ADVERTISEMENT

ಪಂಬನ್ ಸೇತುವೆ

ಮಿನುಗುಮಿಂಚು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2013, 19:30 IST
Last Updated 16 ನವೆಂಬರ್ 2013, 19:30 IST
ಪಂಬನ್ ಸೇತುವೆ
ಪಂಬನ್ ಸೇತುವೆ   

ಪಂಬನ್ ಸೇತುವೆಯು ಭಾರತದ ನೆಲವನ್ನೂ ರಾಮೇಶ್ವರ ದ್ವೀಪವನ್ನೂ ಸಂಪರ್ಕಿಸುತ್ತದೆ. 1914ರಲ್ಲಿ ನಿರ್ಮಿತವಾಗಿರುವ ಈ ರೈಲ್ವೆ ಸೇತುವೆ, ಸಮುದ್ರದ ಮೇಲೆ ನಿರ್ಮಿಸಲಾಗಿರುವ ದೇಶದ ಎರಡನೇ ಅತಿ ಉದ್ದದ ಸೇತುವೆ ಎನಿಸಿದೆ. ಪಾಕ್‌ ಜಲಸಂಧಿಯನ್ನು ಹಾದುಹೋಗುವ ಈ ಸೇತುವೆ 2 ಕಿ.ಮೀ. ಉದ್ದವಿದೆ.

ಭಾರತ ಹಾಗೂ ಶ್ರೀಲಂಕಾ ನಡುವೆ ವ್ಯಾಪಾರ ಸಂಬಂಧ ಸುಧಾರಿಸುವ ಉದ್ದೇಶದಿಂದ 19ನೇ ಶತಮಾನದ ಕೊನೆಯಲ್ಲಿ ಈ ಸೇತುವೆ ನಿರ್ಮಿಸುವ ಯೋಚನೆ ಮೂಡಿತು. ಗುಜರಾತ್‌ನ ಕಛ್‌ನಿಂದ ಬಂದ ಕಾರ್ಮಿಕರು ಮೂರು ವರ್ಷದಲ್ಲಿ ಸೇತುವೆಯನ್ನು ನಿರ್ಮಿಸಿದರು. ಫೆಬ್ರುವರಿ 24, 1914ರಂದು ರೈಲ್ವೆ ಸೇತುವೆ ಉದ್ಘಾಟನೆಗೊಂಡಿತು. 1988ರಲ್ಲಿ ರಸ್ತೆ ಸೇತುವೆ ನಿರ್ಮಿತವಾಗುವವರೆಗೆ ಭಾರತ, ರಾಮೇಶ್ವರಂ ಸಂಪರ್ಕಿಸುವ ಏಕೈಕ ಮಾರ್ಗ ಪಂಬನ್‌ ಸೇತುವೆಯಾಗಿತ್ತು.

143 ಅಟ್ಟಳಿಗೆಗಳಿಂದ ನಿರ್ಮಿತವಾದ ಸೇತುವೆಯ ಎತ್ತರವನ್ನು ಹಡಗುಗಳ ಸಂಚಾರಕ್ಕೆ ತಕ್ಕಂತೆ ಹೆಚ್ಚಿಸಬಹುದು. ಕರಾವಳಿ ಪಡೆಯ ಹಡಗುಗಳು, ಸರಕು ಸಾಗಣೆ ಹಡಗುಗಳು, ಮೀನುಗಾರಿಕೆಯ ಹಡಗುಗಳು, ತೈಲ ಟ್ಯಾಂಕರ್‌ಗಳು ಈ ಸೇತುವೆಯ ಕೆಳಗೆ ಹಾದುಹೋಗುತ್ತವೆ.

ಡಿಸೆಂಬರ್‌ 22, 1964ರಲ್ಲಿ ಸೇತುವೆಯ ಒಂದಿಷ್ಟು ಭಾಗ ಸೈಕ್ಲೋನ್‌ನಿಂದಾಗಿ ಹಾಳಾಗಿತ್ತು. ಆ ಕರಾಳ ದಿನ ಸೇತುವೆ ಮೇಲೆ ರೈಲಿನಲ್ಲಿ ಸಾಗುತ್ತಿದ್ದ 110 ಮಂದಿ ಮೃತಪಟ್ಟರು.

2007ರಲ್ಲಿ ಈ ರೈಲ್ವೆ ಟ್ರ್ಯಾಕ್‌ ಅನ್ನು ಮೀಟರ್‌ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸಲಾಯಿತು. ಭಾರತೀಯ ರೈಲ್ವೆ 100 ವರ್ಷದಷ್ಟು ಹಳೆಯದಾಗುತ್ತಿರುವ ಈ ಸೇತುವೆಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವಂತೆ ಆಗ್ರಹಿಸುತ್ತಿದೆ. ರಾಮನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವ ನೂರಾರು ಭಕ್ತರು ಈ ರೈಲ್ವೆ ಮಾರ್ಗವನ್ನು ಉಪಯೋಗಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.