರದ ಕೆಳಗೆ ಕುಳಿತು ಆತ ತನ್ನ ಕತೆ ಹೇಳುತ್ತಿದ್ದ. ಅದೇ ಕಾಲೇಜಿನಲ್ಲಿ ಈಗ ಆತ ಪದವಿ ಓದುತ್ತಿದ್ದಾನೆ. ಸ್ವಯಂ ಸೇವಾ ಸಂಸ್ಥೆಯೊಂದರ ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ. ಮೈಸೂರು ವಿಶ್ವವಿದ್ಯಾಲಯದ ಮಾನವೀಯ ಕ್ರಮದಿಂದ ಆತನಿಗೆ ಪದವಿ ತರಗತಿಗೆ ಸೀಟು ಸಿಕ್ಕಿದೆ. ಆದರೆ ಜಾತಿಯನ್ನೇ ಹಾಸಿ ಹೊದ್ದುಕೊಂಡಿರುವ ಸಮಾಜದಲ್ಲಿ ಮುಂದೆ ತನ್ನ ಗತಿ ಏನು ಎಂಬ ಚಿಂತೆ ಆತನನ್ನು ಕಾಡುತ್ತಿದೆ.

ಇನ್ನೊಂದು ಕತೆ ಕೇಳಿ. ಆಕೆ ಈಗ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ತರಗತಿಗೆ ಹೋಗುತ್ತಿದ್ದಾಳೆ. ಈಕೆಯ ಕತೆಯೂ ಆತನ ಕತೆಗಿಂತ ಭಿನ್ನವಲ್ಲ. ಆಕೆ ಕೂಡ ಬೀದಿ ಬದಿಯಲ್ಲಿ ಸಿಕ್ಕ ಮಗು. ಆಕೆಯ ತಾಯಿಗೆ ಏಡ್ಸ್ ಇತ್ತು. ತಂದೆ ಯಾರು ಎಂದು ಗೊತ್ತಿಲ್ಲ. ಬೀದಿ ಬದಿಯಲ್ಲಿ ನರಳುತ್ತಾ ಬಿದ್ದಿದ್ದ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು.
 
ಆಗ ಆಕೆ ಇನ್ನೂ ಚಿಕ್ಕ ಮಗು. ಆದರೂ ವೈದ್ಯರು ಆ ಮಗುವಿಗೆ `ನಿನ್ನ ತಾಯಿಗೆ ಚಿಕಿತ್ಸೆ ನೀಡಲು ಬಹಳ ಹಣ ಬೇಕು~ ಎಂದು ಹೇಳಿದ್ದರು. ಅದಕ್ಕೇ ಆ ಮಗು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಭಿಕ್ಷೆ ಬೇಡುತ್ತಿದ್ದಳು. ಭಿಕ್ಷೆ ಬೇಡಿ ತಂದ ಹಣ ಆಕೆಯ ಹೊಟ್ಟೆಗೆ ಆಗುತ್ತಿತ್ತೇ ವಿನಾ ತಾಯಿಯ ಚಿಕಿತ್ಸೆಗೆ ಸಾಲಲಿಲ್ಲ. ತಾಯಿ ಅದೇ ಆಸ್ಪತ್ರೆಯಲ್ಲಿ ಒಂದು ದಿನ ಕಣ್ಣು ಮುಚ್ಚಿದಳು. ಅಲ್ಲಿಗೆ ಆ ಬಾಲಕಿ ಬೀದಿ ಪಾಲಾದಳು.

ಆಕೆ ಹಾದಿ ಬದಿಯಲ್ಲಿ ನೃತ್ಯ ಮಾಡುತ್ತಾ ಭಿಕ್ಷೆ ಬೇಡುವುದನ್ನು ಮುಂದುವರಿಸಿದಳು. ಕಡೆಗೆ ಆಕೆಗೂ ಒಡನಾಡಿ ಸೇವಾ ಸಂಸ್ಥೆ ಆಸರೆಯಾಯಿತು. ಊಟ, ವಸತಿ, ಬಟ್ಟೆ ಎಲ್ಲ ಸಿಕ್ಕಿತು. ಮಾನವೀಯ ಅಂತಃಕರಣವೂ ದೊರೆಯಿತು. ಆದರೆ ಆಕೆಗೂ ಜಾತಿ ಸಿಗಲಿಲ್ಲ. ಆಕೆ ಕೂಡ ಭಾರತೀಯ ಜಾತಿಗೆ ಸೇರಿದಳು.
 
ಯಾವುದೇ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಸೇರಿಸುವಾಗ ಜಾತಿ ಕೇಳಬಾರದು ಎಂದು ಸರ್ಕಾರ ಆದೇಶ ಮಾಡಿದ್ದರೂ ಜಾತಿ ಕೇಳುವ ಪದ್ಧತಿ ಇನ್ನೂ ನಿಂತಿಲ್ಲ. ಜಾತಿಯ ಲೆಕ್ಕಾಚಾರದಲ್ಲಿಯೇ ಮೀಸಲಾತಿಯನ್ನು ನೀಡುವ ಪದ್ಧತಿ ಇನ್ನೂ ಮುಂದುವರಿದಿದೆ.

ಭಾರತದಂತಹ ದೇಶದಲ್ಲಿ ಜಾತಿ ಮೀಸಲಾತಿ ಅನಿವಾರ್ಯ ಕೂಡ. ಆದರೆ ಜಾತಿಯೇ ಇಲ್ಲದ ಲಕ್ಷಾಂತರ ಮಂದಿ ಇದ್ದಾರೆ. ಅವರ ಕತೆ ಏನು?

ಈ ಹಿನ್ನೆಲೆಯಲ್ಲಿಯೇ ಮೈಸೂರು ವಿಶ್ವವಿದ್ಯಾಲಯ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕ್ರಾಂತಿಕಾರಕ ಎನ್ನಬಹುದಾದ ಕ್ರಮವನ್ನು ತೆಗೆದುಕೊಂಡಿದೆ. ಲೈಂಗಿಕ ಶೋಷಣೆಗೆ ಒಳಗಾದವರ ಮಕ್ಕಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಮೀಸಲಾತಿ ನೀಡಿದೆ. ಪದವಿ ತರಗತಿಯಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿಯೂ ಎರಡು ಸ್ಥಾನ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ತಲಾ ಒಂದು ಸ್ಥಾನವನ್ನು ಮೀಸಲಿಟ್ಟಿದೆ.

ಜೊತೆಗೆ ಈ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜನಾಂಗದವರ ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳುವ ಶುಲ್ಕದಲ್ಲಿ ಶೇ.50ರಷ್ಟು ಶುಲ್ಕವನ್ನು ವಿಧಿಸಿದೆ. ಈ ಸೌಲಭ್ಯವನ್ನು ಬಳಸಿಕೊಂಡು 9 ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಈ ಕ್ರಮದಿಂದ ರಾಜ್ಯದಲ್ಲಿ ಈಗ ಹೊಸ ಚರ್ಚೆ ಆರಂಭವಾಗಿದೆ. ಮಾನವ ಸಾಗಣೆ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯ ಮಾಡುತ್ತಿದೆ.
 
ಭಾರತೀಯ ಸಮಾಜದಲ್ಲಿ ಶೀಲ ಎನ್ನುವುದು ಹೆಣ್ಣು ಮಕ್ಕಳಿಗೆ ಮಹತ್ವದ್ದಾಗಿದೆ. ಲೈಂಗಿಕ ದೌರ್ಜನ್ಯ ನಡೆದರೆ ಯಾವುದೇ ಹೆಣ್ಣು ಧೈರ್ಯವಾಗಿ ಅದನ್ನು ಹೇಳಿಕೊಳ್ಳುವಂತಹ ಪರಿಸ್ಥಿತಿ ನಮ್ಮಲ್ಲಿನ್ನೂ ಇಲ್ಲ. ಇದರಿಂದಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ.

ಇನ್ನೂ ಕೂಡ ಹೆಣ್ಣು ಮಕ್ಕಳನ್ನು ಬಲವಂತವಾಗಿ ದೇವದಾಸಿ ಮಾಡುವ ಪದ್ಧತಿ ಇದೆ. ಜೊತೆಗೆ ಹೆಣ್ಣು ಮಕ್ಕಳನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುವ ಮಂದಿ ಇದ್ದಾರೆ. ಅದರ ಮೇಲೆ ಬಂಡವಾಳ ಹೂಡುವ ವ್ಯಕ್ತಿಗಳಿದ್ದಾರೆ. ಕೇಂದ್ರ ಮಾನವ ಹಕ್ಕುಗಳ ಆಯೋಗದ ಪ್ರಕಾರ ದೇಶದಲ್ಲಿ 5.5 ಲಕ್ಷ ಮಕ್ಕಳು ಸೂಳೆಗಾರಿಕೆಗೆ ಮಾರಾಟವಾಗುತ್ತಿದ್ದಾರೆ.

ರಾಜ್ಯದಲ್ಲಿ ಕೂಡ 3 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರತಿ ವರ್ಷ ಕಾಣೆಯಾಗುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ತಲುಪುವುದು ಕೆಂಪುದೀಪದ ಪ್ರದೇಶಕ್ಕೆ.

ಹೀಗೆ ಶೋಷಣೆಗೆ ಒಳಗಾದ ಮಕ್ಕಳಿಗೆ ಮೈಸೂರು ವಿಶ್ವವಿದ್ಯಾಲಯ ಮಾನವೀಯ ದೃಷ್ಟಿಯಿಂದ ಮೀಸಲಾತಿ ನೀಡಿದೆಯೇ ವಿನಃ ಅದು ಕಾನೂನು ಬದ್ಧವಲ್ಲ. ಈ ಹಿನ್ನೆಲೆಯಲ್ಲಿ ಲೈಂಗಿಕ ಶೋಷಿತರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಮೀಸಲಾತಿಯನ್ನೂ ನೀಡಬೇಕು ಎನ್ನುವುದು ಸ್ವಯಂ ಸೇವಾ ಸಂಸ್ಥೆಗಳ ಒತ್ತಾಯ.

ಇದರಿಂದ ಲೈಂಗಿಕ ಶೋಷಿತರಿಗೆ ಕಾನೂನು ಬದ್ಧ ಹಕ್ಕು ಸಿಗುವುದಲ್ಲದೆ ನೈತಿಕವಾಗಿ ಮೇಲೇರಲೂ ಸಹಾಯಕವಾಗುತ್ತದೆ. ಅಲ್ಲದೆ ಮುಕ್ತವಾಗಿ ಅವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನೂ ಹೇಳಿಕೊಳ್ಳಲು ಸಹಕಾರಿಯಾಗುತ್ತದೆ. ಹೆಣ್ಣು ಮಕ್ಕಳ ಕಳ್ಳ ಸಾಗಣೆ ತಡೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಆರೋಗ್ಯ ಸುಧಾರಣೆಗೆ, ಏಡ್ಸ್ ರೋಗ ನಿಯಂತ್ರಣಕ್ಕೂ ಈ ಮೀಸಲಾತಿ ಮದ್ದು ಎಂದು ಸಂಸ್ಥೆಗಳು ಹೇಳುತ್ತವೆ.

ಇದಕ್ಕಾಗಿಯೇ ಮೈಸೂರಿನ ಒಡನಾಡಿ ಸಂಸ್ಥೆ ಈಗಾಗಲೇ ಭಾರತ ಸರ್ಕಾರ, ಅಮೆರಿಕ ಸರ್ಕಾರ, ವಿಶ್ವಸಂಸ್ಥೆ ಜೊತೆ ಮಾತುಕತೆ ನಡೆಸಿದೆ. ರಾಜ್ಯ ಹೈಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿ ಇಂತಹ ಮಕ್ಕಳಿಗೆ ಮೀಸಲಾತಿ ನೀಡುವಂತೆ ಬೇಡಿಕೊಂಡಿದೆ.

ಮೊದಲ ಹಂತವಾಗಿ ದೇಶದ ಎಲ್ಲ ವಿಶ್ವವಿದ್ಯಾಲಯಗಳೂ ಮೈಸೂರು ವಿಶ್ವವಿದ್ಯಾಲಯದ ಮಾದರಿಯನ್ನು ಅನುಸರಿಸುವಂತೆ ಪತ್ರ ಬರೆದಿದೆ. ಭಾರತದಂತಹ ಸಮಾಜದಲ್ಲಿ ಇಂತಹ ಜನರಿಗೆ ಮೀಸಲಾತಿ ಕೊಟ್ಟರೆ ಅದರ ದುರುಪಯೋಗವಾಗುವುದಿಲ್ಲವೇ ಎಂಬ ಪ್ರಶ್ನೆ ಸಹಜ.

ಆದರೆ ಮೀಸಲಾತಿ ದುರುಪಯೋಗವಾಗದಂತೆ ತಡೆಯುವುದು ಸರ್ಕಾರದ ಕೆಲಸ. `ದುರುಪಯೋಗವಾಗುತ್ತದೆ ಎಂದು ಮೀಸಲಾತಿ ನೀಡದೇ ಇದ್ದರೆ ನೆಗಡಿಯಾಗುತ್ತದೆ ಎಂದು ಮೂಗನ್ನೇ ಕತ್ತರಿಸಿದಂತೆ~ ಎನ್ನುತ್ತಾನೆ ಗಂಗೂ.

“ಮೈಸೂರು ವಿಶ್ವವಿದ್ಯಾಲಯ ಲೈಂಗಿಕ ಶೋಷಿತರಿಗೆ ಮೀಸಲಾತಿಯನ್ನು ನೀಡುವುದಾಗಿ ಹೇಳಿದಾಗ ಕೆಲವು ಮಂದಿ- `ಅಯ್ಯೋ ಸೂ.. ಮಕ್ಕಳಿಗೂ ಮೀಸಲಾತೀನಾ~ ಎಂದು ವ್ಯಂಗ್ಯ ಮಾಡಿದರು. ಆದರೆ ನಾವು ಸೂ.. ಮಕ್ಕಳು ಆಗುವುದಕ್ಕೆ ಕಾರಣ ಈ ಸಮಾಜ.

ನಮಗೆ ಜಾತಿ ಇಲ್ಲದಿರುವುದಕ್ಕೂ ಕಾರಣ ಈ ಸಮಾಜ. ಈಗ ನಮ್ಮ ಓದು, ಬದುಕನ್ನು ನೋಡಿಕೊಳ್ಳಬೇಕಾಗಿದ್ದೂ ಈ ಸಮಾಜದ ಕರ್ತವ್ಯವಲ್ಲವೇ?”ಎಂದು ಆತ ಪ್ರಶ್ನಿಸುತ್ತಾನೆ. ಅವನಿಗೆ ಏನೆಂದು ಉತ್ತರ ಹೇಳೋದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.